|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ದಾಳಿಂಬೆ ಹಣ್ಣೆಂಬ ಹಣ್ಣುಗಳ ರಾಜ; ಔಷಧೀಯ ಗುಣಗಳ ಭಂಡಾರ

ದಾಳಿಂಬೆ ಹಣ್ಣೆಂಬ ಹಣ್ಣುಗಳ ರಾಜ; ಔಷಧೀಯ ಗುಣಗಳ ಭಂಡಾರ


ದಾಳಿಂಬೆ ಒಂದು ಅದ್ಬುತವಾದ ಹಣ್ಣು ಎಂದರೆ ತಪ್ಪಾಗಲಾರದು. ಮುತ್ತುಗಳಂತಹ ಕೆಂಪು ಬೀಜಗಳನ್ನು ಹೊಂದಿರುವ ದಾಳಿಂಬೆ ಹಣ್ಣನ್ನು ಸೃಷ್ಟಿಯ ಅದ್ಬುತವೆಂದೇ ಹೇಳಬಹುದಾಗಿದೆ. ಇದೊಂದು ಹಣ್ಣಿನ ರೂಪದಲ್ಲಿ ಇರುವ ಔಷಧಿಯ ಖಜಾನೆ ಎಂದರೂ ಅತಿಶಯೋಕ್ತಿಯಾಗಲಾರದು, ಯಾಕೆಂದರೆ ಈ ಹಣ್ಣಿನಲ್ಲಿ ಸಾಕಷ್ಟು ವಿಟಮಿನ್‍ಗಳು, ಪೋಷಕಾಂಶಗಳು, ಆಂಟಿಆಕ್ಸಿಡೆಂಟ್‍ಗಳು ಮತ್ತು ಇತರ ಖನಿಜಗಳು ಇರುವುದರಿಂದ ಆರೋಗ್ಯಕ್ಕೆ ಅತೀ ಉತ್ತಮವಾದ ಹಣ್ಣು ಎಂದೂ ಸಾಬೀತಾಗಿದೆ. ಇದರಲ್ಲಿರುವ ಔಷಧಿ ಗುಣಗಳ ಕಾರಣದಿಂದಾಗಿ ಈ ಹಣ್ಣನ್ನು ಹಣ್ಣುಗಳ ರಾಜ ಎಂದು ಕೆಲವರು ಸಂಬೋಧಿಸುತ್ತಾರೆ. ಬಾಳೆ ಹಣ್ಣಿನಷ್ಟು ಸಲೀಸಾಗಿ ಈ ಹಣ್ಣನ್ನು ತಿನ್ನಲು ಸಾಧ್ಯವಿಲ್ಲದ ಕಾರಣ ಹೆಚ್ಚಿನ ಜನರು ಈ ಹಣ್ಣನ್ನು ತಿನ್ನಲು ಇಷ್ಟಪಡುವುದಿಲ್ಲ. ಆದರೆ ಇದರಲ್ಲಿರುವ ಔಷಧೀಯ ಗುಣ ಮತ್ತು ಪೋಷಕಾಂಶಗಳನ್ನು ಗಣನೆಗೆ ತೆಗೆದುಕೊಂಡಲ್ಲಿ ಈ ಹಣ್ಣನ್ನು ತಿನ್ನಲು ಶ್ರಮ ವಹಿಸಿದರೆ ಸಾರ್ಥಕ ಎಂಬುದಂತೂ ನಿತ್ಯ ಸತ್ಯ.


ಈ ದಾಳಿಂಬೆ ಹಣ್ಣನ್ನು ನಮ್ಮ ಪುರಾತನ ಗ್ರಂಥಗಳಲ್ಲಿ ದೈವಿಕ ಹಣ್ಣು ಎಂದು ಸಂಭೋದಿಸಲಾಗಿದೆ. ಈ ಹಣ್ಣಿನಲ್ಲಿರುವ ಆಂಟಿ ಕ್ಯಾನ್ಸರ್ ಗುಣಗಳು, ಆಂಟಿ ವೈರಲ್ ಗುಣಗಳು ಮತ್ತು ಆಂಟಿ ಆಕ್ಸಿಡೆಂಟ್ ಗುಣಗಳಿಂದಾಗಿ ಈ ಅನ್ವರ್ಥನಾಮ ಬಂದಿರುತ್ತದೆ. ಈ ಹಣ್ಣಿನಲ್ಲಿರುವ ಹೇರಳವಾದ ವಿಟಮಿನ್ ‘ಸಿ’, ‘ಎ’ ಮತ್ತು ‘ಇ’ ಮತ್ತು ಪೋಲಿಕ್ ಆಸಿಡ್‍ನಿಂದಾಗಿ ದಾಳಿಂಬೆ ಹಣ್ಣು ರೋಗ ನಿರೋಧಕ ಶಕ್ತಿ ಹೆಚ್ಚಿಸಿ ದೇಹವನ್ನು ರಕ್ಷಿಸುತ್ತದೆ. ಒಂದು ಕಪ್ ‘ಗ್ರೀನ್ ಟಿ’ ಅಥವಾ ಒಂದು ಗ್ಲಾಸ್ ವೈನ್‍ನಲ್ಲಿರುವ ಆಂಟಿ ಆಕ್ಸಿಡ್‍ಗಳಿಗಿಂತ ಮೂರು ಪಟ್ಟು ಜಾಸ್ತಿ ಆಂಟಿ ಆಕ್ಸಿಡೆಂಟ್ ಒಂದು ಕಪ್ ದಾಳಿಂಬೆ ಜ್ಯೂಸ್‍ನಲ್ಲಿದೆ. ರಕ್ತದೊತ್ತಡ ನಿಯಂತ್ರಣ, ಮಧುಮೇಹ ನಿಯಂತ್ರಣ, ಚರ್ಮದ ಕಾಂತಿ ಬೆಳಗಲು, ಸಂದಿವಾತ ತಪ್ಪಿಸಲು, ಉರಿಯೂತ ತಡೆಯಲು, ಜೀರ್ಣಕ್ರಿಯೆಗೆ ಸಹಕರಿಸಲು ಹೀಗೆ ಹತ್ತು ಹಲವು ದೈಹಿಕ ಕ್ರಿಯೆಗೆ ದಾಳಿಂಬೆ ಪೂರಕವಾದ ವಾತಾವರಣ ಕಲ್ಪಿಸುತ್ತದೆ.


ಪ್ರಯೋಜನಗಳು ಏನು?

1. ಇತರ ಎಲ್ಲಾ ಜ್ಯೂಸ್‍ಗಳಿಗಿಂತ ದಾಳಿಂಬೆ ಜ್ಯೂಸ್‍ನಲ್ಲಿ ಅತೀ ಹೆಚ್ಚು ಆಂಟಿ ಆಕ್ಸಿಡೆಂಟ್ ಇದೆ. ಈ ಆಂಟಿ ಆಕ್ಸಿಡೆಂಟ್‍ಗಳು ಜೀವಕೋಶಗಳ ಪ್ರೀ ರ್ಯಾಡಿಕಲ್‍ಗಳನ್ನು ನಾಶಮಾಡಿ ಜೀವಕೋಶಗಳಿಗೆ ಹಾನಿಯಾಗದಂತೆ ರಕ್ಷಿಸಿ ಉರಿಯೂತವನ್ನು ಕಡಿಮೆ ಮಾಡುತ್ತದೆ. ದಾಳಿಂಬೆ ಬೀಜಗಳಿಗೆ ಕಡು ಕೆಂಪು ಬಣ್ಣ ಬರಲು ಅದರಲ್ಲಿರುವ ಪೋಲಿಪಿನಾಲ್ ಎಂಬ ರಾಸಾಯನಿಕಗಳೇ ಕಾರಣವಾಗಿರುತ್ತದೆ. ಇದು ಬಹು ಶಕ್ತಿಶಾಲಿ ಆಂಟಿ ಆಕ್ಸಿಡೆಂಟ್ ಆಗಿರುತ್ತದೆ. ಅದೇ ರೀತಿ ದಾಳಿಂಬೆ ರಸದಲ್ಲಿ ನೂರಕ್ಕೂ ಹೆಚ್ಚು ಪೈಟೋ ರಾಸಾಯನಿಕಗಳು ಇದ್ದು ದೇಹದ ರಕ್ಷಣಾ ಶಕ್ತಿಯನ್ನು ಪಕ್ವ ಗೊಳಿಸುತ್ತದೆ.




2. ನಮ್ಮ ದೇಹಕ್ಕೆ ಬೇಕಾದ ವಿಟಮಿನ್ ‘ಸಿ’ ಯ 50 ಶೇಕಡಾ ಸರಬರಾಜು ಕೇವಲ ಕಪ್ ದಾಳಿಂಬೆ ರಸದಲ್ಲಿ ಇರುತ್ತದೆ. ಆದರೆ ದಾಳಿಂಬೆ ಜ್ಯೂಸನ್ನು ಶೀತಲೀಕರಣ ಮಾಡಿದಲ್ಲಿ ವಿಟಮಿನ್ ‘ಸಿ’ ಪೂರ್ತಿಯಾಗಿ ಸಿಗುವುದಿಲ್ಲ. ಈ ಕಾರಣದಿಂದ ತಾಜಾ ದಾಳಿಂಬೆ ರಸ ಕುಡಿಯುವುದು ಉತ್ತಮ. ಅತೀ ಹೆಚ್ಚು ವಿಟಮಿನ್ ‘ಸಿ’ ಇರುವ ಕಾರಣ ದೇಹದ ಗಾಯ ಒಣಗಲು, ರಕ್ಷಣಾ ಶಕ್ತಿ ವೃದ್ದಿಸಲು ಮತ್ತು ಸೋಂಕು ತಪ್ಪಿಸಲು ಸಹಾಯಕಾರಿ ಎಂದು ತಿಳಿದು ಬಂದಿದೆ.


3. ಕ್ಯಾನ್ಸರ್ ತಡೆಗಟ್ಟುವಲ್ಲಿ ದಾಳಿಂಬೆ ರಸ ಮಹತ್ವದ ಭೂಮಿಕೆ ವಹಿಸುತ್ತದೆ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ. ಪ್ರೋಟಿನ್ ಕ್ಯಾನ್ಸರ್ ತಡೆಯುವಲ್ಲಿ ದಾಳಿಂಬೆ ರಸದ ಪಾತ್ರದ ಬಗ್ಗೆ ಸಂಶೋಧನೆ ನಡೆಯುತ್ತಿದೆ. ದಾಳಿಂಬೆಯಿಂದ ಹೇರಳ ಆಂಟಿ ಆಕ್ಸಿಡೆಂಟ್ ಮತ್ತು ವಿಟಮಿನ್‍ಗಳಿಂದಾಗಿ ಈ ಗುಣ ಬಂದಿರಬಹುದು ಎಂದು ಅಂದಾಜಿಸಲಾಗಿದೆ.


4. ನಿರಂತರವಾಗಿ ದಾಳಿಂಬೆ ರಸ ಕುಡಿಯುವುದರಿಂದ ಮೆದುಳು ನೆನಪಿನ ಶಕ್ತಿ ವೃದ್ಧಿಸುತ್ತದೆ ಮತ್ತು ಆಲ್‍ಝೈಮರ್ ರೋಗ ಬರದಂತೆ ತಡೆಗಟ್ಟುತ್ತದೆ ಎಂದು ವೈದ್ಯರು ಅಂದಾಜಿಸಿದ್ದಾರೆ. ಒಟ್ಟಿನಲ್ಲಿ ತಾಜಾ ದಾಳಿಂಬೆ ರಸ ಮತ್ತು ಹಲವು ರೋಗ ಬರದಂತೆ ತಡೆಯುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ

5. ದಾಳಿಂಬೆ ರಸ ಕರುಳಿನ ಉರಿಯೂತವನ್ನು ನಿಯಂತ್ರಿಸಿ, ಜೀರ್ಣಪ್ರಕ್ರಿಯೆಯನ್ನು ಸರಳವಾಗಿಸುತ್ತದೆ. ಕರುಳಿನ ಕ್ರೋನ್ಸ್ ಡಿಸೀಸ್ ಮತ್ತು ಕರುಳು ಕಿರಿಕಿರಿ ಕಾಯಿಲೆಗಳಿಗೆ ದಾಳಿಂಬೆ ರಸ ರಾಮಬಾಣವಾಗಿರುತ್ತದೆ ಎಂದು ತಿಳಿದು ಬಂದಿದೆ. ದಾಳಿಂಬೆಯಲ್ಲಿರುವ ಹೆಚ್ಚಿನ ಆ್ಯಂಟಿ ಅಕ್ಸಿಡೆಂಟ್‍ನಿಂದಾಗಿ ಬಹಳ ಶಕ್ತಿಶಾಲಿ ಉರಿಯೂತ ನಿಯಂತ್ರಣ ಈ ರಸಕ್ಕಿದೆ ಎಂದು ಅಂದಾಜಿಸಲಾಗಿದೆ ಮತ್ತು ಜೀವಕೋಶಗಳಿಗೆ ಆಗುವ ಹಾನಿಯನ್ನು ನಿಯಂತ್ರಿಸಿ ಉರಿಯೂತವನ್ನು  ಕಡಿಮೆಗೊಳಿಸುತ್ತದೆ.


6. ಪ್ಲೋವೋನಾಲ್ ಎಂಬ ರಾಸಾಯನಿಕ ದಾಳಿಂಬೆ ರಸದಲ್ಲಿ ಹೇರಳವಾಗಿದೆ. ಇದು ಗಂಟುಗಳ  ಉರಿಯೂತ, ಅರ್ಥೈಟಿಸ್, ಟೊಳ್ಳು ಮೂಳೆ ರೋಗ ಮತ್ತು ಇತರ ಗಂಟುನೋವುಗಳನ್ನು ನಿಯಂತ್ರಿಸುತ್ತದೆ ಎಂದು ತಿಳಿದು ಬಂದಿದೆ.


7. ದಾಳಿಂಬೆ ರಸ ಹೃದಯದ ಆರೋಗ್ಯಕ್ಕೆ ಪೂರಕವಾಗಿರುತ್ತದೆ. ದಾಳಿಂಬೆ ರಸ ಸಣ್ಣ ಸಣ್ಣ ರಕ್ತನಾಳಗಳಲ್ಲಿ ರಕ್ತದ ಚಲನೆಯನ್ನು ಸರಾಗವಾಗುವಂತೆ ಮಾಡುತ್ತದೆ. ರಕ್ತನಾಳಗಳು ಪೆಡಸುಗೊಳ್ಳದಂತೆ ತಡೆಯುತ್ತದೆ ಮತ್ತು ರಕ್ತನಾಳದೊಳಗೆ  ಕೊಲೆಸ್ಟ್ರಾಲ್ ಶೇಖರಣೆಯಾಗದಂತೆ ತಡೆಯುತ್ತದೆ. ಆದರೆ ನೆನಪಿರಲಿ, ದಾಳಿಂಬೆ ರಸದಲ್ಲಿರುವ ರಾಸಾಯನಿಕಗಳು ರಕ್ತದೊತ್ತಡ ನಿಯಂತ್ರಿಸುವ ಔಷಧಿ ಮತ್ತು ಕೊಲೆಸ್ಟ್ರಾಲ್ ನಿಯಂತ್ರಿಸುವ  ಔಷಧಿಗಳ ಜೊತೆ ಋಣಾತ್ಮಕವಾಗಿ ಸ್ಪಂದಿಸಬಹುದು. ಈ ಕಾರಣದಿಂದ ವೈದ್ಯರ ಸಲಹೆ ಇಲ್ಲದೆ ಅತಿಯಾದ ದಾಳಿಂಬೆ ರಸ ಸೇವಿಸುವುದು ಸೂಕ್ತವಲ್ಲ. ದಾಳಿಂಬೆ ರಸ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ ಎಂದು ತಿಳಿದುಬಂದಿದೆ.


8. ದಾಳಿಂಬೆ ರಸದಲ್ಲಿನ ವಿಟಮಿನ್ ಸಿ ಮತ್ತು ವಿಟಮಿನ್ ಇ ಯಿಂದಾಗಿ ಆಂಟಿ ವೈರಲ್ ಮತ್ತು ಆಂಟಿ  ಬ್ಯಾಕ್ಟೀರಿಯಾ ಗುಣ ಹೊಂದಿದೆ. ಸಣ್ಣ ಪುಟ್ಟ ಸೋಂಕು ನಿಯಂತ್ರಿಸುವಲ್ಲಿ  ಇದು ಪರಿಣಾಮಕಾರಿ  ಎಂದು ತಿಳಿದು ಬಂದಿದೆ.


9. ದಾಳಿಂಬೆ ರಸದಲ್ಲಿ ವಿಟಮಿನ್ ಸಿ, ಇ, ಜೊತೆಗೆ ಪೋಲಿಕ್ ಆಸಿಡ್, ಪೊಟ್ಯಾಸಿಯಂ ಮತ್ತು ವಿಟಮಿನ್ ಇ ಹೇರಳವಾಗಿದೆ. ನೆನಪಿರಲಿ ದಾಳಿಂಬೆ ರಸಕ್ಕೆ ಸಕ್ಕರೆ ಸೇವಿಸಬೇಡಿ ಮತ್ತು ಯಾವತ್ತೂ ತಾಜಾ ದಾಳಿಂಬೆ ರಸವನ್ನು ಉಪಯೋಗಿಸಿ.


10. ದಾಳಿಂಬೆ ರಸವನ್ನು ನಿಯಮಿತವಾಗಿ ಸೇವಿಸುವುದರಿಂದ ರಸದೂತ ಟೆಸ್ಟೋ ಸ್ಟೀರಾನ್ ಮತ್ತು ರಸದೂತ ಪ್ರಾಜೆಸ್ಟೆರೋನ್ ಸಾಂಧ್ರತೆಯನ್ನು ವೃದ್ಧಿಸುತ್ತದೆ ಮತ್ತು ಆ ಮೂಲಕ ಗರ್ಭಧರಿಸುವ ಫಲವತ್ತತೆಯನ್ನು ಹೆಚ್ಚಿಸುತ್ತದೆ ಎಂದೂ ತಿಳಿದು ಬಂದಿದೆ.


11. ಮಧುಮೇಹಿ ರೋಗಿಗಳು ದಾಳಿಂಬೆ ರಸ ಸೇವನೆಯಿಂದ ಇನ್ಸುಲಿನ್ ಪ್ರತಿರೋಧತೆಯನ್ನು ಕಡಿಮೆಗೊಳಿಸಿ,  ರಕ್ತದಲ್ಲಿನ ಸಕ್ಕರೆ ಅಂಶವನ್ನು ನಿಯಂತ್ರಿಸುತ್ತದೆ ಎಂದೂ ತಿಳಿದು ಬಂದಿದೆ.


12. ದಾಳಿಂಬೆ ರಸ ದಂತ ಆರೋಗ್ಯಕ್ಕೂ ಪೂರಕವೆಂದು ತಿಳಿದು ಬಂದಿದೆ. ಇದರಲ್ಲಿರುವ ಆಂಟಿ ವೈರಸ್ ಮತ್ತು ಆಂಟಿ ಬ್ಯಾಕ್ಟೀರಿಯಾ ಗುಣಗಳಿಂದಾಗಿ ವಸಡಿನ ರೋಗಗಳು ಮತ್ತು ಬಾಯಿಯಲ್ಲಿನ ಉರಿಯೂತವನ್ನು ನಿಯಂತ್ರಿಸುತ್ತದೆ.  ಪಯೋರಿಯಾ ರೋಗವನ್ನು ಬರದಂತೆ  ತಡೆಯುತ್ತದೆ ಎಂದು ಅಂದಾಜಿಸಲಾಗಿದೆ.


13. ಒಂದು ಕಪ್ ದಾಳಿಂಬೆ ಬೀಜದಲ್ಲಿ ಸುಮಾರು  30 mg ನಷ್ಟು ವಿಟಮಿನ್ ಸಿ, 35 mg ನಷ್ಟು ವಿಟಮಿನ್ ಇ, 8 mg ನಷ್ಟು ಪೊಟ್ಯಾಸಿಯಂ, 7 gram ನಷ್ಟು ನಾರು, 3 gram ನಷ್ಟು ಪ್ರೋಟೀನ್, 10 mg ನಷ್ಟು ಪೊಲಿಕ್ ಆಸಿಡ್, 24 gram ನಷ್ಟು ಸಕ್ಕರೆ, ಹೀಗೆ ಸುಮಾರು 150 ಕ್ಯಾಲರಿ ಶಕ್ತಿ ಇರುತ್ತದೆ. ಒಟ್ಟಿನಲ್ಲಿ ದಾಳಿಂಬೆ ಬೀಜ ಮತ್ತು ತಾಜಾ ರಸ ಎನ್ನುವುದು ಪ್ರೊಟೀನ್, ವಿಟಮಿನ್, ಖನಿಜ ಮತ್ತು ಪೋಷಕಾಂಶಗಳ ಖನಿಜ ಎಂದರೂ ತಪ್ಪಾಗಲಾರದು.


14. ಇತರ ಆಲ್ಕೋಹಾಲ್ ಇರುವ ಬಾಯಿ ಮುಕ್ಕಳಿಸುವ ಔಷಧಿಗಿಂತ ದಾಳಿಂಬೆ ರಸದಿಂದ ಬಾಯಿ ಮುಕ್ಕಳಿಸುವುದರಿಂದ ಹಲ್ಲಿನ ಸುತ್ತ ಪಾಚಿ ಕಟ್ಟಿಕೊಂಡಿರುವುದು 85 ಶೇಕಡಾದಷ್ಟು ಕಡಿಮೆಯಾಗಿದೆ ಎಂದು ತಿಳಿದು ಬಂದಿದೆ. ಈ ಮೂಲಕ ಉರಿಯೂತ, ವಸಡಿನ ತೊಂದರೆ ಮತ್ತು ಪಯೋರಿಯಾ ಎಂಬ ರೋಗ ಬರದಂತೆ ತಡೆಯುತ್ತದೆ ಎಂದು ಅಂದಾಜಿಸಲಾಗಿದೆ.


15. ದೇಹದಲ್ಲಿನ ಮೂಳೆಗಳ ಆರೋಗ್ಯ ಮತ್ತು ಕಾರ್ಟಿಲೇಟ್‍ಗಳ ಆರೋಗ್ಯಕ್ಕೆ ದಾಳಿಂಬೆ ರಸ ಧನಾತ್ಮಕವಾಗಿ  ಸ್ಪಂದಿಸುತ್ತದೆ. ಎಲುಬುಗಳು ಶಕ್ತಿಯಾಗಿಸುತ್ತದೆ ಮತ್ತು ಟೆಂಡಾನ್ ಮತ್ತು ಕಾರ್ಟಿಲೇಜ್‍ಗಳ ಉರಿಯೂತ ನಿಯಂತ್ರಿಸಿ ಎಲುಬಿನ ಆರೋಗ್ಯವನ್ನು ಕಾಪಾಡುತ್ತದೆ ಎಂದು ಅಂದಾಜಿಸಲಾಗಿದೆ.


16. ದಾಳಿಂಬೆ ರಸದಲ್ಲಿನ ಹೆಚ್ಚಿನ ಆಂಟಿ ಆಕ್ಸಿಡೆಂಟ್‍ಗಳು ಮತ್ತು ವಿಟಮಿನ್ ಸಿ, ಮುಖದಲ್ಲಿ ಮೊಡವೆ ಬೀಳದಂತೆ ತಡೆಯುತ್ತದೆ. ಮೊಡವೆಗಳಲ್ಲಿನ ಉರಿಯೂತವನ್ನು ನಿಯಂತ್ರಿಸುತ್ತದೆ ಮತ್ತು ಮೊಡವೆಯ ಸಂಖ್ಯೆಯನ್ನು ಕಡಿಮೆಗೊಳಿಸುತ್ತದೆ. ಅದೇ ರೀತಿ ಕೂದಲಿನ ಆರೋಗ್ಯವನ್ನು ವೃದ್ಧಿಸುತ್ತದೆ. ರಕ್ತ ಪರಿಚಲನೆಯನ್ನು ಹೆಚ್ಚಿಸಿ ಕೂದಲು ಉದುರುವುದು ತಡೆಯುತ್ತದೆ ಮತ್ತು ಕೂದಲು ಬೆಳೆಯುವಂತೆ ಪ್ರೇರೇಪಿಸುತ್ತದೆ.


17. ದಾಳಿಂಬೆ ರಸದಲ್ಲಿರುವ ರಾಸಾಯನಿಕಗಳು  ಒಣ ಮತ್ತು ಬಿಳಿಚಿದ ಚರ್ಮಕ್ಕೆ ಕಾಂತಿ ನೀಡುತ್ತದೆ.  ವಿಟಮಿನ್ ಸಿ ಚರ್ಮಕ್ಕೆ ಹೆಚ್ಚಿನ ಕಾಂತಿ ಮತ್ತು ಶೋಭೆ ನೀಡುತ್ತದೆ. ತ್ವಚೆಗೆ ರಕ್ತ ಪರಿಚಲನೆಯನ್ನು ಹೆಚ್ಚಿಸಿ  ಉರಿಯೂತ ನಿಯಂತ್ರಿಸಿ ಚರ್ಮ ಬೆಳಗುವಂತೆ ಮಾಡುತ್ತದೆ.


ಕೊನೆಮಾತು: ಸಾವಿರಾರು ದಶಕಗಳಿಂದ ಜಾತಿ ಮತ ಬೇಧವಿಲ್ಲದೆ ಬಡವ ಬಲ್ಲಿದ ಎಂಬ ವಿಂಗಡಣೆ ಇಲ್ಲದೆ ಎಲ್ಲರೂ ದಾಳಿಂಬೆಯನ್ನು ಬಳಸುತ್ತಿದ್ದಾರೆ.  ಹೃದಯ ತೊಂದರೆ, ಮಧುಮೇಹ, ರಕ್ತದೊತ್ತಡ, ಎಲುಬಿನ ಆರೋಗ್ಯ ಹೀಗೆ ಹತ್ತು ಹಲವು ರೋಗಗಳಿಗೆ ಔಷಧಿಯಂತೆ ಬಳಸಿ, ರೋಗ ನಿಯಂತ್ರಿಸಲು ಬಳಸಲಾಗುತ್ತದೆ.  ಮೂಲತ: ಇರಾನ್ ದೇಶದಲ್ಲಿ  ಹುಟ್ಟಿದ ಹಣ್ಣು ಮೆಡಿಟರೇನಿಯನ್ ದೇಶಗಳು, ರಷ್ಯಾ, ಭಾರತ, ಬ್ರಿಟನ್, ಜಪಾನ್, ಅಮೆರಿಕಾ, ಅಫಘಾನಿಸ್ತಾನಗಳಲ್ಲಿ ಹೆಚ್ಚು ಬೆಳೆಯಲಾಗುತ್ತದೆ. ಹತ್ತು ಹಲವು ರಾಸಾನಿಕಗಳು  ಮತ್ತು  ಆಂಟಿ ಆಕ್ಸಿಡೆಂಟ್‍ಗಳಿಂದ ಫಲವತ್ತಾಗಿರುವ ಈ ದಾಳಿಂಬೆ ಹಣ್ಣನ್ನು ಸಾರ್ವತ್ರಿಕವಾಗಿಯೂ ಬಳಸುತ್ತಾರೆ. ಒಬ್ಬ ವ್ಯಕ್ತಿಯ ವೈವಾಹಿಕ ಬದುಕನ್ನು ಸುಗಮವಾಗಿಸಲು ಬೇಕಾದ ಸೆಕ್ಸ್ ವಾಂಛೆಯನ್ನು ಸುಗಮವಾಗಿಸುವ ಗುಣ ಹೊಂದಿರುವ ದಾಳಿಂಬೆ ಹಣ್ಣನ್ನು ಹಿಂದಿನ ಕಾಲದಲ್ಲಿ ‘ನೈಸರ್ಗಿಕ ವಯಾಗ್ರ’ ಎಂದೂ ಕೆಲವರು ಸಂಭೋದಿಸುತ್ತಾರೆ.


ಒಟ್ಟಿನಲ್ಲಿ ಹತ್ತು ಹಲವು ರೋಗಗಳನ್ನು ನಿಯಂತ್ರಿಸುವ ಮತ್ತು ರೋಗ ಬರದಂತೆ ತಡೆಯುವ ವಿಶೇಷ ಸಾಮರ್ಥ್ಯ  ಇರುವ ಈ ದಾಳಿಂಬೆ ಹಣ್ಣನ್ನು ಸೇವಿಸುವುದರಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯ  ವೃದ್ದಿಸುವುದಂತೂ ಸತ್ಯವಾದ ಮಾತು.


-ಡಾ|| ಮುರಲೀ ಮೋಹನ್ ಚೂಂತಾರು

BDS, MDS, DNB, MOSRCSEd (U.K), FPFA, M.B.A

ಸುರಕ್ಷಾದಂತ ಚಿಕಿತ್ಸಾಲಯ

ಹೊಸಂಗಡಿ – 671 323

ಮೊ: 9845135787


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 تعليقات

إرسال تعليق

Post a Comment (0)

أحدث أقدم