|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ರಾಜ್ಯದ ಎಲ್ಲಾ ದೇವಾಲಯಗಳ ರಕ್ಷಣೆ ಮಾಡಬೇಕು, ಪಾವಿತ್ರ್ಯ ಕಾಪಾಡಬೇಕು: ಡಿ. ವೀರೇಂದ್ರ ಹೆಗ್ಗಡೆ

ರಾಜ್ಯದ ಎಲ್ಲಾ ದೇವಾಲಯಗಳ ರಕ್ಷಣೆ ಮಾಡಬೇಕು, ಪಾವಿತ್ರ್ಯ ಕಾಪಾಡಬೇಕು: ಡಿ. ವೀರೇಂದ್ರ ಹೆಗ್ಗಡೆ

 ಶಬರಿಮಲೆ ಅಯ್ಯಪ್ಪ ಸೇವಾ ಸಮಾಜ: ರಾಜ್ಯ ಕಾರ್ಯಕಾರಿ ಸಮಿತಿ ಸಭೆ ಧರ್ಮಸ್ಥಳದಲ್ಲಿ


ಉಜಿರೆ: ಧರ್ಮಕ್ಕೆ ಶಿಸ್ತಿನ ಆವರಣ ಬೇಕು. ಶಿಸ್ತು ಪ್ರಧಾನವಾದ ಹಿಂದೂ ಧರ್ಮದಲ್ಲಿ ಬದ್ಧತೆ, ಸಂಯಮ ಮತ್ತು ಸ್ವಚ್ಛತೆಗೆ ಆದ್ಯತೆ ಇದೆ. ಎಲ್ಲಾ ಪವಿತ್ರ ತೀರ್ಥಕ್ಷೇತ್ರಗಳಲ್ಲಿ ಶ್ರದ್ಧಾ-ಭಕ್ತಿಯೊಂದಿಗೆ ಭಕ್ತಾದಿಗಳು ಸಂಯಮದಿಂದ ಹಾಗೂ ಶಿಸ್ತಿನಿಂದ ವರ್ತಿಸಿ ಪಾವಿತ್ರ್ಯ ಕಾಪಾಡಬೇಕು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು.


ಅವರು ಭಾನುವಾರ ಧರ್ಮಸ್ಥಳದಲ್ಲಿ ಮಹೋತ್ಸವ ಸಭಾ ಭವನದಲ್ಲಿ ಶಬರಿಮಲೆ ಅಯ್ಯಪ್ಪ ಸೇವಾ ಸಮಾಜದ ರಾಜ್ಯ ಕಾರ್ಯಕಾರಿ ಸಮಿತಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.


ನಂಬಿಕೆ ಮತ್ತು ಸಂಪ್ರದಾಯದ ಹೆಸರಿನಲ್ಲಿ ಅಂಧಾನುಕರಣೆ ಸಲ್ಲದು. ತೀರ್ಥಕ್ಷೇತ್ರಗಳಲ್ಲಿ ಎಲ್ಲರೂ ಶಿಸ್ತಿನಿಂದ ವರ್ತಿಸಿ, ಸ್ವಚ್ಛತೆ ಕಾಪಾಡಬೇಕು. ಧರ್ಮಸ್ಥಳದಲ್ಲಿ ನೇತ್ರಾವತಿ ನದಿಯಲ್ಲಿ ಭಕ್ತರು ಸ್ನಾನ ಮಾಡಿ ಬಟ್ಟೆ, ಸಾಬೂನು, ಪ್ಲಾಸ್ಟಿಕ್ ಮೊದಲಾದ ತ್ಯಾಜ್ಯಗಳನ್ನು ನದಿ ನೀರಿಗೆ ಹಾಕಿ ಕಲುಷಿತ ಮಾಡುತ್ತಿರುವ ಬಗ್ಯೆ ಅವರು ತೀವ್ರ ಅಸಮಾಧಾನ ಮತ್ತು ಆತಂಕ ವ್ಯಕ್ತಪಡಿಸಿದರು. ಸಾಕಷ್ಟು ಸಿಬ್ಬಂದಿ ಹಾಗೂ ಸೂಚನಾ ಫಲಕಗಳೊಂದಿಗೆ ಮುಂಜಾಗರೂಕತೆ ವಹಿಸಿದರೂ ಸಂಪ್ರದಾಯ ಮತ್ತು ಅಂಧಾನುಕರಣೆ ನೆಪದಲ್ಲಿ ನದಿ ನೀರು ಮಲಿನವಾಗುತ್ತಿದೆ. ಅಯ್ಯಪ್ಪ ಭಕ್ತರೆಲ್ಲ ಧರ್ಮಸ್ಥಳದಲ್ಲಿ ದೇವರ ದರ್ಶನ ಪಡೆದು ಶಬರಿ ಮಲೆಗೆ ಹೋಗುತ್ತಾರೆ. ಅವರ ತೀರ್ಥಯಾತ್ರೆಯ ಶಿಸ್ತು, ಸಂಯಮ ಮತ್ತು ಬದ್ಧತೆಯನ್ನು ಶ್ಲಾಘಿಸಿದರು.


ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಆಶ್ರಯದಲ್ಲಿ ವರ್ಷದಲ್ಲಿ ಎರಡು ಬಾರಿ, ಆಗಸ್ಟ್‌ 15 ಮತ್ತು ಮಕರ ಸಂಕ್ರಾಂತಿಯ ದಿನ ಏಪ್ರಿಲ್ 14ರಂದು ರಾಜ್ಯದ ಚರ್ಚ್, ಮಸೀದಿ, ಬಸದಿ ಹಾಗೂ ದೇವಸ್ಥಾನಗಳು ಸೇರಿದಂತೆ ಎಲ್ಲಾ ಶ್ರದ್ಧಾ ಕೇಂದ್ರಗಳ ಸ್ವಚ್ಛತಾ ಕಾರ್ಯ ನಡೆಸಲಾಗುತ್ತಿದೆ.


ಅಯ್ಯಪ್ಪ ಸೇವಾ ಸಮಾಜದ ಎಲ್ಲಾ ಸದಸ್ಯರು ಕೂಡಾ ತೀರ್ಥ ಕ್ಷೇತ್ರಗಳಲ್ಲಿ ಶಿಸ್ತು, ಸಂಯಮ, ಸ್ವಚ್ಛತೆಯೊಂದಿಗೆ ಪಾವಿತ್ರ್ಯವನ್ನು ಕಾಪಾಡಿ ತೀರ್ಥಕ್ಷೇತ್ರಗಳ ರಕ್ಷಣೆ ಮಾಡಬೇಕು ಎಂದು ಸಲಹೆ ನೀಡಿದರು.


ತೀರ್ಥಕ್ಷೇತ್ರಗಳು ಪ್ರವಾಸೋದ್ಯಮ ಕೇಂದ್ರಗಳಾಗಬಾರದು. ಪ್ರವಾಸಿ ತಾಣ್ರಗಳಾದರೆ ಪಂಚ ತಾರಾ ಹೋಟೆಲ್‍ಗಳು, ಚಲನಚಿತ್ರ ಮಂದಿರ, ಬಾರ್‍ಗಳು, ಉದ್ಯಮಗಳು ಹಾಗೂ ಆಧುನಿಕ ಸವಲತ್ತುಗಳು ಹೆಚ್ಚಾಗಿ ಕ್ಷೇತ್ರದ ಪಾವಿತ್ರ್ಯಕ್ಕೆ ಹಾನಿಯಾಗುತ್ತದೆ ಎಂದು ಹೇಳಿದರು.


ಶುಭಾಶಂಸನೆ ಮಾಡಿದ ಶಾಸಕ ಹರೀಶ್ ಪೂಂಜ ಧರ್ಮಸ್ಥಳಕ್ಕೂ, ಶಬರಿಮಲೆಯ ಅಯ್ಯಪ್ಪ ಭಕ್ತರಿಗೂ ಅವಿನಾಭಾವ ಸಂಬಂಧವಿದ್ದು ಪ್ರತಿವರ್ಷ ಎಲ್ಲಾ ಅಯ್ಯಪ್ಪ ಭಕ್ತರೂ ಧರ್ಮಸ್ಥಳದ ಮೂಲಕವೇ ಶಬರಿಮಲೆಗೆ ಯಾತ್ರೆ ಮಾಡುತ್ತಾರೆ. ತಾನು ಕೂಡಾ ಅಜ್ಜನಿಂದ ಪ್ರೇರಣೆ ಪಡೆದು ಈಗಾಗಲೆ ಎಂಟು ಬಾರಿ ಶಬರಿ ಮಲೆ ಯಾತ್ರೆ ಮಾಡಿರುವುದಾಗಿ ಅವರು ತಿಳಿಸಿದರು.


ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಶಬರಿಮಲೆ ಅಯ್ಯಪ್ಪ ಸೇವಾ ಸಮಾಜದ ರಾಷ್ಟ್ರೀಯ ಸಮಿತಿಯ ಮಹಾಪೋಷಕರಾಗಿರುವುದಕ್ಕೆ ಹರೀಶ್ ಪೂಂಜ ಅವರನ್ನು ಅಭಿನಂದಿಸಿದರು.


ಕರ್ನಾಟಕದ 23 ಜಿಲ್ಲೆಗಳಲ್ಲಿ ಶಬರಿಮಲೆ ಅಯ್ಯಪ್ಪ ಸೇವಾ ಸಮಾಜದ ಸಮಿತಿಗಳು ಕಾರ್ಯನಿರ್ವಹಿಸುತ್ತಿವೆ.


ರಾಷ್ಟ್ರೀಯ ಸಮಿತಿಯ ಅಧ್ಯಕ್ಷ ಟಿ.ಬಿ. ಶೇಖರ್ ಪ್ರಾಸ್ತಾವಿಕವಾಗಿ ಮಾತನಾಡಿ ಸಮಿತಿಯ ವತಿಯಿಂದ ಶಬರಿಮಲೆಯಲ್ಲಿ ಅನ್ನದಾನ, ಪ್ಲಾಸ್ಟಿಕ್ ನಿರ್ಮೂಲನೆ, ಪಾವಿತ್ರ್ಯ ರಕ್ಷಣೆ, ಮಹಿಳೆಯರಿಗೆ ದೇವರ ದರ್ಶನಕ್ಕೆ ಅವಕಾಶ ಮೊದಲಾದ ಕಾರ್ಯಗಳನ್ನು ಮಾಡಲಾಗಿದೆ ಎಂದರು.


ಸಂಯೋಜಕ ಪಿ. ಎಸ್. ಪ್ರಕಾಶ್, ವಿ. ಕೃಷ್ಣಪ್ಪ, ಕೋಶಾಧಿಕಾರಿ ವಿನೋದ್ ಮತ್ತು ಸಂಘಟನಾ ಕಾರ್ಯದರ್ಶಿ ತಮಿಳುನಾಡಿನ ದೊರೈ ಶಂಕರ್ ಜಿ ಉಪಸ್ಥಿತರಿದ್ದರು.


ದಕ್ಷಿಣ ಕನ್ನಡ ಜಿಲ್ಲಾ ಘಟಕದ ಕೋಶಾಧಿಕಾರಿ ಮಂಗಳೂರಿನ ಆನಂದ ಶೆಟ್ಟಿ ಸ್ವಾಗತಿಸಿದರು. ಉಡುಪಿ ಜಿಲ್ಲಾ ಘಟಕದ ಅಧ್ಯಕ್ಷರಾದ ರಾಧಾಕೃಷ್ಣ ಮೆಂಡನ್ ಧನ್ಯವಾದವಿತ್ತರು.


ರಾಜ್ಯ ಪ್ರಧಾನ ಕಾರ್ಯದರ್ಶಿ ಕೃಷ್ಣಯ್ಯ ಕಾರ್ಯಕ್ರಮ ನಿರ್ವಹಿಸಿದರು.


ಶಬರಿಮಲೆ ಅಯ್ಯಪ್ಪ ಸೇವಾ ಸಮಾಜದ ಸದಸ್ಯರು ಶನಿವಾರ ಸಂಜೆ ನೇತ್ರಾವತಿ ನದಿಯಲ್ಲಿ ಸ್ವಚ್ಛತಾ ಅಭಿಯಾನ ನಡೆಸಿದರು. ಭಾನುವಾರ ಧರ್ಮಸ್ಥಳದಲ್ಲಿ ದೇವಸ್ಥಾನದ ವಠಾರ ಹಾಗೂ ರತ್ನಗಿರಿಯಲ್ಲಿ (ಬಾಹುಬಲಿ ಬೆಟ್ಟ) ಸ್ವಚ್ಛತೆ ಕಾರ್ಯ ನಡೆಸಿದರು.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ



0 Comments

Post a Comment

Post a Comment (0)

Previous Post Next Post