ಅಮೃತ ಸದೃಶ ಅನಾನಸು ಹಣ್ಣು
ಪೈನ್‍ಆಪಲ್ ಎಂದು ಆಂಗ್ಲ ಭಾಷೆಯಲ್ಲಿ ಕರೆಯಲ್ಪಡುವ ಪರಂಗಿ ಹಣ್ಣು ಅತ್ಯಂತ ಉಪಯುಕ್ತ ಹಣ್ಣು ಆಗಿದೆ. ಫ್ರೆಂಚ್ ಭಾಷೆಯಲ್ಲಿ ಅನಾನಸ್ ಎಂದೂ ಕರೆಯುವ ಕಾರಣದಿಂದ ಅನಾನಸು ಎಂಬುದಾಗಿಯೂ ಕರೆಯುತ್ತಾರೆ. ಉಷ್ಣವಲಯದ ಪ್ರದೇಶಗಳಲ್ಲಿ ಹೆಚ್ಚು ಬೆಳೆಯುವ ಈ ಹಣ್ಣು ಅತ್ಯಂತ ಕಡಿಮೆ ಬೆಲೆಗೆ ಎಲ್ಲರಿಗೂ ದೊರಕುತ್ತದೆ. ಅನಾನಸು ಹಣ್ಣಿನಲ್ಲಿ ಜೀರೋ ಕೊಲೆಸ್ಟ್ರಾಲ್ ಇರುತ್ತದೆ. ವಿಟಮಿನ್ ಎ, ಬಿ, ಸಿ, ಪೊಟ್ಯಾಷಿಯಂ, ಮ್ಯಾಂಗನೀಸ್, ಸತು ಮತ್ತು ಇತರ ಉಪಯುಕ್ತ ಖನಿಜಾಂಶಗಳು ಹೇರಳವಾಗಿದೆ.
ಹಣ್ಣಿನ ಉಪಯೋಗಗಳು:
1. ಅನಾನಸು ಹಣ್ಣಿನಲ್ಲಿ ಹೇರಳವಾಗಿ ವಿಟಮಿನ್ ‘ಸಿ’ ಇರುತ್ತದೆ. ಇದು ಜೀವಕೋಶಗಳಿಗೆ ಹಾನಿಯಾಗುವುದನ್ನು ತಡೆಯುತ್ತದೆ ಮತ್ತು ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದರ ಜೊತೆಗೆ ದೇಹದಲ್ಲಿ ಗಾಯಗಳು ಬೇಗನೆ ಒಣಗುವಂತೆ ಮಾಡುತ್ತದೆ.
2. ಫರಂಗಿ ಹಣ್ಣಿನಲ್ಲಿ ಹೇರಳವಾಗಿ ಪೊಟ್ಯಾಸಿಯಂ, ಮ್ಯಾಂಗನೀಸ್ ಮತ್ತು ಸತು ಇರುತ್ತದೆ. ಮ್ಯಾಂಗನೀಸ್ ಹೇರಳವಾಗಿರುವುದರಿಂದ ಮೂಳೆಗಳ ಬಲವನ್ನು ಹೆಚ್ಚಿಸುತ್ತದೆ ಮತ್ತು ಮೂಳೆಗಳನ್ನು ಸದೃಡವಾಗಿರಿಸುತ್ತದೆ. ಒಂದು ಕಪ್ ಅನಾನಸು ರಸದಲ್ಲಿ ನಮ್ಮ ದೇಹಕ್ಕೆ ಅಗತ್ಯವಿರುವ ಮ್ಯಾಂಗನೀಸ್ ದೊರಕುತ್ತದೆ.
3. ಅನಾನಸ್‍ನಲ್ಲಿ ಹೇರಳವಾಗಿ ಬ್ರೊಮಲೈನ್ ಹಾಗೂ ವಿಟಮಿನ್ ‘ಸಿ’ ಇರುವುದರಿಂದ ಶೀತ, ನೆಗಡಿ ಮತ್ತು ಕೆಮ್ಮು ತಡೆಗಟ್ಟಲು ಅತ್ಯಂತ ಉಪಯುಕ್ತವಾಗಿರುತ್ತದೆ.
4. ಫರಂಗಿ ಹಣ್ಣಿನಲ್ಲಿ ಹೇರಳವಾಗಿ ಆಂಟಿ ಆಕ್ಸಿಡೆಂಟ್ ಅಂಶ ಇರುತ್ತದೆ. ಇವುಗಳು ಜೀವಕೋಶಗಳಿಗೆ ವಯಸ್ಸಾಗದಂತೆ ತಡೆಯುತ್ತದೆ ಮತ್ತು ಜೀವಕೋಶಗಳ ಬೇಡದ ರಾಸಾಯನಿಕಗಳನ್ನು ಹೊರಹಾಕುವಂತೆ ಮಾಡುತ್ತದೆ. ಕ್ಯಾನ್ಸರ್ ತಡೆಗಟ್ಟುವಲ್ಲಿಯೂ ಇದು ಸಹಕಾರಿಯಾಗುತ್ತದೆ ಎಂದು ತಿಳಿದು ಬಂದಿದೆ.
5. ಅನಾನಸಿನಲ್ಲಿ ಹೇರಳವಾಗಿ ಪೊಟ್ಯಾಷಿಯಂ ಇರುವುದರಿಂದ ನೈಸರ್ಗಿಕವಾಗಿ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ ಎಂದೂ ಅಂದಾಜಿಸಲಾಗಿದೆ. ಪೊಟ್ಯಾಷಿಯಂ, ಸೋಡಿಯಂ ವಿರುದ್ಧವಾಗಿ ಕೆಲಸ ನಿರ್ವಹಿಸಿ ರಕ್ತದೊತ್ತಡ ಏರದಂತೆ ಮಾಡುತ್ತದೆ ಮತ್ತು ರಕ್ತನಾಳದೊಳಗೆ ರಕ್ತ ನಿರಾತಂಕವಾಗಿ ಚಲನೆಯಲ್ಲಿರುವಂತೆ ಮಾಡುತ್ತದೆ.
6. ಅನಾನಸು ಹಣ್ಣಿನಲ್ಲಿ ನಾರಿನಂಶ ಜಾಸ್ತಿ ಇರುವುದರಿಂದ ಅಜೀರ್ಣ ಸಮಸ್ಯೆ, ಮಲಬದ್ದತೆ ಸಮಸ್ಯೆಗೆ ಉತ್ತಮ ಪರಿಹಾರ ನೀಡುತ್ತದೆ. ಊಟದ ಬಳಿಕ ಈ ಹಣ್ಣು ತಿನ್ನುವುದರಿಂದ ಪಚನ ಕ್ರಿಯೆಗೂ ಸಹಕಾರಿ ಎಂದೂ ತಿಳಿದು ಬಂದಿದೆ.
7. ಅನಾನಸು ಹಣ್ಣಿನಲ್ಲಿ ಆಂಟಿ ಆಕ್ಸಿಡೆಂಟ್, ವಿಟಮಿನ್ ‘ಸಿ’, ವಿಟಮಿನ್ ‘ಎ’ ಮತ್ತು ಬೀಟಾ ಕೆರೋಟಿನ್ ಅಂಶ ಜಾಸ್ತಿ ಇರುವ ಕಾರಣದಿಂದ ಕಣ್ಣಿನ ಆರೋಗ್ಯಕ್ಕೆ ತುಂಬ ಉತ್ತಮ ಎಂದು ತಿಳಿದು ಬಂದಿದೆ. ದೃಷ್ಟಿಯನ್ನು ಉತ್ತಮ ಪಡಿಸಲು ಅನಾನಸ್ ಬಹಳ ಸಹಕಾರಿ ಎಂದು ಅಂದಾಜಿಸಲಾಗಿದೆ
8. ಹೇರಳವಾಗಿ ವಿಟಮಿನ್ ‘ಬಿ’ ಇರುವ ಕಾರಣ ನರಗಳ ದೌರ್ಬಲ್ಯವಾಗದಂತೆ ತಡೆದು, ಮಾನಸಿಕ ಒತ್ತಡವನ್ನು ನಿಯಂತ್ರಿಸುತ್ತದೆ
9. ಫರಂಗಿ ಹಣ್ಣು ರಕ್ತ ಹೆಪ್ಪುಗಟ್ಟುವುದನ್ನು ತಡೆಯುವ ಕಾರಣದಿಂದ ಹೃದಯದ ಆರೋಗ್ಯಕ್ಕೆ ಉತ್ತಮ ಎಂದು ತಿಳಿದು ಬಂದಿದೆ.
10. ದೇಹದಲ್ಲಿನ ಕೊಬ್ಬಿನ ಅಂಶವನ್ನು ನಿಯಂತ್ರಿಸುವಲ್ಲಿ ಅನಾನಸು ಬಹುಮುಖ್ಯ ಭೂಮಿಕೆ ವಹಿಸುತ್ತದೆ. ದೇಹದಲ್ಲಿ ಅತಿಯಾಗಿ ಶೇಕರಣೆಯಾಗಿರುವ ಕೊಬ್ಬನ್ನು ನಿಯಂತ್ರಿಸುವಲ್ಲಿ ಅನಾನಸು ಬಹು ಉಪಯುಕ್ತವಾಗಿರುತ್ತದೆ
11. ಫರಂಗಿ ಹಣ್ಣಿನಲ್ಲಿ ನಾರಿನಂಶ ಜಾಸ್ತಿ ಇದ್ದು, ಕೊಲೆಸ್ಟ್ರಾಲ್ ಇರುವುದೇ ಇಲ್ಲ. ಈ ಕಾರಣದಿಂದ ದೇಹದ ತೂಕ ನಿಯಂತ್ರಿಸಲು ಇದು ಬಹಳ ಸಹಾಯಕಾರಿ. ಕ್ಯಾಲರಿ ಅಂಶ ಕೂಡ ಕಡಿಮೆ ಪ್ರಮಾಣದಲ್ಲಿದೆ
12. ಒಂದು ಕಪ್ ಪೈನ್‍ಆಪಲ್‍ನಲ್ಲಿ ಸುಮಾರು 80mg ನಷ್ಟು ವಿಟಮಿನ್ ‘ಸಿ’ ಇರುತ್ತದೆ. ಒಬ್ಬ ಮಹಿಳೆಗೆ ದಿನವೊಂದಕ್ಕೆ 75mg ಮತ್ತು ಪುರುಷರಿಗೆ 90mg ವಿಟಮಿನ್ ‘ಸಿ’ ಅಗತ್ಯವಿರುತ್ತದೆ. ದೇಹದ ಬೆಳವಣಿಗೆಗೆ, ದೇಹದ ರಕ್ಷಣಾ ಶಕ್ತಿ ವೃದ್ದಿಸಲು ಮತ್ತು ಕರಳಿನಲ್ಲಿ ಕಬ್ಬಿಣದ ಅಂಶವನ್ನು ಹೀರಿಕೊಳ್ಳಲು ವಿಟಮಿನ್ ‘ಸಿ’ ಅತೀ ಅಗತ್ಯವಾಗಿರುತ್ತದೆ.
13. ಫರಂಗಿ ಹಣ್ಣಿನಲ್ಲಿ ಇರುವ ಮೆಗ್ನಿಷಿಯಂ ಎಲುಬುಗಳಿಗೆ ಅಸ್ಥಿರಂದ್ರತೆ ಅಥವಾ ಟೊಳ್ಳು ಮೂಳೆ ರೋಗ ಬರದಂತೆ ತಡೆಯುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ ಎಂದು ಸಂಶೋಧನೆಗಳಿಂದ ಸಾಬೀತಾಗಿದೆ. ಎಲುಬಿನ ಸಾಂದ್ರತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದು ತಿಳಿದು ಬಂದಿದೆ
14. ಫರಂಗಿ ಹಣ್ಣಿನಲ್ಲಿ ಅತಿ ಹೆಚ್ಚು ಆಂಟಿ ಆಕ್ಸಿಡೆಂಟ್‍ಗಳು ಇರುತ್ತದೆ. ಇವುಗಳು ಜೀವಕೋಶಗಳನ್ನು ಹಾಳುಗೆಡಿಸುವ ರಾಸಾಯನಿಕಗಳನ್ನು ನಾಶ ಮಾಡಿ, ಅವುಗಳನ್ನು ರಕ್ಷಿಸುತ್ತದೆ ಮತ್ತು ಆ ಮೂಲಕ ಹೃದಯ ತೊಂದರೆ, ಅಲ್‍ಝೈಮರ್ಸ್ ರೋಗ, ಟೈಪ್ 2 ಡಯಾಬಿಟಿಸ್, ಕಣ್ಣಿನ ತೊಂದರೆ ಉಂಟಾಗದಂತೆ ದೇಹವನ್ನು ರಕ್ಷಿಸುತ್ತದೆ ಎಂದು ತಿಳಿದು ಬಂದಿದೆ. ಅದೇ ರೀತಿ ನಮ್ಮ ಆಹಾರದಲ್ಲಿ ಆಂಟಿ ಆಕ್ಸಿಡೆಂಟ್ ಜಾಸ್ತಿ ಇದ್ದಷ್ಟು ನಮಗೆ ಕ್ಯಾನ್ಸರ್ ನಿಂದ ರಕ್ಷಣೆ ದೊರಕುತ್ತದೆ
15. ಫರಂಗಿ ಹಣ್ಣಿನಲ್ಲಿರುವ ಆಂಟಿಆಕ್ಸಿಡೆಂಟ್‍ಗಳು ಮತ್ತು ಇತರ ರಾಸಾಯನಿಕಗಳು ದೇಹದಲ್ಲಿ ಉರಿಯೂತವಾಗದಂತೆ ತಡೆಯುತ್ತದೆ. ಅತಿಯಾದ ಉರಿಯೂತದಿಂದ ಹಲವಾರು ಹೃದಯದ ತೊಂದರೆಗಳು ಉಂಟಾಗುತ್ತದೆ. ಇದೆಲ್ಲವನ್ನು ನಿಯಂತ್ರಿಸುವಲ್ಲಿ ಈ ಆಂಟಿ ಆಕ್ಸಿಡೆಂಟ್‍ಗಳು ಬಹಳ ಮುಖ್ಯ ಪಾತ್ರ ವಹಿಸುತ್ತದೆ ಎಂದು ಅಧ್ಯಯನಗಳಿಂದ ಸಾಬೀತಾಗಿದೆ.
ಕೊನೆಮಾತು:
ಸಾಮಾನ್ಯವಾಗಿ ಹಣ್ಣು ಎಂದಾಕ್ಷಣ ನಮಗೆ ನೆನಪಿಗೆ ಬರುವುದು ಸೇಬು, ದಾಳಿಂಬೆ, ಕಿತ್ತಳೆ, ಮುಸುಂಬಿ ಇತ್ಯಾದಿ. ಆದರೆ ನಿಜವಾಗಿಯೂ ವಿಭಿನ್ನ ರುಚಿ ಮತ್ತು ಅತಿಯಾದ ಜೀವತತ್ವ, ಖನಿಜಗಳು ಮತ್ತು ಔಷಧೀಯ ಗುಣ ಹೊಂದಿರುವ ಹಣ್ಣುಗಳು ಎಂದರೆ ಪೇರಳೆ ಮತ್ತು ಅನಾನಸು ಹಣ್ಣು ಆಗಿರುತ್ತದೆ. ಅನಾನಸು ಹಣ್ಣು ತಿನ್ನಲು ಒಂದಷ್ಟು ಕೆಲಸದ ಅವಶ್ಯಕತೆ ಇರುತ್ತದೆ. ಈ ಕಾರಣದಿಂದ ಜನ ತಿನ್ನಲು ಹಿಂದೇಟು ಹಾಕುತ್ತಾರೆ. ಬಾಳೆ ಹಣ್ಣನ್ನು ತಿಂದಷ್ಟೇ ಸಲೀಸಾಗಿ ಸೇಬು, ಕಿತ್ತಳೆ. ಮುಸಂಬಿ, ದ್ರಾಕ್ಷಿ ತಿನ್ನಬಹುದಾದರೆ, ಅನಾನಸು ಹಣ್ಣು ತಿನ್ನಲು ಒಂದಷ್ಟು ಶ್ರಮ ವಹಿಸಬೇಕಾಗುತ್ತದೆ. ವರ್ಷದ ಎಲ್ಲಾ ಸೀಸನ್‍ಗಳಲ್ಲಿ ಸಿಗುವುದೂ ಇಲ್ಲ. ಆದರೆ ನಾರು, ಖನಿಜ, ಲವಣ ಜೀವಸತ್ವ, ಆಂಟಿ ಓಕ್ಸಿಡೆಂಟ್ ಎಲ್ಲವನ್ನೂ ಅಧಿಕ ಪ್ರಮಾಣದಲ್ಲಿ ಹೊಂದಿರುವ ಮತ್ತು ಕನಿಷ್ಠ ಕ್ಯಾಲರಿ ಹಾಗೂ ನಿಕೃಷ್ಟ ಕೊಲೆಸ್ಟ್ರಾಲ್ ಇರುವ ಏಕೈಕ ಹಣ್ಣು ಎಂದರೆ ಅನಾನಸು ಹಣ್ಣು ಆಗಿರುತ್ತದೆ.
ಉಷ್ಣವಲಯದಲ್ಲಿಯೇ ಹೆಚ್ಚು ಬೆಳೆಯುವ ಈ ಹಣ್ಣನ್ನು ಉಷ್ಣವಲಯದ ಹಣ್ಣು ಎಂದೂ ಕರೆಯುತ್ತಾರೆ. ದಕ್ಷಿಣ ಅಮೇರಿಕಾದಲ್ಲಿ ಮೊದಲು ಹುಟ್ಟಿದ ಈ ಹಣ್ಣನ್ನು ಯುರೋಪಿನಲ್ಲಿ ಪೈನ್‍ಆಪಲ್ ಎಂದೂ, ಫ್ರೆಂಚ್‍ನಲ್ಲಿ ಅನಾನಸ್ ಎಂದೂ ಕರೆಯುತ್ತಾರೆ. ಹೀಗೆ ಹತ್ತು ಹಲವು ಹೆಸರುಗಳಿಂದ ಕರೆಯಲ್ಪಟ್ಟು ಹತ್ತಾರು ವಿಶೇಷ ಗುಣ ಹೊಂದಿರುವ ಫರಂಗಿ ಹಣ್ಣು ವಿಶೇಷ ವೈದ್ಯಕೀಯ ಗುಣ ಹೊಂದಿರುವುದಂತೂ ನಿಜ. ಸಮೃದ್ದವಾದ ಪೋಷಕಾಂಶ ಮತ್ತು ಜೀವ ಸತ್ವ ಇರುವ ಈ ಹಣ್ಣನ್ನು ಹಿತಮಿತವಾಗಿ ಸೇವಿಸುವುದು ಆರೋಗ್ಯಕ್ಕೆ ಅತೀ ಅವಶ್ಯಕ. ಅತಿಯಾದರೆ ಅಮೃತವೂ ವಿಷವಾಗುತ್ತದೆ ಎಂಬ ಮಾತಿನಂತೆ ಅಗತ್ಯಕ್ಕಿಂತ ಜಾಸ್ತಿ ಸೇವಿಸಿದಲ್ಲಿ ಫರಂಗಿ ಹಣ್ಣು ಕೂಡಾ ತೊಂದರೆ ನೀಡಬಹುದು ಒಟ್ಟಿನಲ್ಲಿ ಹಿತಮಿತವಾಗಿ ಸೇವಿಸಿ ದೇಹವನ್ನು ರಕ್ಷಿಸಿಕೊಳ್ಳುವುದರಲ್ಲಿ ಜಾಣತನ ಅಡಗಿದೆ.
-ಡಾ|| ಮುರಲೀ ಮೋಹನ್ ಚೂಂತಾರು
BDS, MDS, DNB, MOSRCSEd (U.K), FPFA, M.B.A
ಸುರಕ್ಷಾ ದಂತ ಚಿಕಿತ್ಸಾಲಯ
ಹೊಸಂಗಡಿ – 671 323
ಮೊ: 9845135787
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ