|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಉಡುಪಿ ವಿಶ್ವನಾಥ್ ಶೆಣೈಯವರಿಗೆ ಪಿ.ಆರ್. ಸಿ.ಐ. "ಸಾರ್ವಜನಿಕ ಸೇವೆ ಮತ್ತು ಕೊಡುಗೆ" ಪುರಸ್ಕಾರ

ಉಡುಪಿ ವಿಶ್ವನಾಥ್ ಶೆಣೈಯವರಿಗೆ ಪಿ.ಆರ್. ಸಿ.ಐ. "ಸಾರ್ವಜನಿಕ ಸೇವೆ ಮತ್ತು ಕೊಡುಗೆ" ಪುರಸ್ಕಾರ
ವರುಷ ಎಂಬತ್ತು ದಾಟಿದರೂ ಇನ್ನೂ 16ರ ಯುವಕರೇ ನಾಚುವಂತಹ ಬಹು ಚಟುವಟಿಕೆಯ ಚಿರಯುವಕ. ಶ್ರೀಮತಿ ಲೀಲಾ- ವಿಠಲ ಶೆಣೈ ದಂಪತಿಗಳ ಮೂರನೆಯ ಸುಪುತ್ರ ಯು. ವಿಶ್ವನಾಥ ಶೆಣೈ ಹುಟ್ಟಿದ್ದು ಚಿಟ್ಪಾಡಿಯಲ್ಲಿ. ಬೆಳೆದದ್ದು ಉಡುಪಿಯ ಕೃಷ್ಣನ ಪರಿಸರದಲ್ಲಿ. ಓದಿದ್ದು 5 ನೇ ಕ್ಲಾಸು ಆದರೆ ಅವರ ವಿದ್ವತ್ತು ಮಾತ್ರ ಮಾಸ್ಟರ್ ಡಿಗ್ರಿಗೂ ಮೀರಿದ್ದು. ಸರಳ ಸಂಸಾರ, ಸರಳ ವ್ಯಕ್ತಿತ್ವ ಸರಳ ಶ್ವೇತ ಉಡುಗೆ. ಮೊಗದಲೊಂದು ಮಂದಹಾಸ. ಪರಿಚಯ ಇರಲಿ ಇಲ್ಲದಿರಲಿ ಕಂಡವರಿಗೊಂದು ಹರಿ ಓಂ ಎನ್ನುವ ನಮಸ್ಕಾರ. ಲೋಕ ಸುತ್ತಿದರೆ ಕಲಿತ ವಿದ್ಯೆಗಿಂತ ಹೆಚ್ಚಿನ ಸಿದ್ಧಿ ಪಡೆಯಬಹುದೆಂಬುದನ್ನು ಅರಿತವರು. ಕಷ್ಟಜೀವಿ. ಚಾಪೆಯಲ್ಲಿ ಮಲಗಿ ತೇಪೆ ಚಡ್ಡಿ ಹಾಕಿಕೊಂಡೇ ಬಾಲ್ಯ ಕಳೆದವರು. ಹಾಗಾಗಿ ಬಡವರ ನೋವನ್ನು ಹತ್ತಿರದಿಂದ ಕಂಡವರು.


ಬೀಡಿಕಟ್ಟುವುದು ಐಸ್ ಕ್ಯಾಂಡಿ ಮಾರುವುದು ಹೋಟೆಲಿನಲ್ಲಿ ತಟ್ಟೆ ತೊಳೆಯುವುದರಿಂದ ಸಪ್ಲೈ ಅಡುಗೆ ಕೋಣೆಯವರೆಗೆ ಎಲ್ಲವನ್ನು ಮಾಡಿಕಲಿತು ಎಲ್ಲದಕ್ಕೂ ಸೈ ಎನಿಸಿಕೊಂಡು ಊರು ಊರು ಅಲೆದು ಕೊನೆಗೆ ತನ್ನೂರಿಗೇ ಬಂದು "ರಾಮ ಭವನ" ಎಂಬ ಹೋಟೆಲು ಪ್ರಾರಂಭಿಸಿದರು. ತಾನೂ ತನ್ನ ಸಂಸಾರವನ್ನೂ ಸಂಪೂರ್ಣ ಬಳಸಿಕೊಂಡು ಮುನ್ನಡೆದರು. ಕೊನೆಗೆ ಅದೇ ಬಾಳಿಗೆ ಉಸಿರಾಯಿತು. ಜೊತೆಗೆ ಒಂದಿಷ್ಟು ಲ್ಯಾಂಡ್ ಲಿಂಕ್ಸ್ ನ ಪ್ರಯತ್ನವೂ ಕೈಗೂಡಿತು. ಹಾಗಾಗಿ ಹಿಡಿದ ವೃತ್ತಿ ಕೈಹಿಡಿಯಿತು. ಇನ್ನೊಂದು ಕಡೆಯಿಂದ ಅದೃಷ್ಟ ದೇವತೆಯಾಗಿ ಭಗವದ್ಗೀತೆಯನ್ನು ಅರೆದು ಕುಡಿದ ಸೌಭಾಗ್ಯವತಿ ಪ್ರಭಾವತಿ ಬಾಳ ಸಂಗಾತಿಯಾಗಿ ಕೈಹಿಡಿದರು. ಆದರೆ ಅದರ ಹಿಂದಿನ ಕಾರಣ ಅವರ ಶಿಸ್ತಿನ ಜೀವನ ಹಾಗೂ ಎಲ್ಲರನ್ನೂ ಸೇರಿಸಿಕೊಂಡು ಮನ್ನಡೆಯುವ ನಾಯಕತ್ವ ಗುಣ ಹಾಗೂ ಯಾರನ್ನೂ ಮರುಳು ಮಾಡಬಲ್ಲ ಅವರ ವಾಕ್ ಚಾತುರ್ಯ.


ಇವರಲ್ಲಿ ಒಬ್ಬ ಅದ್ಭುತ ನಟನಿದ್ದಾನೆ. ಬಂಧು ಪ್ರೇಮಿ ಇದ್ದಾನೆ. ಒಬ್ಬ ಕಲಾವಿದನಿದ್ದಾನೆ. ರಾಜತಾಂತ್ರಿಕ ನಿದ್ದಾನೆ. ಒಬ್ಬ ಕಲಾ ರಸಿಕನಿದ್ದಾನೆ. ಸಂಘಟಕನಿದ್ದಾನೆ. ಸಮಾಜ ಸೇವಕನಿದ್ದಾನೆ. ಒಬ್ಬ ಪರ್ಯಟನ ವೀರನೂ ಇದ್ದಾನೆ. ಕುಬೇರನೂ ಇವರ ಎದುರು ತಲೆಬಾಗಿ ನಿಂತಿದ್ದಾನೆ. ಆದರೆ ಇವೆಲ್ಲದರ ಜೊತೆಗೆ ನೊಂದವರ, ದೇಹೀ ಎನ್ನುವವರ, ಅಸಹಾಯಕರ, ಬಡವರ ಕಣ್ಣೀರನ್ನು ಒರೆಸುವ ಒಬ್ಬ ವಿಶಾಲ ಹೃದಯಿ ದಾನಶೂರ ಕರ್ಣನಂತಹ ಕೊಡುಗೈ ದಾನಿಯೊಬ್ಬನಿದ್ದಾನೆ. ಉಡುಪಿ ಎಸೋಸಿಯೇಷನನ್ನು ಹುಟ್ಟುಹಾಕಿದ ಹೆಮ್ಮೆ ಇವರದ್ದು. ಉಡುಪಿ ಛೇಂಬರ್ ಆಫ್ ಕಾಮರ್ಸ್ ನ ನಿರ್ದೇಶಕರಲ್ಲೊಬ್ಬರು ಇವರು.


ಜೈಂಟ್ಸ್ ಸಂಸ್ಥೆ, GSB ಯುವಕ ಸಂಘ, ಉಡುಪಿ ರಂಗಭೂಮಿ, ಯಕ್ಷಗಾನ ಕೇಂದ್ರ, ಕಲಾರಂಗ ಸ್ಪಂದನ ಹೀಗೆ ಹತ್ತು ಹಲವು ಸಂಸ್ಥೆಗಳ ಪದಾಧಿಕಾರಿಯಾಗಿದ್ದುಕೊಂಡು ಅವೆಲ್ಲವುಗಳ ಸರ್ವತೋಮುಖ ಬೆಳವಣಿಗೆಯ ಹರಿಕಾರರೂ ಆಗಿದ್ದಾರೆ. ಗುರುಗಳು ಪ್ರತಿಭಾವಂತರನ್ನು ಕಂಡರೆ ಅತೀವ ಪ್ರೀತಿ. ಕೃತಿ, ಕಲೆ, ಕ್ರೀಡೆ ನಾಟಕ ಸಂಸ್ಥೆಗಳಿಗೆ ಒಂದಷ್ಟು ಸಹಕಾರ ಇವರ ಜೀವನದ ಶೃತಿ. ಸಂಬಂಧ ಬೆಸೆಯುವ, ಮುರಿದು ಬಿದ್ದ ಮದುವೆ ಸಂಬಂಧಗಳನ್ನು ಜೋಡಿಸುವ ವಿಚ್ಛೇದನ ನಿಲ್ಲಿಸುವ ಹೀಗೆ ರಾಜ ಪಂಚಾತಿಗೆಯಿಂದ ಒಂದಷ್ಟು ಹಿತೈಷಿಗಳ ಬಾಳಿಗೆ ಬೆಳಕು ನೀಡಿದವರು.


ಪ್ರಾಣಿ ಪಕ್ಷಿಗಳೆಂದರೆ ಅಚ್ಚು ಮೆಚ್ಚು. ಊರು ಸುತ್ತಲು ತನ್ನ ಕಾಲನ್ನೇ ಹೆಚ್ಚು ನಂಬಿದವರು. ಹಾಗಾಗಿ ಇವರು ಗಟ್ಟಿಮುಟ್ಟು. ಪತ್ನಿ ಪ್ರಭಾವತಿ ಹಾಗೂ ಗೆಳೆಯರೊಂದಿಗೆ ದೇಶದ ಹೆಚ್ಚಿನ ಧಮ೯ ಕ್ಷೇತಗಳನ್ನು ಸಂದರ್ಶಿಸಿ ಪುಣ್ಯ ಸಂಪಾದಿಸಿದವರು. ಅಲ್ಲದೆ ದೇಶ ವಿದೇಶಗಳ ಹೆಚ್ಚಿನ ಪ್ರಸಿದ್ಧ ತಾಣಗಳಿಗೆ ಭೇಟಿ ನೀಡಿ ಅಲ್ಲಿಯ ಸಂಸ್ಕೃತಿ ಯನ್ನು ವೀಕ್ಷಿಸಿ ನಮ್ಮ ಸಂಸ್ಕೃತಿಯನ್ನು ಅಲ್ಲಿಯ ಜನಕ್ಕೆ ಪರಿಚಯಿಸಿ ಬಂದ ಉಡುಪಿಯ ಪರ್ಯಟನ ವೀರ ನಮ್ಮ ಉಡುಪಿ ವಿಶ್ವನಾಥ ಶೆಣೈ ಮಾಮು. ನಮ್ಮ ಸಂಸ್ಕೃತಿಯ ಉಳಿವಿಗಾಗಿ ಸಮಾಜದ ಸದ್ಭಾವನೆಯ ಬೆಳವಣಿಗೆಗಾಗಿ ಇವರಿಂದ ಜನ್ಮತಳೆದ ಸಂಸ್ಥೆ ಸಂಸ್ಕೃತಿ ವಿಶ್ವಪ್ರತಿಷ್ಠಾನವೇ ಇವರ ಜೀವನದ ಕೂಸು.


ಹೀಗೆ ತನ್ನ ಜೀವನದುದ್ದಕ್ಕೂ ತನ್ನ ಶಕ್ತಿ ಮೀರಿ ಸಮಾಜಕ್ಕೆ ತಮ್ಮನ್ನು ಅರ್ಪಿಸಿಕೊಂಡ ಉಡುಪಿಯ ಜನರ ಕಣ್ಮಣಿ ಯು. ವಿಶ್ವನಾಥ ಶೆಣೈ ರವರಿಗೆ  ಇನ್ನು ಮುಂದೆಯೂ ಬಹಳಷ್ಟು ಕಾಲ ಸಮಾಜ ಸೇವೆ ಮಾಡುವ ಭಾಗ್ಯ ಕರುಣಿಸಲಿ ಎಂದು ಹಾರೈಸುತ್ತ ಪಬ್ಲಿಕ್ ರಿಲೇಷನ್ ಕೌನ್ಸಿಲ್ ಆಫ್ ಇಂಡಿಯಾ ಉಡುಪಿ- ಮಣಿಪಾಲ ಘಟಕ ಆತ್ಮೀಯತೆಯಿಂದ ವಿಶ್ವ ಸಂವಹನ ಕಾರರ ದಿನಾಚರಣೆಯ ಅಂಗವಾಗಿ "ಸಾರ್ವಜನಿಕ ಸೇವೆ ಮತ್ತು ಕೊಡುಗೆ" ಪುರಸ್ಕಾರವನ್ನು ನೀಡಿ ಗೌರವಿಸುತ್ತಿದೆ.

-ರಾಜೇಶ್ ಭಟ್ ಪಣಿಯಾಡಿ.


(ಉಪಯುಕ್ತ ನ್ಯೂಸ್)ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post