||ಜಾಹೀರಾತು|| ಬೆಂಗಳೂರಿನ ಪ್ರಣವ ಮೀಡಿಯಾ ಹೌಸ್ ಪ್ರಕಾಶನದ ಹೆಮ್ಮೆಯ ಪ್ರಕಟಣೆ | ಡಾ ಗುರುರಾಜ ಪೋಶೆಟ್ಟಿಹಳ್ಳಿ ರವರ 'ಸತ್ಸಂಗ ಸಂಪದ' ಪ್ರೇರಣಾದಾಯಿ ಅಂಕಣಗಳ ಸಂಕಲನ ಖರೀದಿಸಲು ಇಚ್ಚಿಸುವವರು ಸಂಪರ್ಕಿಸಿ: 739369621 (ಪುಟಗಳು- 248, ಬೆಲೆ: ಎರಡು ನೂರು ರೂಪಾಯಿಗಳು) | ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಮಾದಕ ದ್ರವ್ಯದ ನಶೆ: ದಾರಿ ತಪ್ಪಿದ 'ಮಗ'

ಮಾದಕ ದ್ರವ್ಯದ ನಶೆ: ದಾರಿ ತಪ್ಪಿದ 'ಮಗ'

ಎತ್ತ ಸಾಗುತ್ತಿದೆ ಯುವ ಜನತೆ?ಕಳೆದೆರಡು ದಿನಗಳಿಂದ ಮಾಧ್ಯಮಗಳಲ್ಲಿ ಹೆಚ್ಚು ಸದ್ದು ಮಾಡುತ್ತಾ ದಿನವಿಡೀ ಓತಪ್ರೋತವಾಗಿ ಸಾಮಾಜಿಕ  ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಚಾರವೆಂದರೆ ಖ್ಯಾತ ಚಲನಚಿತ್ರ ನಟರೊಬ್ಬರ ಮಗ 'ಆರ್ಯನ್‍ ಖಾನ್’ ಎಂಬಾತ ಮಾದಕ ದ್ರವ್ಯ ಸೇವಿಸಿ ನಶೆ ಏರಿಸಿಕೊಂಡು ಐಷಾರಾಮಿ ಹಡಗಿನಲ್ಲಿ ಗೆಳೆಯ–ಗೆಳತಿಯರ ಜೊತೆ ಮಾದಕ ದ್ರವ್ಯದ ಜೊತೆ ಸಿಕ್ಕಿ ಬಿದ್ದ ವಿಚಾರ. ಇಲ್ಲಿ ಹೆಚ್ಚು ಚರ್ಚೆಗೊಳಗಾಗುತ್ತಿರುವ ವಿಚಾರ ಆತನ ಬಗೆಗಿಂತಲೂ ಆತನ ಅಪ್ಪನ ಬಗ್ಗೆಯೇ ಕೇಂದ್ರೀಕೃತವಾಗಿರುವುದು ವಿಪರ್ಯಾಸ. ಇದು ಇಲ್ಲಿ ಈ ಹೊತ್ತಿಗೆ ಎಷ್ಟು ಸಮಂಜಸ ಮತ್ತು ನ್ಯಾಯಸಮ್ಮತ ಎನ್ನುವುದು ಅವರವರ ಭಾವಕ್ಕೆ ಮತ್ತು ವಿವೇಚನೆಗೆ ಬಿಟ್ಟು ಬಿಡೋಣ. ಆದರೆ ನಿಜವಾಗಿಯೂ ಭವ್ಯ ಭಾರತದ ಭವಿಷ್ಯದ ಬಗ್ಗೆ ಕನಸು ಕಾಣುತ್ತಾ ದೇಶದ ಅಭಿವೃದ್ಧಿಗೆ ಕಾಣಿಕೆ ಮಾಡಬೇಕಾಗಿದ್ದ ಯುವಜನರು ಹಾದಿ ತಪ್ಪುತ್ತಿರುವುದರ ಬಗ್ಗೆ ಯಾರೂ ಚಿಂತಿತರಾಗದಿರುವುದು ಬಹಳ ಬೇಸರದ ವಿಚಾರ.


ಬನ್ನಿ ಶಾರುಖ್ ಖಾನ್ ಮಗ ಆರ್ಯನ್ ಖಾನ್ ವಿಚಾರಕ್ಕೆ ಬರೋಣ. ಆತ ಸುಖದ ಸುಪ್ಪತ್ತಿಗೆಯಲ್ಲಿ  ಮೆರೆಯುತ್ತಾ ಚಿನ್ನದ ಚಮಚವನ್ನೇ ಬಾಯಲ್ಲಿಟ್ಟುಕೊಂಡು ಹುಟ್ಟಿದ ಹುಡುಗ. ಆಳು, ಕಾಳು, ಬಂಗ್ಲೆ, ಕಾರು, ಹಣ, ಹೆಣ್ಣು ಎಲ್ಲವೂ ಆತನ ಕಾಲ ಬುಡದಲ್ಲಿ ಕೈಕಾಲು ಮುರಿದುಕೊಂಡು ಬಿದ್ದಿರುವುದನ್ನು ಜಗತ್ತೇ ನೋಡಿದೆ. ಇಲ್ಲಿ  ಆತನಿಗೆ  ಆತನ ಹೆತ್ತವರು ಏನು ಸಂಸ್ಕಾರ ನೀಡಿದ್ದಾರೆ. ಹೇಗೆ ಬೆಳೆಸಿದ್ದಾರೆ ಎನ್ನುವುದರ ಬಗ್ಗೆ ಎಲ್ಲೆಡೆ ಚರ್ಚೆಗಳು ಹಗಲಿರುಳು ನಡೆಯುತ್ತಿದೆ. ಆದರೆ ಒಂದಂತೂ ಸತ್ಯ. ಒಬ್ಬ ಸಾಮಾನ್ಯ ಮಧ್ಯಮ ವರ್ಗದ ಜನರ ಮಕ್ಕಳಿಗೆ  ಜೀವನಪೂರ್ತಿ ಒದ್ದಾಡುತ್ತಾ ತಮ್ಮ ಸಣ್ಣ ಪುಟ್ಟ ಕನಸುಗಳು ಸಾಕಾರಗೊಳಿಸುವಾಗ ಅರ್ಧ ಜೀವನವೇ ಮುಗಿದು ಹೋಗಿರುತ್ತದೆ, ವಿದ್ಯಾಭ್ಯಾಸ, ಸ್ವಂತ ಕೆಲಸ, ಸ್ವಂತ ಕಾರು ಸ್ವಂತ ಮನೆ, ಮದುವೆ ಹೀಗೆ ಜೀವನದಲ್ಲಿ ಒಂದೊಂದಾಗಿ ಹೊಂದಿಸುವಾಗ ಉಳಿದ ವಿಚಾರಗಳ ಬಗ್ಗೆ ತಲೆ ಕೆಡಿಸಿಕೊಳ್ಳಲು ಸಮಯವೇ ಇರುವುದಿಲ್ಲ. ಈ ಸಣ್ಣಪುಟ್ಟ ಕನಸುಗಳು ಸಾಕಾರಗೊಳಿಸಿಕೊಳ್ಳುವುದು ಅವರಿಗೆ ಸಿಗುವ ಕಿಕ್ ಅಥವಾ ನಶೆ. ಅವರ ಜೀವನವನ್ನು ನಂದನವನ್ನಾಗಿಸುತ್ತದೆ. ಉಳಿದ ವಿಚಾರದ ಬಗ್ಗೆ ತಲೆಕೆಡಿಸಿಕೊಳ್ಳಲು ಅವರಿಗೆ ಸಮಯವೂ ಇರುವುದಿಲ್ಲ ಮತ್ತು ಆಸಕ್ತಿಯೂ ಇರುವುದಿಲ್ಲ. ಯಾಕೆಂದರೆ ಜೀವನದ ಸಣ್ಣಪುಟ್ಟ ಘಟನೆಗಳಲ್ಲಿಯೂ ಸ್ವರ್ಗಸುಖ ಅನುಭವಿಸುವ ಮಧ್ಯಮ ವರ್ಗದ ಜನರು ಅದರಲ್ಲಿಯೇ ತಮ್ಮ ಜೀವನದ ಸಾರ್ಥಕತೆ ಪಡೆಯುತ್ತಾರೆ.


ಹಾಗೆಂದ ಮಾತ್ರಕ್ಕೆ ಎಲ್ಲರೂ ಇದೇ ಹಾದಿ ತುಳಿಯುತ್ತಾರೆ ಎಂದರ್ಥವಲ್ಲ. ಎಷ್ಟೋ ಸಾವಿರದಲ್ಲಿ ಒಂದೆರಡು ಮಂದಿ  ಮೋಜಿಗಾಗಿ ಅಥವಾ ಕೆಟ್ಟ ಗೆಳೆಯರ ಸಹವಾಸದಿಂದ ದಾರಿ ತಪ್ಪಿರಬಹುದು. ಆದರೆ ನೂರರಲ್ಲಿ 99 ಶೇಕಡಾ ಮಕ್ಕಳು ತನ್ನ ಪುಟ್ಟ ಕನಸುಗಳಿಗೆ ಜೀವತುಂಬುತ್ತಾ ಅದರಲ್ಲಿ  ತನ್ನ ಅಪ್ಪ, ಅಮ್ಮ, ಅಕ್ಕ, ತಂಗಿಯರ ಜೊತೆ ಸುಖ ಪಡೆಯುತ್ತಾ ಕೊನೆಗೊಂದು ದಿನ ದೇಶಕ್ಕೆ ಆಸ್ತಿಯಾಗಿರುತ್ತಾನೆ. ಇನ್ನೂ ಆರ್ಯನ್‍ಖಾನ್ ವಿಚಾರಕ್ಕೆ ಬರೋಣ. ಅನುವಂಶಿಕವಾಗಿ ಆತನಿಗೆ ಸಕಲ ಸುಖ ಸಂಪತ್ತು, ಭೋಗ, ಭಾಗ್ಯಗಳು ಎಲ್ಲವೂ ಅನಾಯಾಸವಾಗಿ ಹರಿದು ಬಂದಿದೆ. ಜೀವನದಲ್ಲಿ ಕಿಕ್ ಸಿಗಬೇಕಾದ ಸಣ್ಣ ಪುಟ್ಟ ಕನಸುಗಳು ಆತನಿಗೆ ಅಗತ್ಯವೇ ಇರಲಿಲ್ಲ. ಕಲಿಕೆ, ರ್ಯಾಂಕ್, ಸ್ವಂತ ಕೆಲಸ, ಸ್ವಂತ ಮನೆ, ಸ್ವಂತ ಕಾರು ಇವೆಲ್ಲದ್ದಕ್ಕೂ ಪರದಾಡಬೇಕಾದ ಅನಿವಾರ್ಯತೆ ಹಾಗೂ ಜರೂರತ್ತು ಆತನಿಗೆ ಇರಲೇ ಇಲ್ಲ. ಲಕ್ಷ್ಮೀದೇವಿ ಆತನ ಮನೆಯಲ್ಲಿ ವಿಜೃಂಭಿಸುತ್ತಿದ್ದಳು.


ತನಗೆ ಬಯಸಿದ್ದೆಲ್ಲ ಬಾಹ್ಯ ಜಗತ್ತಿಗೆ ಸುಖ ಮತ್ತು ಸಂತಸ ನೀಡುವ ಹಣ, ಭೋಗ, ಭಾಗ್ಯಗಳು ಅನಾಯಾಸವಾಗಿ ದಕ್ಕಿದ್ದವು. ಆತನಿಗೆ ಜೀವನದಲ್ಲಿ ಕಿಕ್ ಕೊಡುವಂತಹ ಯಾವುದೇ ದಾರಿ ಇರಲಿಲ್ಲ. ಎಲ್ಲವೂ ಅನಾಯಾಸವಾಗಿ ದೊರಕಿತ್ತು. ತಂದೆ ಚಿತ್ರರಂಗದಲ್ಲಿ ಯಾವತ್ತೂ ಬ್ಯುಸಿಯಾಗಿದ್ದರು. ಇಂತಹ ಸಂದರ್ಭದಲ್ಲಿ ಸಾಮಾನ್ಯವಾಗಿ ಹೆತ್ತವರ ಮಾರ್ಗದರ್ಶನ, ಪ್ರೋತ್ಸಾಹ ಮತ್ತು  ಒಳ್ಳೆಯ ಗೆಳೆಯರ ಸಹವಾಸ ಇದ್ದಲ್ಲಿ ಆತ ದಾರಿ ತಪ್ಪುತ್ತಿರಲಿಲ್ಲವೋ ಏನೋ. ಜೀವನದಲ್ಲಿ ಸಿಗಬೇಕಾದ ಕಿಕ್/ನಶೆ ಸಿಗದೇ ಹೋದಾಗ ಆತ ಬಹುಶ: ಬಹಳ ಸುಲಭವಾಗಿ ನಶೆ ಸಿಗುವ ದಾರಿಯನ್ನೇ ಆಯ್ಕೆ ಮಾಡಿಕೊಂಡಿರುವುದು ದುರಂತ ಎಂದರೂ ತಪ್ಪಾಗಲಾರದು. ಸುಲಭವಾಗಿ ದಕ್ಕುವ ಹಣ, ಹೆಣ್ಣು, ಮಾದಕ ದ್ರವ್ಯ ಆತನಿಗೆ ಅನಾಯಾಸವಾಗಿ ದಕ್ಕಿದಾಗ (ಸರಿಯಾದ ಮಾರ್ಗದರ್ಶನ ಕೊರತೆಯಿಂದಲೂ ಇರಬಹುದು) ಆತ ಅದರಲ್ಲಿಯೇ ಸುಖ ಪಡೆಯಲಾರಂಭಿಸಿದ.  ಪತ್ರಿಕೆಗಳಲ್ಲಿ ಬಂದ ವರದಿಯ ಪ್ರಕಾರ ಆತ ಕಳೆದ ನಾಲ್ಕು ವರ್ಷಗಳಿಂದ ಮಾದಕ ದ್ರವ್ಯ ಬಳಸುತ್ತಿದ್ದಾನೆ. ಮತ್ತು ಹೆತ್ತವರಿಗೂ ಈ ವಿಚಾರ ತಿಳಿದಿದೆ. ಈ ವಿಚಾರ ಮಾತ್ರ ಸತ್ಯವಾದಲ್ಲಿ ಅದೊಂದು ಬಹಳ ದೌರ್ಭಾಗ್ಯದ ವಿಚಾರವೆಂದರೂ ತಪ್ಪಾಗಲಾರದು.


ಜನಪ್ರಿಯತೆಯ ಉತ್ತುಂಗದಲ್ಲಿದ್ದಾಗ ಹಣ, ಗೌರವ, ಸನ್ಮಾನ, ಹಾರ, ತುರಾಯಿ ಹಾಕಿಸಿಕೊಂಡ ಶಾರೂಕ್‍ ಖಾನ್ ಈಗ ನನಗೆ ವಿಚಾರ ತಿಳಿದಿಲ್ಲ, ನನ್ನ ಅರಿವಿಗೆ ಬರಲಿಲ್ಲ. ನನ್ನ ಮಗ ಇನ್ನೂ ಚಿಕ್ಕವನು ಎಂದು ಹೇಳಿ ತಪ್ಪಿಕೊಳ್ಳಲು ಸಾಧ್ಯವೇ ಇಲ್ಲ. ಏಕೆಂದರೆ ಆರ್ಯನ್ 23 ವರ್ಷದ ನವ ಯುವಕ. ಆತ ಮಗುವಂತೂ ಅಲ್ಲವೇ ಅಲ್ಲ. ಸರಿಯಾಗಿ ವಿದ್ಯಾಭ್ಯಾಸ ಮಾಡಿ ಸಂಸ್ಕಾರ ಪಡೆದಿದ್ದಲ್ಲಿ ಆತ ದಾರಿ ತಪ್ಪುತ್ತಿರಲಿಲ್ಲ ಮತ್ತು ಭವ್ಯ ಭಾರತದ ಪ್ರಜ್ಞಾವಂತ ಪ್ರಜೆಯಾಗಬೇಕಿತ್ತು. ಆದರೆ ವಿಧಿ ಲಿಖಿತ ಬೇರೆಯೇ ಇತ್ತು. ಆಕಾಶದಿಂದ ಪ್ರಪಾತಕ್ಕೆ ಬಿದ್ದಂತಹ ಅನುಭವ ಶಾರೂಕ್‍ ಖಾನ್‍ಗೂ ಆಗಿರಬಹುದು. ನನ್ನನ್ನು ಯಾಕೆ ದೂಷಿಸುತ್ತೀರಿ, ನನ್ನನ್ನು ಹೊಣೆಗಾರ ಮಾಡಬೇಡಿ ಎಂದೂ ಆತ ಪಲಾಯನವಾದ ಅನುಸರಿಸಿದ್ದಲ್ಲಿ ಅದು ‘ತಂದೆ’ ತನಕ್ಕೆ ಮಾಡಿದ ಅಪಚಾರವಾಗಬಹುದು. ಶಾರೂಕ್‍ಖಾನ್ ಅವರಿಗೆ ಈಗ ಜನರ ಮತ್ತು ಅಭಿಮಾನಿಗಳ ಸಹಕಾರ ಸಹಾನುಭೂತಿ ಮತ್ತು ಬೆಂಬಲ ಬೇಕು ನಿಜ. ಹಾಗೆಂದ ಮಾತ್ರಕ್ಕೆ ಆತ ಮಾಡಿದ ತಪ್ಪು ಮತ್ತು ಆತನ ಮಗ ಮಾಡಿದ ತಪ್ಪಿಗೆ ಆತ ಹೊಣೆಗಾರಿಕೆ ತೆಗೆದುಕೊಳ್ಳಲೇಬೇಕು ಮತ್ತು ಜಗತ್ತನ್ನು ಎದುರಿಸಿ ತನ್ನ ಮಗನನ್ನು ಸರಿದಾರಿಗೆ ತಂದು ಯೋಗ್ಯ ಪ್ರಜೆಯಾಗಿಸಲೇ ಬೇಕು.


ಇವತ್ತು ಆರ್ಯನ್‍ಖಾನ್ ಸಿಕ್ಕಿ ಬಿದ್ದಿದ್ದಾನೆ. ಹೀಗೆ ಸಿಕ್ಕಿ ಬೀಳದ ಎಷ್ಟೋ ಮಕ್ಕಳು ಇದ್ದಾರೆ. ಇದು ಇಲ್ಲಿಗೆ  ನಿಲ್ಲಬೇಕು. ಈಗ ಪರಸ್ಪರ ದೋಷಾರೋಪಣೆ ಮಾಡಿ ಕಾಲು ಎಳೆಯುವ ವೇದಿಕೆ ಆಗಬಾರದು. ಶಾರೂಕ್‍ಖಾನ್ ಮತ್ತು ಆತನ ಮಗ ಹಾಗೂ ಗೆಳೆಯರು ತಪ್ಪು ಮಾಡಿದ್ದಲ್ಲಿ ಶಿಕ್ಷೆ ಆಗಲೇಬೇಕು. ಉಪ್ಪು ತಿಂದವರು ನೀರು ಕುಡಿಯಲೇ ಬೇಕು. ಈ ಘಟನೆ ಬರೀ ಶಾರೂಕ್‍ ಖಾನ್ ಕುಟುಂಬಕ್ಕೆ ಪಾಠವಾಗಬಾರದು.  ಇಡೀ ಭಾರತ ದೇಶದ ಎಲ್ಲ ಹೆತ್ತವರಿಗೂ ಹಾಗೂ ದಾರಿ ತಪ್ಪಿದ ಮತ್ತು ದಾರಿ ತಪ್ಪುತ್ತಿರುವ ಮಕ್ಕಳಿಗೂ  ಪಾಠವಾಗಬೇಕು. ಹೀಗಾಗಿ ತನ್ನನ್ನು ಟೀಕಿಸುವುದು ಸರಿಯಲ್ಲ ಎಂದು ಉಡಾಫೆ ಮಾತನಾಡಿ ತನ್ನ ಮಗ ಮುಗ್ಧ ಎಂಬ ಪೋಸು ನೀಡಿದ್ದಲ್ಲಿ ಶಾರೂಕ್‍ಖಾನ್ ಬರೀ ಚಿತ್ರರಂಗದಲ್ಲಿ ಮಾತ್ರ ಹಿರೋ ನಿಜ ಜೀವನದಲ್ಲಿ ವಿಲನ್ ಎಂಬಂತಾಗಬಹುದು. ಚಿತ್ರರಂಗದಲ್ಲಿ ಎರಡು ದಶಕಗಳ ಕಾಲ ಹೀರೋ ಆಗಿ ವಿಜೃಂಭಿಸಿದ ಆತನಿಗೆ ಈಗ ನಿಜವಾಗಿಯೂ ನಿಜಜೀವನದಲ್ಲಿ ಹೀರೋ ಆಗುವ ಸದವಕಾಶ ಬಂದಿದ. ಒಬ್ಬ ಒಳ್ಳೆಯ ತಂದೆಯಾಗಿ ಸಮಾಜಕ್ಕೆ ಮಾದರಿ ವ್ಯಕ್ತಿಯಾಗಬೇಕಿದ್ದಲ್ಲಿ ತನಿಖೆಗೆ ಸಂಪೂರ್ಣ ಸಹಕಾರ ನೀಡಿ ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ಮಾಡಬೇಕು ಮತ್ತು ದಾರಿ ತಪ್ಪಿದ ಮಗನನ್ನು ಸರಿ ದಾರಿಗೆ ತಂದು ನಿಜಜೀವನದಲ್ಲಿಯೂ ಆತನನ್ನು ಹೀರೋ ಎನ್ನುವಂತೆ ಮಾಡುವ ಸದವಕಾಶ ಶಾರೂಕ್‍ ಖಾನ್‍ಗೆ ಈಗ ಬಂದಿದೆ. ಮುಖವಾಡ ಧರಿಸಿ ಬದುಕುತ್ತಿರುವ ಹತ್ತು ಹಲವು ಚಿತ್ರರಂಗದ ಹೀರೋಗಳಿಗೆ ಈಗ ನಿಜವಾಗಿಯೂ ಮುಖವಾಡ ಕಳಚುವ ಸಮಯ ಬಂದಿದೆ. ಇನ್ನಾದರೂ ತಪ್ಪು ಒಪ್ಪಿಕೊಂಡು ಸರಿದಾರಿಗೆ ಬರುವಲ್ಲಿ ಪ್ರಯತ್ನ ಮಾಡಿದಲ್ಲಿ ಅದುವೇ ನಮ್ಮ ಭಾರತಾಂಬೆಗೆ ನೀಡುವ ಬಹುದೊಡ್ಡ ಗೌರವ ಎಂದರೂ ತಪ್ಪಾಗಲಾರದು.


-ಡಾ|| ಮುರಲೀ ಮೋಹನ್ ಚೂಂತಾರು

BDS, MDS, DNB, MOSRCSEd (U.K), FPFA, M.B.A

ಸುರಕ್ಷಾ ದಂತ ಚಿಕಿತ್ಸಾಲಯ

ಹೊಸಂಗಡಿ- 671323

ಮೊ- 9845135787


(ಉಪಯುಕ್ತ ನ್ಯೂಸ್)ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ0 Comments

Post a Comment

Post a Comment (0)

Previous Post Next Post