*******
ಬೆಣ್ಣೆ ಕದಿವ ಕಳ್ಳನೆಂದು
ಕೃಷ್ಣ ನಿನ್ನ ದೂರುವರೇ
ಸಣ್ಣವ ನೀನಲ್ಲವೇನು
ಬೆಣ್ಣೆ ಕದಿವೆಯಾ..
ಚಿಣ್ಣರೊಡನೆ ತುಂಟತನದಿ
ಹೆಣ್ಣುಗಳನು ರೇಗಿಸುವೆಯೊ
ಸಣ್ಣವ ನೀನಲ್ಲವೇನು
ಕಣ್ಣು ಹೊಡೆವೆಯಾ..
ಗೊಲ್ಲರೊಡನೆ ಸೇರಿಕೊಂಡು
ಗೊಲ್ಲತಿಯರ ಮನೆಯ ಹೊಕ್ಕು
ಲಲನೆಯರನು ಮರುಳು ಮಾಡೊ
ಚೆಲುವನಾದೆಯಾ..
ಕೊಲ್ಲಬೇಕು ಎಂದು ಕಂಸ
ಮಲ್ಲರನ್ನು ಕಳುಹಲವರ
ಸೊಲ್ಲು ಅಡಗುವಂತೆ ಮಾಡಿ
ಕೊಲ್ಲ ಹೊರಟೆಯಾ....
ಚೋರನಂತೆ ಜಾರನಂತೆ
ವೀರನಂತೆ ಕೃಷ್ಣ ನೀನು
ಯಾರು ಕರೆದರೋಡಿ ಬಂದು
ಪೊರೆಯುವೆಯಂತೆ...
ದೂರಿದರೀ ಜನರೆಲ್ಲರು
ದೂರಮಾಡಲಾರೆವಯ್ಯ
ಪೋರ ನೀನು ಅಲ್ಲವೇನು
ಮರೆಯಲಾರೆವು...
ಸತ್ಯಭಾಮೆ ರುಕ್ಮಿಣಿಯೂ
ನಿತ್ಯ ನಿನ್ನ ಜತೆಗೆ ಇರಲು
ಮತ್ತೆ ರಾಧೆ ಎನುವೆಯಂತೆ
ಸತ್ಯವೇ ಅದು...
ಅತ್ತ ರಾಜಕುಮಾರಿಯರು
ಹತ್ತು ಸಾವಿರಕ್ಕು ಮಿಕ್ಕಿ
ಚಿತ್ತ ನಿನಗೆ ಕೊಟ್ಟರಂತೆ
ಸತ್ಯವೇ ಅದು....
ಭೇದ ಮಾಡದೆಮ್ಮ ಪೊರೆವ
ವಾದ ನಿನ್ನಲಿಲ್ಲ ದೇವ
ಮೋದದಿಂದ ಕೇಳು ನೋವ
ಯದುಕುಲೋತ್ತಮ...
ಸಾಧನೆಗೂ ಸಾಹಸಕೂ
ಆಧಾರವು ನೀನೆ ಕೃಷ್ಣ
ವಿಧಿ ಎನ್ನದೆ ನಮ್ಮೊಡನಿರು
ಯದುಕುಲೇಂದ್ರನೆ....
** ** ** **
-ಬಾಲಕೃಷ್ಣ ಸಹಸ್ರಬುಧ್ಯೆ ಮುಂಡಾಜೆ
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ