ಪಣಿಯಾಡಿ ಪುರದ ಮೃಣ್ಮಯ ಗಣಪ

Upayuktha
0

ಉಡುಪಿಯ ಸಮೀಪದ ಒಂದು ಪುಟ್ಟ ಊರು ಪಣಿಯಾಡಿಯಲ್ಲಿ ವಿರಾಜಮಾನರಾಗಿರುವ ಶ್ರೀ ಶೇಷಾಸನ ಲಕ್ಷ್ಮೀ ಅನಂತ ಪದ್ಮನಾಭ ದೇವರ ದಿವ್ಯ ಸನ್ನಿಧಿಯಲ್ಲಿ ಪ್ರತೀ ವರ್ಷದಂತೆ ಊರಿನ ಯುವ ಬಳಗದ ಸದಸ್ಯರ ಸಹಕಾರದಿಂದ ಸುಂದರ ವರ್ಣ ವಿನಾಯಕನ ಹಬ್ಬಾಚರಣೆ ಬಹಳ ಸಂಭ್ರಮದಿಂದ ಸಾಗುತ್ತಿದೆ. ಬಣ್ಣ ಬಣ್ಣದ ವಿದ್ಯುತ್ ದೀಪಾಲಂಕಾರ, ಹೂವಿನ ಅಲಂಕಾರ, ಪೂಜಾ ವಿಧಿವಿಧಾನಗಳು ಭಕ್ತರ ಕಣ್ಮನ ಸೆಳೆಯುತ್ತಿದೆ. ಪುತ್ತಿಗೆ ಮಠದ ಆಡಳಿತ ಹೊಂದಿರುವ ಈ ಶ್ರೀದೇವಳದ ಜೀರ್ಣೋದ್ಧಾರದ ಕೆಲಸ ಕಾರ್ಯಗಳು ಒಂದು ಹಂತಕ್ಕೆ ಪೂರ್ಣಗೊಂಡಿದ್ದು ಒಂದಷ್ಟು ಸಾಮಾಜಿಕ ಅಡಚಣೆಗಳ ನಡುವೆಯೂ ಪೂರ್ಣತೆಯತ್ತ ಮುಖ ಮಾಡಿ ನಿಂತಿದೆ.


ಆದರೆ ಊರವರ ಹಾಗೂ ಉಡುಪಿಯ ಸಮಸ್ತ ಅನಂತ ಭಕ್ತರ ಸಹಕಾರದಿಂದ ನಿರಂತರ ವಿವಿಧ ಧರ್ಮ ಕಾರ್ಯಕ್ರಮಗಳು ಸಾಂಗವಾಗಿ ದೇವಳದಲ್ಲಿ ನೆರವೇರುತ್ತ ಬಂದಿದ್ದು ದೇವಳ ಭಕ್ತರನ್ನು ಕೈ ಬೀಸಿ ಕರೆಯುತ್ತಿದೆ. ಜೊತೆಗೆ ಭಕ್ತಿಯಿಂದ ಬೇಡಿಕೊಂಡ ಭಕ್ತರ ಇಷ್ಟಾರ್ಥಗಳು ನೆರವೇರುತ್ತಿರುವುದು ಸ್ಥಳ ಮಹಿಮೆಯೇ ಸರಿ. ಈ ಸಂದರ್ಭದಲ್ಲಿ ವಿನಾಯಕನ ಪ್ರತಿಷ್ಠೆಯ ನಾಲ್ಕು ದಿನದ ಸಂಭ್ರಮಾಚರಣೆಯಲ್ಲಿ ನಿತ್ಯವೂ ರಂಗಪೂಜೆ, ಹೂವಿನ ಪೂಜೆ, ಕಲ್ಪೋಕ್ತ ಪೂಜೆ, ಸರ್ವ ಸೇವೆ ಮತ್ತು ದೀಪೋತ್ಸವ ಇತ್ಯಾದಿ ಸೇವೆ ನಡೆಯುತ್ತಿದ್ದು ವಿನಾಯಕ ಚತುರ್ಥಿಯಂದು ನೂರಕ್ಕೂ ಮಿಕ್ಕಿದ ಸಾರ್ವಜನಿಕ ಗಣ ಹೋಮ ಮತ್ತು ಮತ್ತಿತರ ಪೂಜಾವಿಧಿವಿಧಾನಗಳು ಪ್ರಧಾನ ಅರ್ಚಕ ವೇದಮೂರ್ತಿ ರಾಘವೇಂದ್ರ ಭಟ್ ಹಾಗೂ ಶ್ರೀ ಹರಿಭಟ್ಟರ ನೇತೃತ್ವದಲ್ಲಿ ನಡೆಯುತ್ತಿದೆ.



ಭಾದ್ರಪದ ಶನಿವಾರದಂದು ಊರ ಸಮಸ್ತ ಮುತ್ಸದ್ದಿಯರಿಂದ ಸ್ಥಳದೇವತೆ ಪದ್ಮನಾಭನಿಗೆ ಹಾಗೂ ವಿಘ್ನವಿನಾಶಕ ಗಣಪನಿಗೆ ಗಂಟೆ ಜಾಗಟೆ, ತಾಳ, ಚಂಡೆವಾದನ, ಭಜನೆ ಪಾರಾಯಣಗಳ ಮೂಲಕ ಬಹಳ ವಿಜೃಂಭಣೆಯ ಸಾಮೂಹಿಕ ಹೂವಿನ ಪೂಜಾ ಕೈಂಕರ್ಯ ನಡೆದಿದ್ದು ಶ್ರೀದೇವರ ಸೌಂದರ್ಯವನ್ನು ವೀಕ್ಷಿಸಲು ಎರಡು ಕಣ್ಣುಗಳು ಸಾಲದಾಗಿತ್ತು. ಭಕ್ತರ ಸರ್ವಾಭೀಷ್ಟಗಳನ್ನು ಅನುಗ್ರಹಿಸುತ್ತಿರುವ ಈ ಬಾರಿಯ ಸುಂದರ ಗಣಪತಿಯ ಮೃಣ್ಮಯ ಮೂರ್ತಿಯ ವಿಸರ್ಜನಾ ಕಾರ್ಯಕ್ರಮವನ್ನು ದಿನಾಂಕ 13, ಸೋಮವಾರದಂದು ನಡೆಸಲಾಗುತ್ತದೆ.  


ದಿನಾಂಕ 19 ರಂದು ನಡೆಯುವ ಅನಂತನ ವ್ರತಾಚರಣೆಯ ಪರ್ವವನ್ನು ದೇವಳದಲ್ಲಿ ವಿಶೇಷ ರೀತಿಯಲ್ಲಿ ಆಚರಿಸುವ ಆಶಯವಿದ್ದು ಕದಳೀ ಪ್ರಿಯ ಅನಂತ ಪದ್ಮನಾಭನಿಗೆ ಅನಂತ ಕದಳಿ ಅಲಂಕಾರ ಗೈಯುವ ಸಮರ್ಪಿಸುವ ಯೋಚನೆ ಇದೆ. ಹಾಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆ ದಿನ ಆದಿದೇವ ಅನಂತನ ದಿವ್ಯ ದರ್ಶನ ಪಡೆದು ಕೃತಾರ್ಥರಾಗಬೇಕಾಗಿ ಶ್ರೀದೇವಳದ ಜೀರ್ಣೋದ್ದಾರ ಸಮಿತಿಯ ಸಂಚಾಲಕ ಶ್ರೀ ನಾಗರಾಜ ಆಚಾರ್ಯ ಹಾಗೂ ಸಮಿತಿಯ ಪದಾಧಿಕಾರಿಗಳು ಆಶಯ ವ್ಯಕ್ತಪಡಿಸಿದ್ದಾರೆ.


-ರಾಜೇಶ್ ಭಟ್ ಪಣಿಯಾಡಿ



(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top