||ಜಾಹೀರಾತು|| ಬೆಂಗಳೂರಿನ ಪ್ರಣವ ಮೀಡಿಯಾ ಹೌಸ್ ಪ್ರಕಾಶನದ ಹೆಮ್ಮೆಯ ಪ್ರಕಟಣೆ | ಡಾ ಗುರುರಾಜ ಪೋಶೆಟ್ಟಿಹಳ್ಳಿ ರವರ 'ಸತ್ಸಂಗ ಸಂಪದ' ಪ್ರೇರಣಾದಾಯಿ ಅಂಕಣಗಳ ಸಂಕಲನ ಖರೀದಿಸಲು ಇಚ್ಚಿಸುವವರು ಸಂಪರ್ಕಿಸಿ: 739369621 (ಪುಟಗಳು- 248, ಬೆಲೆ: ಎರಡು ನೂರು ರೂಪಾಯಿಗಳು) | ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಆತ್ಮೋದಕ- ಆತ್ಮ ನಿಷ್ಕಳಂಕವಾದರೆ ಜೀವಿಗಳಿಗೇಕೆ ಕಷ್ಟ ಬರುತ್ತದೆ?

ಆತ್ಮೋದಕ- ಆತ್ಮ ನಿಷ್ಕಳಂಕವಾದರೆ ಜೀವಿಗಳಿಗೇಕೆ ಕಷ್ಟ ಬರುತ್ತದೆ?


 

ಹೀಗೆ ಒಂದು ದಿನ ಲೋಕಾಭಿರಾಮ ಮಾತಾಡುವಾಗ ಮಗಳು ಕೇಳಿದಳು. ಆತ್ಮ ನಿಷ್ಕಳಂಕವಾದರೆ ಜೀವಿಗಳಿಗೆ ಕಷ್ಟ ಸುಖ ಯಾಕೆ ಬರುತ್ತದೆ ಎಂದು. ಅವಳೇನೋ ಪ್ರಶ್ನೆ ಕೇಳಿ ಬಚಾವಾದಳು. ಅವಳಿಗೆ ಅರ್ಥವಾಗುವ ಹಾಗೆ ಅಥವಾ ನನಗೆ ಅರ್ಥ ಆದ ಹಾಗೆ ವಿವರಿಸಿ ಹೇಳುವುದು ಮಾತ್ರ ನನ್ನ ಹೊಣೆಯಾಯಿತು. ಸರಿ ತಾಳ್ಮೆ ಇದ್ದರೆ ಹೇಳುವೆ ಎಂದು ಮುಂದುವರಿಸಿದೆ. ಕೇಳುವ ತಾಳ್ಮೆ ಅವಳಿಗೂ ಇತ್ತು, ಹೇಳುವ ಆಸಕ್ತಿ ನನಗೂ ಇತ್ತು.


ನಾನು ಹೇಳತೊಡಗಿದೆ. ಆತ್ಮ ನಿಷ್ಕಳಂಕವಾದರೂ ಅದಕ್ಕೆ ಕರ್ಮ ಲೇಪವಿದೆ. ಯಾವುದೇ ಕಾಯವಿರದೆ ಆತ್ಮ ಕಾಣಿಸದು ಮಾತ್ರವಲ್ಲ ಅದಕ್ಕಂಟಿದ ಕರ್ಮಫಲವನ್ನೂ ಅನುಭವಿಸಲಾಗದು. ಆದ್ದರಿಂದ ಒಂದು ಶರೀರದಿಂದ ಹೊರಟ ಜೀವಾತ್ಮ ಇನ್ನೊಂದು ಶರೀರ ಪ್ರವೇಶಿಸುವವರೇಗೆ ತಟಸ್ಥವಾಗಿರುತ್ತದೆ. ಆ ಸಮಯದಲ್ಲಿ ಅದಕ್ಕೆ ಕರ್ಮ ಲೇಪವಿದ್ದರೂ ಇರದಂತೆಯೇ ಇರುತ್ತದೆ. ಸೀಲ್ ಮಾಡಿಟ್ಟ ವಸ್ತುವಿನಂತೆ. ಯಾವಾಗ ಜೀವಾತ್ಮ ಕಾಯ ಪ್ರವೇಶವಾಯಿತೋ ಆವಾಗಲೇ ಅದರ ನಿಜ ಬಣ್ಣ ಬಯಲಾಗುವುದು. ಯಾವ ಶರೀರದೊಳಗೆ ಜೀವಾತ್ಮನ ಪ್ರವೇಶವೋ ಆಯಾ ಶರೀರಧರ್ಮಾನುಷ್ಠಾನ.  


ಅದಕ್ಕೊಂದು ಒಳ್ಳೆಯ ಉದಾಹರಣೆಯೆಂದರೆ ನೀರು. ಆತ್ಮಗಳು ಅನಂತ ಇರುವಂತೆಯೇ ನೀರೆಂಬುದೂ ಅನಂತ. ಯಾವ ಆತ್ಮ ಯಾವ ಶರೀರದೊಳಗೆ ಸೇರುವುದೋ ಆ ಶರೀರದ ಗುಣಧರ್ಮ ಆತ್ಮ ಒಪ್ಪಿಕೊಳ್ಳಬೇಕು ಮಾತ್ರವಲ್ಲ ಅದರಂತೆಯೇ ವರ್ತಿಸಬೇಕು, ಆ ಕಾಯದೊಳಗಿರುವಷ್ಟೂ ಸಮಯ. ಅಂತೆಯೇ ನೀರೆನ್ನುವುದು ಸರ್ವಾಕಾರವಾದರೂ ಯಾವ ಪಾತ್ರೆಯಲ್ಲಿ ಹಾಕುತ್ತೇವೋ ಅದರ ಆಕಾರದಲ್ಲಿಯೇ ಇರುತ್ತದೆ. ಅಲ್ಲಿಗೆ ಆ ನೀರಿಗೆ ಒಂದು ಆಕಾರ ಬಂತು ಪಾತ್ರೆ ಎಂಬ ಕಾಯದಿಂದ. ಪಾತ್ರೆಯಲ್ಲಿನ ನೀರು ಜೀವಾತ್ಮ ಆದರೆ ಪಾತ್ರೆ ಅದರ ಕಾಯ. ನಮಗೆ ನೀರು ಕಾಯಿಸಬೇಕಾದರೆ ನಾವು ಪಾತ್ರೆಗೆ ಬೆಂಕಿ ಕೊಡುತ್ತೇವೆ. ಬಿಸಿ ಆಗಬೇಕಾದದ್ದು ನೀರು ಆದರೆ ಬೆಂಕಿಯ ಆಘಾತ ಪಾತ್ರೆಗೆ. ಅದೇರೀತಿ ಜೀವಾತ್ಮಕ್ಕೆ ಲೇಪವಾದ ಕರ್ಮಫಲಗಳು ನಶಿಸಬೇಕಾದರೆ ಕಾಯಕ್ಕೆ ತಾಪತ್ರಯಗಳು ಬರಲೇಬೇಕು. ಕರ್ಮಗಳು ಜೀವಾತ್ಮನದು ಅನುಭವಿಸುವುದು ಜೀವಾತ್ಮ ಧರಿಸಿದ ಕಾಯ. ಹೇಗೆಂದರೆ ನಾವು ನೇರವಾಗಿ ನೀರನ್ನು ಕಾಯಿಸಲಾಗದು. ಅದಕ್ಕೊಂದು ಆಧಾರವಾಗಿ ಪಾತ್ರೆ ಬೇಕೇಬೇಕು. ಅಂತೆಯೇ ನೇರವಾಗಿ ಜೀವಾತ್ಮನಿಗೆ ಕರ್ಮಫಲ ಅನುಭವಿಸಲಾಗದು, ಶರೀರವೆಂಬ ಮಾಧ್ಯಮ ಬೇಕೇ ಬೇಕು. ಆದ್ದರಿಂದ ಹುಟ್ಟಿನ ಮುಂಚೆ ಎಲ್ಲ ಜೀವಾತ್ಮರೂ ಒಂದೇ ಆದರೂ ಹುಟ್ಟಿದ ಮೇಲೆ ಕಾಯದಿಂದ ಹೊರ ಬರುವಲ್ಲಿವರೇಗೆ ಪ್ರತ್ಯೇಕವೇ. ಹೇಗೆ ಪಾತ್ರೆಗೆ ಹಾಕುವ ಮುಂಚೆ ಎಲ್ಲ ನೀರು ಒಂದೇ ಆದರೂ ಪಾತ್ರೆಗೆ ಹಾಕಿದ ಮೇಲೆ ಪ್ರತ್ಯೇಕವಾಗುವಂತೆ.  


ಇನ್ನು ಪ್ರತಿಯೊಂದು ಪಾತ್ರೆಯ ನೀರು ಒಂದಲ್ಲ ಒಂದು ದಿನ ಆವಿಯಾಗಲೇಬೇಕು. ಒಂದಲ್ಲ ಒಂದು ದಿನ ಕಾಯದೊಳಗಿಂದ ಆತ್ಮ ಹೊರಟು ಹೋದಂತೆ. ಪಾತ್ರಕ್ಕನುಗುಣವಾಗಿ, ಪ್ರಭಾವಕ್ಕನುಗುಣವಾಗಿ ನೀರು ಇಂಗುವ ಕಾಲದಲ್ಲಿ ಹೆಚ್ಚು ಕಡಿಮೆ ಇರಬಹುದು ಜೀವಿಯ ಆಯುಷ್ಯದಂತೆ. ಕರ್ಮಗಳೆಂಬ ಇಂಧನದೊಡನೆ ಕರ್ಮಫಲವೆಂಬ ಅಗ್ನಿಯು ಉರಿಯತೊಡಗಿ ಕಾಯವೆಂಬ ಪಾತ್ರೆಯು ಬಿಸಿಯಾಗತೊಡಗಿದಾಗ ನೀರೆಂಬ ಆತ್ಮವು ಚಡಪಡಿಸತೊಡಗುವುದು ಸಹಜ. ಒಂದು ಹಂತದವರೆಗೆ ಅಗ್ನಿಯ ಶಾಖವನ್ನು ನೀರು ತಡೆದುಕೊಂಡರೂ ಅಗ್ನಿಯು ಹೆಚ್ಚಾದಂತೆ ಅಥವಾ ಪ್ರಖರವಾದಂತೆ ಆವಿಯಾಗಲು ಪ್ರಾರಂಭವಾಗುವುದೂ ಸಹಜವೇ ತಾನೆ. ಹೇಗೆಂದರೆ ಕಾಯಕ್ಕೊದಗಿದ ಮುದಿತನ, ವ್ಯಾಧಿ ಮುಂತಾದವು ಒಂದು ಹಂತ ದಾಟಿದ ಮೇಲೆ ಜೀವವನ್ನೇ ಹಿಂಡಲು ಪ್ರಾರಂಭಿಸಿದಂತೆ. ನೀರು ಆವಿಯಾದಂತೆ ಅಗ್ನಿಯ ಪ್ರಖರತೆಯು ಕಡಿಮೆಯಾದರೆ ಉಳಿದ ನೀರಾದರೂ ಸಹಜವಾಗಿರಬಹುದು. ಇಲ್ಲದಿದ್ದರೆ ನೀರು ಪೂರ್ತಿ ಆವಿಯಾಗಿ ಪಂಚಭೂತಗಳಲ್ಲಿ ಒಂದಾಗಿ ಪಾತ್ರೆ ಮಾತ್ರ ಉಳಿಯುವಂತೆ, ಕಾಯದ ತಾಪತ್ರಯಗಳು ಕಡಿಮೆಯಾದರೆ ಉಳಿದ ಆಯುಷ್ಯವನ್ನಾದರೂ ಸಹಜವಾಗಿ ಕಳೆದುಕೊಳ್ಳಬಹುದು ಬದಲಾಗಿ ತಾಪತ್ರಯಗಳು ಜಾಸ್ತಿ ಆದರೆ ಜೀವಾತ್ಮ ಪಂಚಭೂತಗಳಲ್ಲಿ ಒಂದಾಗಿ ಕಾಯವನ್ನು ಬಿಟ್ಟು ಹೋಗುವುದು.  


ಸಹಜತೆಗೆ ವಿರೋಧವಾದರೆ ಇಲ್ಲಿ ಯಾವುದೂ ಉಳಿಯಲಾರದು. ಪಾತ್ರೆಯ ಶಾಖ ಹೆಚ್ಚಾದರೆ ನೀರಿಗೆ ಅಸಹಜತೆ ಉಂಟಾದರೆ, ನೀರು ಆ ಪಾತ್ರೆಯನ್ನೇ ತೊರೆದೀತು ಹೊರತು ಶಾಖದೊಡನೆ ಹೊಂದಾಣಿಕೆ ಮಾಡಿಕೊಳ್ಳಲಾರದು. ಅಂತೆಯೇ ಜೀವಾತ್ಮನಿಗೆ ಸಹಜತೆಗೆ ಕೊರತೆಯಾದಲ್ಲಿ ಒಂದು ಕ್ಷಣವೂ ಯೋಚಿಸದೆ ದೇಹ ತ್ಯಾಗ ಮಾಡಬಹುದೇ ಹೊರತು ದೇಹದೊಡನೆ ರಾಜಿಯ ಮಾತೇ ಇಲ್ಲ. ಸಹಜ ಬದುಕು, ಸಹಜ ಬಾಳು ಅಂದರೆ ಪ್ರಕೃತಿಗೆ ಅನುಕೂಲವಾಗಿರುವುದು. ಇನ್ನಿತರ ಬದುಕು ಪ್ರಕೃತಿ ವಿರೋಧವು. 


ಯಾವುದೇ ಪ್ರತಿಕೂಲವಿಲ್ಲದಿದ್ದರೂ ಒಂದು ಕಾಲದ ಮೇಲೆ ಜೀವಾತ್ಮ ಕಾಯವನ್ನು ಬಿಡಲೇಬೇಕು. ಕಾಲಾಂತರದಲ್ಲಿ ಕಾಯವು ಶಿಥಿಲವಾಗುವುದು ಸಹಜವೇ. ಅಂತಹ ಕಾಯದಲ್ಲಿ ಜೀವಾತ್ಮ ಕಾಯಕ್ಕೆ ಘಾಸಿ ಮಾಡದೆ ತೊರೆದು ಹೋಗುವುದು ಜತೆಗೇ ಅಂದಿನವರೇಗೆ ಮಾಡಿದ ಸಕಲ ಕರ್ಮ ಫಲದೊಂದಿಗೆ. ಪಾತ್ರೆಯಲ್ಲಿಯ ನೀರು ಕೂಡ ಹಾಗೆಯೇ ಯಾವುದೇ ಬೆಂಕಿ ಮುಂತಾದುದರ ಸಹವಾಸವಿಲ್ಲದಿದ್ದರೂ ಪ್ರಕೃತಿಗೆ ಸಹಜವಾಗಿ ಕಾಲಾಂತರದಲ್ಲಿ ನಿಧಾನವಾಗಿ ಆವಿಯಾಗಿ ಪಾತ್ರೆಯನ್ನು ಬಿಟ್ಟು ಹೊರ ಹೋಗುವುದು ಜೀವಿಯ ಸಹಜ ಮರಣದಂತೆ.  


ಕಾಯಕ್ಕೊದಗಿದ ವ್ಯಾಧಿಯೋ, ಆಯುಷ್ಯವೋ, ಹೆಚ್ಚಾದಾಗ ವೈದ್ಯನೆಂಬ ಜೀವರಕ್ಷಕ ನಮಗೆ ರಕ್ಷಣೆ ಕೊಡಬಹುದೆಂಬ ಭಾವ ಇರುವುದು ಸಹಜ. ಕೆಲವು ವೇಳೆ ಇದು ಅಲ್ಲಗೆಳೆಯುವಂತಿಲ್ಲ. ಹದ್ದು ಮೀರಿದಾಗ ವೈದ್ಯನೂ ಕೈಬಿಡಬೇಕು, ದೈವವೂ ಕೈ ಬಿಡಬೇಕು. ಯಾಕೆಂದರೆ ಜೀವ ಉಳಿಯದಂತೆ ಕಾಯ ಶಿಥಿಲವಾಗುವ ಕಾಲಕ್ಕೆ ಅನ್ಯ ಮಾರ್ಗಗಳೆಲ್ಲವೂ ಮುಚ್ಚಿ ಹೋಗುವುದು. ಅಂತೆಯೇ ಅಸಹಜತೆಯೆಂಬ ಅಗ್ನಿಯ ಪ್ರಖರತೆಗೆ ಕಾಯ ಮುರುಟಿ ಹೋಗುವುದೇ ಸಹಜವಾಗಿರುತ್ತದೆ. ಹೇಗೆ ನೀರಿಗೆ ಬೆಂಕಿ ಜಾಸ್ತಿ ಆದಾಗ ಕುದಿಯಲು ಪ್ರಾರಂಭವಾಗುತ್ತದೆ. ಆವಾಗ ಅದಕ್ಕೆ ವೈದ್ಯರ ಚಿಕಿತ್ಸೆಯಂತೆ ತಣ್ಣೀರು ಸುರಿಯಬಹುದು. ಆದರೆ ಉರಿಯುವ ಅಗ್ನಿಯ ಪ್ರಖರತೆ ಹೆಚ್ಚಾಗಿ ಸುರಿಯುವ ನೀರಿನ ಪ್ರಮಾಣ ಕಡಿಮೆಯಾದಂತೆ ನೀರು ಆವಿಯಾಗುವ ಪ್ರಕ್ರಿಯೆ ಪಾರ್ರಂಭವಾಗಿ ಅಂತಿಮವಾಗಿ ಪಾತ್ರೆ ಕೂಡ ನಾಶವೇ ಆಗುವುದು. ಆದ್ದರಿಂದ ನೀರಿಗೂ ಆತ್ಮಕ್ಕೂ ಒಂದು ಹೋಲಿಕೆ ಕಂಡರೆ ಅದು ತಪ್ಪಲ್ಲವಷ್ಟೆ. ಅದೇರೀತಿ ಅಪಘಾತಗಳಾಗಿ ಜೀವಾತ್ಮಗಳು ಕಾಯಬಿಟ್ಟು ಹೋಗುವಂತೆ ಈ ಪಾತ್ರೆಗಳೂ ಅಕಾಲದಲ್ಲಿ ಅಕಸ್ಮಾತ್ತಾಗಿ ಅಡ್ಡ ಬಿದ್ದೋ, ಒಡೆದು ಹೋಗಿಯೋ ನೀರನ್ನು ಚೆಲ್ಲುವುದಿದೆ. 

ಧಾರಣ ಶಕ್ತಿ ಇದ್ದರೂ, ಅವಶ್ಯಕತೆ ಇದ್ದರೂ ಕೆಲವೊಮ್ಮೆ ಅಚಾತುರ್ಯದಿಂದ ಆಗುವಂಥ ಪ್ರಮಾದಗಳು ಕೂಡ ಬಹಳ ದಂಡವನ್ನೇ ತೆರಬೇಕಾದಂಥವು ಆಗಿರುತ್ತವೆ.  


ಇಷ್ಟೆಲ್ಲ ಕೇಳಿಯಾದ ಮೇಲೆ ಮಗಳಿಗೆ ಸಮಾಧಾನವಾಯಿತು. ಆದರೂ ಇನ್ನೊಂದು ಪ್ರಶ್ನೆ ಆಕೆಯಲ್ಲಿ ಮೂಡಿತ್ತು. 'ನೀವೆಲ್ಲ ಹೇಳಿದ್ದು ಸರಿ. ಆದರೆ ಕೆಲವೊಮ್ಮೆ ಬೆಂಕಿಯು ಹೆಚ್ಚಾಗಿ ನೀರು ಉಕ್ಕಿ ಬೆಂಕಿಯನ್ನೇ ನಂದಿಸಿಬಿಡುತ್ತದೆ. ಇದನ್ನು ಹೇಗೆ ತಿಳಿದುಕೊಳ್ಳಬಹುದು?' ಎನ್ನಬೇಕೆ. 'ಆಹಾ ಒಳ್ಳೆಯ ಪ್ರಶ್ನೆಯನ್ನೇ ಕೇಳಿದೆ ಮಗಳೆ. ಉತ್ತರಿಸುವುದು ಸ್ವಲ್ಪ ಕಷ್ಟವೇ. ಆದರೂ ಪ್ರಯತ್ನಿಸುತ್ತೇನೆ' ಎಂದೆ. ಕೆಲವೊಮ್ಮೆ ಜೀವಿಯ ಸತ್ಯ ಧರ್ಮಕ್ಕನುಗುಣವಾಗಿ ದೇವರಿಗೆ ಕರುಣೆ ಬರುವುದಿದೆಯಂತೆ ಆವಾಗ ಆತ ಕಷ್ಟಗಳನ್ನು ಕಡಿಮೆ ಮಾಡಲು ಸಾಧ್ಯತೆಗಳಿವೆ. ಆವಾಗ ತಾನೇ ಬಂದು ನಮಗೆ ಸಹಾಯ ಮಾಡಲಾರ. ಬದಲಾಗಿ ನಮ್ಮಿಂದಲೇ ಶಮನ ಮಾಡಿಸುವ ವಿಧಾನವನ್ನು ಸೂಚಿಸಿ ಕೊಡುತ್ತಾನೆ. ಅದೇರೀತಿ ನೀರು ಉಕ್ಕಿ ಉಕ್ಕಿ ಬೆಂಕಿಗೆ ಬಿದ್ದಾಗ, ಬೆಂಕಿ ಉರಿಯುವ ಕರ್ಮಫಲವೆಂಬ ಇಂಧನವು ಕ್ಷೀಣಿಸಿದ್ದರೆ ಬಿದ್ದ ನೀರಿಗೆ ನಂದಿ ಹೋದಾಗ ಬೆಂಕಿ ಸಹಜವಾಗಿ ಕಡಿಮೆಯಾಗುತ್ತದೆ. ಹಾಗೂ ನೀರು ಸಹಜತೆಗೆ ಮರಳಲು ಪ್ರಾರಂಭವಾಗುತ್ತದೆ. ಅಂದರೆ ತನ್ನ ತನ್ನ ಸಮಸ್ಯೆಗಳಿಗೆ ತಮ್ಮಲ್ಲೇ ಪರಿಹಾರಗಳಿದ್ದರೆ ಮಾತ್ರ ಸಾಫಲ್ಯತೆ ಇರುವುದು ಹೊರತು ಅನ್ಯರಿಂದ ಸಿಗುವ ಸಹಾಯವೇ ಆಗಲಿ, ಸಾಂತ್ವನವೇ ಆಗಲಿ ಕ್ಷಣಿಕವೆಂದೇ ತಿಳಿಯುವುದು. ಸರಿ... ಮಗಳಿಗೂ ಖುಷಿಯಾಯಿತು. ನನಗೂ ಖುಷಿಯಾಯಿತು. ಪ್ರಶ್ನೆ ಮಾಡುವುದೂ ಒಂದು ಕಲೆ. ಆದರೆ ತಿಳಿದದ್ದನ್ನು ತಿಳಿಯುವಂತೆ ತಿಳಿಸಲು ಪರದಾಡಿತ್ತು ನನ್ನ ತಲೆ.....

*********

-ಬಾಲಕೃಷ್ಣ ಸಹಸ್ರಬುಧ್ಯೆ ಮುಂಡಾಜೆ.


(ಉಪಯುಕ್ತ ನ್ಯೂಸ್)ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post