|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ವಿಶ್ವ ಆಹಾರ ದಿನ ಅಕ್ಟೋಬರ್-16: ಆರೋಗ್ಯಕರ ಪೌಷ್ಟಿಕ ಆಹಾರವಿರಲಿ, ಜಂಕ್‌ ಫುಡ್ ಬೇಡ

ವಿಶ್ವ ಆಹಾರ ದಿನ ಅಕ್ಟೋಬರ್-16: ಆರೋಗ್ಯಕರ ಪೌಷ್ಟಿಕ ಆಹಾರವಿರಲಿ, ಜಂಕ್‌ ಫುಡ್ ಬೇಡ


ಪ್ರತಿ ವರ್ಷ ಅಕ್ಟೋಬರ್-16 ರಂದು ವಿಶ್ವ ಆಹಾರ ದಿನ ಎಂದು ಜಗತ್ತಿನಾದ್ಯಂತ ಆಚರಿಸಲಾಗುತ್ತಿದೆ. 1945 ಅಕ್ಟೋಬರ್-16 ರಂದು ಆಹಾರ ಮತ್ತು ಕೃಷಿ ಸಂಸ್ಥೆಯನ್ನು ಅಮೇರಿಕಾದಲ್ಲಿ ಆರಂಭಗೊಳಿಸಲಾಯಿತು. ಆಹಾರದ ರಕ್ಷಣೆ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಅಕ್ಟೋಬರ್ 16 ರಂದು ವಿಶ್ವ ಆಹಾರ ದಿನ ಎಂದು ಆಚರಿಸಿ ಜನರಲ್ಲಿ ನಾವು ತಿನ್ನುವ ಆಹಾರದ ಬಗ್ಗೆ ಅರಿವು ಮೂಡಿಸುವ ಪ್ರಯತ್ನ ನಡೆಸಲಾಗುತ್ತದೆ.


ನಮ್ಮ ಆಹಾರ ಎಷ್ಟು ಸುರಕ್ಷಿತ?

ಒಬ್ಬ ವ್ಯಕ್ತಿಯ “ದೈಹಿಕ, ಮಾನಸಿಕ, ಬೌದ್ಧಿಕ ಹಾಗೂ ಸರ್ವತೋಮುಖ ಬೆಳವಣಿಗೆಗೆ ಸಮತೋಲಿತ, ಸುರಕ್ಷಿತ ಆಹಾರ ಅತೀ ಅಗತ್ಯ. ಬಹುತೇಕ ರೋಗಗಳನ್ನು ನಮ್ಮ ಜೀವನ ಶೈಲಿ ಮತ್ತು ಆಹಾರ ಪದ್ಧತಿಗಳನ್ನು ಸರಿಪಡಿಸಿ ಪ್ರಾರಂಭಿಕ ಹಂತದಲ್ಲಿಯೇ ತಡೆಯಬಹುದು. ಉತ್ತಮ ದೈಹಿಕ ವ್ಯಾಯಾಮ ಮತ್ತು ವಿಟಮಿನ್, ಪ್ರೋಟಿನ್, ಲವಣಾಂಶ, ಪೋಷಕಾಂಶ, ಶರ್ಕದ ಪಿಷ್ಠ ಮತ್ತು ನಾರುಯುಕ್ತ ಸಮತೋಲಿತ ಆಹಾರದಿಂದ ನೂರು ಕಾಲ ಆರೋಗ್ಯವಂತರಾಗಿ ಬಾಳಬಹುದು ಎಂದು ಎಲ್ಲರಿಗೂ ತಿಳಿದ ವಿಚಾರವಾಗಿದೆ. ಆದರೂ ಹಾಳು ಮೂಳು ಆಹಾರಗಳಾದ ಬರ್ಗರ್, ಫಿಜ್ಹಾ, ಕೋಕ್, ಪೆಪ್ಸಿ, ಕೇಕ್, ಬಿಸ್ಕತ್ತ್, ಕುರುಕುರೆ ಮುಂತಾದ ಅಸುರಕ್ಷಿತ ಆಹಾರಗಳನ್ನು ಸೇವಿಸಿ ದೇಹವನ್ನು ಜಳ್ಳಾಗಿಸಿ ಖಾಯಿಲೆಯ ಹಂದರವಾಗಿ ಮಾಡಿಕೊಳ್ಳುವುದೇ ಈಗಿನ ದುರಂತವೇ ಸರಿ.


ಹೆಚ್ಚುತ್ತಿರುವ ಕೈಗಾರಿಕೀರಣ, ಜಾಗತೀಕರಣ ಮತ್ತು ಅಭಿವೃದ್ಧಿಯ ನೆಪದಲ್ಲಿ ಆಹಾರ ಸರಪಳಿಯಲ್ಲಿ ವಿಪರೀತವಾದ ವ್ಯತ್ಯಾಸವುಂಟಾಗಿ ಸುರಕ್ಷಿತ ಆಹಾರ ಎಲ್ಲರಿಗೂ ಸಿಗದಿರುವುದೇ ಬಹುದೊಡ್ಡ ವಿಪರ್ಯಾಸ ಮತ್ತು ಕಳವಳಕಾರಿ ವಿಚಾರವಾಗಿದೆ. ಜಗತ್ತಿನಾದ್ಯಂತ ಬಡ ಮತ್ತು ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ಸುರಕ್ಷಿತ ಆಹಾರದ ಕೊರತೆಯಿಂದಾಗಿ ಪ್ರತಿವರ್ಷ ಎರಡರಿಂದ ಮೂರು ಲಕ್ಷ ಜನರು ಸಾವಿಗೀಡಾಗುತ್ತಿದ್ದಾರೆ. ವಿಷಕಾರಕ ವಿಷಾಣುಗಳು ಮತ್ತು ಕ್ಯಾನ್ಸರ್‍ಕಾರಕ ರಾಸಾಯನಿಕಗಳ ಜೊತೆಗೆ ರೋಗಕಾರಕ ಬ್ಯಾಕ್ಟೀರಿಯಾಗಳು, ರೋಗಾಣುಗಳು ಮತ್ತು ಪರಾವಲಂಬಿ ಜೀವಾಣುಗಳು ಸೇರಿಕೊಂಡು ಆಹಾರದ ಮುಖಾಂತರ ದೇಹಕ್ಕೆ ಸೇರಿ ಹೊಟ್ಟೆನೋವು, ವಾಂತಿ, ಬೇದಿ, ಅತಿಸಾರದಂತಹ ಸಾಮಾನ್ಯರೋಗಳಿಂದ ಹಿಡಿದು ಕ್ಯಾನ್ಸರ್ ಹೃದಯ ಕಾಯಿಲೆಯಂತಹ ಗಂಭೀರವಾದ ಖಾಯಿಲೆಗಳಿಗೆ ನಾಂದಿ ಹಾಡುತ್ತಿದೆ ಎಂದರೂ ತಪ್ಪಲ್ಲ. ವಿಷಪೂರಿತ ಅಸುರಕ್ಷಿತ ಆಹಾರ ಸೇವನೆಯಿಂದಾಗಿ ಕಾಲೆರಾ, ಟೈಫಾಯ್ಡ್, ಜಾಂಡಿಸ್, ಹೆಪಟೈಟಿಸ್ ಮುಂತಾದ ರೋಗಗಳು ಬೇಗನೆ ಹರಡುತ್ತದೆ. ವಾಂತಿ ಬೇಧಿ ಮತ್ತು ಅತಿಸಾರ ಸಾಮಾನ್ಯ ಖಾಯಿಲೆಯಾಗಿದ್ದರೂ. ವಿಪರೀತ ವಿರ್ಜಲೀಕರಣರಿಂದಾಗಿ ಗಂಭೀರವಾದ ಅನಾರೋಗ್ಯಕ್ಕೆ ನಾಂದಿ ಹಾಡಿ ಸಾವಿಗೆ ಮುನ್ನುಡಿ ಬರೆದದ್ದೂ ಇದೆ.




ಯಾವ ರೀತಿಯ ಆಹಾರ ಸೇವಿಸಬೇಕು? 

ಕೆಲವೊಂದು ಆಹಾರ ಪದಾರ್ಥಗಳನ್ನು ಕಂಡಾಗ ಮನಸ್ಸು ಚುಬಲವಾಗಿ ಆರೋಗ್ಯವನ್ನು ನಿರ್ಲಕ್ಷಿಸಿ ಬಿಡುತ್ತೇವೆ. ಬಾಯಿ ರುಚಿಯ ಚಪಲಕ್ಕಾಗಿ ಕೇವಲ ಉಪ್ಪಿನಾಂಶ ಕೊಬ್ಬು ಕ್ಯಾಲರಿಗಳಿಂದ ಕೂಡಿದ ಮತ್ತು ವಿಟಮಿನ್, ಪ್ರೋಟಿನ್ ಪೋಷಕಾಂಶ, ಖನಿಜಾಂಶ ಮತ್ತು ನಾರುಗಳಿಲ್ಲದ ಆಹಾರವನ್ನು “ಜಂಕ್‍ಫುಡ್” ಎನ್ನುತ್ತೇವೆ. ಈ ರೀತಿಯ ಜಂಕ್ ಆಹಾರಕ್ಕೆ ಹೆಚ್ಚು ಕಾಲ ಕೆಡದಂತೆ ಶೇಖರಿಸಲು ರಾಸಾಯನಿಕಗಳು ಮತ್ತು ಆಕರ್ಷಕ ಬಣ್ಣ ಬರುವ ರಾಸಾಯನಿಕಗಳನ್ನು ಸೇರಿಸುತ್ತಾರೆ. ಈ ರೀತಿ ಆಹಾರಗಳು ನಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಹಾಳು ಮಾಡಿ ಕಿಡ್ನಿ, ಪಿತ್ತಜನಕಾಂಗಗಳನ್ನು ಹಾಳು ಮಾಡಿ, ದೇಹದ ರಕ್ಷಣಾ ವ್ಯವಸ್ಥೆಯನ್ನು ಹಾಳುಗೆಡವಿ ರೋಗನಿರೋಧಕ ಶಕ್ತಿಯನ್ನು ಕುಂದುಗೊಳಿಸಿ ದೇಹವನ್ನು ಕೊಬ್ಬು ಬೊಜ್ಜುಗಳಿಂದ ಕೂಡಿದ ರೋಗದ ಹಂದರವಾಗಿ ಮಾಡುತ್ತದೆ.


• ನಾವು ತಿನ್ನುವ ಆಹಾರ ಕೊಬ್ಬು ರಹಿತ ಮತ್ತು ಕಡಿಮೆ ಕ್ಯಾಲರಿಯಿಂದ ಕೂಡಿರಬೇಕು. ನಮ್ಮ ಪ್ರತಿ ದಿನದ ಆಹಾರದಲ್ಲಿ ಕನಿಷ್ಟ 25ರಿಂದ 35ಗ್ರಾಂಗಳಷ್ಟು ನಾರಿನಾಂಶ ಇರಲೇಬೇಕು. ನಾರುಯುಕ್ತ ಆಹಾರ ದೇಹಕ್ಕೆ ಅತೀ ಅಗತ್ಯ. 

• ಶುಚಿಯಾದ, ಬ್ಯಾಕ್ಟೀರಿಯಾ ರಹಿತವಾದ ಆಹಾರವನ್ನು ಸೇವಿಸಬೇಕು ಮಾಂಸಾಹಾರಿಗಳಾಗಿದ್ದಲ್ಲಿ ಚೆನ್ನಾಗಿ ಬೇಯಿಸಿ ಸೇವಿಸಬೇಕು. ಅರೆಬರೆ ಬೆಂದ ಮಾಂಸಾಹಾರ ಖಂಡಿತಾ ವೇದ್ಯವಲ್ಲ.


• ಆಹಾರವನ್ನು ಬೇಯಿಸಲು ಶುದ್ಧವಾದ ನೀರನ್ನು ಬಳಸಬೇಕು. ಕಲುಷಿತ ನೀರಿನಿಂದಲೇ ಹಲವಾರು ರೋಗಗಳು ಹರಡುತ್ತದೆ ಮತ್ತು ಆಹಾರ ಶೇಖರಣೆ ಮಾಡುವಾಗ ಸೂಕ್ತ ಉಷ್ಟತೆಯಲ್ಲಿ ಶೇಖರಿಸಬೇಕು.


• ಹಸಿ ತರಕಾರಿಗಳು ಸೊಪ್ಪು, ದಂಟು ಪಲ್ಯಗಳು ದೇಹಕ್ಕೆ ಅತೀ ಅಗತ್ಯ. ತಾಜಾ ಹಣ್ಣುಗಳನ್ನು ಸೇವಿಸಬೇಕು. ಹಣ್ಣಿನ ರಸಕ್ಕಿಂತ, ಪೂರ್ತಿ ಹಣ್ಣನ್ನು ಸೇವಿಸಿದಲ್ಲಿ ನಾರಿನಾಂಶ ದೇಹಕ್ಕೆ ಸೇರಿ ಆರೋಗ್ಯ ವೃದ್ಧಿಸುತ್ತದೆ. ಕ್ಯಾನ್ಸರ್ ಕಾಯಿಲೆಗಳಿಗೆ ಪೂರಕವಾಗಿ ಕೆಲಸ ಮಾಡುವ ಕ್ಯಾನ್ಸರ್ ಕಾರಕ ವಸ್ತುಗಳು ದೇಹದಲ್ಲಿ ಉಳಿಯದಂತೆ ನಾರು ಸಮರ್ಥವಾಗಿ ಕೆಲಸಮಾಡುತ್ತದೆ. ಆಹಾರದಲ್ಲಿ ನಾರಿನಾಂಶ 20ರಿಂದ 25 ಶೇಕಡಾ ಇದ್ದಲ್ಲಿ ಕ್ಯಾನ್ಸರ್ ಸಮಸ್ಯೆಗಳು ಕಡಿಮೆಯಾಗುತ್ತದೆ ಎಂದು ಸಂಶೋಧನೆಗಳಿಂದ ತಿಳಿದು ಬಂದಿದೆ. ನಾರಿನಾಂಶ ದೇಹದಲ್ಲಿರುವ ನೀರನ್ನು ಹೆಚ್ಚು ಹೀರುತ್ತದೆ. ಈ ಕಾರಣದಿಂದ ಸ್ವಲ್ವ ತಿಂದರೂ ಹೊಟ್ಟೆ ತುಂಬಿದ ಅನುಭವವಾಗುತ್ತದೆ. ಮತ್ತು ಇದರಲ್ಲಿ ಕ್ಯಾಲರಿ ಅಂಶ ಕಡಿಮೆ ಇರುತ್ತದೆ. ಹೆಚ್ಚು ಹೆಚ್ಚು ನೀರು ಸೇವಿಸುವುದರಿಂದಲೂ ದೇಹದ ಆರೋಗ್ಯ ವೃದ್ಧಿಸುತ್ತದೆ ಮತ್ತು ನಾರುಯುಕ್ತ ಆಹಾರ, ಮಲಬದ್ಧತೆಯನ್ನು ಕಡಿಮೆಮಾಡಿ ಆರೋಗ್ಯವನ್ನು ಹತೋಟಿಯಲ್ಲಿಡುತ್ತದೆ.


ಏನಿದು ಮೂಲಾಹಾರ?

ಹಿಂದಿನ ಕಾಲದಲ್ಲಿ ನಮ್ಮ ಪೂರ್ವಜರು ಹಸಿಗಡ್ಡೆ ಗೆಣಸು, ಸೊಪ್ಪು, ದಂಟು ಪಲ್ಯಗಳನ್ನು ಸೇವಿಸುತ್ತಿದ್ದರು. ಆಹಾರ ಸಂಸ್ಕರಣೆ ಮತ್ತು ಶೇಖರಣೆಯ ವ್ಯವಸ್ಥೆ ಆಗ ಇರಲಿಲ್ಲ. ವಾತಾವರಣ ಮಲಿನವಾಗಿರಲಿಲ್ಲ. ಜಾಗತೀಕರಣ, ಔದ್ಯೋಗಿಕರಣದ ಚಿಂತೆ ಇರಲಿಲ್ಲ. ಊರು ತುಂಬಾ ಕಾಡುಗಳಿದ್ದು ನೀರು ಈಗಿನಂತೆ ಕಲುಷಿತವಾಗಿರಲಿಲ್ಲ. ಈ ಕಾರಣದಿಂದಲೇ ನಮ್ಮ ಪುರ್ವಜರು 80-90 ವಯಸ್ಸಿನಲ್ಲೂ ಗಟ್ಟಿಮುಟ್ಟಾಗಿರುತ್ತಿದ್ದರು. ಯಾವುದೇ ರಕ್ತದೊತ್ತಡ, ಮಧುವೇಹ, ಹೃದಯದ ಖಾಯಿಲೆಗಳಿಂದ ಬಳಲುತ್ತಿರಲಿಲ್ಲ. ಹಗಲೀಡಿ ಬೆವರಿಳಿಸಿ ದುಡಿದು, ಶುದ್ಧವಾದ ನೀರು, ಸುರಕ್ಷಿತವಾದ ರಾಸಾಯನಿಕಗಳಿಲ್ಲದ ಕಚ್ಚಾ ಆಹಾರವೇ ಅವರ ಆರೋಗ್ಯದ ಮೂಲ ಮಂತ್ರವಾಗಿತ್ತು. ನಿಯಮಿತವಾದ ದೈಹಿಕ ದುಡಿಮೆ, ಒತ್ತಡವಿಲ್ಲದ ಜೀವನ ಶೈಲಿ, ಚಿಂತೆಯಿಲ್ಲದ ಜೀವನ ಮತ್ತು ಸುರಕ್ಷಿತ ಸ್ವಚ್ಚವಾದ ನೀರು ಮತ್ತು ಆಹಾರವೇ ಅವರ ಆರೋಗ್ಯದ ಗುಟ್ಟಾಗಿತ್ತು. ಆದರೆ ಈಗಿನ ಪರಿಸ್ಥಿತಿಯೇ ಬೇರೆ! ದೈಹಿಕವ್ಯಾಯಾಮವಿಲ್ಲದ ದುಡಿಮೆ, ಒತ್ತಡದ ಬದುಕು, ರಾಸಾಯನಿಕ ಮಿಶ್ರಿತ ಆಹಾರ, ಕಲುಷಿತ ನೀರು ಜೊತೆಗೆ ಮಲಿನಗೊಂಡ ವಾತಾವರಣ ಇವೆಲ್ಲಾ ಸೇರಿ ಆರೋಗ್ಯ ಎನ್ನುವುದು ಮರೀಚಿಕೆಯಾಗಿಯೇ ಬಿಟ್ಟಿದೆ. ಶುದ್ಧ ನೀರಿಗಾಗಿ ಹಾಹಾಕಾರ ಬಿಸ್ಲೇರಿ ನೀರಿಲ್ಲದೆ ಬದುಕಲಾರ. ಶುಭ್ರವಾದ ಗಾಳಿಗಾಗಿ ಹವಾನಿಯಂತ್ರಿತ ವ್ಯವಸ್ಥೆ ಅಥವಾ ಆಕ್ಸಿಜನ್ ಕ್ಲಿನಿಕ್‍ಗಳು, ಮಾನಸಿಕ ಒತ್ತಡದ ನಿರ್ವಹಣೆಗಾಗಿ ಕ್ಲಬ್‍ಗಳು, ಕುಡಿತಗಳು ಮತ್ತು ವಾರಾಂತ್ಯದ ಮೋಜು ಮಸ್ತಿಯ ಪಾರ್ಟಿಗಳು ಇವೆಲ್ಲಾ  ಮೇಳೈಸಿ ಮನುಷ್ಯ ನಿಧಾನವಾಗಿ ರೋಗಗಳ ಹಂದರವಾಗಿ ಮಾರ್ಪಾಡಾಗುತ್ತಿದ್ದಾನೆ. ವಯಸ್ಸು 50 ದಾಟುವುದರ ಒಳಗೆ ಕ್ಯಾನ್ಸರ್, ಹೃದಯಾಘಾತ, ರಕ್ತದೊತ್ತಡ, ಮಧುವೇಹ ಸೇರಿಕೊಂಡು ಮಕ್ಕಳಾಗದಿರುವುದು, ಕೌಟುಂಬಿಕ ಕಲಹ ಘರ್ಷಣೆ ಇವೆಲ್ಲಾ ಮೇಳೈಸಿ 50ರ ಹರೆಯದಲ್ಲೆ ಸುಸ್ತಾಗಿ 90ರ ಮುದುಕರಂತೆ ಗೋಚರವಾದರೂ ಸೋಜಿಗದ ಸಂಗತಿಯಲ್ಲ. ಇದು ನಮ್ಮ ಈ ಶತಮಾನದ ಸಾಧನೆ ಎಂದರೂ ತಪ್ಪಲ್ಲ.

ಬದುಕುವುದಕ್ಕಾಗಿ ತಿನ್ನಿ ತಿನ್ನಲಿಕ್ಕಾಗಿ ಬದುಕಬೇಡಿ ಇದು ನಮ್ಮ ಹಿರಿಯರು ಹೇಳಿದ ಮಾತು ನೂರಕ್ಕೆ ನೂರರಷ್ಟು ಸತ್ಯ. ನಾವು ಏನು ತಿನ್ನಬೇಕು ತಿನ್ನಬಾರದು ಮತ್ತು ಯಾಕಾಗಿ ತಿನ್ನುತ್ತಿದ್ದೇನೆ ಎಂಬುದರ ಪರಿಜ್ಞಾನ ಪ್ರತಿಯೊಬ್ಬರಿಗೂ ಇದ್ದಲ್ಲಿ, ಬಹುತೇಕ ರೋಗಗಳನ್ನು ತಡೆಗಟ್ಟಬಹುದು. ಈ ಕಾರಣಕ್ಕಾಗಿಯೇ ಮಾತು ಬಲ್ಲವನಿಗೆ ಜಗಳವಿಲ್ಲ, ಊಟ ಬಲ್ಲವನಿಗೆ ರೋಗವಿಲ್ಲ ಎಂಬ ಗಾದೆ ಹುಟ್ಟಿಕೊಂಡಿದೆ ಎಂದರೂ ತಪ್ಪಲ್ಲ. ಆದರೆ ವಿಪರ್ಯಾಸವೆಂದರೆ ಈಗೀನ ಯುವಜನತೆಯ ತಿನ್ನುವ ಪರಿ ನೋಡಿದರೆ ನಗುಬರುತ್ತದೆ ಮತ್ತು ಮರುಕವೂ ಉಂಟಾಗುತ್ತದೆ. ಕೋಕ್, ಪೆಪ್ಸಿ ಬರ್ಗರ್ ಫಿಜ್ಹಾಗಳನ್ನು ಯಾವ ಪರಿ ಹಟಕಟ್ಟಿ ತಿನ್ನುತ್ತಾರೆ ಎಂದರೆ ನಾಳೆ ನಾವು ತಿನ್ನಲು ಬದುಕಲ್ಲ ಎಂಬ ರೀತಿಯಲ್ಲಿ ತಿನ್ನುವುದನ್ನು ಕಂಡಾಗ ಸಹಜವಾಗಿಯೇ ಮರುಕ ಉಂಟಾಗುತ್ತದೆ. ಬದುಕು ಎನ್ನುವುದು ಕೇವಲ ತಿನ್ನುವ ಕಾಯಕವಾಗಬಾರದು.


ತಿನ್ನುವಾಗ ನೂರು ಕಾಲ ಬದುಕುವುದಕ್ಕಾಗಿ ತಿನ್ನಬೇಕು ಮತ್ತು ದುಡಿಯುವಾಗ ನಾಳೆ ಸಾಯುತ್ತೇನೆ ಎಂದು ದುಡಿಯಬೇಕು. ಆದರೆ ವಿಪರ್ಯಾಸವೆಂದರೆ ಜನರು ನಾಳೆ ಸಾಯುತ್ತೇನೆ ಎಂದು ತಿಂದು ನೂರು ವರ್ಷಗಳ ಕಾಲ ಬದುಕುತ್ತೇನೆ ಎಂಬಂರ್ಥದಲ್ಲಿ ಬದುಕುತ್ತಾರೆ ಎಂಬುದೇ ಅರಗಿಸಿಕೊಳ್ಳಲಾಗದ ಕಹಿ ಸತ್ಯ ಸುಂದರ ಸುದೃಢ ಸಮಾಜದ ನಿರ್ಮಾಣಕ್ಕಾಗಿ ನಾವೆಲ್ಲರೂ ನಿಯಮಿತ ದೈಹಿಕ ವ್ಯಾಯಾಮದ ಜೊತೆಗೆ ಸುರಕ್ಷಿತ ಸಮತೋಲನ ಕೊಬ್ಬು ರಹಿತ ನಾರುಯುಕ್ತ ಮೂಲಾಹಾರವನ್ನು ಹೆಚ್ಚು ಹೆಚ್ಚು ಸೇವಿಸೋಣ ಎಂದು ಇಂದೇ ಶಪಥ ಮಾಡೋಣ. ಹಾಗೆ ಮಾಡಿದಲ್ಲಿ ಮಾತ್ರ ವಿಶ್ವ ಆರೋಗ್ಯ ವಿನದ ಆಚರಣೆ ಹೆಚ್ಚಿನ ಮೌಲ್ಯ ಬಂದೀತು ಮತ್ತು ನೂರು ವರ್ಷಗಳ ಕಾಲ ಆರೋಗ್ಯವಂಥರಾಗಿ ಬದುಕಬಹುದು ಅದರಲ್ಲಿಯೇ ಸಮಾಜದ ಸ್ವಾಸ್ಥ್ಯವೂ ಅಡಗಿದೆ.


ಜಂಕ್ ಪುಡ್ ಬೇಡ:  

ಬೆಳೆಯುತ್ತಿರುವ ಮಕ್ಕಳಿಗೆ ಸಮತೋಲಿತ ಆಹಾರ, ಮಾನಸಿಕ ಮತ್ತು ದೈಹಿಕ ಬೆಳವಣಿಗೆಗೆ ಅತೀ ಅಗತ್ಯ ವಿಟಾಮಿನ್, ಪ್ರೋಟಿನ್ ಪೋಷಕಾಂಶ ಮತ್ತು ಖನಿಜಾಂಶ ವಿಲ್ಲದ ಕೇವಲ ಉಪ್ಪಿನಂಶ, ಕೊಬ್ಬು ಮತ್ತು ಕ್ಯಾಲರಿಗಳಿಂದ ಕೂಡಿದ, ಕೇವಲ ಬಾಯಿ ರುಚಿಗಾಗಿ ಮಾಡಿದ ಬರ್ಗರ್‌ , ಪಿಜ್ಜಾ, ಕುರುಕಲು ತಿಂಡಿಗಳು, ಕರಿದ ತಿಂಡಿಗಳು (ಲೇಸ್ & ಕುರುಕುರೆ) ಚಾಕಲೇಟ್‍ಗಳು, ಐಸ್‍ಕ್ರೀಂಗಳು, ಇಂಗಾಲಯುಕ್ತ  ಪೇಯಗಳು (ಕೋಕೋ & ಪೆಪ್ಸಿ) ಮತ್ತು ರಾಸಾಯನಿಕಯುಕ್ತ ದಿಡೀರ್ ಆಹಾರಗಳಾದ ಮ್ಯಾಗಿ ಮತ್ತು ನ್ಯೂಡಲ್ಸ್‍ಗಳನ್ನು ಜಂಕ್ ಪುಡ್ ಎಂದು ಕರೆಯಲಾಗುತ್ತದೆ. ಯಾವಾಗಲಾದರೊಮ್ಮೆ ಇಂತಹ ಜಂಕ್ ಪುಡ್ ತಿನ್ನುವುದು ತಪ್ಪಲ್ಲ. ಆದರೆ ಮೂರೂ ಹೊತ್ತು ಅದನ್ನೇ ತಿನ್ನುವುದನ್ನು ಖಯಾಲಿ ಮಾಡಿಕೊಂಡಲ್ಲಿ ಆಪಾಯ ಕಟ್ಟಿಟ್ಟ ಬುತ್ತಿ. ಕೇವಲ ಬಾಯಿರುಚಿಗಾಗಿ ಸೇವಿಸುವ ಈ ದಿಡೀರ್ ಆಹಾರ, ಮಕ್ಕಳಿಂದ ಹಿಡಿದು ಹಲ್ಲಿಲ್ಲದ ಮುದುಕರಿಗೂ ಬಹಳ ಇಷ್ಟವಾಗಿರುವುದೇ ಜೀರ್ಣಿಸಿಕೊಳ್ಳಲಾಗದ ಕಟು ಸತ್ಯ. ಈ ಜಂಕ್ ಪುಡ್‍ಗಳನ್ನು ಕ್ಷಣಮಾತ್ರದಲ್ಲಿ ತಯಾರಿಸಬಹುದು.


ಹಸಿವೆ ಕೂಡ ತಕ್ಷಣವೇ ಮಾಯವಾಗಿ ಬಿಡುತ್ತವೆ. ಕೇವಲ ಕೊಬ್ಬು ಮತ್ತು ಕ್ಯಾಲರಿಯಿಂದ ಕೂಡಿದ, ರುಚಿಗಾಗಿ ಸೇರಿಸಿದ ರಾಸಾಯನಿಕಗಳು, ನಮ್ಮ ಜೀರ್ಣಾಂಗ ವ್ಯವಸ್ಥೆಯನ್ನೇ ಹಾಳು ಮಾಡಿ, ದೇಹದ ಮೇಲೆ ವ್ಯತಿರಕ್ತ ಪರಿಣಾಮ ಬೀರಿ ಬಿಡುತ್ತದೆ. ಇಂತಹ ಆಹಾರಗಳು ನಮ್ಮ ದೇಹದ ಯಕೃತ್ತು, ಪಿತ್ತಜನಾಕಾಂಗ, ಕಿಡ್ನಿ ಮತ್ತು  ದೇಹದ ರಕ್ಷಣಾ ವ್ಯವಸ್ಥೆಯನ್ನು  ಹಾಳುಮಾಡಿ, ರೋಗನಿರೋಧಕ ಶಕ್ತಿಯನ್ನು ಕುಂಠಿತಗೊಳಿಸಿ ದೇಹವನ್ನು ಕೊಬ್ಬು, ಬೊಜ್ಜು  ತುಂಬಿದ  ಕಾಯಿಲೆಗಳ ಹಂದರವಾಗಿ ಮಾರ್ಪಡು ಮಾಡಿ ದೇಹದ ಎಲ್ಲಾ ಅಂಗಾಂಗಗಳನ್ನು ಒಂದೊಂದಾಗಿ ಆಫೋಷನ ತೆಗೆದುಕೊಂಡು ಬಿಡುತ್ತದೆ. ಮಕ್ಕಳ ದೈಹಿಕ, ಬೌದ್ಧಿಕ, ಮಾನಸಿಕ ಬೆಳವಣಿಗೆ ಕುಂಠಿತಗೊಂಡು, ಆಧುನಿಕತೆಯ ರೋಗಗಳಾದ ಅಧಿಕ ರಕ್ತದೊತ್ತಡ, ಸಕ್ಕರೆ ಕಾಯಿಲೆ, ಹೃದಯಘಾತ ಮುಂತಾದ ಮಾರಣಾಂತಿಕ ರೋಗಗಳಿಗೆ ಮುನ್ನುಡಿ ಬರೆಯುತ್ತದೆ. ಇನ್ನೊಂದು ಅಘಾತಕಾರಿ ವಿಚಾರವೆಂದರೆ, ಈ ರೆಡಿಮೆಡ್ ಕುರುಕಲು ತಿಂಡಿಗಳು ಹಾಳಾಗದಂತೆ, ಪ್ಲಾಸ್ಟಿಕ್ ಪಾಕೆಟ್‍ಗಳಲ್ಲಿ ತುಂಬಿಸಿ, ರಾಸಾಯನಿಕ ಮತ್ತು ಕೃತಕ ಬಣ್ಣಗಳನ್ನು ಸೇರಿಸುವುದರಿಂದರಿಂದ, ಕ್ಯಾನ್ಸರ್ ರೋಗ ಬರುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.  


ಹೇಗೆ ತಡೆಗಟ್ಟಬಹುದು? 

1. ಪ್ರಾಥಮಿಕ ಶಾಲೆಯ ಹಂತದಲ್ಲಿಯೇ ಮಕ್ಕಳಿಗೆ, ಆಹಾರ ಪದ್ಧತಿ ಮತ್ತು ಆರೋಗ್ಯ ಪೂರ್ಣ ಜೀವನಶೈಲಿಯ ಬಗ್ಗೆ ತಿಳಿ ಹೇಳಬೇಕು. ಹಿರಿಯರು ಮತ್ತು ಹೆತ್ತವರು ಕೂಡಾ ಕಿರಿಯರಿಗೆ ಮಾದರಿಯಾಗುವ ರೀತಿಯಲ್ಲಿ ಆಹಾರ ಪದ್ಧತಿ, ಮತ್ತು ಜೀವನ ಶೈಲಿ ಅಳವಡಿಸಿಕೊಳ್ಳಬೇಕು.

2. ಟಿ.ವಿ, ಅಂತರ್ಜಾಲ, ದೃಶ್ಯ ಮಾಧ್ಯಮ ಮತ್ತು ಸಂಪರ್ಕ ಮಾಧ್ಯಮಗಳಲ್ಲಿ ಜಂಕ್ ಪುಡ್‍ಗಳ ಜಾಹಿರಾತುಗಳನ್ನು ನಿಷೇಧಿಸಬೇಕು. ಚಿಕ್ಕ ಮಕ್ಕಳು ದೃಶ್ಯಮಾಧ್ಯಮಗಳಲ್ಲಿ ಬರುವ ಜಾಹಿರಾತುಗಳಿಗೆ ಬಹಳ ಬೇಗ ಮಾರು ಹೋಗುತ್ತಾರೆ. 

3. ಶಾಲಾ ಕಾಲೇಜುಗಳ ಸುತ್ತ, ಜಂಕ್ ಪುಡ್ ಮತ್ತು ಅನಾರೋಗ್ಯಕ್ಕೆ ಮುನ್ನುಡಿ ಬರೆಯುವ ಎಲ್ಲಾ ರೀತಿಯ ಆಹಾರ ಪದಾರ್ಥಗಳ ಮಾರಾಟವನ್ನು ನಿಷೇಧಿಸಬೇಕು.  ಇತ್ತೀಚೆಗೆ ವಿಜ್ಞಾನ ಮತ್ತು ಪರಿಸರ ಅಧ್ಯಾಯನ ಕೇಂದ್ರ, ಶಾಲೆಯಿಂದ 500 ಯಾರ್ಡ್‍ಗಳ ಒಳಗೆ ಈ ರೀತಿಯ ಜಂಕ್ ಪುಡ್ ಮಾರಾಟ ನಿಷೇಧ ಮಾಡಿರುವುದು ತುಂಬಾ ಸಂತಸದ ವಿಚಾರ.


4. ಮನೆಯಲ್ಲಿ ಹೆತ್ತವರೂ ಕೂಡಾ ಮಕ್ಕಳಿಗೆ ಬುತ್ತಿ ಅಥವಾ ಲಂಚ್ ಬಾಕ್ಸ್‌ಗಳಿಗೆ ಕರಿದ ಮತ್ತು ಕೊಬ್ಬು ತುಂಬಿದ ಆಹಾರವನ್ನು ಹಾಕಲೇ ಬಾರದು. ಬದಲಾಗಿ, ಚೆನ್ನಾಗಿ ಬೇಯಿಸಿದ ತರಕಾರಿ ಮತ್ತು ಹಣ್ಣು ಹಂಪಲುಗಳನ್ನು ನೀಡಿದಲ್ಲಿ ಉತ್ತಮ. ಇದನ್ನು ಶಾಲೆಯಲ್ಲಿ ಶಿಕ್ಷಕರು ಪ್ರೋತ್ಸಾಹಿಸಬೇಕು. ಮತ್ತು ಕರಿದ ಮತ್ತು ಕುರುಕಲು ಸಿದ್ಧ ಆಹಾರ ತಾರದಂತೆ ಮಕ್ಕಳಿಗೆ ತಿಳಿ ಹೇಳಬೇಕು. ಒಂದು ವೇಳೆ ಹೆತ್ತವರು ಹೇಳಿದರೂ ಕೇಳದ ಮಕ್ಕಳು, ಶಿಕ್ಷಕರ ಮಾತನ್ನು ಯಾವತ್ತೂ ಮೀರುವುದಿಲ್ಲ ಎಂಬುದು ತಮಗೆಲ್ಲ ತಿಳಿದ ವಿಚಾರ. ಅಮ್ಮನ ಕೈ ತುತ್ತು ಅಥವಾ ಅಮ್ಮನ ಕೈಯಾರೆ ಮಾಡಿದ ತಿಂಡಿಯಷ್ಟು ಸಂಪೂರ್ಣ ಸಮತೋಲಿತ ಆಹಾರ ಈ ಜಗತ್ತಿನಲ್ಲಿ ಯಾವೂದೂ ಇಲ್ಲ ಎಂಬ ಅಂಶ ಮಕ್ಕಳಿಗೆ ಮನದಟ್ಟು ಮಾಡುವ ಗುರುತರ ಜವಾಬ್ದಾರಿ ಹೆತ್ತವರ ಮತ್ತು ಶಿಕ್ಷಕರ ಮೇಲೆ ಇದೆ.


5. ಇತ್ತೀಚಿನ ಇನ್ನೊಂದು ಗಮನಾರ್ಹ ಬೆಳವಣಿಗೆ ಏನೆಂದರೆ ‘ಜಂಕ್ ಪುಡ್’ ಅನುಮೋಡಿಸುವ ಸಿನಿಮಾ ತಾರೆಯರಿಗೆ, ಜನಪ್ರಿಯ ಕ್ರೀಡಾ ಪಟುಗಳಿಗೆ, ಕ್ರಿಕೆಟ್ ತಾರೆಗಳಿಗೆ ವಿಜ್ಞಾನ ಮತ್ತು ಪರಿಸರ ಅಧ್ಯಾಯನ ಕೇಂದ್ರ (ಸಿ ಎಸ್ಇ) ಖಾರವಾಗಿ ಪ್ರತಿಕ್ರಿಯೆ ನೀಡಿದೆ. ಮತ್ತು ಸರಕಾರ ಈ ವಿಷಯದ ಬಗ್ಗೆ ಸೂಕ್ತ ಕ್ರಮ ತೆಗೆದು ಕೊಳ್ಳಬೇಕೆಂದು ಆದೇಶಿಸಿದೆ. ಮಕ್ಕಳ ಆರೋಗ್ಯ ಮತ್ತು ಸರ್ವತೋಮುಖ ಬೆಳವಣಿಗೆಗೆ ಮಾರಕವಾಗುವ ಎಲ್ಲಾ ಪ್ರಕ್ರಿಯೆಗಳನ್ನು ನಿಷೇಧಿಸುವತ್ತ ಗಮನಾರ್ಹ ಹೆಜ್ಜೆ ಇಟ್ಟಿದೆ. ಆದರೆ ಈ ಕೆಲಸ ಅಷ್ಟು ಸುಲಭವಲ್ಲ ಯಾಕೆಂದರೆ ಕೋಟ್ಯಾಂತರ ರೂಪಾಯಿ ವ್ಯವಹಾರ ನಡೆಸುವ, ದೇಶ ವಿದೇಶಗಳ ದೊಡ್ಡ ದೊಡ್ಡ ಕಾರ್ಪೋರೇಟ್ ದಿಗ್ಗಜರನ್ನು ಮಾಣಿಸುವುದು ಮತ್ತು  ಜಂಕ್‍ಪುಡ್ ನಿಷೇಧಿಸುವುದು ಸುಲಭದ ಮಾತಲ್ಲ. ಸಾರ್ವಜನಿಕರಲ್ಲಿ ಹೆಚ್ಚಿನ ಜಾಗೃತಿ ಮತ್ತು ಅರಿವು ಮೂಡಿಸಿ, ಜಂಕ್ ಪುಡ್‍ಗಳ ನಿಷೇದಕ್ಕಿಂತ, ತಿರಸ್ಕರಿಸುವ ಪ್ರಕ್ರಿಯೆಗೆ ಹೆಚ್ಚಿನ ಚಾಲನೆ ಮತ್ತು ದಿಕ್ಕು ದೊರೆತಲ್ಲಿ, ನಮ್ಮ ಯುವ ಜನಾಂಗ ಮತ್ತು ಮಕ್ಕಳ ಆರೋಗ್ಯ ವೃದ್ಧಿಸಿ, ಆರೋಗ್ಯಪೂರ್ಣ ಸಮಾಜ ನಿರ್ಮಾಣವಾಗುವಲ್ಲಿ ಎಳ್ಳಷ್ಟು ಸಂಶಯವಿಲ್ಲ. 

ಯಾವ ರೀತಿಯ ಆಹಾರ ತೆಗೆದುಕೊಳ್ಳಬೇಕು:

1. ಹೆಚ್ಚು ಹೆಚ್ಚು ನಾರುಯುಕ್ತ ಆಹಾರಗಳಾದ ಹಸಿ ತರಕಾರಿ, ಹಣ್ಣು ಹಂಪಲುಗಳನ್ನು ಸೇವಿಸಬೇಕು. ಈ ರೀತಿಯ ಆಹಾರಗಳಿಗೆ ಸ್ವಯಂ ಶುಚಿಗೊಳಿಸುವ (Self cleaning) ಗುಣವಿರುವುದರಿಂದ ಹಲ್ಲಿನ ಆರೋಗ್ಯಕ್ಕೆ ಪೂರಕವಾದ ವಾತಾವರಣವನ್ನು ನಿರ್ಮಿಸುತ್ತದೆ.

2. ಆಮ್ಲಯುಕ್ತ ಕೃತಕ ಪಾನೀಯಗಳನ್ನು ತ್ಯಜಿಸಿ, ನೈಸರ್ಗಿಕ ಪಾನೀಯಗಳಾದ ಎಳನೀರು, ಕಬ್ಬಿನಹಾಲು,  ಹಣ್ಣಿನ ರಸ, ಇತ್ಯಾದಿಗಳನ್ನು ಹೆಚ್ಚು ಸೇವಿಸಬೇಕು.

3. ಜಿಗುಟಾದ ಅತಿ ಸಕ್ಕರೆಯುಕ್ತ ಆಹಾರ ತ್ಯಜಿಸಬೇಕು ಮತ್ತು ನೈಸರ್ಗಿಕವಾದ ಕಡಿಮೆ ಸಕ್ಕರೆ ಅಂಶಗಳುಳ್ಳ ನಾರುಯುಕ್ತಗೆಡ್ಡೆ ಗೆಣಸುಗಳನ್ನು ಹೆಚ್ಚು ಹೆಚ್ಚು ಸೇವಿಸಬೇಕು. ಕೃತಕ ಮತ್ತು ದಿಢೀರ್ ಆಹಾರಗಳಾದ ಲೇಸ್, ಕುರ್‍ಕುರೆ, ಬರ್ಗರ್, ಪಿಜ್ಜಾಗಳನ್ನು ಸಂಪೂರ್ಣವಾಗಿತ್ಯಜಿಸಬೇಕು.ಈ ರೀತಿಯ ಕೃತಕ ಆಹಾರಕ್ಕೆ ಜಂಕ್ ಪುಡ್ (Junk Food) ಎಂದು ಹೇಳುತ್ತಾರೆ. ಜಂಕ್ ಪುಡ್ ವರ್ಜಿಸಿ, ಖನಿಜಾಂಶ ಮತ್ತು ವಿಟಮಿನ್‍ಯುಕ್ತ ನೈಸರ್ಗಿಕ ಆಹಾರಗಳನ್ನು ಹೆಚ್ಚು ಸೇವಿಸಬೇಕು. ಈ ರೀತಿಯ ಆಹಾರ ಹಲ್ಲನ್ನು ಶುಚಿಗೊಳಿಸುತ್ತದೆ ಮತ್ತು ಒಸಡಿನ ರಕ್ತ ಪರಿಚಲನೆ ಹೆಚ್ಚಿಸಿ ವಸಡಿನಆರೋಗ್ಯವನ್ನು ವರ್ಧಿಸುತ್ತವೆ.

4. ಜೊಲ್ಲು ರಸ ಉತ್ಪಾದನೆಯನ್ನು ಹೆಚ್ಚಿಸುವ ವಿಟಮಿನ್ ‘ಸಿ’ ಇರುವ ಹಣ್ಣುಗಳನ್ನು ಮತ್ತು ಚ್ಯೂಯಿಗಮ್‍ಗಳನ್ನು ಹೆಚ್ಚು ಸೇವಿಸುವುದರಿಂದ ಹೆಚ್ಚು ಲಾಲಾರಸಉತ್ಪಾದನೆಗೊಂಡು ಲಾಲಾರಸಆಮ್ಲೀಯವಾಗಿ, ಬ್ಯಾಕ್ಟೀರಿಯಗಳ ಸಂಖ್ಯೆ ಕಡಿಮೆಯಾಗಿ ದಂತಕ್ಷಯದಿಂದ ರಕ್ಷಣೆ ದೊರಕುತ್ತದೆ.

5. ಶುಭ್ರ ಶುಚಿಯಾದ ನೀರು ಮತ್ತು ಹಾಲು ಹಲ್ಲಿನಆರೋಗ್ಯಕ್ಕೆ ಮತ್ತು ದೇಹದ ಆರೋಗ್ಯಕ್ಕೆ ಅತೀ ಅವಶ್ಯಕ. ಹೆಚ್ಚು ಕಡಿಮೆಎಂದರೆ 2 ಲೀಟರ್ ನೀರು ಪ್ರತಿ ದಿನ ಸೇವಿಸಲೇಬೇಕು.

ನಮ್ಮ ಪೂರ್ವಜರಲ್ಲಿ ದಂತಕ್ಷಯ ಎನ್ನುವ ರೋಗವೇ ಇರುತ್ತಿರಲಿಲ್ಲ. ಹಿಂದಿನ ಕಾಲದಲ್ಲಿ ವಯಸ್ಸು 70-80 ದಾಟಿದರೂ ದೃಢವಾದ, ಆರೋಗ್ಯವಂತ ಹಲ್ಲುಗಳು ಇರುತ್ತಿದ್ದವು ಎಂದು ನಾವು ಎಲ್ಲರೂ ಹೇಳುವುದನ್ನು ಕೇಳಿರುತ್ತೇವೆ. ಇದು ಶೇಕಡಾ 90ರಷ್ಟು ಸತ್ಯವಿರಲೂಬಹುದು. ಯಾಕೆಂದರೆ ಹಿಂದಿನ ಕಾಲದಲ್ಲಿ ನಮ್ಮ ಪೂರ್ವಜರು ತುಂಬಾ ಕಚ್ಚಾ ಪದಾರ್ಥಗಳನ್ನು, ನಾರುಯುಕ್ತ ಆಹಾರಗಳನ್ನು, ಹಸಿಯಾದ ಗೆಡ್ಡೆ ಗೆಣಸುಗಳನ್ನು ಹೆಚ್ಚು ಸೇವಿಸುತ್ತಿದ್ದರು. ಹೆಚ್ಚು ಹೆಚ್ಚು ನಾರುಯುಕ್ತ ಕಬ್ಬು, ಗೆಡ್ಡೆಗೆಣಸು, ಮುಂತಾದ ಆಹಾರ ಪದಾರ್ಥಗಳ ಸೇವನೆಯಿಂದ ಹಲ್ಲುಗಳು ಶುಚಿಗೊಂಡು ಸದೃಢವಾಗಿ, ಆರೋಗ್ಯಯುತವಾಗಿ ಬಾಳುತ್ತಿರುತ್ತಿದ್ದವು.


ಕಾಲಾನುಕ್ರಮದಲ್ಲಿ ಆಹಾರ ಪದ್ದತಿ, ಜೀವನ ಶೈಲಿ, ವೈಜ್ಞಾನಿಕ ಆವಿಷ್ಕಾರಗಳ ಭರಾಟೆಯಿಂದಾಗಿ ನಮ್ಮ ಜೀವನದ ರೀತಿಗಳಲ್ಲಿ ಬಹಳಷ್ಟು ಮಾರ್ಪಾಡುಗಳು ಬಂದವು. ಅದರ ಪರಿಣಾಮವಾಗಿಯೇ ದಂತಕ್ಷಯ ಎಂಬ ರೋಗ ಹುಟ್ಟಿಕೊಂಡಿತು ಎಂದರೂ ತಪ್ಪಲ್ಲ. ಈಗೀಗ ನಮ್ಮ ಮಕ್ಕಳು, ಯುವಜನತೆ ತಿನ್ನುವ ಆಹಾರವೆಂದರೆ, ಲೇಸ್ ಕುರ್‍ಕುರೆ ಬರ್ಗರ್ ಪಿಜ್ಜಾ ಮುಂತಾದ ಜಿಗುಟುಯುಕ್ತ ಆಹಾರಗಳು ಮತ್ತು ಕೋಕ್, ಪೆಪ್ಸಿ, ಫಾಂಟಾಗಳಂತಹ ಆಮ್ಲಯುಕ್ತ ಪಾನೀಯಗಳು ಇವೆಲ್ಲವೂ ನಮ್ಮ ಹಲ್ಲಿನ ಆರೋಗ್ಯಕ್ಕೆ ಮಾರಕವಾಗಿ ಪರಿಣಮಿಸಿದೆ. ಹಲ್ಲಿನ ಆರೋಗ್ಯಕ್ಕೆ ಪೂರಕವಾದ ಎಳನೀರು, ಕಬ್ಬಿನಹಾಲು, ಹಸಿಯಾದ ಹಣ್ಣು ಹಂಪಲುಗಳ ಸೇವನೆ ಕಡಿಮೆಯಾಗಿ ನಾರುಯುಕ್ತ ಹಸಿ ತರಕಾರಿ, ಸೊಪ್ಪುಗಳು ಮಾಯವಾಗಿ ಹಲ್ಲಿನ ಆರೋಗ್ಯಕ್ಕೆ ಮಾರಕವಾದ ಆಹಾರಗಳು ನಮ್ಮ ದೈನಂದಿನ ಜೀವನದಲ್ಲಿ ಹಾಸುಹೊಕ್ಕಾಗಿದೆ.

-ಡಾ|| ಮುರಲಿ ಮೋಹನ್ ಚೂಂತಾರ್


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 تعليقات

إرسال تعليق

Post a Comment (0)

أحدث أقدم