ಹುಬ್ಬಳ್ಳಿ: ಕೇರಳ ಕರಾವಳಿಯಲ್ಲಿ ಭಯೋತ್ಪಾದಕ ಚಟುವಟಿಕೆಗಳ ಬಗ್ಗೆ ಗುಪ್ತಚರ ಮಾಹಿತಿ ಬಂದ ಹಿನ್ನೆಲೆಯಲ್ಲಿ ಕರ್ನಾಟಕದ ಕರಾವಳಿ ಪ್ರದೇಶಗಳಲ್ಲಿ ಹೈ ಅಲರ್ಟ್ ನೀಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಸ್ವಕ್ಷೇತ್ರ ಶಿಗ್ಗಾಂವ್‌ಗೆ ತೆರಳುವ ಮುನ್ನ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿದ ಮುಖ್ಯಮಂತ್ರಿ, ಕರಾವಳಿ ಮತ್ತು ಪಕ್ಕದ ಅರಣ್ಯ ಪ್ರದೇಶಗಳಲ್ಲಿ ಯಾವುದೇ ಅನುಮಾನಾಸ್ಪದ ಚಟುವಟಿಕೆ ನಡೆಯದಂತೆ ರಾಜ್ಯ ಸರಕಾರ ಕಟ್ಟುನಿಟ್ಟಿನ ನಿಗಾ ವಹಿಸುತ್ತಿದೆ ಎಂದು ತಿಳಿಸಿದರು.
"ನಾನು ಕೆಲವು ವಿಷಯಗಳನ್ನು ಬಹಿರಂಗವಾಗಿ ಚರ್ಚಿಸಲು ಸಾಧ್ಯವಿಲ್ಲ, ಆದರೆ ಕರ್ನಾಟಕ ಪೊಲೀಸರು ಎನ್ಐಎ ಜೊತೆಗೂಡಿ ಕರಾವಳಿ ಮತ್ತು ಪಕ್ಕದ ಅರಣ್ಯ ಪ್ರದೇಶಗಳಲ್ಲಿ ಯಾವುದೇ ದೇಶವಿರೋಧಿ ಚಟುವಟಿಕೆಗಳಿಗೆ ಆಸ್ಪದ ನೀಡದಂತೆ ಕಟ್ಟುನಿಟ್ಟಿನ ನಿಗಾ ಇಟ್ಟಿದ್ದಾರೆ. ಅಂತಹ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ವ್ಯಕ್ತಿಯನ್ನು ಎನ್ಐಎ ಇತ್ತೀಚೆಗೆ ವ್ಯಕ್ತಿಯನ್ನು ಸೆರೆಹಿಡಿದಿತ್ತು. ಕರಾವಳಿ ಪ್ರದೇಶಗಳಲ್ಲಿ ಹೆಚ್ಚಿನ ಎಚ್ಚರಿಕೆಯ ವಹಿಸುವಂತೆ ಸೂಚನೆ ನೀಡಿದ್ದೇವೆ" ಎಂದು ಮುಖ್ಯಮಂತ್ರಿ ಹೇಳಿದರು.
ಗಣೇಶೋತ್ಸವದ ಸಂದರ್ಭದಲ್ಲಿ ರಾಜ್ಯದಲ್ಲಿ ಸಾರ್ವಜನಿಕ ಸಭೆಗಳಿಗೆ ಅನುಮತಿ ನೀಡಲಾಗುತ್ತದೆಯೇ ಎಂಬ ಪ್ರಶ್ನೆಗೆ, ಕಳೆದ ವರ್ಷದ ಆಚರಣೆ ಮತ್ತು ಪ್ರಸ್ತುತ ಕೋವಿಡ್ ಸ್ಥಿತಿಯನ್ನು ಅಧ್ಯಯನ ಮಾಡಲು ರಾಜ್ಯ ಸರ್ಕಾರ ತಜ್ಞರ ಸಮಿತಿಯನ್ನು ನೇಮಿಸಿದೆ ಎಂದು ಬೊಮ್ಮಾಯಿ ಹೇಳಿದರು.
"ನಾವು ಸೆಪ್ಟೆಂಬರ್ 5 ರಂದು ತಜ್ಞರ ಸಮಿತಿಯೊಂದಿಗೆ ಸಭೆ ನಡೆಸುತ್ತೇವೆ ಮತ್ತು ಆ ದಿನ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತೇವೆ" ಎಂದು ಅವರು ತಿಳಿಸಿದರು.
ಕೇರಳದೊಂದಿಗೆ ಗಡಿ ಹಂಚಿಕೊಂಡಿರುವ ಕೊಡಗು, ಹಾಸನ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ರಾತ್ರಿ ಕರ್ಫ್ಯೂ ಹೇರಿದ ಬಗ್ಗೆ ಮಾತನಾಡಿದ ಅವರು, "ರಾಜ್ಯ ಸರ್ಕಾರವು ಹಣಕಾಸಿನ ಚಟುವಟಿಕೆಗಳನ್ನು ನಿಷೇಧಿಸುವ ಯೋಚನೆಯಲ್ಲಿಲ್ಲ. ಆದರೆ ಕೋವಿಡ್ ನಿಯಮಗಳ ಪಾಲನೆಗೆ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು. ಹಾಗಾಗಿ ಪರಿಸ್ಥಿತಿ ಸುಧಾರಿಸಿದಲ್ಲೆಲ್ಲಾ ಅಲ್ಲಿ ವಿನಾಯಿತಿಗಳನ್ನು ನೀಡಲಾಗುತ್ತದೆ" ಎಂದು ಸ್ಪಷ್ಟಪಡಿಸಿದರು.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ