ನಮ್ಮ ರಾಜಕೀಯಕ್ಕೂ ರಾಜಕಾರಣಿಗಳಿಗೂ ಬಲವಾಗಿ ಅಂಟಿಕೊಂಡಿರುವ ಪದಗಳೆಂದರೆ "ಪರ್ಸೆಂಟೇಜ್' ರಾಜಕಾರಣ ಮತ್ತು "ಕಮಿಷನ್' "ರಾಜಕಾರಣ. ಒಟ್ಟಿನಲ್ಲಿ ಇದೊಂದು ಭ್ರಷ್ಟಾಚಾರದ ಲಂಚ ವಸೂಲಿ ರಾಜಕಾರಣಕ್ಕೆ ಇರುವ ಪರ್ಯಾಯ ಪದಗಳು. ಇದು ಅಧಿಕಾರ ಎಂಬ ರಾಜಕಾರಣದ ಜೊತೆಗೇನೆ ಹುಟ್ಟಿಕೊಂಡು ಬಂದಿರುವ ರಕ್ತದ ಗುಣವೂ ಹೌದು. ಇಂದಿರಾ ಗಾಂಧಿ ಹೇಳಿದ ಹಾಗೆ ಭ್ರಷ್ಟಾಚಾರ ಅನ್ನುವುದು "ವಿಶ್ವವ್ಯಾಪಿ ಕಾಯಿಲೆ". ಇದು ಯಾರನ್ನು ಬಿಟ್ಟಿಲ್ಲ. ಕೆಲವರಿಗೆ ಹೆಚ್ಚು ಕೆಲವರಿಗೆ ಕಡಿಮೆ ಅಷ್ಟೇ. ಇದೊಂದು ರುಚಿ ಇಲ್ಲದೇ ಇದ್ದರೆ ಯಾರಿಗೆ ಬೇಕು ನಿಮ್ಮ ಅಧಿಕಾರ ಎಂಬ ರಾಜಕಾರಣ. ಗ್ರಾಮ ಪಂಚಾಯತ್ ನಿಂದ ಹಿಡಿದು ರಾಷ್ಟ್ರ ರಾಜಕಾರಣದ ತನಕ ಯಾರನ್ನು ಬಿಟ್ಟಿಲ್ಲ ಈ ಶಾಪ. ಪಾಪ ಒಬ್ಬಿಬ್ಬರು ಅಲ್ಲಿಯೊ ಇಲ್ಲಿಯೇೂ ಇದರಿಂದ ಸಂಪೂರ್ಣ ದೂರವಿರಬಹುದು. ಆದರೆ ಅವರ ಹೆಸರಿನಲ್ಲಿಯೇ ಅಧಿಕಾರಕ್ಕೆ ಬಂದವರು ಮತ್ತೆ ಅವರ ಹೆಸರಿನಲ್ಲಿಯೇ ಇದೇ ಭ್ರಷ್ಟಾಚಾರದ ಕೂಪದಲ್ಲಿ ಒದ್ದಾಡುವುದೆಂದರೆ ಇದರ ಶಾಪ ಆ ಕಲ್ಲಿನ ಮೂರ್ತಿಗೂ ತಗಲಬಹುದು ಅನ್ನುವ ಅರಿವು ಮೂರ್ತಿ ಆರಾಧಕರಿಗೂ ಇರಲೇ ಬೇಕು. ಇದು ದೇವರಿಗೆ ಮೇೂಸ ಮಾಡಿದ ಹಾಗೆ. ಅಲ್ವೇ?
ಕಾಂಗ್ರೆಸ್ ಪಕ್ಷದ ಮಾಧ್ಯಮ ಸಂಯೇೂಜಕರಾದ ಸಲೀಂ ಮತ್ತು ಉಗ್ರಪ್ಪನವರು ಪತ್ರಿಕಾಗೇೂಷ್ಠಿ ಕರೆದು ಬಿಜೆಪಿಯ ಭ್ರಷ್ಟಾಚಾರದ ಬಗ್ಗೆ ಹೇಳಬೇಕೆನ್ನುವ ಪೂರ್ವ ತಯಾರಿಕೆಯ ಮುನ್ನ ತಮ್ಮ ಪಕ್ಷದ ಭ್ರಷ್ಟಾಚಾರ ಬಗ್ಗೆ ಆತ್ಮಾವಲೇೂಕನ ಮಾಡಿಕೊಳ್ಳುವ ಸಂದರ್ಭದಲ್ಲಿ ತಮ್ಮ ಮುಂದೆ ಮಾಧ್ಯಮಗಳ ಮೈಕಾಸುರ ಬಾಯಿ ತೆರೆದು ಕೊಂಡಿದ್ದು ಗಮನಕ್ಕೆ ಬಾರದೆ ತಮ್ಮ ಪಕ್ಷದ ಅಧ್ಯಕ್ಷರ ಕಮಿಷನ್ ರಾಜಕಾರಣದ ಬಗ್ಗೆ ಬಾಯಿ ಬಿಚ್ಚಿಕೊಂಡಿದ್ದು ಮಾತ್ರ ರಾಷ್ಟ್ರವ್ಯಾಪಿಯಾಗಿ ಸುದ್ದಿ ಯಾಗಿರುವುದಂತೂ ಸತ್ಯ. ಇದು ಬರೇ ಡಿಕೆಶಿಯವರಿಗೆ ಮಾತ್ರವಲ್ಲ ಇಡೀ ಕಾಂಗ್ರೆಸ್ ಪಕ್ಷಕ್ಕೆ ಮುಜುಗುರ ತಂದಿರುವುದಂತೂ ನೂರಕ್ಕೆ ನೂರು ಸತ್ಯ.
ಹಾಗಾದರೆ ಸಲಿಂ ಮತ್ತು ಉಗ್ರಪ್ಪ ಮಹಾಶಯರ ಬಾಯಿಯಿಂದ ಹೊರಗೆ ಬಂದ ಸ್ವಗತ ರೂಪದ ಮಾತಿನಲ್ಲಿ ಏನಾದರೂ ತಪ್ಪುಂಟೇ? ಖಂಡಿತವಾಗಿಯೂ ಇಲ್ಲ. ಇದು ಬರೇ ಕಾಂಗ್ರೆಸ್ ಪಕ್ಷಕ್ಕೆ ಸಂಬಂಧಿಸಿದ ಮಾತಲ್ಲ ಪ್ರತಿಯೊಂದು ಪಕ್ಷದ ಪ್ರತಿಯೊಬ್ಬ ಜನಪ್ರತಿನಿಧಿ ಎದೆ ಮುಟ್ಟಿ ಪ್ರಮಾಣೀಕರಿಸಿ ಕೊಳ್ಳಬೇಕಾದ ಮಾತು. ಆ ದೇವರೇ ದೇವರನ್ನು ನಂಬದ ಪೆಡಂಭೂತಗಳ ಬಾಯಿಯಲ್ಲಿ ಹೊರಗೆ ಹಾಕಿದ್ದು ಮಾತ್ರ ಕಾಲದ ಮಹಿಮೆಯೇ ಸರಿ. ಇದು ಕಮಿಷನ್ ರಾಜಕೀಯ ಏಜೆಂಟರುಗಳ ಬಗ್ಗೆ ಮತ್ತೆ ಜಾಗ್ರತೆ ವಹಿಸಬೇಕಾದ ಸಂದರ್ಭ ಸೃಷ್ಟಿ ಮಾಡಿದೆ. ಹಾಗಂತ ಇದು ರಾಜಕಾರಣಿಗಳ ಭವಿಷ್ಯದ ಮೇಲೆ ಪ್ರಭಾವ ಬೀರುತ್ತದೆ ಅನ್ನುವುದು ನನ್ನ ಅಭಿಪ್ರಾಯವಲ್ಲ. ರಾಜಕೀಯ ವಲಯದಲ್ಲಿ ಚರ್ಚೆಗಂತೂ ಅವಕಾಶ ಮಾಡಿಕೊಟ್ಟಿದೆ.
ಈ ಕಮಿಷನ್ ಪರ್ಸೆಂಟೇಜ್ ನಡೆದಾಗಲೇ ಅಭಿವೃದ್ಧಿ ಕಾರ್ಯಗಳು ಜಾಸ್ತಿ ನಡೆಯುವುದು ಅನ್ನುವ ಸತ್ಯ ನಮಗೂ ಗೊತ್ತಿದೆ ನಮ್ಮ ರಾಜಕಾರಣಿಗಳು ತಿಳಿದಿದೆ ನಮ್ಮ ಅಧಿಕಾರಗಳು ಇದನ್ನೆ ಬಯಸುವುದು. ಒಟ್ಟಿನಲ್ಲಿ ನಮಗೆ ಅಭಿವೃದ್ಧಿ ಕಾರ್ಯ ನಡೆದರಾಯಿತು. ಕೆಲವು ಪ್ರಾಮಾಣಿಕ ರಾಜಕಾರಣಿಗಳು ಇದನ್ನೂ ಕೂಡಾ ಮಾಡುವುದಿಲ್ಲ ಹಾಗಾಗಿ ಅವರು ಚುನಾವಣೆಯಲ್ಲಿ ಸೇೂಲು ಅನುಭವಿಸುವುದು. ಅಂದರೆ ಇನ್ನೊಂದು ಅರ್ಥದಲ್ಲಿ ನಾವು ಬಯಸುವುದು ಈ ಕಮಿಷನ್ ರಾಜಕಾರಣಿಗಳನ್ನೆ! ಅಲ್ವೇ?
ಈ ನಮ್ಮ ರಾಜಕಾರಣವನ್ನು ಕಮಿಷನ್ ರಾಜಕಾರಣವನ್ನಾಗಿ ಬೆಳೆಸಿದ್ದು ಯಾರು? ನಾವೇ ಅಲ್ಲವೇ? ಚುನಾವಣೆ ಯಲ್ಲಿ ಹಣ ಚೆಲ್ಲಿದರೆ ಮಾತ್ರ ಗೆದ್ದು ಬರಲು ಸಾಧ್ಯ. ಇದನ್ನು ಕಲಿಸಿಕೊಟ್ಟವರು ಪ್ರಬುದ್ಧ ಮತದಾರರಾದ ನಾವು ತಾನೇ? ಹಾಗಾಗಿ ಹೊಳೆಯ ನೀರನ್ನು ಹೊಳೆಗೆ ಚೆಲ್ಲುವ ಕೆಲಸವನ್ನು ನಮ್ಮ ರಾಜಕಾರಣಿಗಳು ಮಾಡಲೇ ಬೇಕಾಗಿದೆ. ಅಂದರೆ ಮೊದಲು ದುರಸ್ತಿ ಆಗಬೇಕಾದದ್ದು ನಾವುಗಳು ಹೊರತು ಕಮಿಷನ್ ರಾಜಕಾರಣಿಗಳಲ್ಲ ಅನ್ನುವ ಸತ್ಯ ನಮಗೆ ತಿಳಿದಿರಲೇ ಬೇಕು.
ಒಂದಂತೂ ಸತ್ಯ ಕಮಿಷನ್ ರಾಜಕಾರಣದ ಬಗ್ಗೆ ಬಾಯಿ ತೆರೆದು ಕೊಂಡವ ಶಾಪಗ್ರಸ್ತ! ಬಾಯಿ ಮುಚ್ಚಿ ಕೊಂಡವ ಸಂಭಾವಿತ! ಇದು ಇಂದಿನ ನಮ್ಮ ರಾಜಕೀಯ ವಸ್ತುಸ್ಥಿತಿ! ಇದರಲ್ಲಿ ಯಾರು ಹಿತವರು ನಿಮಗೆ ನೀವೇ.. ಆಲೇೂಚನೆ ಮಾಡಿ?
-ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಉಡುಪಿ
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ