||ಜಾಹೀರಾತು|| ಬೆಂಗಳೂರಿನ ಪ್ರಣವ ಮೀಡಿಯಾ ಹೌಸ್ ಪ್ರಕಾಶನದ ಹೆಮ್ಮೆಯ ಪ್ರಕಟಣೆ | ಡಾ ಗುರುರಾಜ ಪೋಶೆಟ್ಟಿಹಳ್ಳಿ ರವರ 'ಸತ್ಸಂಗ ಸಂಪದ' ಪ್ರೇರಣಾದಾಯಿ ಅಂಕಣಗಳ ಸಂಕಲನ ಖರೀದಿಸಲು ಇಚ್ಚಿಸುವವರು ಸಂಪರ್ಕಿಸಿ: 739369621 (ಪುಟಗಳು- 248, ಬೆಲೆ: ಎರಡು ನೂರು ರೂಪಾಯಿಗಳು) | ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಶರನ್ನವರಾತ್ರಿ ರಮೋತ್ಸವ, ದಶಾಹರ್ = ದಸರ

ಶರನ್ನವರಾತ್ರಿ ರಮೋತ್ಸವ, ದಶಾಹರ್ = ದಸರ


          

ಶರದೃತು ಆರಂಭ ಎಂದರೆ ಮಳೆಗಾಲದ ಅಂತ್ಯ. ಗದ್ದೆಗಳಲ್ಲಿ ಪೈರು ಬೆಳೆದು ತೆನೆಗಳು ತೊನೆದಾಡುವ ಸಂಭ್ರಮ. ಅನ್ನದಾತನ ದುಡಿಮೆಗೆ ಭೂಮಿ ತಾಯಿ ನೀಡಿದ ಸತ್ಫಲ, ಜೀವನಾಧಾರವಾದ 'ಅನ್ನಬ್ರಹ್ಮ' ಮನೆಯಂಗಳಕ್ಕೆ ಬರುವ ಸಮೃದ್ಧಿಯ ಸಮುಲ್ಲಾಸದ ಸಂದರ್ಭ. 'ನವರಾತ್ರಿ ರಮೋತ್ಸವ'ವೂ ಹೌದು.


'ರಮಾ' ಎಂದರೆ ಲಕ್ಷ್ಮೀ, ಶೋಭೆ, ಸಮೃದ್ಧಿ ಎಂಬುದು ಅರ್ಥ. ಪ್ರಕೃತಿಯು ಬೆಳೆದ ಬೆಳೆಯಿಂದ ತುಂಬಿ ಅತಿಶಯತೆಯನ್ನು ಸಾಂಕೇತೀಸುವ ಪರ್ವಕಾಲ. ಇದು ಲಕ್ಷ್ಮೀ, ಸಂಪತ್ತಿಗೆ ಹೇತುವಾದ ಪರಿಸರವಲ್ಲವೇ? ಈ ಒಂಬತ್ತು  ದಿನಗಳ ಉತ್ಸವ, ಹತ್ತನೇ ದಿನದ ಸಮಾರೋಪ ಅವಭೃತ. ಇದರಿಂದ ಈ ಕಾಲ ದಶಾಹರ್= ದಸರ (ಹತ್ತು ದಿವಸಗಳ ಉತ್ಸವ, ಹತ್ತು ಹಗಲುಗಳು) ಶಕ್ತಿ ಪೂಜೆಯ ಸುಸಂದರ್ಭ.


ಶರತ್ಕಾಲವು ಭೂಮಿ ತಾಯಿ ಹಸಿರು ಹೊದ್ದು, ಆ ಹಸಿರಲ್ಲಿ ಬಂಗಾರದ ಬಣ್ಣದ ತೆನೆಗಳನ್ನು ಪ್ರದರ್ಶಿಸುತ್ತಾ ತನ್ನ ಸಹಜ ಸೊಬಗಿನಿಂದ ಶೋಭಿಸುವ ಕಾಲ.


ಹವಾಮಾನದಲ್ಲಿ‌ ಬದಲಾವಣೆಯಾಗುವ ಈ ವೇಳೆ ಪ್ರಕೃತಿಮಾತೆಯ ಮೂಲಕ ಲೋಕಮಾತೆಯ ಆರಾಧನೆ. ಮಾನವ ನಿಸರ್ಗದೊಂದಿಗೆ ಕೈ ಜೋಡಿಸುತ್ತಾ ಬದುಕು‌ ರೂಪಿಸಿಕೊಂಡ. ಈ ಮೂಲದ ಮಾನವ- ಪ್ರಕೃತಿ ಸಂಬಂಧವೇ ಈ ವರೆಗೂ ಸಾಗಿಬಂತು‌. ನಮ್ಮ ವಾರ್ಷಿಕ ಆಚರಣೆಗಳೆಲ್ಲ ಅದಕ್ಕೆ ಹೊಂದಿಕೊಂಡವು.


ಹುಟ್ಟು- ಬೆಳವಣಿಗೆ- ಸಾವು ಈ ಮೂರರ ನೈರಂತರ್ಯದ ಪ್ರತ್ಯಕ್ಷ ದರ್ಶನವೇ ಮಹಾಕಾಳಿ- ಮಹಾಲಕ್ಷ್ಮೀ- ಮಹಾಸರಸ್ವತೀ ಕಲ್ಪನೆಗೆ ಆಧಾರವಾಗುತ್ತದೆ. ಹುಟ್ಟು ಎಂದೊಡನೆ ನಮಗೆ ಜನ್ಮ ನೀಡಿದ ತಾಯಿಯೇ ಸಾಕ್ಷಿ ತಾನೆ? ಈಗ ತಾಯಿ ಎಂದ ಮೇಲೆ ತಂದೆ, ಮುಂದಿನ ಎಲ್ಲ ಸಂಬಂಧಗಳು ಸಂಭವಿಸುವುದು ಸಹಜ ಪ್ರಕ್ರಿಯೆ.


ನಮ್ಮ ಅಮ್ಮನೊಂದಿಗಿನ ಭಾವನಾತ್ಮಕ ಹೊಂದುಗೆಯ ಸಾಕ್ಷಾತ್ಕಾರವೇ ಭೂಮಿತಾಯಿಯೊಂದಿಗಿನ‌ ನಂಟಿನ ಗ್ರಹಿಕೆಗೆ  ಸುಲಭ ಸಾಧನ .ನಮ್ಮಮ್ಮನೊಂದಿಗಿನ‌ ಪ್ರೀತಿಯೇ ಬಳಿಕ ಒದಗುವ ಬಾಂಧವ್ಯಗಳಿಗೆ ಮೂಲ. ಆದುದರಿಂದಲೇ ನಾವು ಚಿಂತಿಸ ಹೊರಟ ಮಹಾಮಾತೆಯ ತಿಳಿವಳಿಕೆಗೆ ನಮ್ಮ ತಾಯಿ, ನಮ್ಮ ತಾಯಿಯಿಂದ ಭೂಮಿತಾಯಿ. ಏಕೆಂದರೆ ಅಮ್ಮನ ಮಡಿಲಿನಿಂದ ಮುಂದಿನ ನಮ್ಮ ಹೆಜ್ಜೆ ಭೂಮಿಗೆ ತಾನೆ? ಹಾಗಾಗಿ ತಾಯಿ, ಭೂಮಿತಾಯಿ. ಈ ಎರಡು ಅಮ್ಮಂದಿರ ಬಳಿಕ ಸಮಸ್ತ ಸೃಷ್ಟಿಯನ್ನೊಳಗೊಂಡ ಜಗನ್ಮಾತೆಯ ದರ್ಶನ ಸಾಧ್ಯವಾಗುವುದು. ಇದು ಲಲಿತೆಯಾದ ಜಗನ್ಮಾತೆಯ ದಿವ್ಯ ದರ್ಶನ.


ಲಾಲಿತ್ಯಪೂರ್ಣವಾದುದು ಮಾತ್ರ ಆತ್ಮೀಯವಾಗುತ್ತದೆ. ಲೌಕಿಕ ಅಮ್ಮನಲ್ಲಿರುವ ಅಲೌಕಿಕ ಜಗನ್ಮಾತೆಯನ್ಮು ಅರಿತು ಆರಾಧಿಸುವುದು ಶರನ್ನವರಾತ್ರಿಯ ಆಶಯ. ಆದುದರಿಂದಲೇ ನವರಾತ್ರಿ ಆಚರಣೆಯಲ್ಲಿ ವ್ರತದ ಶ್ರದ್ಧೆ, ನಿಯಮ ಪಾಲನೆ, ಒಂಬತ್ತು ದಿನಗಳ ಅವಧಿಯ ನಿರ್ಧಾರದಿಂದ ಆರಾಧನೆಗೊಂದು ಶಿಸ್ತು, ಬದ್ಧತೆ ಒದಗುತ್ತದೆ. ನವರಾತ್ರಿಯ ವ್ರತನಿಷ್ಠೆಯಲ್ಲಿ ಅಮ್ಮನೆಂಬ ಆತ್ಮೀಯತೆ- ಪ್ರೀತಿಯ ಅಪೂರ್ವವಾದುದು  ಸಂಭವಿಸಿದರೆ ಅದೇ ಸಿದ್ಧಿ. ನಡವಳಿಕೆ ಸಾರ್ಥಕ.


ಲಲಿತೆಯಾದ ಜಗನ್ಮಾತೆಯನ್ನು ಮಹಾಕಾಳಿ, ಮಹಾಲಕ್ಷ್ಮೀ, ಮಹಾಸರಸ್ವತೀ ಎಂಬ ಅನುಸಂಧಾನದೊಂದಿಗೆ ಪೂಜಿಸಲಾಗುತ್ತದೆ.ಮಾರ್ಕಾಂಡೇಯ ಪುರಾಣದ 'ಸಪ್ತಶತೀ'ಯಲ್ಲಿ ಪ್ರಥಮ ಚರಿತೆ, ಮಧ್ಯಮ ಚರಿತೆ, ಉತ್ತಮ ಚರಿತೆಗಳೆಂದು ಮೂರು ವಿಭಾಗ. ಈ ಮೂರು ವಿಭಾಗಗಳಿಗೆ ಮಹಾಕಾಳಿ, ಮಹಾಲಕ್ಷ್ಮೀ, ಮಹಾಸರಸ್ವತೀಯರು ಅನುಕ್ರಮವಾಗಿ ದೇವರುಗಳೆಂದು ಅನುಸಂಧಾನವಿದೆ.


ಮಹಾಕಾಳಿ(ಮಹಾಕಾಲಿ) ಒಂದು ಭೀಕರ ದೇವತೆ. ಈ ಶಬ್ದವೇ ದುರ್ಗಾ, ಪಾರ್ವತೀ ಎಂಬ ಅರ್ಥವನ್ನು ಧ್ವನಿಸುತ್ತದೆ. ಮಹಾಲಕ್ಷ್ಮೀ ಎಂದರೆ ಸಂಪತ್ತಿನ ಅಧಿದೇವತೆ: ಕಾಂತಿ, ಸೌಂದರ್ಯ, ಶೋಭೆ, ಲಕ್ಷಣ ಎಂದು ತಿಳಿವಳಿಕೆ. ಮಹಾಸರಸ್ವತೀಯು ವಿದ್ಯಾಧಿದೇವತೆಯಾಗಿ, ಶಾರದೆಯಾಗಿ 'ಮಾತು' ಎಂಬ ಅರ್ಥವನ್ನು ಬಿಂಬಿಸುತ್ತದೆ. ಈ ಮೂರು ಸ್ವರೂಪಗಳಿಗೆ ತಾಮಸ, ರಾಜಸ, ಸಾತ್ವಿಕ ಗುಣಗಳೆಂದು‌ ಮನಗಂಡು ಆರಾಧನೆಗೆ ಸ್ವೀಕಾರ. ಮೊದಲು 'ತಮಸ್ಸು' ಬಳಿಕ 'ಸಮೃದ್ಧಿ' ಬಳಿಕ ಪರಿಪೂರ್ಣವಾದ 'ಜ್ಞಾನ'ವೆಂದು ಒಪ್ಪಿಗೆ.ದುರ್ಗಮ ದುರಿತಗಳಿಗೆ ಕಾರಣವಾಗಿ, ಜಡತ್ವ ಹಾಗೂ ಅಹಂಕಾರದ ವಿಜೃಂಭಣೆ ಎಂದರೆ ಪೂರ್ಣ ಪ್ರಮಾಣದ ತಮಸ್ಸು. ಈ ತಮಸ್ಸನ್ನು ಹೋಗಲಾಡಿಸಿ ಜ್ಞಾನದ ಬೆಳಕನ್ನು ಹರಿಸುವುದು ಮಹಾಕಾಳಿಯ ಕೆಲಸ.

'ನಾನೇ' ಎಂಬ ಅಹಂಕಾರ, ಅದರೊಂದಿಗೆ ಸರ್ವಸಮೃದ್ಧಿ, ಸಂಪತ್ತು ಪ್ರಾಪ್ತಿ. ದಕ್ಕಿದ ಸಂಪತ್ತನ್ನು ಉಳಿಸಿಕೊಳ್ಳಲು ರಾಜಸದ ವಿಜೃಂಭಣೆ. ಉದಾಹರಣೆಗೆ ಮಹಿಷ: ವರಗಳನ್ನು ಪಡೆಯುವ, ಸರ್ವಾಧಿಕಾರ ಸ್ಥಾಪಿಸುವ, ಧನಕನಕಾದಿಗಳನ್ನು ಹೊಂದುವ, ಅಪೂರ್ವವಾದುವುಗಳನ್ನು ಪಡೆಯುವ, ಆದರೆ ಸಾಧನೆಗಳೆಲ್ಲವೂ ಲೋಕ ಒಪ್ಪಿದ ಧರ್ಮದ ಚೌಕಟ್ಟನ್ನು ಮೀರಿ ದಾಷ್ಟ್ಯವಾಗಿ ನಿಗಿನಿಗಿಸಿದರೆ ಅಂತಹ ರಾಜಸದ ನಿಯಂತ್ರಣಕ್ಕೆ ಅಥವಾ ವಧೆಗೆ ಮಹಾಲಕ್ಷ್ಮೀಯಾಗಿ ಲೋಕ ಒಪ್ಪುವ ರಾಜಸವನ್ನು- ಧರ್ಮವನ್ನು ರಕ್ಷಿಸುವ ಕಾರ್ಯವೇ ಮಹಾಲಕ್ಷ್ಮೀಯ ಸಾಕ್ಷಾತ್ಕಾರ.


ಮುಂದಿನ ಹಂತದಲ್ಲಿ ಜ್ಞಾನ - ಅನುಭವವು ವಿದ್ಯೆಯಾಗಿ, ವಿದ್ಯೆಯ ಸುಭಗತೆಯಲ್ಲಿ ಸತ್ಯಜ್ಞಾನ- ಸಂಸ್ಕೃತಿಯ ಪ್ರತಿಷ್ಠೆಯೇ ಮಹಾಸರಸ್ವತೀಯ ಅನುಗ್ರಹ.


ಮಾರ್ಕಾಂಡೇಯ ಪುರಾಣದ "ಸಪ್ತಶತೀ". ಇದರಲ್ಲಿ ಹದಿಮೂರು ಅಧ್ಯಾಯ+ ಏಳುನೂರು ಶ್ಲೋಕಗಳು. ಮೇದಿನಿ ನಿರ್ಮಾಣ- ಎಂಬತ್ತನಾಲ್ಕು ಲಕ್ಷ ಜೀವಕೋಟಿಯ ಸೃಷ್ಟಿ- ಸ್ಥಿತಿ- ಲಯದ ಕ್ರಿಯೆಗೆ ಚಾಲನೆ, ಪ್ರಥಮ ಚರಿತೆ.


ಮಹಿಷಾದಿ ದಾನವರ ವಧೆ, ಶಕ್ರಾದಿ ಸ್ತುತಿ; ಇದು ಮಧ್ಯಮ ಚರಿತೆ. ಮುಂದಿನ ಚಂಡ- ಮುಂಡರು, ಧೂಮ್ರಾಕ್ಷ, ರಕ್ತಬೀಜ, ಶುಂಭ- ನಿಶುಂಭರೇ ಮೊದಲಾದ ರಾಕ್ಷಸ ವಂಶದ ನಾಶ ಕಾರ್ಯದ ಬಳಿಕ  ನೆಲೆಯಾಗುವ ಧರ್ಮ, ಶಾಂತಿ. ಇಂತಹ ಪ್ರಶಾಂತ ಸ್ಥಿತಿಯಲ್ಲಿ ಮಹಾಸರಸ್ವತೀಯ ಅನುಗ್ರಹ ಈ ವಿವರಣೆವುಳ್ಳ ವಿಸ್ತಾರವಾದ ಭಾಗವೇ ಉತ್ತಮ ಚರಿತೆ. ಇದು ಸ್ಥೂಲವಾದ 'ಸಪ್ತಶತೀ'ಯ ಅವಲೋಕನ.    


ದುರ್ಗಾ ದೇವಾಲಯ  ಸನ್ನಿಧಿಗಳಲ್ಲಿ, ಮಂದಿರಗಳಲ್ಲಿ, ಮನೆಗಳಲ್ಲಿ ಕಲ್ಪೋಕ್ತ ಪೂಜೆ, ಯಾಗ, ಯಜ್ಞ, ಕನ್ನಿಕಾ ಪೂಜೆ, ಸುಮಂಗಲಿಯರ ಪೂಜೆಗಳು‌ ಸಾಮಾನ್ಯ. ಸಂಭ್ರಮದ ಆಚರಣೆಯಂತೆ ಕಂಡರೂ ವೈಭವೀಕರಣವಿಲ್ಲ. ಪೂಜೆ- ಯಾಗಗಳ ವಿಧಿವಿಧಾನಗಳಿಗೆ ಹೆಚ್ಚು ಮಹತ್ವ. ಭವ್ಯ ಅಲಂಕರಣಗಳಿವೆಯಾದರೂ ಆರಾಧನೆಯ ಮೂಲ ಆಶಯ ಮರೆತ ವಿಧಿಗಳಿಲ್ಲ.ಒಂಬತ್ತು ದಿನಗಳ ಪೂಜೆಯ ಬಳಿಕ ವಿಜಯ ದಶಮಿ ಸಂಭ್ರಮೋಲ್ಲಾಸದಿಂದ ನೆರವೇರುತ್ತದೆ. ಅದು ಸಾಂಸ್ಕೃತಿಕ ಸಂಭ್ರಮವಾಗಿರುತ್ತದೆ. ಕಲೆ, ನೃತ್ಯ, ಗೀತೆಗಳ ಗೋಷ್ಠಿಯಾಗಿಯೂ ಇರುತ್ತದೆ‌.


ಒಂಬತ್ತು ದಿನ ಮೂರ್ತಿಯಲ್ಲಿ, ಕಲಶದಲ್ಲಿ, ಸ್ವಸ್ತಿಕೆಯಲ್ಲಿ, ಮಂಡಲ ಮಧ್ಯದಲ್ಲಿ, ಅಗ್ನಿಮಧ್ಯದಲ್ಲಿ, ಸನ್ನಿಹಿತಳಾಗಿ ವಿವಿಧರೀತಿಯಲ್ಲಿ ಪೂಜೆಗೊಳ್ಳುವ ಅಮ್ಮಾ... ಮನುಕುಲಕ್ಕೆ ಸರ್ವಮಂಗಲವನ್ನು, ರಕ್ಷಣೆಯನ್ನು‌ ಅನುಗ್ರಹಿಸು ಎಂಬುದು ಪ್ರಾರ್ಥನೆ.

                 ----------------------

|ಕೊಪ್ಪರಿಗೆ ಏರ್ನು|


• ಹೆಚ್ಚಿನ ದುರ್ಗಾ- ದೇವಿ ಕ್ಷೇತ್ರಗಳಲ್ಲಿ ನವರಾತ್ರಿಯ ಆರಂಭವೇ 'ಕೊಪ್ಪರಿಗೆ ಏರಿಸುವ' (ಕೊಪ್ಪರಿಗೆ ಏರ್ನು) ವಿಧಿಯೊಂದಿಗೆ. ಅನ್ನದಾನ ನಿರಂತರ ನಡೆಯಲಿ ಎನ್ನುವ ಆಶಯ.ಅಮ್ಮನ ಸನ್ನಿಧಿಯಲ್ಲಿ, ಆಕೆ ಹಸಿದ ಹೊಟ್ಟೆಯ ಮಕ್ಕಳನ್ನು ಜಗಜ್ಜನನಿ ನೋಡ ಬಯಸಲಾರಳು.ಆದುದರಿಂದ ಅನ್ನ ಸಂತರ್ಪಣೆ ಪ್ರಧಾನ.


 • ಕನ್ನಿಕಾ ಪೂಜೆ: ಆರು- ಏಳು ವರ್ಷ ಹರೆಯದ ಕನ್ನಿಕಾ ರೂಪಿ ಸಣ್ಣ ಅಮ್ಮನವರನ್ನು ಪೂಜಿಸುವ ಕ್ರಮ ರೂಢಿಯಲ್ಲಿದೆ. ನವರಾತ್ರಿ ಕಾಲದಲ್ಲಿ ಕನ್ನಿಕಾ ಪೂಜೆ ಹೆಚ್ಚು ವಿಶೇಷ.


• ಸುಮಂಗಲಿ ಪೂಜೆ: ಮುತ್ತೈದೆ ಸುಮಂಗಲಿಯರಿಗೆ ಬಾಗಿನ ನೀಡುವ ಕ್ರಮವಿದೆ. ಪ್ರತಿ ಚಂಡಿಕಾಯಾಗ ಅಥವಾ ದುರ್ಗಾ ಸಂಬಂಧಿ ಯಾಗಗಳಲ್ಲಿ ಮೂರು ಮಂದಿ  ಸುಮಂಗಲಿಯರಿಗೆ ಬಾಗಿನ. ಅಂದರೆ   ಮಹಾಕಾಳಿ, ಮಹಾಲಕ್ಷ್ಮೀ, ಮಹಾಸರಸ್ವತೀ ಎಂಬ ಒಪ್ಪಿಗೆಯಂತೆ.


• ಸೀರೆ, ರವಕೆ ಕಣ, ಅರಸಿನ ಕುಂಕುಮ, ಬಳೆಗಳು, ಕರಿಮಣಿ ಮುಂತಾದ ಮಂಗಲ ದ್ರವ್ಯಗಳನ್ನು ಮುತ್ತೈದೆಯರಿಗೆ, ಹೆಣ್ಣುಮಕ್ಕಳಿಗೆ (ಕನ್ನಿಕೆಯರು)ಹಂಚುವುದು, ದಾನ ನೀಡುವುದು ನವರಾತ್ರಿ ಪರ್ವದಲ್ಲಿ ಶ್ರದ್ಧೆಯಿಂದ ನಡೆಯುತ್ತವೆ.

- ಕೆ.ಎಲ್.ಕುಂಡಂತಾಯ


(ಉಪಯುಕ್ತ ನ್ಯೂಸ್)ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post