|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಸೆ.5 ಶಿಕ್ಷಕರ ದಿನಾಚರಣೆ: ವಂದೇ ಗುರೂಣಾಂ ಚರಣಾರವಿಂದೇ...

ಸೆ.5 ಶಿಕ್ಷಕರ ದಿನಾಚರಣೆ: ವಂದೇ ಗುರೂಣಾಂ ಚರಣಾರವಿಂದೇ...


‘ಗುರು ಬ್ರಹ್ಮ, ಗುರುವಿಷ್ಣು, ಗುರುದೇವೋ ಮಹೇಶ್ವರಃ ಗುರುಸಾಕ್ಷಾತ್ ಪರಬ್ರಹ್ಮಃ ತಸ್ಮಯಶ್ರೀ ಗುರುವೇ ನಮಃ’ ಈ ಒಂದು ಸಾಲನ್ನು ಒಮ್ಮೆ ನೆನೆದರೆ ಸಾಕು, ಪ್ರತಿಯೊಂದು ಜೀವಕ್ಕೂ ತನ್ನ ಗುರುವಿನ ನೆನಪಾಗುತ್ತದೆ. ಅದಲ್ಲದೇ ನಮ್ಮ ಸಂಪ್ರದಾಯದಲ್ಲಿ ಗುರುವಿನ ಮಹತ್ವವನ್ನು ನಾವೆಲ್ಲಾ ಕಾಣಬಹುದು. ಒಬ್ಬ ಶಿಷ್ಯನಿಗೆ ಯಾವುದೇ ಸ್ವಾರ್ಥವಿಲ್ಲದೇ ಸನ್ಮಾರ್ಗ ತೋರುವ ನಿಜವಾದ ಪ್ರಭುವೇ ಗುರುಗಳು. ನಮ್ಮ ಕಣ್ಣಿಗೆ ಕಾಣುವ  ದೈವವೆಂದರೆ ನಮ್ಮ ಗುರುಗಳು. ಅವರನ್ನು ಪ್ರೀತಿಸಿ, ಪೂಜಿಸಿ, ಗೌರವಿಸಿ ಎಂಬದು ನಮ್ಮ ಆಶಯವಾಗಿದೆ.


ಒಂದು ದೇಶದ ಹಣೆಬರಹವನ್ನು ಬರೆಯಬಲ್ಲ ಬ್ರಹ್ಮನೇ ‘ಗುರು’ ಅಥವಾ ‘ಶಿಕ್ಷಕ’. ಒಂದು ದೇಶದ ಎಲ್ಲ ವ್ಯವಸ್ಥೆಯೂ ಶಿಕ್ಷಣದ ಬುನಾದಿಯನ್ನೇ ಆಧರಿಸಿದೆ. ಶಿಕ್ಷಣದ ದಕ್ಷತೆಯಿಂದ ಮಾತ್ರ ರಾಷ್ಟ್ರದ ಪ್ರಗತಿ ಸಾಧ್ಯವಾಗುತ್ತದೆ. ಅಂತಹ ಮಹತ್ವದ ಶಿಕ್ಷಣ ನೀಡುವವರು ಶಿಕ್ಷಕರೇ ಆಗಿರುವುದರಿಂದ ರಾಷ್ಟ್ರದ ನಿರ್ಮಾಣ ಮಾಡುವ ಅಥವಾ ನಿರ್ನಾಮ ಮಾಡುವ ಸಾಮಥ್ರ್ಯ ಅವರಿಗಿದೆ. ಎಲ್ಲ ಬಗೆಯ ನೌಕರಿಗೂ ಕಾರಣರಾಗುವ ಶಿಕ್ಷಕರನ್ನು ‘ಗುರು’ ಎಂದೂ, ಆ ವೃತ್ತಿಯನ್ನು ‘ಪವಿತ್ರವೃತ್ತಿ’ ಎಂದೂ ಸಮಾಜವು ಇಂದಿಗೂ ಗೌರವಿಸುತ್ತಿರುವುದು ಸತ್ಯಂತ ಸಮಂಜಸ. ವಿದ್ಯಾರ್ಥಿಗಳ ಕೆಟ್ಟ ಬರಹವನ್ನು ಬದಲಿಸಿ, ಹೊಸಗಾಗಿ ಬರೆಯಬಲ್ಲ ಶಕ್ತಿ ಶಿಕ್ಷಕರಲ್ಲಿದೆ, ಇಂತಹ ಅನನ್ಯ ಶಕ್ತಿ ಹೊಂದಿರುವ ಗುರುಗಳನ್ನು ಸಾಮಾನ್ಯರೆಂದು ಭಾವಿಸದೇ, ಅವರಲ್ಲಿ ಭಕ್ತಿ, ಗೌರವ, ಶ್ರದ್ಧೆ, ಸೇವೆಗಳನ್ನು ಗುರಿತಿಸಿ, ಪ್ರೋತ್ಸಾಹಿಸಿದರೆ, ಸಮಾಜಕ್ಕೆ ಆ ಮೂಲಕ ದೇಶಕ್ಕೆ ಉಪಯುಕ್ತವಾದ ಪ್ರಜೆಗಳನ್ನು ರೂಪಿಸಿಲು ಸಾಧ್ಯವಾಗುತ್ತದೆ. ಶಿಕ್ಷಕ ಸಮುದಾಯಕ್ಕೆ ದೇಶವನ್ನು ಸಮರ್ಥಗೊಳಿಸುವ ಸಾಮಥ್ರ್ಯವಂತೂ ಇದೆ. ಶಿಕ್ಷಕರಿಗೆ ಸಿಗುತ್ತಿರುವ ಪ್ರಾಮುಖ್ಯತೆಯನ್ನು ಸಮಾಜ, ಸಂಘ-ಸಂಸ್ಥೆಗಳು ಸರ್ಕಾರಗಳು ಮತ್ತಷ್ಟು ಹೆಚ್ಚಿಸಬೇಕು.


ಶಿಕ್ಷಕರೇ ನಮ್ಮ ದೇಶದ ಭವಿಷ್ಯದ ಶಿಲ್ಪಿಗಳು:

ರಾಷ್ಟ್ರಗಳಲ್ಲಿ ಬೇರೆ ಎಲ್ಲಾ ವೃತ್ತಿಗಳಿಂತಲೂ ಶಿಕ್ಷಕ ವೃತ್ತಿಗೆ ಹೆಚ್ಚು ಮನ್ನಣೆ ಇದೆ. ಪ್ರೋತ್ಸಾಹವಿದೆ. ಅಷ್ಟೇ ನಂಬಿಕೆಯಿದೆ. ಹಾಗಾಗಿಯೇ ಆಧುನಿಕತೆಯಲ್ಲಿ, ಮಾನವ ಸಂಪನ್ಮೂಲಗಳ ಸದ್ಭಳಕೆಯಲ್ಲಿ ಮಂಚೂಣಿಯಲ್ಲಿದೆ. ತಮ್ಮ ದೇಶದ ಈ ಪ್ರಗತಿಗೆ ಯಾರು ಕಾರಣ? ವಿಜ್ಞಾನಿಗಳಾ? ತಂತ್ರಜ್ಞರಾ? ವೈದ್ಯರಾ? ಸಾಹಿತಿಗಳಾ? ಚಿಂತಕರಾ? ಅಥವಾ ರಾಜಕಾರಣಿಗಳಾ? ಎಂದು ಪ್ರಶ್ನಿಸಿದರೆ, ಅಮೆರಿಕಾ ಅಧ್ಯಕ್ಷರು ಹೇಳುವ ಉತ್ತರ ಅವರೆಲ್ಲರನ್ನೂ ರೂಪಿಸುವ ಶಿಕ್ಷಕರೇ ನಮ್ಮ ರಾಷ್ಟ್ರದ ರೂವಾರಿಗಳೆಂದು ಮನಃ ಪೂರ್ವಕವಾಗಿ ಹೇಳುತ್ತಾರೆಂದರೆ ಶಿಕ್ಷಕರ ಸಮರ್ಥತೆ, ಅಗತ್ಯತೆ ಬಗ್ಗೆ ಎರಡು ಅಭಿಪ್ರಾಯಗಳ ಅವಶ್ಯತೆಯಿಲ್ಲ.


ಮನೆ ಮನೆಗೆ ನ್ಯೂಸ್‍ ಪೇಪರ್ ಹಾಕುತ್ತಾ ಬಡತನದ ಬೇಗೆ ಅನುಭವಿಸುತ್ತಲೇ ವ್ಯಾಸಂಗ ಮಾಡಿದ ಎ.ಪಿ.ಜೆ. ಅಬ್ದುಲ್ ಕಲಾಂರವರು ತಮ್ಮ ಗುರು ಶಿವಸುಬ್ರಹ್ಮಣ್ಯ ಅಯ್ಯರ್ ರವರ ಮಾರ್ಗದರ್ಶನದಿಂದಲೇ ಸಾಧಿಸಿ ಮುಂದೆ ಅಣು ವಿಜ್ಞಾನಿಯಾಗಿ, ನಮ್ಮ ದೇಶದ  ರಾಷ್ಟ್ರಪತಿಗಳಾಗಿ ಆ ಹುದ್ದೆಗೆ ಗೌರವ ತಂದು ಕೊಡ್ಡವರಾಗಿದ್ದಾರೆ. ಸದಾ ತಮ್ಮ ಗುರುಗಳನ್ನು ನೆನೆಯುತ್ತಲೇ ತಮ್ಮ ಶಿಕ್ಷಕ ವೃತ್ತಿಯನ್ನು ಸಾರ್ಥಕ ವೃತ್ತಿ ಎಂದು ಭಾವಿಸಿ ಮಕ್ಕಳಲ್ಲಿ ಚಿಕ್ಕವರಾಗಿದ್ದಾಗಲೇ ಕನಸುಗಳನ್ನು ಬಿತ್ತಬೇಕು. ವಿತ್ತಿದ ಆ ಕನಸಿನ ಬೀಜ ಮೊಳೆಯಲು ಬೆಳೆಯಲು, ನನಸಿನ  ಫಲ ದೊರೆಯುವಂತಾಗಲು ಗುರುವಾದವರು ಪ್ರೇರಣೆ ನೀಡಬೇಕು.


ಶಾಲಾ –ಕಾಲೇಜುಗಳಲ್ಲಿ ಗುರುವಾದವನು ಮಕ್ಕಳಿಗೆ ವೈಯಕ್ತಿಕವಾಗಿ ಗಮನ ಕೊಡುತ್ತಾ ಹೋದಂತೆ ಅವರ ಆಸಕ್ತಿದಾಯಕ ಅಂಶಗಳು ಗೋಚರವಾಗುತ್ತವೆ. ಅವನ್ನು ಗುರುತಿಸಿ, ಆಸಕ್ತ ಕ್ಷೇತ್ರಗಳಲ್ಲಿಯೇ ಸಾಧಿಸಲು ಪ್ರೇರೇಪಿಸಿದರೆ, ಅವನೊಬ್ಬ ಕವಿ, ವೈದ್ಯ, ಅಭಿಯಂತರ,  ವಿಜ್ಞಾನಿ, ವಕೀಲ, ಪತ್ರಕರ್ತ... ಹೀಗೆ ಹೊರಹೊಮ್ಮುತ್ತಾನೆ. ಆಸಕ್ತ ವಿಷಯದ ಗುರುತಿಸುವಿಕೆ ಮಾತ್ರ ಗುರುವನಂದಲ್ಲದೆ ಬೇರೆಯವರಿಂದ ಸಾಧ್ಯವಿಲ್ಲ.

ಅಸಮರ್ಥರ ಬಲಹೀನತೆಗಳು ಬೆಳೆಯುವ ಫಸಲಿನಲ್ಲಿ ಜೊಳ್ಳು ಕಾಳುಗಳೂ ಇರುವಂತೆ ಅಲ್ಲೊಬ್ಬ ಇಲ್ಲೊಬ್ಬ ಅಸಮರ್ಥ ಗುರುಗಳೂ ಇರುತ್ತಾರೆ. ಉದಾಹರಣೆಗೆ ಒಬ್ಬ ಶಿಕ್ಷಕನಿಂದ ತಿರಸ್ಕಾರಕ್ಕೆ ಒಳಗಾದ ಹುಡುಗನೊಬ್ಬ ಶಾಲೆಯನ್ನು ತೊರೆಯುತ್ತಾನೆ. ತನ್ನ ಆಸಕ್ತಿ ಗುರುತಿಸಿದ ಗುರುವಿನ ಬಗ್ಗೆ ತಾತ್ಸಾರ ತಳೆದು, ತನ್ನ ಕಲಿವಿನ  ಹಂಬಲವನ್ನು ತಾಯಿಗೆ ತಿಳಿಸಿ, ಅವಳ ಮಾರ್ಗದರ್ಶನದಲ್ಲಿ ಓದಿ, ಮುಂದೆ ವಿಜ್ಞಾನಿಯಾಗಿ ವಿದ್ಯುತ್ ಬಲ್ಬ್‍ನಂತಹ ಆವಿಷ್ಕಾರಗಳನ್ನು ಮಾಡಿದ ‘ಥಾಮಸ್ ಅಲ್ವಾ ಎಡಿಸನ್’ನ ಭವಿಷ್ಯವನ್ನು ಅವನ ಅಸಮರ್ಥ ಗುರು ಗುರುತಿಸಲಾರದೆ ಹೋಗಿದ್ದು ವಿಪರ್ಯಾಸವೇ ಸರಿ. ಯಾವ ವಿಷಯವನ್ನೂ ಕಲಿಯಲು ನೀನು ಅಸಮರ್ಥ ಎಂದು ಗುರುವಿನೊಂದಿಗೆ ಮೂದಲಿಸಿಕೊಂಡ ಐನ್‍ಸ್ಟೀನ್ ತನ್ನ ಚಿಕ್ಕಪ್ಪನ ಮಾರ್ಗದರ್ಶನದಲ್ಲಿಯೇ ಓದಿ ಮುಂದೆ ಬಹುದೊಡ್ಡ ವಿಜ್ಞಾನಿಯಾಗಿ ಹೆಸರು ಮಾಡಿ ಲೋಕ ವಿಖ್ಯಾತಿ ಪಡೆದಿದ್ದು ಒಂದು ಅದ್ಭುತವೆಂದೇ ಹೇಳಬೇಕು.


ಕೆಲವು ತರಗತಿಗಳನ್ನು ಪುನಃ ಪುನಃ ಪರೀಕ್ಷೆ ಕಟ್ಟಿ ಪಾಸ್ ಮಾಡಿ ಮುಂದೆ ಚೆನ್ನಾಗಿ ಓದಿ ಉನ್ನತ ಸ್ಥಾನ ಪಡದು ಹೆಸರಾಗಿರುವ ಕವಿಗಳು ಸಾಹಿತಿಗಳು, ವೈದ್ಯರೂ ಸೇರಿದಂತೆ ನಾನಾ ಕ್ಷೇತ್ರದ ಸಾಧಕರು ನಮ್ಮೊಳಗೇ ಇದ್ದಾರೆ. ಅವರಲ್ಲಿ ಕೆಲವರು ತಮ್ಮ ಓದಿನ ತಡೆಗೆ  ಶಿಕ್ಷಕರು ಕಾರಣ ಎಂದರೂ ಅನಂತರದ ಪ್ರಗತಿಗೂ ಅವರೇ ಕಾರಣೀಕರ್ತರು ಎಂದು ಸ್ಮರಿಸಿಕೊಳ್ಳುತ್ತಾರೆ. ಅಂದರೆ ಗುರುವಾದವರು ಸಮರ್ಥರಾದರೆ ಸ್ಫೂರ್ತಿ ತುಂಬುತ್ತಾರೆ. ಅಸಮರ್ಥರಾದರೆ ಪ್ರಯೋಜನವಾಗಲಾರರು ಎಂಬಂತಾಗುತ್ತದೆ.


ಗುರುಗಳು, ತಮ್ಮ ವೃತ್ತಿ ದಕ್ಷತೆಗೆ ಮೊದಲು ಪ್ರಾಶಸ್ತ್ಯ ನಿಡಬೇಕು. ಅನಂತರ ತನ್ನ ವೈಯಕ್ತಿಕ ಕುಟುಂಬದ ಕಡೆ ಗಮನ ನೀಡಬೇಕು. ಸಮಾಜ, ಸಂಸಾರಗಳಲ್ಲಿ ಕೂಡಿ ಬಾಳುವ ಕಲೆಯನ್ನು ಮಕ್ಕಳಲ್ಲಿ ತುಂಬಬೇಕು, ತಾಯಿ-ತಂದೆಯರ ಬಗ್ಗೆ ಗೌರವ, ನಾಡು-ನುಡಿಯ ಬಗ್ಗೆ ಅಭಿಮಾನ, ಸುಖ-ದುಃಖಗಳಲ್ಲಿ ಸಹಭಾಗಿತ್ವ, ಸತ್ವ, ಧರ್ಮ, ಸಹಕಾರ, ಪ್ರಾಮಾಣಿಕತೆ... ಮುಂತಾದ ಅಮೂಲ್ಯ ಮೌಲ್ಯಗಳನ್ನು ಮಕ್ಕಳಲ್ಲಿ ಬಿತ್ತಿ ಬೆಳೆಸುತ್ತಲೇ, ನಿಗದಿತ ವಿಷಯ ಜ್ಞಾನವನ್ನು ತುಂಬಬೇಕು. ನಮ್ಮ ದೇಶೀಯ ಸಂಸ್ಕøತಿಯ ಬಗ್ಗೆ ಗೌರವಗಳನ್ನು ಮೂಡಿಸಬೇಕು.  ಕಳೆದುಕೊಂಡುದಕ್ಕೆ  ಕೊರಗದೆ ನಾಳಿನ ಆತಂಕಗಳಿಗೆ ಚಿಂತಿಸದೆ, ಈಗಿನ ಕೆಲಸ ಕಾರ್ಯಗಳನ್ನು ಶ್ರದ್ಧೆಯಿಂದ ನಿರ್ವಂಚನೆಯಿಂದ ಮಾಡಿದರೆ, ಫಲಗಳು ನಿರೀಕ್ಷೆಯಂತೆಯೇ ದೊರೆಯುತ್ತದೆ ಎಂಬುದನ್ನು ಮನದಟ್ಟು ಮಾಡಿಕೊಡಬೇಕು. ಪ್ರತಿಯೊಬ್ಬ ಮನುಷ್ಯನ ಉನ್ನತಿ ಅಥವಾ ಅವನತಿಯು ಅವನ ತಾಯಿಯ ನಂತರ ಗುರುವನ್ನೇ ಅವಲಂಬಿಸಿರುತ್ತದೆ ಎಂಬುದನ್ನು ಶಿಕ್ಷಕರು ಮರೆಯಬಾರದು.


ಶಿಕ್ಷಕರಾದವರು ಆತ್ಮವಿಮರ್ಶೆ ಮಾಡಿಕೊಂಡು, ಮುಂದೆ ಅಂತಹ ಅವಘಡಗಳಿಗೆ ಒಳಗಾಗದಂತೆ ಎಚ್ಚರವಹಿಸಿ ಮುನ್ನಡೆದರೆ ಸಮಾಜೋಪಯೋಗಿ ನಾಗರೀಕರನ್ನು ನಿರ್ಮಾಣ ಮಾಡಿದರೆ ಇಡೀ ರಾಷ್ಟ್ರವೇ ಸದೃಢವಾಗಿ, ಸಂಪದ್ಭರಿತವಾಗುವುದರಲ್ಲಿ ಸಂಶಯವೇ ಇಲ್ಲ. ಗುರುವಿನ ಗುಲಾಮನಾಗದೆ ದೊರೆಯದಣ್ಣ ಮುಕುತಿ ಎಂಬ ದಾಸರಪದ ನೂರಕ್ಕೆ ನೂರರಷ್ಟು ಸತ್ಯ. ಆಲೋಚನಾ ಕ್ರಮ. ಸಾರ್ವಜನಿಕ ನಡವಳಿಕೆ, ಸಂಸ್ಕøತಿ, ಸಂಸ್ಕಾರಗಳನ್ನು ಕಲಿಸುವ ಮೂಲಕ ಬದುಕನ್ನು ರೂಪಿಸುವ ಗುರು ಅರಿವಿನ ಸಂಕೇತ. ದೈವದ ಪ್ರತಿರೂಪ. ಬದಲಾದ ಕಾಲಘಟ್ಟದಲ್ಲಿ ಗುರುವಿನ ವರ್ತನೆ ಘನತೆಯಲ್ಲೂ ಅನೇಕ ವಿಪ್ಲವ, ಪಲ್ಲಟಗಳಾಗಿದ್ದರೂ ಇಂದಿಗೂ ಎಂದಿಗೂ ಗುರುವಿನ ಪೂಜ್ಯಸ್ಥಾನ. ಆ ಗೌರವ ಉಳಿಸಿಕೊಳ್ಳುವ ಹೊಣೆಗಾರಿಕೆಗೆ ಶಿಕ್ಷಕ ಸಮುದಾಯದ್ದು.


ಶಿಕ್ಷಕರ ದಿನಾಚರಣೆಯು ಶಾಲೆಗಳಲ್ಲೇ ಜರುಗಬೇಕು. ಹೆತ್ತವರು, ವಿದ್ಯಾರ್ಥಿಗಳು ಮತ್ತು ಆಡಳಿತ ಮಂಡಳಿಯವರು ಸೇರಿ ಅದನ್ನು ಆಚರಿಸಬೇಕು. ತಂದೆ-ತಾಯಿಯೇ ಬಂದು ಶಿಕ್ಷಕರನ್ನು ಗೌರವಿಸುವ ಸಂದರ್ಭವು ಮಕ್ಕಳ ಮೇಲೆ ಪ್ರಭಾವ ಬೀರುತ್ತದೆ. ಮಕ್ಕಳಿಗೂ ಶಿಕ್ಷಕರ ಮೇಲೆ ಗೌರವಾದರಗಳು ಹೆಚ್ಚುತ್ತದೆ. ಮುಂದೆ ಬರುವ ನವೆಂಬರ್ 14ರ ಮಕ್ಕಳ ದಿನಾಚರಣೆಯಂದು ಶಿಕ್ಷಕರು ಮಕ್ಕಳನ್ನು ಸತ್ಕರಿಸುತ್ತಾರೆ. ಆ ದಿನವೂ ಹೆತ್ತವರು ಬಂದು ತಮ್ಮ ಮಗುವಿನ ಆಯ್ಕೆಯ ಸಹಪಾಠಿ ಗೆಳಯ/ಗೆಳತಿಗೆ ಪುಸ್ತಕ ಆಟಿಕೆಗಳಂತಹ ಉಡುಗೊರೆಗಳನ್ನು ನೀಡಬಹುದು. ಇದು ಶಾಲೆಯನ್ನು ಸಮುದಾಯವೇ ಮಕ್ಕಳ ಜ್ಞಾನ ಮತ್ತು ಸ್ನೇಹದ ವಿಕಸನ ಕೇಂದ್ರವಾಗಿ ರೂಪಿಸಿಕೊಳ್ಳುವ ಒಂದು ಉಪಾಯವಾಗಿದೆ.


ಆದರೆ ಇದು ವಿಬದ್ಧ ಆಚರಣೆಯಾಗದೆ, ಭಾವಬದ್ಧವಾದ ಆಚರಣೆಯಾಗಬೇಕು. ಅಂದರೆ ಶಿಕ್ಷಕರು ನಿತ್ಯವೂ ಭಾವನಾತ್ಮಕ ಗೌರವವನ್ನು ಪಡೆಯುವ ಮಟ್ಟಕ್ಕೆ ತಮ್ಮನ್ನು ರೂಪಿಸಿಕೊಳ್ಳಬೇಕು. ಆಗ ಸಹಜವಾಗಿ ಶಿಕ್ಷಕರು ಮಾರ್ಗದರ್ಶಕರಾಗಿ ಶಾಲೆಯೆಂಬುದು ಸಮುದಾಯದ ಉತ್ಕರ್ಷದ ಕೇಂದ್ರವಾಗಿರುತ್ತದೆ. ಹಾಗೆ ಆಗಬೇಕಿದ್ದರೆ, ಶಿಕ್ಷಕರಿಗೆ ತಾವು ಗುರುಗಳಾಗಿ ರೂಪಿಸಿಕೊಳ್ಳುವ ತುಡಿತ ಉಂಟಾಗಬೇಕು. ಗುರುಗಳೆಂದರೆ ಅಜ್ಞಾನದ ಅಂಧಕಾರವನ್ನು ಕಳೆಯುವವರು ಎಂದರ್ಥ. ಅರಿವಿನ ಬೆಳಕನ್ನು ಕೊಡುವುದರ ಮೂಲಕವೇ ಮಕ್ಕಳಿಗೆ ಮಾರ್ಗದರ್ಶಕರಾಗುವ ಶಿಕ್ಷಕರು ಜ್ಞಾನದ ಸೃಷ್ಟಿಕರ್ತರೂ, ವಿತರಕರೂ ಅವೈಜ್ಞಾನಿಕ ತಿಳುವಳಿಕೆಗಳನ್ನು ಕಳೆಯುವವರೂ ಆಗುತ್ತಾರೆ.


‘ಕಲಿಯುತ್ತ ಕಲಿಸುವವನೇ ಗುರು’ ಎಂಬ ಕನಿಷ್ಟ ಮಾಪಕವನ್ನು ಇಟ್ಟುಕೊಂಡರೆ ಶಿಕ್ಷಕರಲ್ಲಿ ಎಷ್ಟು ಮಂದಿ ನಿಜವಾದ ಗುರುಗಳಿದ್ದಾರೆ ಎಂಬ ಪ್ರಶ್ನೆಗೆ ಬೇಸರ ಪಡುವಂತಹ ಉತ್ತರವೇ ಸಿಕ್ಕುತ್ತದೆ. ಸ್ವತಃ ತಾವೇ ಜ್ಞಾನದ  ಒರತೆಯಾಗದೆ ಕೇವಲ ಮಾಹಿತಿ ವಿತರಣೆಗೆ ಸೀಮಿತವಾಗಿ ದುಡಿಯುವ  ಶಿಕ್ಷಕರ ಸಂಖ್ಯೆಯೇ ದೊಡ್ಡದಿದೆ.


ಶಿಕ್ಷಕ ವೃತ್ತಿಯನ್ನೇ ಬಯಸಿ ಮಕ್ಕಳಲ್ಲಿ ಸೃಜನ ಶೀಲತೆ ತುಂಬುವ  ಕ್ರಿಯಾಶೀಲ ಶಿಕ್ಷಕರು ಒಂದು ತುದಿಯಲ್ಲಿದ್ದರೆ ಇನ್ನೊಂದು ತುದಿಯಲ್ಲಿ ಏನೂ ಕೆಲಸ ಮಾಡದೆ ಸರಾಸರಿ ವೇತನ ಪಡೆಯುವ ಶಿಕ್ಷಕರಿದ್ದಾರೆ. ಪಠ್ಯ ಮುಗಿಸಿದಲ್ಲಿಗೆ ತಮ್ಮ ಹೊಣೆ ಮುಗಿಯಿತೆಂದು ತಿಳಿದವರು, ಮಕ್ಕಳಲ್ಲೇ ಓದಿಕೊಳ್ಳಲು ಹೇಳಿ ಪಾಠ ಮುಗಿಯಿತೆಂದು ಹೇಳುವವರು, ಏನೂ ತಿಳಿಯದ ಮಗುವಿನ ಹೆತ್ತವರಲ್ಲಿ ನಿಮ್ಮ ಮಗು ಜಾಣನಿದ್ದಾನೆ ಎಂತ ಹೇಳಿ ಹಿಂದೆ ಕಳಿಸುವವರು, ಎರಡು ದಿನಗಳಿಗೊಮ್ಮೆ ಶಾಲೆಗೆ ಹೋಗಿ ಎಲ್ಲಾ ದಿನಗಳ ಹಾಜರಿ ಹಾಕುವವರು, ಶಿಕ್ಷಕರ ಸಂಘಟನೆ ಎನ್ನುತ್ತ ರಾಜಕಾರಣಿಗಳ ಹಿಂದೆ ತಿರುಗುವವರು ಹೀಗೆ ವಿವಿಧ ಬಗೆಯ ಶಿಕ್ಷಕರಿದ್ದಾರೆ. ಯಾರನ್ನೂ ಫೇಲ್ ಮಾಡಬಾರದೆಂಬ ನಿಯಮವನ್ನೇ ಸೌಲಭ್ಯವಾಗಿಟ್ಟುಕೊಂಡು ಏನೂ ಕಲಿಸದಿದ್ದರೂ ನಡೆಯುತ್ತದೆ ಎಂಬ ವೃತ್ತಿ ನಿರ್ಲಕ್ಷ್ಯ ಮಾಡುವವರಿದ್ದಾರೆ. ಇನ್ನು ಕೆಲವರು ತರಗತಿಗಳಿಗೆ ಹೋಗಿ ತಮ್ಮ ವೈಯಕ್ತಿಕ ಕೆಲಸಗಳಲ್ಲಿ ತೊಡಗುವವರಿದ್ದಾರೆ. ಇಷ್ಟೊಂದು  ವ್ಯಕ್ತಿತ್ವ ವೈವಿಧ್ಯಗಳಿರುವಾಗ ಶಿಕ್ಷಕರ ಮೇಲೆ ಸಮಾಜಕ್ಕಿರಬೇಕಾದ ಗೌರವವೂ ವೈವಿಧ್ಯಮಯವಾಗಿರುವುದಿಲ್ಲವೇ?


ಅಂದಿನ ದಿನಗಳಲ್ಲಿ ಶಾಲೆಗೆ ಹೋಗದಿದ್ದ ಅನಕ್ಷರಸ್ಥರೇ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುತ್ತಿದ್ದರು. ಅವರಿಗೆ ಶಿಕ್ಷಕರ ಮೇಲೆ ಪ್ರಾಮಾಣಿಕ ಗೌರವ ಇರುತ್ತಿತ್ತು. ಹೆಚ್ಚಾಗಿ ಶಿಕ್ಷಕರು ಒಂದೇ ಊರಿನಲ್ಲಿ ಬಹು ವರ್ಷಗಳ ಕಾಲ ದುಡಿಯುತ್ತಿದ್ದರು. ಶಾಲೆಯು ಗ್ರಾಮ ಸಮುದಾಯದ ಒಂದು ಭಾಗವೇ ಆಗಿರುತ್ತಿತ್ತು. ಅದು ಊರಿನ ಸಾಂಸ್ಕøತಿಕ ಕಾರ್ಯಕ್ರಮಗಳ ಕೇಂದ್ರವಾಗಿರುತ್ತಿತ್ತು. ಶಿಕ್ಷಕರೂ ಅವುಗಳಲ್ಲಿ ಭಾಗವಹಿಸುತ್ತಿದ್ದರು. ಸಹಜವಾಗಿಯೇ ಗೌರವ ಉಂಟಾಗುತ್ತಿತ್ತು. ಆದರೆ ಈಗ ಹಾಗಿಲ್ಲ.


ಇಂದು  ಗ್ರಾಮ ಸಮುದಾಯಗಳ ಮಕ್ಕಳು ಊರಿನ ಶಾಲೆಗೆ ಹೋಗದೆ ಹಳದಿ ವಾಹನಗಳಲ್ಲಿ ಯಾವಯಾವುದೋ ಶಾಲೆಗಳಿಗೆ ಹೋಗಿ ಕಲಿಯುತ್ತಾರೆ. ಹಾಗಾಗಿ ಊರಿನಲ್ಲಿ ಶಿಕ್ಷಕರ ಪರಿಚಯವೇ ಇಲ್ಲದವರು ಇದ್ದಾರೆ. ಶಿಕ್ಷಕರೂ ಅಷ್ಟೇ, ಆಗಾಗ ವರ್ಗಾವಣೆಯಾಗುತ್ತ ಬೆಳಗ್ಗೆ ಶಾಲೆಗೆ ಬಂದು ಸಂಜೆ ಹೋಗುತ್ತಾರೆ. ಇನ್ನು ಸ್ವಂತ ವಾಹನಗಳಲ್ಲಿ ಬಂದು ಹೋಗುವವರು ಜನರಿಗೆ ಮಾತುಕತೆಗೂ ಸಿಗುವುದಿಲ್ಲ. ಶಾಲೆಗಳಲ್ಲಿ ನಡೆಯುತ್ತಿದ್ದ ಸಾಂಸ್ಕೃತಿಕ ಚಟುವಟಿಕೆಗಳು ಯುವಕ ಕೇಂದ್ರಗಳಿಗೆ ವರ್ಗಾವಣೆಗೊಂಡಿವೆ.


ಇದಲ್ಲದೆ ಉನ್ನತ ಶಿಕ್ಷಣಕ್ಕೆ ಹೋಗುವ ಮಕ್ಕಳ ಸಂಖ್ಯೆ ಹೆಚ್ಚಾಗಿರುವುದರಿಂದ ಹಿಂದೆಗಿಂತ ಹೆತ್ತವರಿಗೆ  ಇಂದು ಬಹು ಸಾಮಥ್ರ್ಯದ ಶಿಕ್ಷಕರ ಪರಿಚಯವಾಗುತ್ತದೆ. ಹೀಗಾಗಿ ಸಹಜವಾಗಿಯೇ ಗೌರವವು ಛಿದ್ರಗೊಳ್ಳುತ್ತಲೂ ಸ್ಥಳಾಂತರಗೊಳ್ಳುತ್ತಲೂ ಇದೆ. ಆದರೆ ಸಮರ್ಥವಾಗಿ ತನ್ನ ಜವಾಬ್ದಾರಿಯನ್ನು ನಿರ್ವಹಿಸುವ ಶಿಕ್ಷಕನ ಬಗ್ಗೆ ಯಾವತ್ತೂ ಗೌರವ ಅಚಲವಾಗಿರುತ್ತದೆ.- ಸುಮ ಚಂದ್ರಶೇಖರ್

ನಂ.29/1, 5ನೇಕ್ರಾಸ್, 

ಈಜುಕೊಳ ಬಡಾವಣೆ, ಮಲ್ಲೇಶ್ವರಂ,

ಬೆಂಗಳೂರು-03 / ಮೊ. 9880060354


(ಉಪಯುಕ್ತ ನ್ಯೂಸ್)ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post