ಅ ನಾದಿಯಿಂ ಅನಂತದೆಡೆಗೆ
ಆ ದಿ ಮಧ್ಯ ಅಂತ್ಯ ಒಂದು
ಇ ರದೆ ಕಾಲ ಓಡುತಿಹುದು
ಈ ಶನೆಂಬ ಶಕ್ತಿ ಇಹುದು.
ಉ ದಯ ಅಸ್ತ ಎಂಬ ಕ್ರಿಯೆಯು
ಊ ನವಿರದ ರೀತಿಯಲ್ಲಿ
ಋ ಣದ ಬಾಧೆ ಇರದಂತೆಯೆ
ಎ ಚ್ಚರದಲಿ ಸಾಗುತಿಹುದು.
ಏ ನು ಎಂತು ಎನ್ನದೆಯೇ
ಐ ಕ್ಯಮತವ ಅನುಸರಿಸುತ
ಒ ಪ್ಪಬೇಕು ವಿಧಿಯ ನಿಯಮ
ಓ ಟವೊಂದೆ ಇದರ ಧರ್ಮ.
ಔ ಚಿತ್ಯವು ಏನೊ ಕಾಣೆ
ಅಂ ತರಾತ್ಮ ಹೇಳುತಿಹುದು
ಅ ಹಂಕಾರ ಬೇಡವೆಂದು
ಅಃ ಮಿಕೆಯನು ತೊರೆಯು ಎಂದು.
ಕ ರಿಯೆ ಇರಲಿ ಇರುವೆ ಇರಲಿ
ಖ ಗ ಮೃಗಾದಿ ಪಕ್ಷಿ ಇರಲಿ
ಗ ಮ್ಯವೆಲ್ಲ ಕಾಲನಲ್ಲಿ
ಘ ನವೊ ದ್ರವವೊ ಅನಿಲ ಬಿಡದು
ಙ ಎಂಬ ವ್ಯಂಜನವನೂ...
ಚ ಲಿಸುತಿರುವ ಜೀವಿಗಳೂ
ಛ ಲದಿ ನಿಂತ ಗಿರಿಯ ಶಿಖರ
ಜ ತೆಗೆ ಗಗನ ಸಾಗರವೂ
ಝ ರಿಯ ನೀರು ಹರಿಯುವಾಗ
ಞ ಕಾರವೋ ಓಂಕಾರವೊ
ಟ ಕಟಕನೇ ಓಡುತಿಹುದು,
ಠ ರಾವಿದುವೆ ಕಾಲನದ್ದು.
ಡ ಬ್ಬಿಯೊಳಗೆ ರೈಲಿನಲ್ಲಿ
ಢ ವಗುಟ್ಟದೆ ಎದೆಯ ಒಳಗ-
ಣ ದಲಿ ನಾವು ಕೂರುವಂತೆ.
ತ ಲ್ಲಣಿಸದೆ ವಿಶ್ವಾಸದಿ
ಥ ರಥರದಲಿ ಹೊಸಹೊಸತನು
ದ ಣಿವು ಇರದೆ ಸವಿಯಬೇಕು.
ಧ ನಿಕ ಬಡವ ಭೇದವಿರದೆ
ನ ಮಗೆಲ್ಲರ ವಿಚಾರಿಸುವ
ಪ ರಮ ಆಪ್ತ ಪರಮಾತ್ಮನು
ಫ ಲವ ನೀಡಿ ಹರಸುತಿರುವ
ಬ ದುಕ ನಿತ್ಯ ಬಯಸಬೇಕು
ಭ ವದ ಚಿಂತೆ ದೂರ ಮಾಳ್ಪ
ಮ ಹಾಕಾಲ ಮಹಿಮವಂತ.
ಯ ಜಮಾನನು ಜಗಕೆ ನೀನು
ರ ವಿಯು ಶಶಿಯು ಬ್ರಹ್ಮಾಂಡವು
ಲ ಯವೆ ಇರದ ಲಯದ ಒಳಗೆ
ವ ಶವಾಗಿಯೆ ಇಹುದು ನಿತ್ಯ.
ಶ ರಧಿ ಪಾರು ಮಾಡುವಂಥ
ಷ ಣ್ಮುಖ ಪಿತ ಪಾರ್ವತಿ ಪತಿ
ಸ ಕಲರಿಗೂ ನೀನಂಬಿಗ
ಹ ಳತು ಹೊಸತು ಇರದೇ ಬಹ
ಳ ರಹಸ್ಯವನಡಗಿಸಿರುವೆ
ಕ್ಷ ತಿ ಇರದ ನೀನಕ್ಷರ ತ-
ಜ್ಞ ನಿನಗಿದೋ ನಮನಗಳು.
ಕಾಲಾಯ ತಸ್ಮೈನಮ:
ಕಾಲಾಯ ತಸ್ಮೈನಮ:
********
-ಸಹಸ್ರಬುಧ್ಯೆ ಮುಂಡಾಜೆ
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ