ಸಾಂಬ್ರಾಣಿ ಸೊಪ್ಪು ಯಾರಿಗೆ ತಾನೇ ಗೊತ್ತಿಲ್ಲ? ನಮ್ಮೂರಿನ ಸಾಂಬ್ರಾಣಿಗೆ ಇಂಗ್ಲಿಷರು ಮೆಕ್ಸಿಕನ್ ಮಿಂಟ್ ಅಂತಾರೆ. ಅವರು ಏನಾದರೂ ಹೇಳಿಕೊಳ್ಳಲಿ, ನಾವು ಸಾಂಬ್ರಾಣಿ ಅಂತಲೇ ಕರೆಯೋಣ.
ಸಾಂಬ್ರಾಣಿ ರಸಂ ನಮ್ಮ ದೇಹಕ್ಕೆ ತುಂಬಾ ಆರೋಗ್ಯಕರ ಮತ್ತು ಪೌಷ್ಟಿಕವಾಗಿದೆ. ಈ ಸಾಂಕ್ರಾಮಿಕದ ಕಾಲದಲ್ಲಿ ಪ್ರತಿಯೊಬ್ಬರೂ ಮೊದಲು ಬಯಸುವುದು ಆರೋಗ್ಯವನ್ನು, ಉಳಿದಿದ್ದೆಲ್ಲವೂ ಅನಂತರ. ಸಾಂಬ್ರಾಣಿಯ ರಸಂ- ಎಲ್ಲದಕ್ಕೂ ಹೊಂದುವಂತಹ ಅತ್ಯುತ್ತಮವಾದ ರಸಂ. ಸೂಪ್‌ನಂತೆ ಹಾಗೆಯೇ ಕುಡಿಯಲೂ ಉತ್ತಮವಾಗಿದೆ. ನಮ್ಮ ಊಟದಲ್ಲಿ ರಸಂಗೆ (ಸಾರು) ಯಾವಾಗಲೂ ಮೊದಲ ಆದ್ಯತೆ.
ಸಾಂಬ್ರಾಣಿ ಎಲೆಗಳ ರಸಂ ಮಾಡುವುದು ತುಂಬಾ ಸುಲಭ ಮತ್ತು ದಿಢೀರನೆ ತಯಾರಿಸಬಹುದು. ಕೆಲವೊಮ್ಮೆ ಮುನ್ಸೂಚನೆಯಿಲ್ಲದೆ ಅತಿಥಿಗಳು ಬಂದಾಗ ಗಲಿಬಿಲಿಯಾಗುವುದು ಸಹಜ. ಆದರೆ ಸಾಂಬ್ರಾಣಿ ಗಿಡ ನಿಮ್ಮ ಮನೆಯಲ್ಲಿದ್ದರೆ ಯಾವುದೇ ಗಲಿಬಿಲಿ, ಆತಂಕ ಅಗತ್ಯವಿಲ್ಲ. ಅತಿಥಿಗಳನ್ನು ಮಾತನಾಡಿಸುತ್ತಲೇ, ನೋಡ ನೋಡುತ್ತಿದ್ದಂತೆಯೇ ರುಚಿಕಟ್ಟಾದ ಸಾಂಬ್ರಾಣಿ ಎಲೆಯ ರಸಂ ಮಾಡಿ ಉಣಬಡಿಸಬಹುದು.
ಸಾಂಬ್ರಾಣಿ ಎಲೆಯ ರಸಂ ಮಾಡಲು ಹೆಚ್ಚಿನ ಪದಾರ್ಥಗಳ ಅಗತ್ಯವಿಲ್ಲ. ನಿಮ್ಮ ಅಡುಗೆಮನೆಯಲ್ಲಿ ಏನಿದೆಯೋ ಅದೇ ಸಾಕು. ಔಷಧೀಯ ಗುಣಗಳನ್ಸಾನು ಹೇರಳವಾಗಿ ಹೊಂದಿರುವ ಸಾಂಬ್ರಾಣಿ ಗಿಡವನ್ನು ಸಾಮಾನ್ಯವಾಗಿ ಪ್ರತಿ ಮನೆಯಲ್ಲೂ ಬಾಲ್ಕನಿಯಲ್ಲಿ ಬೆಳೆಯಲಾಗುತ್ತದೆ.
ಪಾಕ ವಿಧಾನ:
8-10 ಸಾಂಬ್ರಾಣಿ ಎಲೆಗಳನ್ನು ಕೊಯ್ದು ಚೆನ್ನಾಗಿ ತೊಳೆದುಕೊಳ್ಳಿ. ನಂತರ ಕೆಲವು ನಿಮಿಷಗಳ ಕಾಲ ಹುರಿಯಬೇಕು. ಜೀರಿಗೆ ರಸಕ್ಕೆ ಉತ್ತಮ ಸುವಾಸನೆಯನ್ನು ನೀಡುತ್ತದೆ. ರಸಂ ಮಸಾಲೆಗೆ ಕರಿಮೆಣಸು ಮತ್ತು ಹಸಿ ಮೆಣಸಿನಕಾಯಿ ಸೇರಿಸಿ. ಅರಿಶಿನ ಮತ್ತು
ಹುಣಸೆಹಣ್ಣು ನೆನೆಸಿದ ನೀರನ್ನು ಸೇರಿಸಿ ಒಂದು ಬಾರಿ ಕುದಿಸಿಕೊಳ್ಳಿ. ರುಚಿಗೆ ತಕ್ಕಷ್ಟು ಬೆಲ್ಲ, ಉಪ್ಪು ಸೇರಿಸಿಕೊಳ್ಳಿ.
ಸಾಂಬ್ರಾಣಿ ಎಲೆಯ ಆರೋಗ್ಯ ಪ್ರಯೋಜನಗಳು
- ಉಸಿರಾಟದ ಸಮಸ್ಯೆಗಳನ್ನು ನಿವಾರಿಸಬಹುದು.
- ಚರ್ಮದ ಆರೈಕೆಯಲ್ಲಿ ಬಳಸಬಹುದು.
- ಸಂಭಾವ್ಯ ಒಮೆಗಾ -6 ಸತ್ವವನ್ನು ಹೊಂದಿದೆ.
- ವಿಟಮಿನ್ ಸಿ ಮತ್ತು ಎ ಹೊಂದಿರಬಹುದು.
- ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡುತ್ತದೆ.
- ಮೂತ್ರ ವರ್ಧಕವಾಗಿ ಕೆಲಸ ಮಾಡುತ್ತದೆ.
- ಜ್ವರದ ನಿವಾರಣೆಗೆ ಸಹಾಯ ಮಾಡುತ್ತದೆ.
- ಕರುಳಿನ ಕಿರಿಕಿರಿ ತಡೆಗಟ್ಟುವಲ್ಲಿ ಸಹಾಯ ಮಾಡುತ್ತದೆ.
- ಸ್ತುತಿ ಕೃಷ್ಣರಾಜ ಭಟ್
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ