*******
ಜೀವ ಕೋಟಿಯನು ಸಲಹುತ್ತಿಹುದು
ಅನಾದಿಯಿಂದಲು ಭೂಗೋಲ
ಸಾವಿರ ಸಾವಿರ ಜೀವರಾಶಿಯಲಿ
ಕೊನೆಯಲಿ ಬಂದುದೆ ಮನುಜಕುಲ.
ಜೀವದ ಸೃಷ್ಟಿಗೆ ಜೀವೋತ್ಕರ್ಷಕೆ
ವಸುಧೆಯು ನೀಡಿದ ವಾಯು ಜಲ
ಜತನದಿ ಕಾಯುತ ಮಲಿನವ ಮಾಡದೆ
ಕಾಪಿಡುತಿದ್ದಿತು ಜೀವಕುಲ
ಸಹಜದ ಬದುಕನು ಬದುಕಲು ಆಗದೆ
ಮನುಜನು ಎಡವಿದ ಮೊದಲಸಲ
ಬದುಕುವ ಭಾಗ್ಯವು ತನಗೆಂದರಿತು
ಹಾಳುಗೆಡವಿದನು ಈ ನೆಲದ ಜಲ
ಜೀವ ಸರಣಿಯಲಿ ಯಾವುದೆ ಕೊಂಡಿಯು
ಕಳಚದೆ ಇರುವುದೆ ಪ್ರಕೃತಿಯು
ಭಾವವೆ ಇಲ್ಲದ ಸ್ವಾರ್ಥದ ಮನುಜನು
ಹಾಳುಗೆಡವಲದು ವಿಕೃತಿಯು
ಒಳಿತು ಕೆಡುಕುಗಳ ದ್ವಂದ್ವದ ಅರಿವದು
ಅನ್ಯ ಜೀವಕೆ ಎನಿತಿಲ್ಲವು
ಪ್ರಕೃತಿ ಪರಿಸರ ಉಳಿಸುವುದಾದರೆ
ಮಾನವನಿಗಷ್ಟೆ ಸೀಮಿತವು
ಪಂಚಭೂತಗಳು ಸ್ವಚ್ಛವೆ ಇರುವಲಿ
ಮನುಜರು ಬಾಧ್ಯರೆ ಆಗುವರು
ಪಂಚೇಂದ್ರಿಯಗಳ ಒಡೆಯರು ನಾವು
ಪ್ರಪಂಚದುಳಿವಿಗು ಕಾರಣರು
ಬದುಕಿಗೆ ಮಾತ್ರವೆ ಬದುಕೆಮಗಿರಲಿ
ಅನ್ಯ ಜೀವದ ಕಾಳಜಿ ಇರಲಿ
ಸರ್ವ ಜೀವಿಯಲಿ ಪ್ರೀತಿಯ ತೋರುವ
ಭಾವೈಕ್ಯತೆಯೂ ಆವಿರ್ಭವಿಸಲಿ
**********
-ಬಾಲಕೃಷ್ಣ ಸಹಸ್ರಬುಧ್ಯೆ ಮುಂಡಾಜೆ
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ