|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಪತ್ರಕರ್ತ ಮತ್ತು ಕಲಾವಿದ ಜಿತೇಂದ್ರ ಕುಂದೇಶ್ವರ

ಪತ್ರಕರ್ತ ಮತ್ತು ಕಲಾವಿದ ಜಿತೇಂದ್ರ ಕುಂದೇಶ್ವರ
ಈ ಹೆಸರಲ್ಲೇ ಏನೋ ಸೆಳೆತ ಇದೆ, ಮಾನವೀಯ ಮಿಡಿತ ಇದೆ, ಕೆಚ್ಚೆದೆಯ ಬಡಿತ ಇದೆ. ಈ ಹೆಸರು ಕೇಳಿದೊಡನೆ ಮನಸ್ಸಲ್ಲಿ ಮೂಡುವುದು ಕೇವಲ ಪತ್ರಕರ್ತ ಅಲ್ಲ. ನಿಷ್ಕಲ್ಮಷ ವ್ಯಕ್ತಿತ್ವ. ವರದಿಯಲ್ಲೂ ಸತ್ಯ ನಿಷ್ಠೂರತೆ, ಪಕ್ಷಾತೀತ, ನಿರ್ಬಿಢೆ, ಸಾಕ್ಷಿಸಹಿತ ಮನಮುಟ್ಟುವ ವರದಿಗಾರಿಕೆ, ನೇರಾನೇರ ನುಡಿ.


ಹೀಗೆ ಯಾರ ಮುಲಾಜಿಗೂ ತಲೆ ಕೆಡಿಸದೆ ಪತ್ರಿಕಾ ಧರ್ಮವನ್ನು ಪಾಲಿಸುತ್ತಾ ಬಂದಿರುವ ಅಪರೂಪದ ತಳಿಯ ಪತ್ರಕರ್ತ. ಕಾರ್ಕಳ ಹಿರ್ಗಾನ ಕುಂದೇಶ್ವರದ ಧರ್ಮದರ್ಶಿ/ ಅರ್ಚಕರಾದ ದಿ.ರಾಘವೇಂದ್ರ ಭಟ್ ಮತ್ತು ಗಂಗಾ ಆರ್. ಭಟ್ ದಂಪತಿಯ ತೃತೀಯ ಪುತ್ರನಾಗಿ ಜನನ.


ಉಡುಪಿ ಸಂಸ್ಕೃತ ಪಾಠ ಶಾಲೆಯಲ್ಲಿ ಸಾಹಿತ್ಯ ಪದವಿ, ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನಲ್ಲಿ ಪಿಯುಸಿ, ವೈಕುಂಠ ಬಾಳಿಗಾ ಕಾನೂನು ಕಾಲೇಜಿನಲ್ಲಿ ಅಧ್ಯಯನ. ಕನ್ನಡ ಜನಾಂತರಂಗ, ಕನ್ನಡ ಡಿಂಡಿಮ ಪತ್ರಿಕೆಗಳಲ್ಲಿ ವರದಿಗಾರನಾಗಿ 1999ರಲ್ಲಿ ಪತ್ರಿಕಾ ರಂಗ. ಪ್ರವೇಶ. ವಿಜಯ ಕರ್ನಾಟಕದಲ್ಲಿ 11 ವರ್ಷಗಳ ಕಾಲ ಉಪಸಂಪಾದಕ/ ಪ್ರಧಾನ ವರದಿಗಾರನಾಗಿ ಕರ್ತವ್ಯ. ಕನ್ನಡಪ್ರಭದಲ್ಲಿ 4 ವರ್ಷ, ವಿಶ್ವವಾಣಿಯಲ್ಲಿ ಪ್ರಸ್ತುತ ವಿಶೇಷ ವರದಿಗಾರ/ ಮಂಗಳೂರು ಬ್ಯೂರೋ ಮುಖ್ಯಸ್ಥರಾಗಿ ಕಾರ್ಯನಿರ್ವಹಣೆ.


ಪತ್ರಕರ್ತ ಎಂದರೆ ಸಂಬಳಕ್ಕಾಗಿ ಅಲ್ಲ ಸಮಾಜದ ಸುಸ್ಥಿತಿಗೆ ಹಾತೊರೆಯಬೇಕು ಎಂದು ಎಷ್ಟೋ ಯುವ ಪರ್ತಕರ್ತರಿಗೆ ಮಾದರಿಯಾದವರು. ಜಾಲತಾಣಗಳಲ್ಲಿ ದೈನಂದಿನ ಆಗುಹೋಗುಗಳ ತನ್ನದೇ ದೃಷ್ಟಿಯಲ್ಲಿ ವಿಶ್ಲೇಷಿಸಿ, ಒಳ್ಳೆಯದನ್ನು ಬೆಂಬಲಿಸುತ್ತಾ ಕೊಳಕನ್ನು ಟೀಕಿಸುತ್ತಾ ಸ್ಪಷ್ಟ ಅಭಿಪ್ರಾಯ ಮಂಡನೆ.

ತನಗೆ ಪ್ರಾಣಭೀತಿ ಇದ್ದರೂ ಲೆಕ್ಕಿಸದೆ ಸಮಾಜಕ್ಕೆ ಕಂಟಕರಾದ ನಕ್ಸಲ್ ಹಾಗೂ ಮಂಗಳೂರಿನ ಗುಪ್ತ ಉಗ್ರಗಾಮಿಗಳನ್ನು ಬೆಳಕಿಗೆ ತರುವಲ್ಲಿ ಮಹತ್ತರ ಪಾತ್ರ.


ಪತ್ರಕರ್ತರು ಆಸ್ತಿ, ಪಾಸ್ತಿ ಮಾಡಿ ದೊಡ್ಡ ಮನೆ ಕಟ್ಟಿಕೊಳ್ಳುವುದು ಸಾಮಾನ್ಯ. ಆದರೆ ಕುಂದೇಶ್ವರ ಇದಕ್ಕೆ ಅಪವಾದ. ಶೋಕಿಗೆ ದಾನ ಮಾಡುವ ದೊಡ್ಡ ಮನುಷ್ಯರ ನಡುವೆ ದೇಶಕ್ಕೆ ಮಾದರಿಯಾದ ಅಕ್ಷರ ಸಂತ ಹಾಜಬ್ಬನಂತವರ ಮನೆ ಬಿದ್ದುಹೋಗುವ ಸ್ಥಿತಿ ಇದ್ದಾಗ ವಿಶೇಷ ವರದಿ ಮಾಡಿ ಇದು ಯುವ ಕ್ರೈಸ್ತ ಸಂಘಟನೆ ಗಮನಕ್ಕೆ ಬಂದು ಹಾಜಬ್ಬ ಅವರಿಗೆ ಮನೆ ಕಟ್ಟಿ ಕೊಟ್ಟಿದ್ದರು. ಇವರ ವರದಿಗಳಿಂದಾಗಿ ಹಾಜಬ್ಬ ಅವರ 1 ಲಕ್ಷ ರೂ. ಸಾಲವನ್ನು ಸುಧಾಮೂರ್ತಿ ತೀರಿಸಿದ್ದರು. ಹಾಜಬ್ಬರಿಗೆ ಪದ್ಮಶ್ರೀ ಪ್ರಶಸ್ತಿ ಲಭಿಸಿದೆ.

ಇಂಥ ಅನೇಕ ವರದಿಗಳ ಮೂಲಕ ಅನೇಕ ಮಂದಿಗೆ ನೆರವು.


ಹೆತ್ತ ತಾಯಿಗೆ ಗೊತ್ತಿಲ್ಲದೆ ಕಟುಕ ತಂದೆ ಮೂರು ಹಾಗೂ ಆರು ವರ್ಷದ ಎರಡು ಹೆಣ್ಣು ಮಕ್ಕಳನ್ನು ದೂರದ ರಾಮನಗರದಿಂದ ಉಡುಪಿಯ ದೇಗುಲದ ಬಳಿ ಬಿಟ್ಟು ಹೋಗಿದ್ದ. ದುಷ್ಟರ ಪಾಲಾಗಿ, ಭಿಕ್ಷುಕರೋ ಅಥವಾ ಇನ್ಯಾವುದೋ ನಿಕೃಷ್ಟ ಗತಿ ಕಾಣಲಿದ್ದ ಮಕ್ಕಳನ್ನು ತನ್ನ ಮಾನವೀಯ ವರದಿಯ ಮುಖಾಂತರ ತಾಯಿ ಮಡಿಲು ಸೇರಿಸಿದ ಹೃದಯವಂತ.


ಶಿರಾಡಿ ಘಾಟಿ ದುಸ್ಥಿತಿಯ ಕುರಿತು ಸರಣಿ ಲೇಖನಗಳ ಮೂಲಕ ರಾಜ್ಯ ಸರಕಾರದ ಗಮನ ಸೆಳೆದು ಶಾಶ್ವತ ಕಾಂಕ್ರಿಟೀಕರಣಕ್ಕೆ ಕಾರಣಕರ್ತ. ಇಂಥ ನೂರಾರು, ಸಾವಿರಾರು ವಿಶೇಷ ವರದಿ ಮಾಡಿ, ನೇರ ನಿರ್ಬೀತ ಅಂಕಣಕಾರನಾಗಿಯೂ ಹೆಸರು ಮಾಡಿದವರು.


ಕೈ ತುಂಬ ಸಂಬಳ ಬರುವ ಕೆಲಸ ಇದ್ದುಕೊಂಡು ತಮ್ಮ ಮೂಗಿಗೆ ನೇರವಾಗಿ ಅಭಿಪ್ರಾಯಗಳನ್ನು ತಮ್ಮ ಸಿದ್ಧಾಂತದ ಪತ್ರಿಕೆಗಳಲ್ಲಿ ಹೇರಿ ಪ್ರಖ್ಯಾತ ಅಂಕಣಕಾರರಾಗುವುದು ಸುಲಭ. ಆದರೆ ಪತ್ರಕರ್ತನಾಗಿ ಸಮಾಜ ಕಳಕಳಿ, ಮಾನವೀಯ ಮತ್ತು ನಿಷ್ಪಕ್ಷಪಾತ ನೆಲೆಯಲ್ಲಿ ವರದಿಗಳನ್ನು ಮಾಡುವುದರ ಜತೆಗೆ ಅಂಕಣಕಾರನಾಗಿ ಗುರುತಿಸಿಕೊಳ್ಳುವುದು ಬಹಳ ಕಷ್ಟ.


ಅಂತಹ ಅಂಧಾಭಿಮಾನಿಗಳ ಗೋಜಿಗೆ ಹೋಗದೆ ಸೂಕ್ಷö್ಮ ಮತಿಗಳು ಮತ್ತು ಪ್ರಾಜ್ಞರ ಮೆಚ್ಚುಗೆ ಗಳಿಸಿರುವ ಜಿತೇಂದ್ರ ಕುಂದೇಶ್ವರ, ಅಬ್ಬರ ಪ್ರಚಾರ ಇಲ್ಲದೆ ತಣ್ಣಗೆ ತನ್ನ ಕೆಲಸ ಮಾಡಿಕೊಂಡು ಅತ್ಯಂತ ಸರಳವಾಗಿ ತಾನು ಬದುಕಿ ಸಮಾಜಕ್ಕೆ ಅದನ್ನೇ ಮಾದರಿ ಎಂದು ಹೇಳುತ್ತಿರುವ ಪತ್ರಕರ್ತ.


ತೋರಿಕೆಗಾಗಿ ನೈತಿಕತೆಯನ್ನು ಬದಿಗಿಟ್ಟು ಕೇವಲ ಸೆಲೆಬ್ರಿಟಿಯಾಗುವ ಧಾವಂತಕ್ಕೆ ಹೋಗದೆ ತನ್ನದೇ ಶೈಲಿಯ ವ್ಯಕ್ತಿತ್ವದಿಂದ ಸಾವಿರಾರು ಸ್ತುಪ್ತ ಅಭಿಮಾನಿ ಬಳಗ ಪಡೆದ, ಹಲವರ ಹೃದಯಗೆದ್ದವರು.


ಎಲ್ಲಕ್ಕಿಂತ ಮಿಗಿಲಾಗಿ ತನ್ನ ತಾಯಿ-ತಂದೆಯ ಪ್ರೀತಿಯ ಮಗನಾಗಿ, ಒಡಹುಟ್ಟಿದವರ ಜೊತೆಗಾರನಾಗಿ, ತನ್ನ ಇಬ್ಬರು ರತ್ನಗಳಾದ ರಿಶಿಕಾ ಹಾಗೂ ಪುತ್ರ ವಿಶ್ವತೇಜನ ಪ್ರತಿಭೆಗಳಿಗೆ ಬೆಂಬ ಲವಾಗಿ, ಹೆಂಡತಿ ಸಂಧ್ಯಾರ ಪ್ರೀತಿಯ ಪತಿಯಾಗಿ, ಸ್ನೇಹಿತರಿಗೆ ಪ್ರಿಯಮಿತ್ರನಾಗಿ ಸಾರ್ಥಕ ಬದುಕು. ಪತ್ರಿಕಾ ರಂಗದ ಜತೆ ಜತೆಗೂ ಕಲೆ, ಸಂಸ್ಕೃತಿ- ಸಮಾಜ ಸೇವೆ ಮೂಲಕ ಸದ್ದಿಲ್ಲದೆ ಕಾರ‍್ಯ ನಿರ್ವಹಣೆ.


ಕಾರ್ಕಳದ ಕುಂದೇಶ್ವರ ದೇವಸ್ಥಾನ ಜೀರ್ಣೋದ್ಧಾರಗೊಳಿಸುವಲ್ಲಿ ತಂದೆಯ ಜತೆ ಹೆಗಲಿಗೆ ಹೆಗಲು ಕೊಟ್ಟ ಧರ್ಮಾತ್ಮ. ಅಲ್ಲಿ ಯಕ್ಷಗಾನ, ನಾಟಕ,ಸಂಗೀತ ಮುಂತಾದ ಕಲೆಗೆ ಆಶ್ರಯ ನೀಡಿದ್ದು ಮಾತ್ರವಲ್ಲದೆ ಕುಂದೇಶ್ವರ ಸಮ್ಮಾನ್ ಪ್ರಶಸ್ತಿ ಮೂಲಕ ಅನೇಕ ಶ್ರೇಷ್ಠ ಕಲಾವಿದರನ್ನು ಸನ್ಮಾನಿಸುವ ಮೂಲಕ ಕಲೆ ಸಂಸ್ಕೃತಿಗಾಗಿ ನಿತ್ಯ ಕೆಲಸ ಮಾಡುತ್ತಿದ್ದಾರೆ.


ಕಾಲೇಜು ಜೀವನದಲ್ಲಿ ಕನ್ನಡ ಸಿನಿಮಾಗಳಲ್ಲಿ ಪೋಷಕ ಕಲಾವಿದನಾಗಿ ಇದೀಗ ಮತ್ತೆ ತುಳು- ಕನ್ನಡ ಸಿನಿಮಾಗಳಲ್ಲಿ, ನಾಟಕಗಳಲ್ಲಿ ಮತ್ತೆ ಬಣ್ಣ ಹಚ್ಚುತ್ತಿದ್ದಾರೆ. ಗುಲಾಬ್ ಜಾಮೂನ್ ತುಳು ವೆಬ್ ಸಿರೀಸ್ ನಲ್ಲೂ ಅಭಿನಯ. ಪ್ರಾಪ್ತಿ ಕಲಾವಿದರ ನಾಟಕ ತಂಡದ ಸದಸ್ಯ. ಅಪ್ಪಟ ತುಳುವ, ಕನ್ನಡಾಭಿಮಾನಿ. 


ಅದೇ ಸ್ವಾಭಿಮಾನ,ಅದೇ ಹಾಸ್ಯಪ್ರಜ್ಞೆ..ಯಾವುದೇ ಆಮಿಷಗಳಿಗೆ ಒಳಗಾಗದೇ ನಿಷ್ಠೂರವಾದಿ. ಜನಸಾಮಾನ್ಯರ ಒಳ್ಳೆಯ ಕೆಲಸಗಳನ್ನು ಪತ್ರಿಕಾ ವರದಿಗಳ ಮೂಲಕ ಮುಖ್ಯವಾಹಿನಿಗೆ ತೋರಿಸಿ ಕೊಟ್ಟು, ಪ್ರಭಾವಿಗಳು, ರಾಜಕಾರಣಿಗಳು, ಸಂಸ್ಥೆಗಳು ದಾರಿ ತಪ್ಪಿದಾಗ, ದಾರಿ ತಪ್ಪಿಸುವಾಗ ಯಾವ ಮುಲಾಜು ಇಲ್ಲದೆ ಖಂಡಿಸಿದ ನಿರ್ಭೀತ ಪತ್ರಕರ್ತ. ಜೀವನ ಜತೆಗೆ ಕಲೆ - ಸಂಸ್ಕೃತಿ ಯ ನ್ನು ಮೈಗೆ ಅಂಟಿಸಿಕೊಂಡವರು. 


ಪತ್ರಕರ್ತರ ಯಕ್ಷಗಾನದಲ್ಲಿ ಶ್ರೀದೇವಿಯ ಪಾತ್ರ, ಪ್ರಾಪ್ತಿ ಕಲಾವಿದರು ನಾಟಕ ಕೂಟದಲ್ಲಿ ಬುದ್ಯಂತನಾಗಿ ಪಾತ್ರಗಳಿಗೆ ವಿಭಿನ್ನ ಮೆರಗು ಕೊಟ್ಟವರು.


ಹುದ್ದೆಗಳು: ದಕ್ಷಿಣ ಕನ್ನಡ ಪತ್ರಕರ್ತರ ಸಂಘದ ಜಿಲ್ಲಾ ಕೇಂದ್ರ ಕಾರ್ಯದರ್ಶಿ, ಪತ್ರಕರ್ತರ ಸಹಕಾರಿ ಸಂಘದ ನಿರ್ದೇಶಕ.

ಉಡುಪಿ ಪತ್ರಕರ್ತರ ಸಂಘದ ಮಾಜಿ ಉಪಾಧ್ಯಕ್ಷ, ಕಾರ್ಕಳ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ. ಯಕ್ಷಕೂಟ ಕದ್ರಿ ಇದರ ಸಲಹೆಗಾರ. ಕುಂದೇಶ್ವರ ದೇವಸ್ಥಾನದ ಆನುವಂಶಿಕ ಧರ್ಮದರ್ಶಿ.


ಪ್ರಮುಖ ಪ್ರಶಸ್ತಿಗಳು: 2003ರಲ್ಲಿ ವಡ್ಡರ್ಸೆ ಪುರಸ್ಕಾರ.

2004ರಲ್ಲಿ ಗ್ರಾಮೀಣ ವರದಿಗಾರಿಕೆಗಾಗಿ ಪ.ಗೋ. ಪ್ರಶಸ್ತಿ. ಮಾನವ ಧರ್ಮ ಜಾಗೃತಿ ವೇದಿಕೆಯಿಂದ ಉಡುಪಿ ಜಿಲ್ಲಾ ವರ್ಷದ ಪತ್ರಕರ್ತ ಪ್ರಶಸ್ತಿ.

ಬೀದಿ ಬದಿಯ ಮಕ್ಕಳ ಸಂಕಷ್ಟಗಳ ಕುರಿತು ಸಮಾಜದಲ್ಲಿ ಬೆಳಕು ಚೆಲ್ಲುವ ಮಾನವೀಯ ವರದಿಗಾಗಿ ಪ್ರತಿಷ್ಠಿತ ಚರಕ ಪ್ರಶಸ್ತಿ 2009ರಲ್ಲಿ ಗೌರವಾನ್ವಿತ ರಾಜ್ಯಪಾಲ ಹಂಸರಾಜ ಭಾರಧ್ವಾಜ್ ಅವರಿಂದ ಸ್ವೀಕಾರ. 2018ರಲ್ಲಿ ವಿಶ್ವ ಸಂವಾದ ಕೇಂದ್ರದಿಂದ ತಿರುಮಲ ತಾತಾಚಾರ್ಯ ಪ್ರಶಸ್ತಿ.

-ಮಾಲತಿ ಶೆಟ್ಟಿ ಮಾಣೂರು.(ಉಪಯುಕ್ತ ನ್ಯೂಸ್)ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post