ದೀಪಾವಳಿ ವಿಶೇಷ : ಕತ್ತಲು ಬೆಳಕಿನ ತೋರಣದಲ್ಲಿ ಹಬ್ಬದ ಹೂರಣ, ಅಂಧಕಾರ ಓಡಿಸಲೊಂದು ದೀಪದ ಕಿರಣ!

Upayuktha
0

ಪ್ರೀತಿಯ ಮೊರೆ ಕೇಳಿ, ಆತ್ಮದ ಕರೆ ಕೇಳಿ ನೀ ಬಂದು ನಿಂದಿಲ್ಲಿ ದೀಪ ಹಚ್ಚಾ’ ಅನ್ನುತ್ತದೆ ಕವಿ ಸಾಲು. ದೀಪಾವಳಿಯ ಹಂಬಲವೂ ಅದೇ ಹಣತೆ ಹಚ್ಚೋದು. ಬರೀ ಕತ್ತಲು ಕಳೆಯಲಿಕ್ಕಲ್ಲ. ಅಥವಾ ಹಣತೆಗೆ ಅಂತಹ ಭ್ರಮೆಯಿಲ್ಲ. ಅದಕ್ಕೆ ಬೆಳಕು ತುಂಬುವ ಕಸುವಿದೆ. ಭರವಸೆಯ ಮತ್ತೊಂದು ಹೆಸರೇ ಬೆಳಕು. ಈ ಬೆಳಕಿನ ಕುಡಿ ಸಾಲು ಎದೆಗಳಲ್ಲಿ ಹೊತ್ತಿದಾಗ ದಿನ ದಿನವೂ ದೀಪಾವಳಿ.

ಸುಡುವ ಬೆಂಕಿಯನ್ನು ಬೆಳಕಿನ ಮೊಗ್ಗಾಗಿಸಿ ಉರಿಯುವ ಹಣತೆ ಸಾಲು, ಬೆಳಕಿನ ಕುಡಿ ಹೊಟ್ಟೆಯಲ್ಲಿಟ್ಟುಕೊಂಡು ತೊಯ್ದಾಡುವ ಆಕಾಶಬುಟ್ಟಿ. ಹೂ ಪಕಳೆ ತುಂಬಿ ಬಿಡಿಸಿದ ರಂಗೋಲಿಯ ಚಿತ್ತಾರ. ದೀಪಾವಳಿ ಅಂದರೆ ಈ ಎಲ್ಲ ಅಲಂಕಾರದ ಮೊತ್ತ ಕೂಡ.

ಬೆಳಕು ಅಂದರೆ ಹಣತೆಯಿಂದಲೋ ಸೂರ್ಯಚಂದ್ರರಿಂದಲೋ ಹೊಮ್ಮವ ಕಿರಣಗಳು ಮಾತ್ರ ಅಲ್ಲ. ಪ್ರೀತಿ ಕೂಡ ಬೆಳಕಿನ ಭಾವ ಹೊತ್ತಿರುತ್ತದೆ. ಜೀವಕ್ಕೆ ಬುದ್ಧಿ ಕೊಡುವ, ಬದುಕು ಕಟ್ಟಿಕೊಡುವ, ಗುರಿ ಮುಟ್ಟಲು ದಾರಿ ತೋರುವ ಎಲ್ಲವೂ ಬೆಳಕೇ. ಒಂದು ಒಳ್ಳೆಯ ಹಾಡು, ನೋಟ, ಊಟವೂ ಕೂಡ ಮನಸಿನ ಕತ್ತಲನ್ನು ಓಡಿಸಬಲ್ಲದು, ಹೊಸ ಹುರುಪು ಮೂಡಿಸಬಲ್ಲರು. Upayuktha

'ಬಂದಿತು ದೀಪಾವಳಿ ಮನೆ ಮನೆಯೊಳು, ಕುಡಿಯಾಡಿಸುತಿದೆ ನಸುಬೆಳಕು, ಮಿರು ಸೊಡರಿನ ಮಿತಮಾನದೊಳಿರುಳನು ಮೊಗೆದು ಸುರಿವ ಮೋದದ ತಳಕು.’’ ಕವಿ ಪುತಿನ ಹೇಳುವಂತೆ ಮನೆಮನೆಯಲ್ಲೂ ನಸುಬೆಳಕು ಕುಡಿಯಾಡುವ ಬೆಳಕಿನ ಹಬ್ಬವು ತನ್ನ ಮಿತಿಯಲ್ಲೂ ಇರುಳ ಕತ್ತಲೆಯನ್ನು ಮೊಗೆದು ಹೊರ ಚೆಲ್ಲುವ ಮೋಜಿನ ತಳಕನ್ನು ಹಾಕಿಕೊಂಡಿದೆ. ನಿಜ. ಇರುಳ ದೂರ ಮಾಡುವ ಈ ಬೆಳಕು ಬಾಳ ಕತ್ತಲನ್ನು ಹೊಡೆದೋಡಿಸಿ ಅರಿವಿನ ಬೆಳಕನ್ನು ಮೂಡಿಸುವ ರೂಪಕ ಕ್ರಿಯೆಯೂ ಹೌದು.

ದೀಪಾವಳಿ ಎಂದರೆ ಕತ್ತಲೆಯಿಂದ ಬೆಳಕಿನಡೆಗೆ ಸಾಗುವುದನ್ನು ಸಾಂಕೇತಿಸುವ ಆಚರಣೆಯೇ ಬದುಕಿನ ಧ್ಯೇಯವಾಗಬೇಕೆಂಬುದು ಪುರಾಣ ಪೂರ್ವದ ಅನಾದಿ ಕಾಲದ ಉಪನಿಷತ್ತಿನ ಆಶಯ. `ತಮಸೋ ಮಾ ಜ್ಯೋತಿರ್ಗಮಯಃ’ ಅಸತ್ತಿನಿಂದ ಸತ್ತಿ ನಡೆಗೆ, ಕತ್ತಲೆಯಿಂದ ಬೆಳಕಿಗೆ, ಸಾವಿನಿಂದ ಸಾವಿಲ್ಲದ ಸ್ಥಿತಿಯೆಡೆಗೆ ಕರೆದ್ಯೊಯಬೇಕೆನ್ನುವ ಪ್ರಾರ್ಥನೆಯಲ್ಲಿ ಲೌಕಿಕ ಅಲೌಕಿಕ ಚಿಂತನೆ ಇವೆ. ಕತ್ತಲೆಯಿಂದ ಬೆಳಕಿಗೆ ಸಾಗುವ ರೂಪಕ ಅಜ್ಞಾನದಿಂದ ಜ್ಞಾನಕ್ಕೆ, ಅತೃಪ್ತಿಯಿಂದ ತೃಪ್ತಿಗೆ, ದುಃಖದಿಂದ ಸುಖಕ್ಕೆ, ಬಂಧನದಿಂದ ಬಿಡುಗಡೆಗೆ, ಮರಣಶೀಲತೆಯಿಂದ ಅಮರತ್ವಕ್ಕೆ ಸಾಗುವುದನ್ನು ಧ್ವನಿಸುತ್ತದೆ.


ಆದಿ ಕವಿ ವಾಲ್ಮಿಕಿಯ ವೇದನೆಯ ಕತ್ತಲೆಗೆ ಕಾವ್ಯ ಸಂವೇದನೆಯ ಬೆಳಕು ಲಭಿಸಿದ್ದು `ತಮಸಾ’ ನದಿ ತೀರದಲ್ಲಿ ರಾಮ ಚರಿತೆಯ ಗ್ರಂಥಕ್ಕೆ ಸ್ಫೂರ್ತಿಯಾದ ಆ ಘಟನೆ ರಾಮಾಯಣದ ಮೊದಲಲ್ಲಿ ದಾಖಲಾಗಿದೆ. ಕತ್ತಲಲ್ಲಿ ಬೆಳಕಿನ ಬೀಜವೂ ಬೆಳಕಿನಲ್ಲಿ ಕತ್ತಲ ಬೀಜವೂ ಅಂತನಿರ್ವಹಿತವಾಗಿರುತ್ತದೆ. ಈ ಸೃಷ್ಟಿ ಆ ದ್ವಂಧ್ವದ ಸಮತೋಲನವನ್ನು ನಿರಂತರವಾಗಿ ಕಾದಿಟ್ಟುಕೊಳ್ಳತ್ತದೆ. ಎನ್ನುವುದನ್ನು ಚೀನಾದೇಶದ ಅತ್ಯಂತಿಕ ಸತ್ಯದ ಸಾಂಕೇತಿಕ ಮಂಡಲ `ತಾಮ್-ಚಿ-ತು’ ಸೂಚಿಸುತ್ತದೆ.


ಬೌದ್ಧಮೂಲದ ಪರಿಕಲ್ಪನೆಯ ಈ ಮಂಡಲದಲ್ಲಿ ಅರ್ಧ ಭಾಗ ಕತ್ತಲು, ಇನ್ನು ಅರ್ಧ ಭಾಗ ಬೆಳಕು. ಬೆಳಕಿನ ಭಾಗ ಯಾಂಗ್ , ಕತ್ತಲೆಯ ಭಾಗ ಯಾಂಗ್ ಮತ್ತು ಯಿನ್‌ಗಳು ಪರಾಕಾಷ್ಠೆಗೆ ತಲುಪಿದಾಗ ತನ್ನ ವಿರೋಧಿ ಸತ್ವವನ್ನು ಬೀÃಜರೂಪವಾಗಿ ತನ್ನೊಳಗೆ ಹೊಂದಿರುತ್ತದೆ ಎನ್ನುವುದನ್ನು ಮಂಡಲದಲ್ಲಿರುವ ಕಪ್ಪು-ಬಿಳಿ ಬಿಂದುಗಳು ಸೂಚಿಸುತ್ತದೆ. ಕತ್ತಲು ಬೆಳಕು ವಿಶ್ವದ ಎರಡು ಮೂಲಭೂತ ಸತ್ವಗಳ ಸಾಂಕೇತಿಕ ಸಂಗತಿಗಳು. ಬೆಳಕು ಪುರುಷನಾದರೆ ಕತ್ತಲು ಪ್ರಕೃತಿ. ಬೆಳಕು ಪರ ಆದರೆ ಕತ್ತಲು ಇಹ. ಬೆಳಕು ಜಂಗಮತ್ವವಾದರೆ ಕತ್ತಲು ಸ್ಥಾವರತ್ವ. ಕತ್ತಲು ಇರುವುದನ್ನು ಮರೆಯಾಗಿಸಬಲ್ಲದೇ ಹೊರತು ಇರುವುದನ್ನು ಶಾಶ್ವತವಾಗಿ ಇಲ್ಲವಾಗಿಸಬಲ್ಲ ಶಕ್ತಿ ಕತ್ತಲಿಗೆ ಇರದು, ಈ ಕತ್ತಲಿನ ಮಾಯಾಜಾಲ ಕ್ಷಣಿಕವಾದದ್ದು; ಇದರ ಆಟಾಟೋಪವೆಲ್ಲ ಬೆಳಕು ಮೂಡುವ ತನಕ.


ನರಕ ಎಂಬ ಅಸುರನನ್ನು ಶ್ರೀಕೃಷ್ಣ ಸಂಹರಿಸಿದ ದಿನ ನಮ್ಮ ಪಾಲಿಗೆ ಹಬ್ಬವಾಯಿತು ಬೆಳಕಿನ ಹಬ್ಬವದು ನರಕಾಸುರನಿಗೆ ಐದು ತಲೆಗಳಿದ್ದವಂತೆ, ಇವು ಪಂಚಭೂತಗಳಿಗೆ ಪ್ರತೀಕ; ಪಂಚಭೂತಗಳೆಂದರೆ ಈ ಸೃಷ್ಟಿ; ನಮ್ಮ ಬದುಕು, ಈ ನರಕಾಸುರ ಹುಟ್ಟಿದ್ದು ಭೂದೇವಿಯಲ್ಲಿ ಎಂದರೆ ನರಕ ಕಾಣಿಸಿಕೊಳ್ಳುದು ಈ ಜಗತ್ತಿನಲ್ಲಿ, ನೀರು, ಆಕಾಶ, ವಾಯು, ಅಗ್ನಿ, ಪೃಥ್ವಿ ತತ್ವಗಳಿಂದ ಆದ ಈ ಸೃಷ್ಟಿಯಲ್ಲಿ ಈ ನರಕ ಎಂಬ ರಾಕ್ಷಸ ನಮಗೆ ಅಡ್ಡಿ ಒಡ್ಡುತ್ತಾ ಈ ಲೋಕದ ಜೀವನವನ್ನು ಯಾತನೆಗೆ ಒಡ್ಡುತ್ತಿರುತ್ತಾನೆ. ಇವರ ಸಂಹಾರ ಮಾಡಿದವನು ಕೃಷ್ಣ ಅಂದರೆ ಕತ್ತಲಿನಲ್ಲಿ ತೋರಿಕೊಂಡ ಬೆಳಕು ಅವನು.


ದೀಪಾವಳಿಯೆಂದರೆ ಅಮಾವಾಸ್ಯೆಯ ಗಾಢಾಂಧಕಾರದಲ್ಲಿಯೂ ಪ್ರಕಾಶವನ್ನು ಹೊರಸೂಸುವ ಪರ್ವ. ಅಮಾವಾಸ್ಯ ದಿನ ಲಕ್ಷ್ಮಿಯನ್ನು ಆರಾಧಿಸಬೇಕು. ಲಕ್ಷ್ಮಿ ಅಂದರೆ ಕೇವಲ ಹಣ; ಸಂಪತ್ತುಗಳು ಮಾತ್ರವೇ ಅಲ್ಲ ನಮ್ಮ ಜೀವನದ ಕತ್ತಲಿನ ಕ್ಷಣಗಳನ್ನು ದೂರ ಮಾಡುವಂಥ ಎಲ್ಲವೂ ಕೂಡ ಲಕ್ಷ್ಮಿ ಸ್ವರೂಪವೇ ಹೌದು.  


ಬಲಿ ಪಾಡ್ಯಮಿಯ ದಿನ ದೀಪಾವಳಿಯ ಮೂರನೇ ದಿನ ವಾಮನನು ಬಲಿಯನ್ನು ನಿಗ್ರಹಿಸಿದ ದಿನ. ಬಲಿಚಕ್ರವರ್ತಿಯನ್ನು ಮೂರು ಹೆಜ್ಜೆಯಷ್ಟು ಸ್ಥಳವನ್ನು ಯೋಚಿಸಿದ ವಿಷ್ಣು ಎರಡು ಹೆಜ್ಜೆಗಳು ಭೂಮಿ - ಆಕಾಶಗಳನ್ನು ವ್ಯಾಪಿಸಿದವು. ಮೂರನೆ ಪಾದಕ್ಕೆ ಎಡೆಯಿಲ್ಲದಾಯಿತು. ಬಲಿಯು ತಲೆ ಅದಕ್ಕೆ ಅವಕಾಶವಾಯಿತು. ಇದರ ತಾತ್ಪರ್ಯ ವಿಷ್ಣುವು ತನ್ನ ಮೊದಲೆರಡು ಪಾದಗಳಲ್ಲಿ ಹಗಲು-ರಾತ್ರಿಗಳನ್ನು ಆಕ್ರಮಿಸಿದ; ಅಂದರೆ ಕತ್ತಲೆ - ಬೆಳಕುಗಳನ್ನು ಅಳೆದ. ಈ ಎರಡೂ ಸ್ಥಿತಿಗಳನ್ನು ಮೀರಿದ ಸ್ಥಿತಿಯೇ ಮೂರನೇ ಪಾದಕ್ಕೆ ನೆಲೆ ಕಲ್ಪಿಸಿಲು ಸಾಧ್ಯ. ಬೆಳಕು - ಕತ್ತಲೆಯನ್ನು ಮೀರಿದ ಸ್ಥಿತಿ ಎಂದರೆ `ನನ್ನದು’ `ನನ್ನದಲ್ಲ’ ಎಂಬ ಮೀರಿದ ಸ್ಥಿತಿ. ಸುಖ-ದುಃಖವನ್ನು ಮೀರಿದ ಸ್ಥಿತಿ. ಈ ಅಹಂಕಾರ ದಮನಕ್ಕೆ ಸಾಂಕೇತಿಕವಾಗಿಯೇ. ಬಲಿ ಚಕ್ರವರ್ತಿ ತನ್ನ ತಲೆಯನ್ನೇ ವಿಷ್ಣುಪಾದಕ್ಕೆ ಅರ್ಪಿಸಿದ್ದು. ಆ ಮೂಲಕ ಶಾಶ್ವತ ಸ್ಥಾನಕ್ಕೆ ಏರಿದ್ದು.  


ಸುಶುಪ್ತಿಯ ಗಾಢ ಕತ್ತಲೆಯ ಒಡಲು ಆನಂದ ಘನ ಸ್ವಸ್ಥ ರೂಪವನ್ನು ಧರಿಸಿಟ್ಟುಕೊಂಡಿದೆ. ಆದರೆ ಎಚ್ಚರದ ಬೆಳಕು ಹರಿಯದೆ ಆದು ಸ್ವಾನುಭವಕ್ಕೆ ಬರಲಾರದು. ಬೆಳಕು ತೋರದೆ ದಾರಿ ಕಾಣದು! ಕತ್ತಲ ಸ್ಥಾಯಿಯಲ್ಲಿ ಬೆಳಕಿಗಾಗಿ ಹಂಬಲಿಸುತ್ತಾ ಸಾಗುವುದು ಬದುಕಿನ ಪ್ರಕ್ರಿಯೆ ಕತ್ತಲು ಮುಸುಕಿದೆಂತೆಲ್ಲ ಬೆಳಕಿನ ಕಿಂಡಿಯನ್ನು ತೆರೆಯಲೇಬೇಕು ಹಣತೆಯನ್ನು ಹಚ್ಚುತ್ತಲೆ ಇರಬೇಕು. ವರ್ಷ ವರ್ಷವೂ ದೀಪಾವಳಿ ನಡೆಯಬೇಕು.

-ಡಾ. ಗುರುರಾಜ ಪೋಶೆಟ್ಟಿಹಳ್ಳಿ (ಪ್ರಣವ) 

ಸಂಸ್ಕೃತಿ ಚಿಂತಕರು  

9739369621

(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ



Post a Comment

0 Comments
Post a Comment (0)
To Top