ಮಂಗಳೂರು: ರಾಷ್ಟ್ರೀಯ ಆಯುರ್ವೇದ ದಿನಾಚರಣೆಯ ಪ್ರಯುಕ್ತ ಮಂಗಳೂರು ವೆನ್ಲಾಕ್ ಆಯುಷ್ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆಯಲ್ಲಿ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಹಿರಿಯ ಆಯುರ್ವೇದ ವೈದ್ಯ ಡಾ.ಶ್ರೀಪತಿ ಕಿನ್ನಿಕಂಬಳ ಇವರು ಜ್ಯೋತಿ ಬೆಳಗಿಸಿ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಅವರು ಮಾತನಾಡಿ, ನಮ್ಮ ಪೂರ್ವಜರು ಸಹಸ್ರಾರು ವರ್ಷಗಳ ಇತಿಹಾಸವುಳ್ಳ ಆಯುರ್ವೇದ ಜೀವನ ಪದ್ಧತಿಗೆ ಮಹತ್ತರ ಕೊಡುಗೆ ನೀಡುತ್ತಾ ಬಂದಿದ್ದಾರೆ. ಈಗ ಆಯುರ್ವೇದ ಪದ್ಧತಿಗೆ ಅಮೃತ ಕಾಲವಾಗಿದ್ದು ದೇಶ ವಿದೇಶಗಳಲ್ಲಿ ಇದು ಅತ್ಯಂತ ಫಲಪ್ರದವೆಂಬ ವಿಶ್ವಾಸ ಮೂಡಿಬರುತ್ತಿದೆ. ಆಯುಷ್ ಇಲಾಖೆಯು ನಮ್ಮ ಜಿಲ್ಲೆಯಲ್ಲಿ ಉತ್ತಮ ಕಾರ್ಯಕ್ರಮಗಳ ಮೂಲಕ ಸೇವೆ ನೀಡುತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕಿಶೋರ್ ಕುಮಾರ್ ಮಾತನಾಡಿ ಆಯುಷ್ ಇಲಾಖೆಯು ಆರೋಗ್ಯ ಇಲಾಖೆಯ ಜೊತೆಗೆ ಉತ್ತಮ ಬಾಂಧವ್ಯ ಹೊಂದಿದೆ, ಜಿಲ್ಲೆಯ ಅಯುಷ್ ಒಂದೇ ತಂಡವಾಗಿ ಬಹಳ ಉತ್ತಮ ರೀತಿಯಲ್ಲಿ ಸೇವೆಗೈಯುತ್ತಿದೆ, ಕೋವಿಡ್ ಸಂಕಷ್ಟಗಳ ಸಂದರ್ಭದಲ್ಲಿ ಸುಮಾರು 48000 ಜನರ ಕರೆಗಳಿಗೆ ಸ್ಪಂದಿಸಿ ಅವರಿಗೆ ಸೂಕ್ತ ಚಿಕಿತ್ಸಾ ಸಲಹೆ ಹಾಗೂ ಆಯುಷ್ ಇಮ್ಯೂನಿಟಿ ಬೂಸ್ಟರ್ ವಿತರಣೆ ಮಾಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ಡಾ.ಅಂಬಿಕಾ ನಾಯಕ್ ಇವರು ಆಯುರ್ವೇದಾನುಸಾರ ಆಹಾರ ತಯಾರಿಕೆ ಹಾಗೂ ಸೇವನಾ ವಿಧಾನಗಳ ಬಗ್ಗೆ ಉಪನ್ಯಾಸ ನೀಡಿದರು. ಆಯುರ್ವೇದ ಆಹಾರದ ಬಗ್ಗೆ ವಿಶೇಷ ಪ್ರದರ್ಶನಕ್ಕೆ ಆರೋಗ್ಯ ಇಲಾಖಾಧಿಕಾರಿ ಡಾ.ರಾಜೇಶ್ ಚಾಲನೆ ನೀಡಿದರು. ಆಯುಷ್ ಇಲಾಖೆಯ ಕೋವಿಡ್ ಸೇನಾನಿಗಳನ್ನು ಸನ್ಮಾನಿಸಲಾಯಿತು. ಆಶಾ ಕಾರ್ಯ ಕರ್ತರಿಗೆ ರೋಗನಿರೋಧಕ ಔಷಧ ಮತ್ತು ಇಮ್ಯೂನಿಟಿ ಬೂಸ್ಟರ್ಗಳನ್ನು ವಿತರಿಸಲಾಯಿತು.
ವೇದಿಕೆಯಲ್ಲಿ ಡಾ. ಗೋಪಾಲಕೃಷ್ಣ ನಾಯಕ್, ಶಿಕ್ಷಣ ಇಲಾಖೆಯ ಶ್ರೀಮತಿ ಆಶಾ ನಾಯಕ್, ಡಾ.ಆಶಾ ಜ್ಯೋತಿ ರೈ ಮಾಲಾಡಿ, ಡಾ.ಶ್ರೀದೇವಿ ಭಟ್ ಉಪಸ್ಥಿತರಿದ್ದರು. ಜಿಲ್ಲಾ ಆಯುಷ್ ಅಧಿಕಾರಿ ಡಾ. ಮುಹಮ್ಮದ್ ಇಕ್ಬಾಲ್ ಸ್ವಾಗತಿಸಿದರು. ಡಾ. ಶೋಭಾರಾಣಿ ಕಾರ್ಯಕ್ರಮ ನಿರ್ವಹಿಸಿದರು.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ