|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಕನ್ನಡ ಭವನ- ಗ್ರಂಥಾಲಯದ ವಿಂಶತಿ ವರ್ಷಾಚರಣೆ: ವಿ.ಬಿ. ಕುಳಮರ್ವ, ಡಾ. ಹರಿಕೃಷ್ಣ ಭರಣ್ಯರಿಗೆ ಗುರುನಮನ ಅ.16ಕ್ಕೆ

ಕನ್ನಡ ಭವನ- ಗ್ರಂಥಾಲಯದ ವಿಂಶತಿ ವರ್ಷಾಚರಣೆ: ವಿ.ಬಿ. ಕುಳಮರ್ವ, ಡಾ. ಹರಿಕೃಷ್ಣ ಭರಣ್ಯರಿಗೆ ಗುರುನಮನ ಅ.16ಕ್ಕೆ

 



ಕಾಸರಗೋಡು: ಸೀತಮ್ಮ ಪುರುಷ ನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯದ ವಿಂಶತಿ ವರ್ಷಾಚರಣೆಯ ಅಂಗವಾಗಿ ಗುರು ನಮನ ಕಾರ್ಯಕ್ರಮ ಅ.16ರಂದು ಶನಿವಾರ ಅಪರಾಹ್ನ 2:30ರಿಂದ ಜರಗಲಿದೆ.


ಹಿರಿಯ ಸಾಹಿತಿ, ಕವಿ, ಶಿಕ್ಷಣ ತಜ್ಞ, ನಿಘಂಟು ರಚನೆಕಾರರಾದ ಶ್ರೀ ವಿ.ಬಿ ಕುಳಮರ್ವ ಮತ್ತು ಹಿರಿಯ ಸಾಹಿತಿ, ಸಂಶೋಧಕ ಡಾ. ಹರಿಕೃಷ್ಣ ಭರಣ್ಯ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಿ ಗುರುನಮನ ಸಲ್ಲಿಸಲಾಗುವುದು ಎಂದು ಸಂಘಟಕರ ಪ್ರಕಟಣೆ ತಿಳಿಸಿದೆ.


ಕಾಸರಗೋಡಿನ ಸೀತಮ್ಮ ಪುರುಷ ನಾಯಕ ಸ್ಮಾರಕ ಕನ್ನಡ ಭವನ ಗ್ರಂಥಾಲಯವು ಭಾಷೆ, ಸಾಹಿತ್ಯ, ಸಂಸ್ಕೃತಿ, ಸಂವರ್ಧನೆಗಾಗಿ ಕಳೆದ ಎರಡು ದಶಕಗಳಿಂದ ವಿವಿಧ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದೆ. ಈ ಸರಣಿಯಲ್ಲಿ ನಾಡು-ನುಡಿ, ಸಾಹಿತ್ಯ, ಕಲೆ, ಶಿಕ್ಷಣ, ಸಾಮಾಜಿಕ ಕ್ಷೇತ್ರಗಳ ಸಾಧಕರಾದ ಡಾ. ನಾಡೋಜ ಕಯ್ಯಾರ ಕಿಂಞಣ್ಣ ರೈ, ಯಕ್ಷಗಾನದ ಭೀಷ್ಮ ಡಾ. ಶೇಣಿ ಗೋಪಾಲಕೃಷ್ಣ ಭಟ್‌, ಸಾಹಿತಿ- ಸಂಶೋಧಕ ಪಿ. ವೆಂಕಟರಾಜ ಪುಣಿಂಚಿತ್ತಾಯ, ಹಿರಿಯ ಭಾಷಾಂತರಕಾರ ಎ. ನರಸಿಂಹ ಭಟ್ಟ, ಕನ್ನಡ ಹೋರಾಟಗಾರರಾದ ನ್ಯಾಯವಾದಿ ಎ.ವಿ ಶ್ಯಾನ್‌ಭೋಗ್‌, ನ್ಯಾಯವಾದಿ ಅಡೂರು ಉಮೇಶ ನಾಯಕ್‌, ಮೃದಂಗ ವಿದ್ವಾನ್‌ ಕೆ. ಬಾಬು ರೈ ಸಹಿತ 36 ಮಂದಿಯನ್ನು ಇದುವರೆಗೆ  ಗೌರವಿಸಿ ಗುರುನಮನ ಸಲ್ಲಿಸಲಾಗಿದೆ.


ಡಾ. ಹರಿಕೃಷ್ಣ ಭರಣ್ಯ ಅವರು ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಪಾಣಾಜೆಯವರು. ಕೆಲವು ವರ್ಷಗಳಿಂದ ಕುಂಬಳೆ ಸಮೀಪದ ನಾರಾಯಣ ಮಂಗಲದಲ್ಲಿ ವಾಸ್ತವ್ಯ ಹೂಡಿದ್ದಾರೆ. ಮಧುರೈ ಕಾಮರಾಜ ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಪ್ರಾಧ್ಯಾಪಕರಾಗಿ, ಕನ್ನಡ ವಿಭಾಗದ ಮುಖ್ಯಸ್ಥರಾಗಿ ಸುಮಾರು ಎರಡೂವರೆ ದಶಕಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಕಥೆ, ಕವನ, ಕಾದಂಬರಿ, ನಾಟಕ, ವಿಮರ್ಶೆ, ಸಂಶೋಧನೆ, ಅನುವಾದ ಸೇರಿದಂತೆ 40ರಷ್ಟು ಕೃತಿಗಳನ್ನು ರಚಿಸಿದ್ದಾರೆ.

ಕನ್ನಡ, ತುಳು, ತಮಿಳು, ಮಲಯಾಳಂ, ತೆಲುಗು, ಹವ್ಯಕ ಭಾಷೆ ಸೇರಿದಂತೆ ದಕ್ಷಿಣ ಭಾರತದ ಭಾಷೆಗಳ ಜತೆಗೆ ಸೇತುವೆಯಾಗಿ ಕೆಲಸ ಮಾಡಿದ್ದಾರೆ. ಸಂಶೋಧನ ಮಾರ್ಗದರ್ಶಕರಾಗಿ ದುಡಿದಿದ್ದಾರೆ. 'ಹೊಸಗನ್ನಡ ಸಾಹಿತ್ಯದ ಉಗಮ ಮತ್ತು ವಿಕಾಸ' ಎಂಬ ಅವರ ಸಂಶೋಧನ ಮಹಾ ಪ್ರಬಂಧವು ಒಂದು ಆಕರ ಗ್ರಂಥವಾಗಿದೆ.


ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಗುರುಗಳಾದ ವಿ.ಬಿ ಕುಳಮರ್ವ ಅವರು ಸುದೀರ್ಘ ಕಾಲ ಕನ್ನಡ ಭಾಷೆ, ಸಾಹಿತ್ಯವನ್ನು ಬೋಧಿಸುತ್ತಾ ಬಂದಿದ್ದಾರೆ. ತರಬೇತಿ, ಕಮ್ಮಟ, ವಿಚಾರಸಂಕಿರಣಗಳ ಸಂಪನ್ಮೂಲ ವ್ಯಕ್ತಿಯಾಗಿ ಅವರದು ಬಿಡುವಿಲ್ಲದ ದುಡಿಮೆ. ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ತೊಡಗಿಸಿಕೊಂಡಿರುವ ವಿ.ಬಿ ಕುಳಮರ್ವ ಅವರು ಸಿರಿಗನ್ನಡ ವೇದಿಕೆಯ ಕಾಸರಗೋಡು ಜಿಲ್ಲಾ ಘಟಕದ ಅಧ್ಯಕ್ಷರು. ಕರ್ನಾಟಕ ಗಮಕ ಕಲಾ ಪರಿಷತ್ತು ಕೇರಳ ಗಡಿನಾಡ ಘಟಕದ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ. ಹಲವಾರು ಪ್ರತಿಷ್ಠಿತ ಪ್ರಶಸ್ತಿ, ಪುರಸ್ಕಾರಗಳನ್ನು ಪಡೆದಿದ್ದಾರೆ. ಪೆರ್ಲ ಶ್ರೀ ಸತ್ಯನಾರಾಯಣ ಹೈಸ್ಕೂಲ್‌ನಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಅವರು, ವೃತ್ತಿ ಮತ್ತು ಪ್ರವೃತ್ತಿಗಳಿಂದ ಗಡಿನಾಡು ಕಾಸರಗೋಡಿಗೆ ಕೀರ್ತಿ ತಂದಿದ್ದಾರೆ.


ಕನ್ನಡ ಭವನ ಗ್ರಂಥಾಲಯದ ಬಗ್ಗೆ: 

ಕೆ. ವಾಮನ ರಾವ್ ಬೇಕಲ್‌ ಅವರು ಸ್ಥಾಪಿಸಿದ ಕನ್ನಡ ಭವನ ಮತ್ತು  ಗ್ರಂಥಾಲಯವು ಕರ್ನಾಟಕ ಸರಕಾರದ ಸಾರ್ವಜನಿಕ ಗ್ರಂಥಾಲಯ ಇಲಾಖೆಯಿಂದ ಮಾನ್ಯತೆ ಪಡೆದ ಸಂಸ್ಥೆಯಾಗಿದೆ. ಕಾಸರಗೋಡಿನ ನುಳ್ಳಿಪ್ಪಾಡಿಯಲ್ಲಿ ಕನ್ನಡ ಭವನ ಸಾಂಸ್ಕೃತಿಕ ಸಮುಚ್ಚಯದಲ್ಲಿ ಇದರ ಕಾರ್ಯಾಲಯವಿದೆ. ಪ್ರಸ್ತುತ ಇದರ ಗೌರವಾಧ್ಯಕ್ಷರಾಗಿ ಪ್ರದೀಪ್ ಬೇಕಲ್‌, ಅಧ್ಯಕ್ಷರಾಗಿ ರಾಧಾಕೃಷ್ಣ ಕೆ. ಉಳಿಯತ್ತಡ್ಕ, ಪ್ರಧಾನ ಕಾರ್ಯದರ್ಶಿಯಾಗಿ ಜಗದೀಶ್‌ ಕೂಡ್ಲು ಮತ್ತು ಕೋಶಾಧಿಕಾರಿಯಾಗಿ ಸಂಧ್ಯಾರಾಣಿ ಟೀಚರ್‌ ಕಾರ್ಯನಿರ್ವಹಿಸುತ್ತಿದ್ದಾರೆ.


0 Comments

Post a Comment

Post a Comment (0)

Previous Post Next Post