|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಯಕ್ಷಗಾನದ ಸರ್ವಸಮರ್ಥ ವೇಷಧಾರಿ ಬೆಳ್ಳಾರೆ ಮಂಜುನಾಥ್ ಭಟ್

ಯಕ್ಷಗಾನದ ಸರ್ವಸಮರ್ಥ ವೇಷಧಾರಿ ಬೆಳ್ಳಾರೆ ಮಂಜುನಾಥ್ ಭಟ್



ತೆಂಕುತಿಟ್ಟು ಯಕ್ಷಗಾನ ರಂಗವು ಅನೇಕ ಮಹಾನ್ ಕಲಾವಿದರನ್ನು ಯಕ್ಷಗಾನ ರಂಗಕ್ಕೆ ನೀಡಿದೆ. ಇಂತಹ ಕಲಾವಿದರ ಸಾಲಿನಲ್ಲಿ ನಾವು ಇವತ್ತು ಪರಿಚಯ ಮಾಡುವ ಕಲಾವಿದರು ಯಕ್ಷಗಾನದ ಸರ್ವ ಸಮರ್ಥ ವೇಷಧಾರಿ ಶ್ರೀಯುತ ಬೆಳ್ಳಾರೆ ಮಂಜುನಾಥ್ ಭಟ್.


ಕೆ. ಗೋವಿಂದ ಭಟ್ ಹಾಗೂ ಸರಸ್ವತಿ ಅಮ್ಮ ಇವರ ಪ್ರೀತಿಯ ಮಗನಾಗಿ 01.04.1960ರಲ್ಲಿ ಬೆಳ್ಳಾರೆಯಲ್ಲಿ ಇವರ ಜನನ. 8ನೇ ತರಗತಿವರೆಗೆ ವಿದ್ಯಾಭ್ಯಾಸ. ಶಾಲಾ ಸಮಯದಲ್ಲಿ ಸಂಬಂಧದಲ್ಲಿ ಅಜ್ಜ ಮಾಣಂಗಾಯಿ  ಕೃಷ್ಣ ಭಟ್ ರಲ್ಲಿ ಆರಂಭಿಕ ಹೆಜ್ಜೆ ಕಲಿಕೆ. ಕೂಡ್ಲು ಮೇಳದಲ್ಲಿ ಸ್ವಲ್ಪ ಸಮಯ ತಿರುಗಾಟ. ತನ್ನ 14ನೇ ವಯಸ್ಸಿನಲ್ಲಿ ಧರ್ಮಸ್ಥಳ ಯಕ್ಷಗಾನ ಕೇಂದ್ರದಲ್ಲಿ ಗುರುಗಳಾದ ಪಡ್ರೆ ಚಂದು ಅವರಿಂದ ನಾಟ್ಯಾಭ್ಯಾಸ. 1974ನೇ ಇಸವಿಯಲ್ಲಿ  ಕಟೀಲು ಮೇಳಕ್ಕೆ ಸೇರ್ಪಡೆ. ಆಗ ಕಟೀಲಿನಲ್ಲಿ 2 ಮೇಳಗಳು ಇತ್ತು. ಕಟೀಲು ಮೇಳದಲ್ಲಿ 46 ವರ್ಷಗಳ ಸುದೀರ್ಘವಾದ ತಿರುಗಾಟದ ಅನುಭವ.


ಬಾಲಗೋಪಾಲರಿಂದ ಹಿಡಿದು ಎಲ್ಲಾ ರೀತಿಯ ವೇಷಗಳನ್ನು ಮಾಡುತ್ತಾ ಇದಿರು ವೇಷಧಾರಿಯಾಗಿ ತಿರುಗಾಟ ಮಾಡಿದ ಅನುಭವ. ಕದ್ರಿ, ಬಂಟ್ವಾಳ, ಬೆಂಜನಪದವು, ತಲಕಳ, ಕುಪ್ಪೆಪದವು, ಮಂಗಳೂರು ಮುಂತಾದ ಕಡೆ ಯಕ್ಷಗಾನ ತರಗತಿಗಳನ್ನು ಮಾಡಿದ ಅನುಭವ ಇವರ ಯಕ್ಷ ಜೀವನದ ಯಾತ್ರೆಗೆ ಮತ್ತೊಂದು ಗರಿ. ಎಲ್ಲಾ ರೀತಿಯ ವೇಷಗಳ ಅನುಭವ, ಬಣ್ಣಗಾರಿಕೆಯ ಜ್ಞಾನ, ಪರಂಪರೆಯ ಛಾಪನ್ನು ಹೊಂದಿರುವವರು ಹಾಗೂ ಯುವ ಪೀಳಿಗೆಗೆ ಮಾರ್ಗದರ್ಶನ ಮಾಡಬಲ್ಲ ಸಮರ್ಥ ಸಂಪನ್ಮೂಲ ವ್ಯಕ್ತಿ.


ರಕ್ತಬೀಜ, ಜಾಂಬವ, ಅತಿಕಾಯ, ಇಂದ್ರಜಿತು, ವಾಲಿ, ರಾವಣ,ಮಹಿಷಾಸುರ, ಮಧು-ಕೈಟಭ ಮುಂತಾದ ಅನೇಕ ಪಾತ್ರಗಳನ್ನು ಮಾಡಿದ ಅನುಭವ ಇವರಿಗೆ ಇದೆ. "ಸತೀ ಹೈಮವತೀ" ಹಾಗೂ "ವಿಘ್ನ ವಿನೋದನ ಮಹಿಮೆ (ಗಣಪತಿ ಕೌತುಕ)" ಎಂಬ ಎರಡು ಯಕ್ಷಗಾನ ಪ್ರಸಂಗಗಳನ್ನು ರಚನೆ ಮಾಡಿದ್ದಾರೆ.


2014ರಲ್ಲಿ "ಕಟೀಲು ಗೋಪಾಲಕೃಷ್ಣ ಆಸ್ರಣ್ಣ ಪ್ರಶಸ್ತಿ", "ಮುಂಬೈ ಶ್ರೀಮತಿ ಮತ್ತು ಶ್ರೀ ಭಾಸ್ಕರ ಆಳ್ವ ಪ್ರಶಸ್ತಿ 2014", "ಕಟೀಲು ಗೋಪಾಲಕೃಷ್ಣ ಆಸ್ರಣ್ಣ ಸಂಸ್ಮರಣ ಪ್ರಶಸ್ತಿ 2016", "ಕದ್ರಿ ವಿಷ್ಣು ಸ್ಮಾರಕ ಪ್ರಶಸ್ತಿ 2018", "ಕುರಿಯ ವಿಠಲ ಶಾಸ್ತ್ರಿ ಸ್ಮೃತಿ ಪ್ರಶಸ್ತಿ 2018", "ಪೂರ್ಣಿಮಾ ಯತೀಶ್ ರೈ ಇವರಿಂದ ಸನ್ಮಾನ 2018", "ಕುಲಶೇಖರ 10 ಸಮಸ್ತರು ಸುವರ್ಣ ಮಹೋತ್ಸವ 2019", "ಯಕ್ಷ ತರಂಗಿಣಿ ಕೈಕಂಬ 2019" ಮುಂತಾದ ಅನೇಕ  ಸನ್ಮಾನ ಹಾಗೂ ಪ್ರಶಸ್ತಿಗಳು ಇವರಿಗೆ ದೊರೆತಿವೆ.


ಯಕ್ಷಗಾನದ ಇಂದಿನಿ ಸ್ಥಿತಿ ಗತಿ ಹಾಗೂ ಇವತ್ತಿನ ಯಕ್ಷಗಾನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ ಕೇಳಿದಾಗ ಇವರು ಹೀಗೆ ಹೇಳುತ್ತಾರೆ:-

ಯಕ್ಷಗಾನ‌ ಎಂದಿಗೂ ಅತ್ಯದ್ಭುತ ಕಲೆ. ಪರಂಪರೆ ನಿಂತ ನೀರಲ್ಲದ ಕಾರಣ ಬದಲಾವಣೆ ಸಹಜ. ಯಕ್ಷಗಾನಕ್ಕೆ ಅಳಿವಿಲ್ಲ. ನೋಡುವ ಪ್ರೇಕ್ಷಕ ಕಣ್ಣುಗಳಿಗೆ ಮೌಢ್ಯ ಬರಬಾರದಷ್ಟೇ... ಸ್ವಾರ್ಥಕ್ಕಾಗಿ ಯಕ್ಷಗಾನ ಬಳಕೆಯಾಗಬಾರದು. ಕಲೆಯ ಮೇಲಿನ, ಕಲಾವಿದರ ಮೇಲಿನ ನಿಜವಾದ ಪ್ರೀತಿಯಿಂದ ಅದನ್ನು ಬೆಳೆಸಿ.... ಪ್ರೇಕ್ಷಕರಂತೂ ಕಾಲಕಾಲಕ್ಕೆ ಹೆಚ್ಚುತ್ತಲೇ ಇದ್ದಾರೆ. ರಾತ್ರಿಯಿಡೀ ಕುಳಿತು ನೋಡುವವರಿಲ್ಲದೇ ಇರುವುದು ಅವರವರ ಕೆಲಸದ ಒತ್ತಡಗಳಿಂದ, ಸಾಮಾಜಿಕ ಜಾಲತಾಣಗಳಿಂದ ಸುಲಭದಲ್ಲಿ ಯಕ್ಷಗಾನ ವೀಕ್ಷಣೆ ಸಾಧ್ಯವಾಗಿರುವುದರಿಂದ ಅಷ್ಟೇ... ಬಾಹ್ಯ ಶ್ರೀಮಂತಿಕೆಯಿಂದ ಮೌಢ್ಯತೆ ಆವರಿಸದೇ... ಹೃದಯ ಶ್ರೀಮಂತಿಕೆಯಿಂದ ಯಕ್ಷಗಾನ ಇನ್ನಷ್ಟು ಎತ್ತರಕ್ಕೇರಲಿ ಎಂಬ ಆಶಯ.


ಶ್ರೀಯುತ ಬೆಳ್ಳಾರೆ ಮಂಜುನಾಥ್ ಭಟ್ ಇವರು ಕೆ. ಅದಿತಿ ಎಂ. ಭಟ್ ಇವರನ್ನು ವಿವಾಹವಾಗಿ ಮೂವರು ಮಕ್ಕಳ ಸುಖೀ ಸಂಸಾರ ಇವರದು. ಮಗಳು ಸಾಯಿಸುಮಾ ಎಂ. ನಾವಡ, ಅಳಿಯ ಮಿಥುನ್ ರಾಜ್ ನಾವಡ, ಗಂಡು ಮಕ್ಕಳು ಶ್ರೀ ಹರಿ ಶರ್ಮ, ಶ್ರೀ ರಾಮ ಶರ್ಮ. ಮಗಳು ಸಾಯಿಸುಮಾ ಎಂ. ನಾವಡ ಇವರು ಹವ್ಯಾಸಿ ಯಕ್ಷಗಾನ ಕಲಾವಿದರು, ವೃತ್ತಿಯಲ್ಲಿ  ಉಪನ್ಯಾಸಕರು. ಗಂಡು ಮಕ್ಕಳೀರ್ವರೂ ಯಕ್ಷಗಾನ ಹಿಮ್ಮೇಳ ಅಭ್ಯಾಸ ಮಾಡುತ್ತಿದ್ದಾರೆ.


ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು‌ ಒದಗಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.

-ಶ್ರವಣ್ ಕಾರಂತ್, ಕೆ

ಸುಪ್ರಭಾತ

ಶಕ್ತಿನಗರ ಮಂಗಳೂರು.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 تعليقات

إرسال تعليق

Post a Comment (0)

أحدث أقدم