ಎಡನೀರಿನ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿಗಳ ಚಾತುರ್ಮಾಸ್ಯ ಸಂದರ್ಭದ ಕವಿಗೋಷ್ಠಿ 'ಕಾವ್ಯಾಂಜಲಿ' ಉದ್ಘಾಟಿಸಿದ ಹಿರಿಯ ಕವಿ
ಎಡನೀರು: ಕನ್ನಡ ಕಾವ್ಯ ಇಂದು ನವಮಾಧ್ಯಮಗಳ ಮೂಲಕ ಅಗಾಧವಾಗಿ ಬೆಳೆಯುತ್ತಿದ್ದು, ಕನ್ನಡ ಸಾಹಿತ್ಯದ ಸಂಪನ್ನತೆಯನ್ನು ತೋರಿಸುತ್ತಿದೆ. ಆದರೆ ಹಾಗೆ ಬರೆಯುವವರು ತಮ್ಮ ಅನಿಸಿಕೆಗಳನ್ನೆಲ್ಲ ಹಾಗೆಹಾಗೇ ಹೊರಗೆಡಹುತ್ತಿದ್ದು ಕಾಳಿಗಿಂತ ಜೊಳ್ಳು ಅಧಿಕವಾಗುತ್ತಿದೆ. ಇದನ್ನು ನಿವಾರಿಸಲು ನವಮಾಧ್ಯಮದ ರಚನೆಗಳಿಗೆ ಕನ್ನಡ ಕಾವ್ಯ ಪರಂಪರೆಯನ್ನು ತಿಳಿಸಿಕೊಟ್ಟು, ಸರಿಯಾದ ದಿಕ್ಕುದೆಸೆ ತೋರಿಸಿ ಮಾರ್ಗದರ್ಶನ ಮಾಡುವ ಅಗತ್ಯವಿದೆ ಎಂದು ಹಿರಿಯ ಕವಿ ಹಾಗೂ ಮಂಗಳೂರು ಆಕಾಶವಾಣಿಯ ನಿವೃತ್ತ ನಿರ್ದೇಶಕ ಡಾ. ವಸಂತಕುಮಾರ ಪೆರ್ಲ ಅವರು ಹೇಳಿದರು.
ಎಡನೀರು ಮಠಕ್ಕೆ ಒಂದು ಸಾವಿರದ ಇನ್ನೂರು ವರ್ಷಗಳ ಭವ್ಯ ಪರಂಪರೆಯಿದ್ದು ಕಲೆ ಸಾಹಿತ್ಯ ಸಂಸ್ಕೃತಿಗಳನ್ನು ಸದಾ ಪ್ರೋತ್ಸಾಹಿಸುತ್ತ ಬಂದಿದೆ. ಕಾಸರಗೋಡಿನಂತಹ ಗಡಿನಾಡಿನಲ್ಲಿ ದೀಪಸ್ತಂಭದಂತೆ ನಿಂತಿರುವ ಈ ಮಠವು ನೂತನ ಯತಿಗಳ ಮಾರ್ಗದರ್ಶನದಲ್ಲಿ ಇಂದಿಗೂ ಅದೇ ಪರಂಪರೆಯನ್ನು ಮುಂದುವರಿಸುತ್ತಿರುವುದು ಸಂತೋಷದ ಸಂಗತಿ ಎಂದು ಡಾ. ಪೆರ್ಲ ಅವರು ಹೇಳಿದರು.
ಅನಂತರ ಸ್ವರಚಿತ ಕವಿತೆಯೊಂದನ್ನು ಓದುವ ಮೂಲಕ ಕವಿಗೋಷ್ಠಿಯನ್ನು ಉದ್ಘಾಟಿಸಿದರು.
ಗುರುಗಳಾದ ಶ್ರೀ ಸಚ್ಚಿದಾನಂದಭಾರತಿ ಶ್ರೀಪಾದಂಗಳವರು ದೀಪ ಬೆಳಗಿಸಿ ಆಶೀರ್ವಚನ ನೀಡಿದರು. ಸಾಹಿತ್ಯವು ಅಧ್ಯಾತ್ಮದ ಮೊದಲ ಮೆಟ್ಟಿಲು. ವ್ಯಕ್ತಿತ್ವಕ್ಕೆ ಸಂಸ್ಕಾರ ಕೊಡುವ ಸಾಮರ್ಥ್ಯ ಸಾಹಿತ್ಯಕ್ಕಿದೆ. ಹಾಗಾಗಿಯೇ ಕವಿ ಸಾಹಿತಿಗಳು ಯಾವುದೇ ಅಪರಾಧಕೃತ್ಯಗಳಲ್ಲಿ ಭಾಗಿಯಾಗಿರುವುದನ್ನು ಕಾಣಲಾರೆವು ಎಂದು ಅವರು ನುಡಿದರು.
ಅತಿಥಿಗಳಿಗೆ ಮತ್ತು ಕವಿಗಳಿಗೆ ಶಾಲು ಹೊದೆಸಿ ಮಠದ ವತಿಯಿಂದ ಶ್ರೀ ಗುರುಗಳು ಸನ್ಮಾನಿಸಿದರು.
ಕವಿಗಳಾದ ಡಾ. ಯು. ಮಹೇಶ್ವರಿ, ರಾಧಾಕೃಷ್ಣ ಕೆ. ಉಳಿಯತ್ತಡ್ಕ, ವೆಂಕಟಭಟ್ ಎಡನೀರು, ಪ್ರಭಾವತಿ ಕೆದಿಲ್ಲಾಯ, ಪದ್ಮಾವತಿ ವೈ, ಪ್ರಮೀಳಾ ಚುಳ್ಳಿಕ್ಕಾನ, ಸುಂದರ ಬಾರಡ್ಕ, ಪುರುಷೋತ್ತಮ ಭಟ್ ಕೆ. ಮೊದಲಾದವರು ಸ್ವರಚಿತ ಕವಿತೆಗಳನ್ನು ವಾಚಿಸಿದರು.
ಹಿರಿಯ ಕವಿಗಳಾದ ಡಾ. ರಮಾನಂದ ಬನಾರಿಯವರು ಸಮಾರೋಪ ಭಾಷಣ ಮಾಡಿದರು. ಕಾವ್ಯವು ಹೃದಯ ಸಂಸ್ಕಾರಗೊಳಿಸುವ ಮಾಧ್ಯಮ. ಹಾಗಾಗಿಯೇ ಪ್ರತಿಯೊಂದು ತಲೆಮಾರು ಬೇರೆ ಬೇರೆ ರೂಪಗಳಲ್ಲಿ ಕಾವ್ಯದ ಕೃಷಿ ಮಾಡಿರುವುದನ್ನು ಕಾಣುತ್ತೇವೆ ಎಂದು ಅವರು ಹೇಳಿದರು.
ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಕವಿ ಲೇಖಕ ಪ್ರೊ. ಪಿ.ಎನ್. ಮೂಡಿತ್ತಾಯ ವಹಿಸಿದ್ದರು. ಎಡನೀರಿನ ಮಠದಲ್ಲಿ ಸಾರ್ಥಕ್ಯಭಾವ ಮೂಡಿಸುವ ಕವಿತೆಗಳು ಅನಾವರಣಗೊಂಡಿವೆ. ಶಕ್ತ ಕವಿಗಳು ಕಾಸರಗೋಡಿನ ಗರಿಮೆಯನ್ನು ಎತ್ತಿ ಹಿಡಿದಿದ್ದಾರೆ ಎಂದು ಅವರು ಹೇಳಿದರು.
ಕಾರ್ತಿಕ್ ಅವರು ಸ್ವಾಗತಿಸಿ ನಿರೂಪಿಸಿದರು. ವೆಂಕಟ ಭಟ್ ವಂದನಾರ್ಪಣೆಗೈದರು.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ