ಧರ್ಮಸ್ಥಳ: ಆಂಗ್ಲ ಮಾಧ್ಯಮ ಶಾಲೆಯ ಧರ್ಮಸ್ಥಳದಲ್ಲಿ ಇಂದು ಮಕ್ಕಳ ದಿನಾಚರಣೆ ಸಂಭ್ರಮ ಮನೆಮಾಡಿತ್ತು. ವಿದ್ಯಾರ್ಥಿಗಳನ್ನು ಹೊಳ್ಳ ಆರ್ಟ್ಸ್ ನವರಿಂದ ತರಿಸಿದ್ದ ಬೊಂಬೆಯ ಮುಖವಾಡಗಳನ್ನು ಧರಿಸಿದ ಶಿಕ್ಷಕಿಯರು ಸ್ವಾಗತಿಸಿ ಮಕ್ಕಳನ್ನು ರಂಜಿಸುತ್ತಾ ಶಾಲೆಗೆ ಬರಮಾಡಿಕೊಂಡರು.
ಬಾಗಿಲಲ್ಲಿ ಹಾಕಿದ್ದ ಬಣ್ಣಬಣ್ಣದ ರಂಗೋಲಿ ವಿದ್ಯಾರ್ಥಿಗಳಿಗೆ ಸ್ವಾಗತ ಹೇಳುತ್ತಿತ್ತು.ವಿದ್ಯಾರ್ಥಿಗಳು ಜವಹರಲಾಲ್ ನೆಹರೂ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ನಂತರ ಪ್ರಾರ್ಥನೆಗೆ ಹಾಜರಾದರು. ತದನಂತರ ಶಾಲಾ ಪ್ರಾರ್ಥನೆಯ ಬಳಿಕ ಶಿಕ್ಷಕರು ತಾವೇ ರಚಿಸಿದ ಹಾಡುಗಳನ್ನು ಹಾಡಿ, ಕವನ ವಾಚಿಸಿದರು. ಬೊಂಬೆ ಧರಿಸಿದ ಶಿಕ್ಷಕರು ಅರ್ಥಪೂರ್ಣ ಹಾಡಿಗೆ ನೃತ್ಯ ಮಾಡಿ ವಿದ್ಯಾರ್ಥಿಗಳನ್ನು ರಂಜಿಸಿದರು. ಬಿಎಡ್ ಪ್ರಶಿಕ್ಷಣಾರ್ಥಿಗಳು ತಮ್ಮ ನೃತ್ಯದ ಮೂಲಕ ವಿದ್ಯಾರ್ಥಿಗಳನ್ನು ಮನರಂಜಿಸಿದರು.
ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಪರಿಮಳ ಎಂವಿ ಮಕ್ಕಳ ದಿನಾಚರಣೆ ಮಹತ್ವ ಹಾಗೂ ವಿದ್ಯಾರ್ಥಿಗಳ ಮುಂದಿನ ಭವಿಷ್ಯದ ನಡೆಯ ಕುರಿತು ಹೇಗಿರಬೇಕೆಂಬ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಶ್ರೀ.ಧರ್ಮಸ್ಥಳ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿಗಳಾದ ರಾಜ್ಯ ಪ್ರಶಸ್ತಿ ಉತ್ತಮ ಶಿಕ್ಷಕ ವಿಜೇತ ಶ್ರೀಯುತ ಸೋಮಶೇಖರ್ ಉಪಸ್ಥಿತರಿದ್ದು ಶಾಲಾ ಕೆಲಸ ಕಾರ್ಯಗಳನ್ನು ಶ್ಲಾಘಿಸಿದರು. ತಾಲೂಕಿನ ಉತ್ತಮ ಶಾಲೆಯಲ್ಲಿದ್ದು ವಿದ್ಯಾರ್ಥಿಗಳು ಇನ್ನೂ ಸಾಧನೆ ಮಾಡಬೇಕು. ಉತ್ತಮ ಪ್ರತಿಭಾವಂತ ವಿದ್ಯಾರ್ಥಿಗಳು ಇಲ್ಲಿದ್ದಾರೆ ಅದಕ್ಕೆ ಕಾರಣ ಪ್ರತಿಭಾವಂತ ಶಿಕ್ಷಕರು ನಿಮ್ಮ ಬೆನ್ನ ಹಿಂದೆ ಇದ್ದಾರೆ.
ಹೀಗಾಗಿ ನೀವು ಪುಣ್ಯವಂತರು ಎಂದು ನುಡಿದು ವಿದ್ಯಾರ್ಥಿಗಳಿಗೆ ಶುಭಹಾರೈಸಿದರು. ನಂತರ ತರಗತಿಗಳಿಗೆ ತೆರಳಿದ ವಿದ್ಯಾರ್ಥಿಗಳನ್ನು ಬೇರೆ ಬೇರೆ ಸ್ಪರ್ಧೆಗಳು ಕಾಯುತ್ತಿದ್ದವು. ಜೊತೆಗೆ ಅನೇಕ ತರಗತಿವಾರು ಮನರಂಜನಾ ಕಾರ್ಯಕ್ರಮಗಳೂ ನಡೆದವು. ಅಜ್ಜಿ ಕಥೆ, ಹಾಡು, ನೃತ್ಯ ಹೀಗೆ ಎಲ್ಲದರಿಂದ ಕೂಡಿದ ಆ ದಿನ ವಿದ್ಯಾರ್ಥಿಗಳಿಗೆ ಉತ್ತಮ ಮನರಂಜನೆಯನ್ನು ನೀಡಿತು.
ಈ ದಿನ ಎದೆತುಂಬಿ ಹಾಡುವೆನು ಖ್ಯಾತಿಯ ಇದೇ ಶಾಲಾ ಐದನೇ ತರಗತಿ ವಿದ್ಯಾರ್ಥಿನಿ ಪ್ರಾಪ್ತಿ ಶೆಟ್ಟಿಯನ್ನು ನೆರೆದ ಶಿಕ್ಷಕ ವೃಂದ ಸನ್ಮಾನಿಸಿ ಶುಭ ಹಾರೈಸಿತು. ಹೀಗೆ ಮಕ್ಕಳ ದಿನಾಚರಣೆ ಅರ್ಥಪೂರ್ಣವಾಗಿ ನಡೆಯಿತು. ಶಾಲೆಯ ಮುಂಭಾಗ ಹೂವಿನ ಹಾರಗಳಿಂದ ಸಿಂಗರಿಸಿ ಮದುವಣಗಿತ್ತಿಯಂತೆ ಕಾಣುತ್ತಿತ್ತು. ಒಟ್ಟಾರೆ ಶಾಲೆಯಲ್ಲಿ ಹಬ್ಬದ ವಾತಾವರಣ ಮನೆ ಮಾಡಿತ್ತು.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ