|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 `ಮುಜಂಟಿ ಜೇನು ಸಾಕಣೆಗೆ ಸರ್ಕಾರದ ಬೆಂಬಲ ಅಗತ್ಯ’

`ಮುಜಂಟಿ ಜೇನು ಸಾಕಣೆಗೆ ಸರ್ಕಾರದ ಬೆಂಬಲ ಅಗತ್ಯ’


ಪುತ್ತೂರು: ಮುಜಂಟಿ ಜೇನುಸಾಕಣೆಗೆ ಕೇರಳದಲ್ಲಿ ಸಿಗುವಂಥ ಪ್ರೋತ್ಸಾಹ ಕರ್ನಾಟಕದಲ್ಲೂ ಸಿಗುವಂತಾಗಬೇಕು; ಈ ನಿಟ್ಟಿನಲ್ಲಿ ಸರ್ಕಾರದ ಗಮನಸೆಳೆಯುವ ಮತ್ತು ಒತ್ತಡ ತರುವ ಕೆಲಸ ಆಗಬೇಕಿದೆ ಎಂದು ಹಿರಿಯ ಪತ್ರಕರ್ತ, ಕೃಷಿ ಲೇಖಕ ಗಾಣಧಾಳು ಶ್ರೀಕಂಠ ಅಭಿಪ್ರಾಯಪಟ್ಟಿದ್ದಾರೆ. ಅವರು ಇತ್ತೀಚೆಗೆ ಪುತ್ತೂರು ಸಮೀಪದ ಸೌಗಂಧಿಕದಲ್ಲಿ ಹಮ್ಮಿಕೊಂಡಿದ್ದ ಚುಚ್ಚದ ಜೇನು ಸಾಕಣೆ ವಿಧಾನ ಕುರಿತ ಕಾರ್ಯಾಗಾರದ ಸಮಾರೋಪ ಸಮಾರಂಭ ಉದ್ದೇಶಿಸಿ ಮಾತನಾಡುತ್ತಿದ್ದರು.


ಗ್ರಾಮೀಣ ಪ್ರದೇಶ ಮಾತ್ರವಲ್ಲ, ನಗರಗಳಲ್ಲೂ ತಾರಸಿತೋಟಕ್ಕೆ ಪೂರಕವಾಗಿ ಮಿಸರಿ ಕುಟುಂಬಗಳನ್ನು ಪೋಷಿಸಬಹುದಾಗಿದ್ದು ಈ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸಬೇಕಿದೆ; ಸರ್ಕಾರದ ಮಟ್ಟದಲ್ಲಿ ಸಾವಯವ ಕೃಷಿ ನೀತಿ ರೂಪುಗೊಂಡಿದ್ದರ ಹಿಂದೆ ರೈತರ ಪ್ರಯತ್ನ-ಪರಿಶ್ರಮವಿದೆ. ಅದೇ ರೀತಿ ಮುಜಂಟಿ ಸಾಕಣೆಯನ್ನೂ ನಮ್ಮ ಸರ್ಕಾರದ ನೀತಿ ನಿರೂಪಣೆಯ ಭಾಗವಾಗಿಸಲು ಸೌಗಂಧಿಕದ ಕಾರ್ಯಾಗಾರವೇ ಪ್ರೇರೇಪಣೆಯಾಗಲಿ ಎಂದು ಆಶಯ ವ್ಯಕ್ತಪಡಿಸಿದರು. ತುಮಕೂರು, ಸಾಗರ, ಕಳಸ ಸೇರಿದಂತೆ ರಾಜ್ಯದ ವಿವಿಧೆಡೆಗಳಿಂದ ಆಗಮಿಸಿದ್ದ 27 ಮಂದಿ ಶಿಬಿರಾರ್ಥಿಗಳಿಗೆ ಅವರು ಪ್ರಮಾಣಪತ್ರ ವಿತರಿಸಿದರು.


ಶಿಬಿರಾರ್ಥಿ ಭಾಗ್ಯಲಕ್ಷ್ಮಿ ತಮ್ಮ ಅನಿಸಿಕೆ ಹಂಚಿಕೊಂಡು ಮಂಗಳೂರಿನ ತಮ್ಮ ಕೈತೋಟದಲ್ಲಿ ಮುಜಂಟಿಗಳಿಂದಾಗಿ ಹೆಚ್ಚಿನ ಪರಾಗಸ್ಪರ್ಶ ಏರ್ಪಟ್ಟು ಉತ್ತಮ ತರಕಾರಿ ಇಳುವರಿ ದೊರಕುತ್ತಿರುವುದಾಗಿ ತಿಳಿಸಿದರು.


ವೆಂಕಟಕೃಷ್ಣ ಬೈಂಕ್ರೋಡು, ಪಿ. ರಾಮಚಂದ್ರ ಪುದ್ಯೋಡು, ಚಂದ್ರ ಸೌಗಂಧಿಕ ಹಾಗೂ ಶಿವರಾಂ ಪೈಲೂರು ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು.



ವೆಂಕಟಕೃಷ್ಣ ಅವರು ತೆಂಗಿನ ಗೆರಟೆಯಿಂದ ಸುಲಭವಾಗಿ ಮುಜಂಟಿ ಗೂಡು ತಯಾರಿಸುವ ವಿಧಾನವನ್ನು ಪ್ರಾತ್ಯಕ್ಷಿಕೆ ಮೂಲಕ ತಿಳಿಸಿಕೊಟ್ಟರು. ನಿಸರ್ಗದಿಂದ ನಸರಿ ಕುಟುಂಬಗಳನ್ನು ಸಂಗ್ರಹಿಸುವ ವಿಧಾನ, ಗೂಡು ನಿರ್ವಹಣೆ, ಜೇನು ಸಂಗ್ರಹ ಮತ್ತು ಮಾರುಕಟ್ಟೆಯ ಒಳಹೊರಗನ್ನು ಸವಿವರವಾಗಿ ಅವರು ತೆರೆದಿಟ್ಟರು.


ಗೋಡೆಯೊಳಗಿನ ಕುಟುಂಬವನ್ನು ಪೈಪ್ ಮೂಲಕ ಗೂಡಿಗೆ ವರ್ಗಾವಣೆ ಮಾಡುವುದು ಹೇಗೆ ಮತ್ತು ಕುಟುಂಬ ವಿಭಜನೆ ಮಾಡುವುದು ಯಾವ ರೀತಿ ಎಂಬುದನ್ನು ರಾಮಚಂದ್ರ ಪುದ್ಯೋಡು ಅವರು ಪ್ರಾತ್ಯಕ್ಷಿಕೆಯೊಂದಿಗೆ ಮನಗಾಣಿಸಿಕೊಟ್ಟರು. ಎಲ್ಲ ಶಿಬಿರಾರ್ಥಿಗಳು ರಾಣಿಕೋಶ ಮತ್ತು ರಾಣಿನೊಣವನ್ನು ಪ್ರತ್ಯಕ್ಷ ನೋಡಿದ್ದು ಮಾತ್ರವಲ್ಲ ಮುಜಂಟಿ ಜೇನನ್ನೂ ಸವಿದು ಖುಷಿಪಟ್ಟರು.


ಮುಜಂಟಿ ಸಾಕಣೆಯನ್ನು ಒಂದು ಸ್ವಉದ್ಯೋಗವಾಗಿ ಕೈಗೊಳ್ಳುವುದಕ್ಕೆ ಇರುವ ಅವಕಾಶಗಳನ್ನು ಸ್ವತಃ ಇದನ್ನೊಂದು ಜೀವನೋಪಾಯವಾಗಿ ಪರಿಗಣಿಸಿರುವ ಪುದ್ಯೋಡು ವಿಶದಪಡಿಸಿದರು. ‘ಮನಸ್ಸಿದ್ದರೆ ಇದೊಂದು ಶೂನ್ಯ ವೆಚ್ಚದ ಸ್ಟಾರ್ಟ್‌ಅಪ್’ ಎಂಬ ಅವರ ಮಾತು ಗಮನಸೆಳೆಯಿತು.


ನಸ್ರಿಗಳಿಗೆ ಪೂರಕವಾದ ಹೂವಿನ ಗಿಡಗಳನ್ನು ಪರಿಚಯಿಸಿದ ಚಂದ್ರ ಸೌಗಂಧಿಕ ಅವರು ಕೆಲವೊಂದು ಗಿಡಗಳ ಪ್ರದರ್ಶನ ಕೂಡ ವ್ಯವಸ್ಥೆಮಾಡಿದ್ದರು.


ಇದಕ್ಕೂ ಮುನ್ನ ‘ಚುಚ್ಚದ ಜೇನು ಎಲ್ಲರಿಗೂ ಅಚ್ಚುಮೆಚ್ಚು’ ಕೃತಿಯ ಲೇಖಕ ಶಿವರಾಂ ಪೈಲೂರು ಮಾತನಾಡಿ, ಮುಜಂಟಿ ಲೋಕದ ಪ್ರಾಥಮಿಕ ಸಂಗತಿಗಳನ್ನು ವಿವರಿಸಿದರು. ಜೀವವೈವಿಧ್ಯ ಸಂರಕ್ಷಣೆಯ ದೃಷ್ಟಿಯಿಂದಲೂ ಇದು ಮಹತ್ವವಾದದ್ದು; ಮುಜಂಟಿಗಳಿಂದಾಗಿ ಪರಿಣಾಮಕಾರಿ ಪರಾಗಸ್ಪರ್ಶ ಏರ್ಪಟ್ಟು ಇಳುವರಿ ಹೆಚ್ಚುವುದರಿಂದ ಇತ್ತೀಚಿನ ವರ್ಷಗಳಲ್ಲಿ ಈ ಕುಟುಂಬಗಳಿಗೆ ಉತ್ತಮ ಬೇಡಿಕೆಯಿದೆ; ಅನನ್ಯ ಔಷಧೀಯ ಗುಣಗಳಿಂದಾಗಿ ಇದರ ಜೇನಿಗೆ ಕೇರಳದಲ್ಲಿ ಒಳ್ಳೆಯ ಮಾರುಕಟ್ಟೆ ಇದ್ದು ಮುಂಬರುವ ದಿನಗಳಲ್ಲಿ ಕರ್ನಾಟಕದಲ್ಲೂ ಬೇಡಿಕೆ ಕಂಡುಬರುವ ಸಾಧ್ಯತೆಯಿದೆ ಎಂದರು. ಏಕಾಏಕಿ ವಾಣಿಜ್ಯಿಕವಾಗಿ ಇದನ್ನು ಕೈಗೊಳ್ಳುವ ಬದಲು ಹವ್ಯಾಸವಾಗಿ ಪ್ರಾರಂಭಿಸಿ ಅನುಭವ ಪಡೆದು ಅದರ ಆಧಾರದಲ್ಲಿ ಮುಂದುವರಿಯುವುದು ಸೂಕ್ತ ಎಂಬ ಕಿವಿಮಾತು ಹೇಳಿದರು.


ಲೇಖಕರಾದ ಜಿ.ಎನ್. ಮೋಹನ್, ಡಾ. ನರೇಂದ್ರ ರೈ ದೇರ್ಲ, ಎಂ.ಜಿ. ಕಜೆ, ಸಂಜೀವ ಕುದ್ಪಾಜೆ, ಪರಿಸರ ಛಾಯಾಗ್ರಾಹಕಿ ವಸಂತಿ ಸಾಮೆತ್ತಡ್ಕ ಮತ್ತಿತರರು ಕಾರ್ಯಾಗಾರಕ್ಕೆ ಭೇಟಿ ನೀಡಿದ್ದರು. ರಾಜೇಶ ಕೃಷ್ಣಪ್ರಸಾದ ಶರ್ಮ, ಮಾಧವ, ಶೋಭಾ ಮಾಧವ, ಗೀತಾಂಜಲಿ, ಕಿರಣಮಯ್ಯ, ವಿದ್ಯಾ, ಪೃಥ್ವಿ ಮೊದಲಾದವರು ಸಕ್ರಿಯ ಸಹಕರಿಸಿದ್ದರು.


ಮುಜಂಟಿ ಗೂಡು-ಪರಿಕರಗಳು, ಜೇನಿಗೆ ಪ್ರಿಯವಾದ ಹೂಗಿಡಗಳು ಹಾಗೂ ಕೃಷಿ ಪುಸ್ತಕಗಳ ಮಾರಾಟ ವ್ಯವಸ್ಥೆ ಮಾಡಲಾಗಿತ್ತು.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 تعليقات

إرسال تعليق

Post a Comment (0)

أحدث أقدم