ಸತತ ಅಭ್ಯಾಸದಿಂದ ಕ್ರೀಡೆಯಲ್ಲಿ ಯಶಸ್ಸು ಸಾಧ್ಯ: ಮಾಧವ ಬಿ. ಕೆ
ಪುತ್ತೂರು: ಕ್ರೀಡೆಯೆಂಬುದು ಪ್ರತಿಯೊಬ್ಬರ ಜೀವನದ ಅವಿಭಾಜ್ಯ ಅಂಗವಾಗಿದೆ. ಇದರಿಂದ ವ್ಯಕ್ತಿಯ ದೇಹದಲ್ಲಿರುವ ಪ್ರತಿಯೊಂದು ಭಾಗಗಳಿಗೂ ವ್ಯಾಯಾಮ ದೊರೆಯುತ್ತದೆ. ವಿದ್ಯಾರ್ಥಿ ಜೀವನದಲ್ಲಿ ಕಲಿಕೆಯ ಜೊತೆಗೆ ಕ್ರೀಡೆಯನ್ನು ಅಳವಡಿಸಿಕೊಂಡರೆ ದೈಹಿಕ ಬೆಳವಣಿಗೆಯೊಂದಿಗೆ ಮಾನಸಿಕ ನೆಮ್ಮದಿಯು ಲಭಿಸುತ್ತದೆ. ಸಣ್ಣ ಪ್ರಾಯದಿಂದಲೇ ಪ್ರತಿಯೊಬ್ಬರೂ ಕ್ರೀಡೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರೆ ಅರೋಗ್ಯವೂ ಉತ್ತಮವಾಗಿರಲು ಸಾಧ್ಯ ಎಂದು ನಿವೃತ್ತ ಸೈನಿಕ ಅಧಿಕಾರಿ ಹಾಗೂ ಕಬಡ್ಡಿ, ಖೋ ಖೋ ತರಬೇತುದಾರ ಮಾಧವ ಬಿ. ಕೆ ಹೇಳಿದರು.
ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯ ಅಂಬಿಕಾ ವಿದ್ಯಾಲಯ(ಸಿಬಿಎಸ್‍ಇ)ದಲ್ಲಿ ವಿದ್ಯಾರ್ಥಿಗಳಿಗೆ ಕ್ರೀಡೆಯ ಬಗೆಗೆ ತರಬೇತಿ ನೀಡುವ ಸ್ಪೋಟ್ರ್ಸ್ ಕ್ಯಾಂಪ್ ಅನ್ನು ಉದ್ಘಾಟಿಸಿ ಸೋಮವಾರ ಮಾತನಾಡಿದರು.
ಕ್ರೀಡೆಯೆಂಬುದು ತಪಸ್ಸು, ಅದನ್ನು ಶ್ರದ್ಧೆಯಿಂದ ಮಾಡಿದಾಗ ಬದುಕಿನಲ್ಲಿ ಜಯ ದೊರಕುತ್ತದೆ. ಜೀವನದಲ್ಲಿ ಶಿಸ್ತನ್ನು ರೂಢಿಸಿಕೊಂಡು ತನ್ನ ಗುರಿಯನ್ನು ಮುಟ್ಟಲು ಕಠಿಣ ಪರಿಶ್ರಮ ಬೇಕು. ನಿರಂತರ ಪರಿಶ್ರಮದಿಂದ ಅಭ್ಯಾಸ ಮಾಡುವುದರಿಂದ ಕ್ರೀಡೆಯಲ್ಲಿ ಯಶಸ್ಸನ್ನು ಪಡೆಯಲು ಸಾಧ್ಯ. ಆರೋಗ್ಯವೇ ಭಾಗ್ಯ ಎನ್ನುವಂತೆ ಹಠ, ಛಲ ಹಾಗೂ ಸಾಧನೆಯಿಂದ ವ್ಯಕ್ತಿಯ ಸರ್ವತೋಮುಖ ಪ್ರಗತಿ ಕಾಣಬಹುದು. ದೈಹಿಕ ಸಾಮಥ್ರ್ಯವನ್ನು ಬೆಳೆಸಿಕೊಂಡು ಕ್ರೀಡಾಮನೋಭಾವದಿಂದ ದುಡಿದಾಗ ವ್ಯಕ್ತಿಯ ನಡತೆಯಲ್ಲಿಯೂ ಬದಲಾವಣೆಯಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಮಣ್ಯ ನಟ್ಟೋಜ ಮಾತನಾಡಿ ಆಟದ ಮೂಲಕ ದೈಹಿಕ ಬಲ ಹೆಚ್ಚುತ್ತದೆ. ಪ್ರಕೃತಿಯಲ್ಲಿರುವ ಪ್ರತಿಯೊಂದು ಜೀವಿಗಳು ಸಹ ತಮ್ಮ ತಮ್ಮೊಳಗೆ ಆಟವಾಡಿಕೊಳ್ಳುತ್ತವೆ. ಹಾಗೆಯೇ ವಿದ್ಯಾರ್ಥಿ ಜೀವನದಲ್ಲಿ ನಮ್ಮ ಶರೀರಕ್ಕೆ ಬೇಕಾಗುವಷ್ಟು ವ್ಯಾಯಾಮ ಹಾಗೂ ಕ್ರೀಡಾ ಚಟುವಟಿಕೆಗಳನ್ನು ಮೇಳವಿಸಿಕೊಂಡಾಗ ಅರೋಗ್ಯವನ್ನು ಸಮತೋಲನದಲ್ಲಿರಿಸಲು ಸಾಧ್ಯ ಎಂದು ತಿಳಿಸಿದರು.
ಜೀವಕ್ಕೆ ಒಪ್ಪುವ ಆಹಾರವನ್ನು ಸೇವಿಸಿ ಆರೋಗ್ಯವನ್ನು ಉತ್ತಮವಾಗಿಸಿಕೊಳ್ಳಬೇಕು. ತಾತ್ಕಾಲಿಕ ಸುಖ ಸಂತೋಷವನ್ನು ಕೊಡುವ ಆಹಾರಗಳು ನಮ್ಮ ದೇಹಕ್ಕೆ ರೋಗ ರುಜಿನಗಳನ್ನು ತಂದೊಡ್ಡುತ್ತವೆ. ಹಾಗಾಗಿ ಸತ್ವಯುತ ಆಹಾರಗಳನ್ನು ಸೇವಿಸಿ ಕ್ರೀಡೆಯಲ್ಲಿ ಪಾಲ್ಗೊಂಡು ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಕ್ರೀಡೆಗೆ, ಕ್ರೀಡಾ ಪಟುಗಳಿಗೆ ಕಲಿಸುವ ಗುರುಗಳಿಗೆ ಗೌರವ ಕೊಡಬೇಕು ಎಂದು ಹೇಳಿದರು. ವೇದಿಕೆಯಲ್ಲಿ ಅಂಬಿಕಾ ವಿದ್ಯಾಲಯ (ಸಿಬಿಎಸ್‍ಇ)ದ ಪ್ರಾಂಶುಪಾಲೆ ಮಾಲತಿ ಭಟ್ ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ನಿಧಿ ಎಂ.ಯು. ಪ್ರಾರ್ಥಿಸಿ, ವಿದ್ಯಾರ್ಥಿ ಕಾರ್ತಿಕ್ ಕೆಮ್ಮಿಂಜೆ ಸ್ವಾಗತಿಸಿದರು. ವಿದ್ಯಾಲಯದ ದೈಹಿಕ ಶಿಕ್ಷಣ ಶಿಕ್ಷಕಿ ಸುಚಿತ್ರಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ದೈಹಿಕ ಶಿಕ್ಷಣ ನಿರ್ದೇಶಕ ನವೀನ್ ಕುಮಾರ್ ವಂದಿಸಿದರು.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ