|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಗೋ ಪೂಜೆ: ಗೋಮಾತೆಯ ಪೂಜೆ- ಗೋವಿಂದನದೇ ಅನುಸಂಧಾನ

ಗೋ ಪೂಜೆ: ಗೋಮಾತೆಯ ಪೂಜೆ- ಗೋವಿಂದನದೇ ಅನುಸಂಧಾನ



|ಇಂದ ಕಬೆತಿಯೇ.... ಕಿದೆ ದಿಂಜ ಕೂಡುಲ‌|  

"ಇಂದ ಕಬೆತಿಯೆ... ದೇವೆರೆನ್ ತೂಲ‌. ಅಂಗಾರ್‌ಡ್ ಲಾಂಬು ಬನ್ನೆಟ್ಟ, ಕೊಂಬುಡು ನರೆ ಬನ್ನೆಟ್ಟ ಪದ್‌ರಾಡ್ ಪೊಣ್ಣುಕಂಜಿ- ಪದ್‌ರಾಡ್ ಆಣ್‌ ಕಂಜಿ‌ ಪಾಡ್ದ್ ನಿನ ಉಲ್ಲಾಯಗ್ ಪೇರನುಪ್ಪು ಕೊರೊಂದು, ಈ ಪೇರನುಪ್ಪು ತಿನೊಂದು ಬಹುಕಾಲ ಬಾಲ್ಲ.."

ಅಥವಾ 

"ತುಡಾರ್ ಮಗ ತುಡಾರ್, ಕಲ್ಲಡಿತ ನೀರ್‌ಪರ್ಲ, ಮುಲ್ಲಡಿತ ಪಂತಿ ಮೇಲ, ಬಂಜಿ ದಿಂಜ ಮೇಲ, ಕಿದೆ ದಿಂಜ ಕೂಡುಲ, ತುಡಾರ್ ಮಗ ತುಡಾರ್".


ಹೀಗನ್ನುತ್ತಾ (ಹಲವು ಪಾಠಾಂತರಗಳಿವೆ) ಗೋಮಾತೆಗೆ ಗೆರಸೆಯಲ್ಲಿ ಸಿದ್ಧಪಡಿಸಿದ ಸೊಡರನ್ನು ಅಥವಾ ತುಡಾರನ್ನು‌ ತೋರಿಸುವ, ಕೃತಜ್ಞತಾರ್ಪಣೆ ಸಲ್ಲಿಸುವ ನಮ್ಮ ಮಣ್ಣಿನ ಸಂಪ್ರದಾಯ ದೀಪಾವಳಿ ಹಬ್ಬದ ಒಂದು ಮುಖ್ಯ ಸಂದರ್ಭ. ಗೋಮಾತೆಗೆ ಮಾತ್ರವಲ್ಲ ವಿಶೇಷವಾಗಿ ಕೋಣ- ಎತ್ತುಗಳಿಗೂ‌ ದೀಪ ತೋರಿಸಿ ಹೇಳುವ ಕ್ರಮವಿದೆ, ಇವುಗಳೆ ಪ್ರಧಾನವೂ ಹೌದು.


ಪ್ರಾಣಿ- ಮಾನವ ಸಂಬಂಧ ಪುರಾತನವಾದುದು. ಕೃಷಿ- ಜೀವನಾಧಾರ ಪಶು ಸಂದೋಹಕ್ಕೆ ಪೂಜೆ ಸಲ್ಲಿಸುತ್ತಾ ಹೊಟ್ಟೆ ತುಂಬ "ಪರ್ಬದ ಅಡ್ಡೆ" (ದೀಪಾವಳಿಯ ವಿಶೇಷ ತಿಂಡಿ- ಪೊಟ್ಟು ಗಟ್ಟಿ) ಮುಂತಾದುವುಗಳನ್ನು ತಿನ್ನಿಸಿ ಧನ್ಯರಾಗುವ ನಾವು ಪ್ರತಿವರ್ಷ ಈ ಪ್ರಾಚೀನ ಸಂಬಂಧವನ್ನು ನೆನಪಿಸಿಕೊಳ್ಳುತ್ತೇವೆ. ಇದೇ ಮೂಲವಾಗಿ, ಈ ಪರಿಕಲ್ಪನೆಯೇ ಆಧಾರವಾಗಿ  "ತುಡಾರ್" (ಸೊಡರು) ಆರಾಧನೆಯ ಮರುದಿನ "ಗೋಪೂಜೆ" ಎಂಬ ವೈದಿಕ ವಿಧಾನದ ಪೂಜಾ ಶೈಲಿ‌‌ ನಮ್ಮಲ್ಲಿ‌ ರೂಢಗೊಂಡಿರಬೇಕು.


ನಮ್ಮಲ್ಲಿ ಮೂಲತಃ ದೀಪಾವಳಿಯ ಮರುದಿನದ ಪ್ರತ್ಯೇಕ ಗೋಪೂಜೆ ಎಂದಿಲ್ಲ. ದೀಪಾವಳಿಯ ರಾತ್ರಿ ಹಟ್ಟಿಕೊಟ್ಟಿಗೆಗೆ ತೋರಿಸುವ "ತುಡಾರ್", ಅದೇ ಸಮಷ್ಟಿಯ ಕೃಷಿ ಸಹಾಯಿ ಪಶುಗಳಪೂಜೆ. Upayuktha


ಹೆತ್ತ ತಾಯಿಯ ಬಳಿಕ ಜೀವನ ಪೂರ್ತಿ ಹಾಲಿಗೆ ನಾವು ದನಗಳನ್ನೆ ಆಶ್ರಯಿಸ ಬೇಕು ತಾನೆ? ಆದುದರಿಂದ ದನವು ಮಾತೃ ಸಮಾನವಾದುದು ಎಂಬ ಭಾವದೊಂದಿಗೆ ಗೋಪೂಜೆ. ಜಾನಪದ- ಶಿಷ್ಟ ವಿಧಾನಗಳು ಈ ಆರಾಧನಾ ವಿಧಾನದಲ್ಲಿ‌ ಸಮ್ಮಿಳಿತಗೊಂಡಿವೆ. ಆರಾಧನೆ ನಿರಂತರ ನಡೆದು ಬಂದಿದೆ, ಇದರಲ್ಲಿ ವಿಮರ್ಶೆಗಳಿಲ್ಲ. ಇದೇ ನಮ್ಮ ಸಾಂಸ್ಕೃತಿಕ ಸೊಬಗು. ಗೋವುಗಳಲ್ಲಿ ಸಾಕ್ಷಾತ್ ಜನಪದ ಮನಸ್ಸಿನ‌ ಜಗನ್ನಾಥನಾದ ಗೋಪಾಲಕೃಷ್ಣನೇ ಸನ್ನಿಹಿತನಿದ್ದು ಪೂಜೆಗೊಳ್ಳುತ್ತಾನೆ ಎಂಬುದು ಅನುಸಂಧಾನ.'ಸರ್ವೇ ದೇವಾಃ ಸ್ಥಿತಾ ದೇಹೇ' ಇದು ಗೋಮಾತೆಯನ್ನು ವೈದಿಕವು ಕೊಂಡಾಡಿದೆ.


ಗೋಸಂಪತ್ತು: 

ಗೋಸಂಪತ್ತೇ ಐಶ್ವರ್ಯದ ಮಾನ ದಂಡವಾಗಿದ್ದ ಕಾಲವೊಂದಿತ್ತು. ಗೋದಾನವೇ ಶ್ರೇಷ್ಠ ದಾನವೆಂಬ ಒಪ್ಪಿಗೆ ಇಂದಿಗೂ ಇದೆ. ಅಪೂರ್ವ ವಸ್ತುಗಳನ್ನು ಪಡೆಯಲು ಗೋ ಸಮೂಹವನ್ನೇ ಪ್ರತಿಯಾಗಿ  ಅಥವಾ ಮೌಲ್ಯವಾಗಿ ನೀಡಲಾಗುತ್ತಿತ್ತು. ವಧು- ವರ ದಕ್ಷಿಣೆಯಾಗಿ ಗೋವುಗಳನ್ನು ಕೊಡುತ್ತಿದ್ದ ಬಗ್ಗೆ ಪುರಾಣಗಳು ಕತೆ ಹೇಳುತ್ತವೆ. ಗೋವುಗಳನ್ನು ಶತ, ಸಹಸ್ರ ಸಂಖ್ಯೆಯಲ್ಲಿ ಋಷಿಗಳಿಗೆ ನಮ್ಮ ಪುರಾಣಕಾಲದ ಅರಸರು ಬೇರೆ ಬೇರೆ ಕಾರಣಗಳಿಗೆ ದತ್ತಿಯಾಗಿ- ದಾನವಾಗಿ ಕೊಡುತ್ತಿದ್ದರೆಂದು ಕಥಾನಕಗಳು ವಿವರ ನೀಡುತ್ತವೆ. ಕಾಡಿನಲ್ಲಿ ಋಷಿ ಆಶ್ರಮಗಳಲ್ಲಿ ಸಹಸ್ರ ಸಂಖ್ಯೆಯ ವರಗೆ ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡುತ್ತಿದ್ದರು, ಗುರುಕುಲ ಪದ್ಧತಿಯ ಶಿಕ್ಷಣದ ಕಾಲದಲ್ಲೂ ಗೋಸಂಪತ್ತು ಆಶ್ರಮಗಳಲ್ಲಿ ಇದ್ದುವು.


ದನಗಳನ್ನು ಸಾಕುವುದು, ಮನೆ ಮುಂಭಾಗ ಅವುಗಳಿಗೊಂದು ಕೊಟ್ಟಿಗೆ, ಯಾವಕಾರಣಕ್ಕೂ ದನಗಳಿಗೆ ನೋವಾಗದಂತೆ ನೋಡಲಾಗುತ್ತಿತ್ತು. ಬೆಳಗ್ಗೆ ಎದ್ದೊಡನೆ ಹಟ್ಟಿಗೆ ಹೋಗಿ ದನಗಳ ಸಹಿತ ಜಾನುವಾರುಗಳ ಮೈಸವರಿ ಹುಲ್ಲು ಹಾಕುವುದು ಮನೆ ಯಜಮಾನನ ಆದ್ಯ ಕರ್ತವ್ಯವಾಗಿತ್ತು. ಗವ್ಯಗಳಿಗಂತೂ ಪರ್ಯಾಯ ಸುವಸ್ತುಗಳಿಲ್ಲ. ಹಾಗಾಗಿ ಗೋಮಾತೆ ಶ್ರೇಷ್ಠಳು. ಗವ್ಯ (ಹಾಲು, ಮೊಸರು, ಬೆಣ್ಣೆ- ತುಪ್ಪ, ಗೋಮೂತ್ರ, ಗೋಮಯಗಳಲ್ಲಿ ಔಷಧೀಯ ಗುಣಗಳಿರುವಂತೆ ಹಸುವಿನ ನೆತ್ತಿಯಲ್ಲಿರುವ ಗೋರೋಚನವೂ ಔಷಧಿ. 


ಕೃಷ್ಣನ ಬದುಕು ಅರಳಿದ್ದು ಗೋಮಂದೆಯೊಂದಿಗೆ:

ದ್ವಾಪರದ ಲೀಲಾಮಾನುಷ ಕೃಷ್ಣ, ಭಗವಾನ್ ವಾಸುದೇವನ ಬದುಕು ಅರಳಿದ್ದೆ ಗಂಜಳ- ಸೆಗಣಿಯ ಸುವಾಸನೆಯ ನಡುವೆ. ಹಾಲು- ತುಪ್ಪ- ಬೆಣ್ಣೆ- ಮೊಸರುಗಳ ಸುಮಧುರ ಗಂಧದಲ್ಲಿ‌. ಕೃಷ್ಣ ಕೊಳಲು ನುಡಿಸಿ ಆಕರ್ಷಿಸಿದ್ದು ಮೂಕ ಗೋವುಗಳನ್ನು, ಪ್ರೀತಿಸಿದ್ದು- ಒಡನಾಡಿದ್ದು ಗೋಮಂದೆಯನ್ನು ಹಾಗಾಗಿಯೇ ಕೃಷ್ಣ ಗೋಪಾಲಕೃಷ್ಣ.


ಗೋವುಗಳನ್ನು ಕೊಂದ ದೋಷ ಬರಲಿ, ಕಾಶಿಯಲ್ಲಿ ಕಪಿಲೆಯನ್ನು ಕಡಿದು ಕೊಂದ ಪಾಪ ಪ್ರಾಪ್ತಿಯಾಗಲಿ ಮುಂತಾದ ಶಾಪಾಶಯಗಳು ಒಪ್ಪಂದ, ದಾನ ಶಾಸನಗಳಲ್ಲಿ ಉಲ್ಲೇಸಲ್ಪಟ್ಟಿವೆ. ಒಂದು ರಾಜ್ಯದ ಸಂಪತ್ತಾಗಿರುವ ಗೋಸಂಪತ್ತನ್ನು ಕಳ್ಳರು ಅಪಹರಿಸಿದಾಗ ಆ ಕಳ್ಳರನ್ನು ತಡೆದು ರಕ್ಷಿಸಿ ತಾನು ಆತ್ಮಾರ್ಪಣೆ ಮಾಡಿದ "ತುರುಗೋಳ್ ವೀರರಿಗೆ" ವೀರಗಲ್ಲುಗಳನ್ನು ಹಾಕಲಾಗುತ್ತಿತ್ತು.


ಜನಪದರಲ್ಲಿ, ಪುರಾಣಗಳಲ್ಲಿ‌, ಇತಿಹಾಸದಲ್ಲಿ ಗೋಮಾತೆ ಪೂಜಾರ್ಹಳಾಗಿ ಕಂಡುಬರುತ್ತಾಳೆ. ಸೊಡರ ಹಬ್ಬದಂದು ಹಟ್ಟಿಯಲ್ಲಿರುವ ಸಮಸ್ತ ಕೃಷಿ ಸಹಾಯಿ ಪ್ರಾಣಿಗಳನ್ನು ಜನಪದೀಯವಾಗಿ ಪೂಜಿಸೋಣ, ಮರುದಿನ ಗೋಮಾತೆಗೆ ಪ್ರತ್ಯೇಕ ಪೂಜೆ ಮಾಡೋಣ. ಗೋರಕ್ಷಣೆ- ಸಾಕಣೆ ಭಾರತೀಯರ ಪರಮಧರ್ಮ. ಈ ಮನೋಧರ್ಮ‌ ಸಾರ್ವತ್ರಿಕವಾಗಬೇಕು. ಇದು ಗೋಪೂಜೆಯ ಸಂದೇಶವಾಗಲಿ.

(ಸಂಗ್ರಹ)

• ಕೆ.ಎಲ್.ಕುಂಡಂತಾಯ

(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ



0 تعليقات

إرسال تعليق

Post a Comment (0)

أحدث أقدم