|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ನವರಾತ್ರಿ 4ನೇ ದಿನ: ಬ್ರಹ್ಮಾಂಡವನ್ನೇ ತನ್ನೊಡಲಿನಲ್ಲಿ ಧರಿಸಿದ ಕೂಷ್ಮಾಂಡಾದೇವಿಗೆ ನಮೋ ನಮಃ

ನವರಾತ್ರಿ 4ನೇ ದಿನ: ಬ್ರಹ್ಮಾಂಡವನ್ನೇ ತನ್ನೊಡಲಿನಲ್ಲಿ ಧರಿಸಿದ ಕೂಷ್ಮಾಂಡಾದೇವಿಗೆ ನಮೋ ನಮಃ


ನವರಾತ್ರಿಯನ್ನು ಚೈತ್ರ ನವರಾತ್ರಿ, ಶರನ್ನವರಾತ್ರಿ ಹಾಗೂ ಗುಪ್ತ ನವರಾತ್ರಿ ಎಂದು ಆಚರಿಸಲಾಗುತ್ತದೆ. ರಾಮ ನವಮಿಯ ವರೆಗಿನ ಒಂಬತ್ತು ದಿನ ಚೈತ್ರ ನವರಾತ್ರಿಯಾದರೆ ಆಶ್ವೀಜದಲ್ಲಿ ಶರನ್ನವರಾತ್ರಿಯನ್ನು  ಆಚರಿಸಲಾಗುತ್ತಿದ್ದು ಇಂದು ಅದರ ಚತುರ್ಥ ದಿನ. ಜ್ಞಾನದಾಯಿನಿ ಕ್ಷೇಶ ನಾಶಿನಿ ದುರ್ಗೆಯ ಸದಾನಂದ ರೂಪವೇ ಕುಮಾರಿ ಅಥವಾ ಕೂಷ್ಮಾಂಡಾ ದುರ್ಗ. ಬಹು ಸಾರಯುಕ್ತವಾದ ಬೀಳಿನಲ್ಲಿ ಬೆಳೆಯುವ ತರಕಾರಿ ಬೂದುಕುಂಬಳಕಾಯಿ. ಇದಕ್ಕೆ ಇನ್ನೊಂದು ಹೆಸರು ಕೂಷ್ಮಾಂಡ.


ಭೂಮಿಯ ಸಾರವನ್ನೆಲ್ಲ ಹೊತ್ತ ಈ ತರಕಾರಿ ಶರೀರದ ತಾಪ ನಿವಾರಿಸುವ  ತಂಪನ್ನೀವ, ಪುರುಷತ್ವ, ನವ ಚೈತನ್ಯ ಹಾಗೂ ತೇಜಸ್ಸನ್ನು ಹೆಚ್ಚಿಸುವ ಸಕಲ ರೋಗ ನಿವಾರಕ ಹಾಗೂ ಆರೋಗ್ಯವರ್ಧಕ ದ ಗುಣವುಳ್ಳ  ಭೂಮಿಯಲ್ಲಿ ಬೆಳೆವ ಅಮೃತ. ಅದೇ ರೀತಿ ಇಡೀ ಬ್ರಹ್ಮಾಂಡವನ್ನು ತನ್ನೊಳಗೆ ಹುದುಗಿಸಿಟ್ಟುಕೊಂಡ ಬ್ರಹ್ಮತೇಜಸ್ಸನ್ನು ಹೊಂದಿದ ತೇಜೋ ಪುಂಜ ಹಾಗೂ ಪೃಥ್ವಿಗೇ ಅಧಿದೇವತೆ ಶ್ರೀದೇವಿ ಕೂಷ್ಮಾಂಡ ದುರ್ಗ. ಈ ತಾಯಿಗೆ ಎಂಟು ಕೈಗಳಿದ್ದು ಆಕೆಯನ್ನು ಅಷ್ಟಭುಜ ಲಕ್ಷ್ಮೀ ಎಂದು ಕರೆಯುತ್ತಾರೆ. ಶಂಖ ಚಕ್ರ ಬಿಲ್ಲು ಬಾಣ ಗದಾ ಪದ್ಮದ ಜೊತೆ ಕಮಂಡಲ ಹಾಗೂ ಅಮೃತ ಕಲಶವನ್ನು ಕೈಯಲ್ಲಿ ಹಿಡಿದು ಕೊಂಡಿದ್ದಾಳೆ. ಕಿತ್ತಳೆ ಬಣ್ಣ ಈಕೆಗೆ ಅತಿ ಪ್ರಿಯ. ಈ ಬಣ್ಣ ಶಕ್ತಿ ಮತ್ತು ಉತ್ಸಾಹದ ಸಂಕೇತವಾಗಿದ್ದು ಅಜ್ಞಾನ ಮತ್ತು ಸೋಮಾರಿತನವನ್ನು ದೂರವಾಗಿಸುತ್ತದೆ. ಈ ದಿನ ಸುಮಂಗಲಿಯರು ಕಿತ್ತಳೆ ಬಣ್ಣದ ಸೀರೆ ಉಟ್ಟು ಶ್ರೀಮಾತೆಯನ್ನು ಪೂಜಿಸಿದರೆ ಬಹಳ ಶ್ರೇಯಸ್ಸು.  


"ಸುರಾ ಸಂಪೂರ್ಣ ಕಲಶಂ ರುಧಿರಪ್ಲುತಮೇವಚ 

ಧಧಾನ ಹಸ್ತ ಪದ್ಮಾಭ್ಯಾಮ್ ಕೂಷ್ಮಾಂಡಾ ಶುಭದಸ್ತುಮೇ 

ಮಾತಾ ಕೂಷ್ಮಾಂಡಾದೇವಿಯ್ಯೆ ನಮಃ" 

ಎಂಬ ಮಂತ್ರವನ್ನು ಪಠಿಸುವುದರಿಂದ ಆಕೆ ಭಕ್ತರ ಮನೆಗೆ ದಯಪಾಲಿಸಿ ಅವರ ಇಷ್ಟಾರ್ಥಗಳನ್ನು ನೆರವೇರಿಸುವುದರೊಂದಿಗೆ ಮನೆಯ ವಾಸ್ತು ದೋಷ ಮಾಟ ಮಂತ್ರಾದಿ ದೋಷಗಳ ನಿವಾರಣೆ ಮಾಡಿ ಸುಖ ಸಂಸಾರ ಸಂಪದಗಳನ್ನೀಯುತ್ತಾಳೆ. ಜಾಜಿ, ಮಲ್ಲಿಗೆ ವಿಧವಿಧ ಪುಷ್ಟಗಳು, ಹಾಲಿನ ಪಾಯಸ, ಪಂಚವಿಧ ಫಲವಸ್ತುಗಳು, ತುಪ್ಪದ ಅಪ್ಪ ಈಕೆಗೆ ಬಹಳ ಪ್ರಿಯ. ಈ ದಿನ ಐದಾರು ವರ್ಷದೊಳಗಿನ ಬಾಲಕನ್ನಿಕೆಗೆ ಇಷ್ಟವಾದ ವಸ್ತ್ರ ಫಲಪುಷ್ಪಗಳನ್ನು ಕೊಟ್ಟು ಪೂಜಿಸಿದರೆ ರೋಹಿಣಿ ನಾಮಕ ಶ್ರೀ ದುರ್ಗೆ ಅತಿ ಪ್ರಸನ್ನಳಾಗುತ್ತಾಳೆ.


ದುರ್ಗಾ ಸಪ್ತಶತಿಯ ಪ್ರಕಾರ ಜಗದ ಸೃಷ್ಟಿಗೆ ಕೂಷ್ಮಾಂಡಾ ದುರ್ಗೆಯೇ ಕಾರಣ ಹಾಗೂ ಸೌರವ್ಯೂಹದ ಚಲನೆಯನ್ನು ನಿಯಂತ್ರಿಸುವ ಮಾತೆ ಆದಿಶಕ್ತಿ ಈಕೆಯೇ ಆಗಿದ್ದಾಳೆ. ಈ ಮಾತೆಯನ್ನು ಪೂಜಿಸುವುದರಿಂದ ಜಾತಕದಲ್ಲಿ ರವಿ ದೋಷ ಮರೆಯಾಗುತ್ತದಂತೆ. ಇನ್ನು ಈ ದಿನ ಸುಮನಸ್ಸಿನ ಸುಮಂಗಲಿಯರನ್ನು ಮನೆಗೆ ಕರೆದು ಸತ್ಕರಿಸಿದ ಭಕ್ತರನ್ನು ಸದಾ ಪೊರೆಯುತ್ತಾಳೆ.


ಹಾಗಾಗಿ ಶರನ್ನವರಾತ್ರಿಯ ಪರ್ವಕಾಲದಲ್ಲಿ ಆಕೆಯನ್ನು ಭಜಿಸಿದ ಸರ್ವಭಕ್ತರ ಕಷ್ಟಗಳನ್ನು ದೂರ ಮಾಡಿ ಸದಾ ನಮ್ಮೆಲ್ಲರನ್ನು ಆಕೆ ಕೈ ಹಿಡಿದು ನಡೆಸಲಿ ಎಂದು ಪ್ರಾರ್ಥಿಸೋಣ.

-ರಾಜೇಶ್ ಭಟ್ ಪಣಿಯಾಡಿ.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 تعليقات

إرسال تعليق

Post a Comment (0)

أحدث أقدم