ಮಧುಮೇಹ: ನಿಮ್ಮ ಆರೋಗ್ಯ ಸ್ಥಿತಿಯನ್ನು ನಿಯಮಿತವಾಗಿ ಪರಿಶೀಲಿಸಿಕೊಳ್ಳಿ

Upayuktha
0


ಇಂದು ಜನರನ್ನು ವ್ಯಾಪಕವಾಗಿ ಕಾಡುತ್ತಿರುವ ರೋಗಗಳಲ್ಲಿ ಮಧುಮೇಹ ಕೂಡ ಒಂದು. ಈ ರೋಗದ ಬಗ್ಗೆ ಅನೇಕರಲ್ಲಿ ಅನೇಕ ವಿಧದ ಸಂಶಯಗಳಿರುತ್ತವೆ. ಈ ರೋಗದ ಲಕ್ಷಣಗಳನ್ನು ಸರಿಯಾಗಿ ತಿಳಿದುಕೊಂಡು ಮುನ್ನೆಚ್ಚರಿಕೆ ವಹಿಸುವುದೊಳಿತು. ಅದಕ್ಕೋಸ್ಕರ ರೋಗದ ಬಗ್ಗೆ ಸರಿಯಾಗಿ ತಿಳಿದುಕೊಳ್ಳುವುದೂ ಅತ್ಯಂತ ಅಗತ್ಯವಾಗಿದೆ. 


ಮಧುಮೇಹ ಎಂದರೇನು? 

ದೇಹದ ಜೀವಕೋಶಗಳು ಸಕ್ಕರೆಯನ್ನು ಹೀರಿಕೊಳ್ಳಲು ಹಾಗೂ ಅದನ್ನು ಶಕ್ತಿಯನ್ನಾಗಿ ಪರಿವರ್ತಿಸಲು ಸಾಧ್ಯವಾಗದಿದ್ದಾಗ ಮಧುಮೇಹ ಉಂಟಾಗುತ್ತದೆ. ಇದು ರಕ್ತದಲ್ಲಿ ಸಕ್ಕರೆಯ ಪ್ರಮಾಣವು ಹೆಚ್ಚಾಗಲು ಕಾರಣವಾಗುತ್ತದೆ.


ನಿಯಂತ್ರಣ ರಹಿತ ಮಧುಮೇಹವು ಗಂಭೀರ ಪರಿಣಾಮಗಳಿಗೆ ಕಾರಣವಾಗಬಹುದು. ಹೃದಯ, ಮೂತ್ರಪಿಂಡಗಳು, ಕಣ್ಣುಗಳು ಮತ್ತು ನರಗಳು ಸೇರಿದಂತೆ ದೇಹದ ಅಂಗಗಳು ಮತ್ತು ಅಂಗಾಂಶಗಳಿಗೆ ಹಾನಿಯನ್ನುಂಟುಮಾಡುತ್ತದೆ.


ರಕ್ತದಲ್ಲಿನ ಗ್ಲೂಕೋಸ್ ಮಟ್ಟ ಹೇಗೆ ಹೆಚ್ಚುತ್ತದೆ? 

ಜೀರ್ಣಕ್ರಿಯೆಯ ಪ್ರಕ್ರಿಯೆಯು ನಾವು ತಿನ್ನುವ ಆಹಾರವನ್ನು ವಿವಿಧ ಪೋಷಕಾಂಶಗಳ ಮೂಲಗಳಾಗಿ ವಿಭಜಿಸುತ್ತದೆ. ಕಾರ್ಬೋಹೈಡ್ರೇಟ್‌ಗಳನ್ನು ಸೇವಿಸಿದಾಗ, ಸಕ್ಕರೆ ಆಗಿ ವಿಭಜನೆಗೊಳ್ಳುತ್ತದೆ. ಗ್ಲೂಕೋಸ್  ರಕ್ತದಲ್ಲಿರುವಾಗ, ಜೀವಕೋಶಗಳ ಒಳಗೆ ಇನ್ಸುಲಿನ್ನಿನ ಸಹಾಯದಿಂದ ಸೇರುತ್ತದೆ. ಇನ್ಸುಲಿನ್  ಮೇದೋಜೀರಕ ಗ್ರಂಥಿ (Pancreas)ಯಿಂದ ಉತ್ಪತ್ತಿಯಾಗುವ ಹಾರ್ಮೋನ್ ಆಗಿದೆ. 


ಮಧುಮೇಹ ಹೊಂದಿದ್ದರೆ:

ಮೇದೋಜೀರಕ ಗ್ರಂಥಿಯು ಯಾವುದೇ ಇನ್ಸುಲಿನ್ ಅಥವಾ ಸಾಕಷ್ಟು ಇನ್ಸುಲಿನ್ ಅನ್ನು ಉತ್ಪತ್ತಿ ಮಾಡುವುದಿಲ್ಲ ಅಥವಾ ದೇಹದ ಜೀವಕೋಶಗಳು ಅದಕ್ಕೆ ಪ್ರತಿಕ್ರಿಯಿಸುವುದಿಲ್ಲ.

ಗ್ಲೂಕೋಸ್ ದೇಹದ ಜೀವಕೋಶಗಳಿಗೆ ಪ್ರವೇಶಿಸಲು ಸಾಧ್ಯವಾಗದಿದ್ದರೆ, ರಕ್ತದಲ್ಲಿಯೇ ಉಳಿಯುತ್ತದೆ ಮತ್ತು ರಕ್ತದಲ್ಲಿನ ಗ್ಲೂಕೋಸ್ ಮಟ್ಟವು ಹೆಚ್ಚಾಗುತ್ತದೆ.


ಮಧುಮೇಹದ ಲಕ್ಷಣಗಳೇನು? 

ಹೆಚ್ಚಿದ ಬಾಯಾರಿಕೆ, ಹಸಿವು; ಆಗಾಗ್ಗೆ ಮೂತ್ರ ವಿಸರ್ಜನೆ, ದುರ್ಬಲ, ದಣಿದ ಭಾವನೆ; ಮಂದ ದೃಷ್ಟಿ, ಕೈ ಕಾಲುಗಳಲ್ಲಿ ಮರಗಟ್ಟುವಿಕೆ ಅಥವಾ ಜುಮ್ಮೆನಿಸುವಿಕೆ, ನಿಧಾನವಾಗಿ ಗುಣಪಡುವ ಹುಣ್ಣುಗಳು ಅಥವಾ ಗಾಯಗಳು, ಅನಿಯತವಾದ ತೂಕ ನಷ್ಟ, ಆಗಾಗ್ಗೆ ವಿವರಿಸಲಾಗದ ಸೋಂಕುಗಳು, ಒಣ ಬಾಯಿ.

ಮಹಿಳೆಯರಲ್ಲಿ- ಒಣ ಮತ್ತು ತುರಿಕೆ ಚರ್ಮ, ಮತ್ತು ಆಗಾಗ್ಗೆ fungal ಸೋಂಕುಗಳು ಅಥವಾ ಮೂತ್ರದ ಸೋಂಕುಗಳು (UTI).

ಪುರುಷರಲ್ಲಿ- ಕುಂದಿದ ಕಾಮಾಸಕ್ತಿ, ನಿಮಿರುವಿಕೆಯ ತೊಂದರೆ, ಸ್ನಾಯುವಿನ ದೌರ್ಬಲ್ಯ.


ಮಧುಮೇಹದ ತೊಡಕುಗಳೇನು? 

ರಕ್ತದಲ್ಲಿನ ಗ್ಲೂಕೋಸ್ ಮಟ್ಟವು ದೀರ್ಘಕಾಲದವರೆಗೆ ಅಧಿಕವಾಗಿದ್ದರೆ, ದೇಹದ ಅಂಗಾಂಶಗಳು ಮತ್ತು ಅಂಗಗಳು ಗಂಭೀರವಾಗಿ ಹಾನಿಗೊಳಗಾಗಬಹುದು. ಕೆಲವು ತೊಡಕುಗಳು ಕಾಲಾನಂತರದಲ್ಲಿ ಜೀವಕ್ಕೆ ಅಪಾಯಕಾರಿಯಾಗಬಹುದು.

ಎದೆನೋವು, ಹೃದಯಾಘಾತ, ಪಾರ್ಶ್ವವಾಯು, ಅಧಿಕ ರಕ್ತದೊತ್ತಡ ಸೇರಿದಂತೆ ಹೃದಯರಕ್ತನಾಳದ ಸಮಸ್ಯೆಗಳು ಎದುರಾಗಬಹುದು.

ನರರೋಗ, ಮೂತ್ರಪಿಂಡ ಹಾನಿ,

ಕಣ್ಣಿನ ಹಾನಿ,ಚರ್ಮದ ಸೋಂಕುಗಳು ಉಂಟಾಗಬಹುದು.


ಮಧುಮೇಹವನ್ನು ಹೇಗೆ ನಿರ್ವಹಿಸಲಾಗುತ್ತದೆ? 

ಮಧುಮೇಹವು ಇಡೀ ದೇಹದ ಮೇಲೆ ಪರಿಣಾಮ ಬೀರುತ್ತದೆ. ಮಧುಮೇಹವನ್ನು ಉತ್ತಮವಾಗಿ ನಿರ್ವಹಿಸಲು, ಅಪಾಯಕಾರಿ ಅಂಶಗಳನ್ನು ನಿಯಂತ್ರಣದಲ್ಲಿಡಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ, ಅವುಗಳೆಂದರೆ:

- ಸೂಕ್ತವಾದ ಆಹಾರ ಪದ್ಧತಿಯನ್ನು ಅನುಸರಿಸಿ.

- ರಕ್ತದ ಅತಿರಿಕ್ತ ಕೊಲೆಸ್ಟ್ರಾಲ್ ಮಟ್ಟವನ್ನು ಸಾಧ್ಯವಾದಷ್ಟು ಕಡಿತಗೊಳಿಸಿ.

- ವ್ಯಾಯಾಮ ಮಾಡುವುದು.

- ಅಧಿಕ ತೂಕ ಹೊಂದಿದ್ದರೆ ಕಳೆದುಕೊಳ್ಳುವುದು. 

- ಔಷಧಿ ಮತ್ತು ಇನ್ಸುಲಿನ್ ಅನ್ನು ಕ್ರಮ ಪ್ರಕಾರ ತೆಗೆದುಕೊಳ್ಳುವುದು.

- ರಕ್ತದ ಗ್ಲೂಕೋಸ್ ಮತ್ತು ರಕ್ತದೊತ್ತಡದ ಮಟ್ಟವನ್ನು ಆಗಾಗ ಪರೀಕ್ಷೆ ಮಾಡುವುದು.

- ಧೂಮಪಾನ, ಮದ್ಯಪಾನವನ್ನು ತ್ಯಜಿಸುವುದು.


ರಕ್ತದ ಗ್ಲೂಕೋಸ್ ಮಟ್ಟ ಎಷ್ಟಿರಬೇಕು? 

ಊಟದ ಮೊದಲು: 80 ಮತ್ತು 130 mg/dL ನಡುವೆ.

ಊಟದ ಪ್ರಾರಂಭದ ಸುಮಾರು ಎರಡು ಗಂಟೆಗಳ ನಂತರ: 180 mg/dL ಗಿಂತ ಕಡಿಮೆ.


ರಕ್ತದಲ್ಲಿನ ಗ್ಲೂಕೋಸ್ ಮಟ್ಟ ಕಡಿಮೆಯಾದರೆ ಏನಾಗುತ್ತದೆ? 

ರಕ್ತದಲ್ಲಿನ ಗ್ಲೂಕೋಸ್ ಮಟ್ಟವು ಸಾಮಾನ್ಯ ಮಟ್ಟಕ್ಕಿಂತ ಕಡಿಮೆ ಆದರೆ (ಸಾಮಾನ್ಯವಾಗಿ 70 mg/dL ಗಿಂತ ಕಡಿಮೆ) ಹೈಪೊಗ್ಲೈಸಿಮಿಯಾ ಎಂದು ಕರೆಯಲ್ಪಡುತ್ತದೆ. ಅನುಭವಿಸಬಹುದಾದ ರೋಗಲಕ್ಷಣಗಳು:

ದೌರ್ಬಲ್ಯ ಅಥವಾ ಅಲುಗಾಡುವಿಕೆ, ತೇವ ಚರ್ಮ, ಬೆವರುವುದು, ವೇಗದ ಹೃದಯ ಬಡಿತ, ತಲೆತಿರುಗುವಿಕೆ, ಹಠಾತ್ ಹಸಿವು. ಗೊಂದಲ, ಮಂದ ದೃಷ್ಟಿ, ತಲೆನೋವು.

ಹೈಪೊಗ್ಲೈಸಿಮಿಯಾವನ್ನು ತಕ್ಷಣ ನಿರ್ವಹಿಸದಿದ್ದರೆ ಸಾವನ್ನಪ್ಪಬಹುದು.


ಮಧುಮೇಹದ ಬೆಳವಣಿಗೆಯನ್ನು ತಡೆಯಲು ಅನೇಕ ದಾರಿಗಳಿವೆ. ಆದಾಗ್ಯೂ, ಮಧುಮೇಹದ ಲಕ್ಷಣಗಳನ್ನು ಹೊಂದಿದ್ದರೆ, ವೈದ್ಯರನ್ನು ಕೂಡಲೇ ಭೇಟಿಮಾಡಿ. ಮಧುಮೇಹವನ್ನು ಮೊದಲೇ ಪತ್ತೆ ಹಚ್ಚಿದರೆ, ಅದರ ಚಿಕಿತ್ಸೆ ಮತ್ತು ನಿಯಂತ್ರಣಕ್ಕೆ ಶೀಘ್ರ ಕ್ರಮಗಳನ್ನು ತೆಗೆದುಕೊಳ್ಳಬಹುದು. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು  ಉತ್ತಮವಾಗಿ ನಿಯಂತ್ರಿಸಲು ಸಾಧ್ಯವಾಗುತ್ತದೆ. ದೀರ್ಘ, ಆರೋಗ್ಯಕರ ಜೀವನವನ್ನು ನಡೆಸುವ ಸಾಧ್ಯತೆ ಹೆಚ್ಚುತ್ತದೆ.




- ಡಾ. ಕಿಶನ್ ರಾವ್ ಬಾಳಿಲ 

MBBS, MS, FMAS, DMAS, (MCh CTVS)

General and Laparoscopic Surgeon

saikishan1991@gmail.com 

8105232787


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top