|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಶಿಕ್ಷಕರು ಭಾಗ್ಯವಂತರು

ಶಿಕ್ಷಕರು ಭಾಗ್ಯವಂತರು



ಶಿಕ್ಷಕರೆಂದರೆ ದೇಶದ ಸಂಪತ್ತು. ಕೋಟ್ಯಂತರ ರೂಪಾಯಿ ಬೆಲೆಬಾಳುವ  ಸಂಪತ್ತನ್ನು (ಮಕ್ಕಳು) ಮತ್ತಷ್ಟೂ ಬೆಳೆಸುವವರು ಶಿಕ್ಷಕರು. ಭಾರತೀಯ ಸಮಾಜದಲ್ಲಿ ಶಿಕ್ಷಕರಿಗೆ, ಶಿಕ್ಷಣಕ್ಕೆ ಬಹಳ ಅಪೂರ್ವವಾದ ಗೌರವ, ಸ್ಥಾನಮಾನ  ಎಲ್ಲವೂ ಇವೆ. ಜನಸಾಮಾನ್ಯರ ದೃಷ್ಟಿಯಲ್ಲಿ ಶಿಕ್ಷಕರೆಂದರೆ ಎಲ್ಲವನ್ನೂ ತಿಳಿದವರು ಏನು ಕೇಳಿದರೂ ನಮಗೆ ಉತ್ತರ ಸಿಗುತ್ತದೆ, ಪರಿಹಾರ ಸಿಗುತ್ತದೆ, ಹಾಗೂ ಅವರ ಅನುಕರಣೆ ತಮ್ಮ ಏಳ್ಗೆ ಎಂದು ತಿಳಿದುಕೊಂಡು ಮುನ್ನಡೆಯುವವರು. ಇತರ ಯಾವ ವೃತ್ತಿಯವರಿಗೂ ಸಿಗದೇ ಇರುವ ಗೌರವ  ಶಿಕ್ಷಕರಿಗೆ ನಮ್ಮ ಸಮಾಜದಲ್ಲಿ ಸಿಗುತ್ತದೆ. ಎರಡೂ ಕೈಗಳನ್ನು ಮುಗಿದು, ಶಿರಬಾಗಿ ಗುರುಗಳಿಗೆ ವಂದಿಸುವ ಮಕ್ಕಳು ಪೋಷಕರು ನಮ್ಮ ಸುತ್ತಮುತ್ತಲೂ ಇದ್ದಾರೆ. ಶಿಕ್ಕಕರು ಆಡುವ ಮಾತುಗಳಲ್ಲೇ ಸತ್ಯವನ್ನು ಕಾಣುವ, ಅವರ ಮಾತುಗಳನ್ನು ಕಣ್ಣುಮುಚ್ಚಿ ಒಪ್ಪಿಕೊಳ್ಳುವ ಜನರು ಇದ್ದಾರೆ.


ಹೀಗೆ ಶಿಕ್ಷಕರ ಬಗ್ಗೆ ಒಳ್ಳೆಯ ಅಭಿಪ್ರಾಯಗಳಿರುವುದಕ್ಕೆ ಕಾರಣ ದೇಶದ ಶಿಕ್ಷಕ ಸಮುದಾಯದ ವರ್ತನೆ. ಜನಸಾಮಾನ್ಯರಂತೆ ಬದುಕಿದರೂ ಎಲ್ಲರಂತೆ ಶಿಕ್ಷಕರು ಬೇಕಾಬಿಟ್ಟಿಯಾಗಿ ಬದುಕುವುದಕ್ಕೆ ಸಾಧ್ಯವಿಲ್ಲ, ಬದುಕುವುದಿಲ್ಲ ಕೂಡ. ಮಾತು, ಕೃತಿಗಳಲ್ಲಿ ಸಚ್ಚಾರಿತ್ರರಾಗಿ ಬದುಕುವುದು ಶಿಕ್ಷಕರ ಜೀವನವೇ ಆಗಿರುತ್ತದೆ.


ಹೆತ್ತು ಹೊತ್ತು ಸಾಕಿ ಸಲಹಿದ ಪೋಷಕರು ತಮ್ಮ ಮಕ್ಕಳನ್ನು ಶಿಕ್ಷಣಕ್ಕಾಗಿ ಶಾಲೆಯೆಂಬ ದೇಗುಲಕ್ಕೆ ಕಳುಹಿಸುತ್ತಾರೆ. ಏನೂ ತಿಳಿದಿರದ  ಮಕ್ಕಳನ್ನು, ಹೊರ ಪ್ರಪಂಚಕ್ಕೆ ತೆರೆದಿಡುವ ಶಿಕ್ಷಕರು ನಿಜಕ್ಕೂ ವಂದನಾರ್ಹರು. ಶಾಲೆಯ ಮಕ್ಕಳನ್ನು ತಮ್ಮ ಸ್ವಂತ ಮಕ್ಕಳಿಗಿಂತಲೂ ಹೆಚ್ಚು ಪ್ರೀತಿಸಿ, ಗೌರವಿಸಿ ಲೌಕಿಕ ಜ್ಞಾನವನ್ನು ಧಾರೆಯೆರೆಯುವ ಶಿಕ್ಷಕರು ಯಾವತ್ತೂ ಯಾರಲ್ಲಿಯೂ ಬೇಧ ಮಾಡಲಾರರು. ಮಕ್ಕಳ ಸರ್ವತೋಮುಖ ಬೆಳವಣಿಗೆಯನ್ನು ಗುರಿಯಾಗಿಟ್ಟುಕೊಂಡು ದುಡಿಯುವ ಶಿಕ್ಷಕರಿಗೆ ಪೋಷಕರು ಸದಾ ಸ್ಪೂರ್ತಿಯಾಗಿರುತ್ತಾರೆ.  


ಇಂದಿಗೂ ಗೌರವ ಉಳಿಸಿಕೊಂಡಿರುವ ಶಿಕ್ಷಕ ವೃಂದ ಇನ್ನು ಮುಂದಕ್ಕೂ ಗೌರವಯುತವಾಗಿ ನಡೆದುಕೊಂಡು, ಗೌರವ ಉಳಿಸಿ ಮಕ್ಕಳ ಏಳಿಗೆಯನ್ನು ಮಾಡುವ ಮೂಲಕ ದೇಶದ ಪ್ರಗತಿಗೆ ಕಾರಣರಾಗಬೇಕು.



ತನ್ಮೂಲಕ ಅನುತ್ಪಾದಕ ವಲಯವೆಂದು ಪರಿಗಣಿಸಲ್ಪಟ್ಟಿರುವ ಶಿಕ್ಷಣ ಕ್ಷೇತ್ರವು, ಭಾವಿ ಉತ್ಪಾದಕರನ್ನು, ಉದ್ಯೋಗಿಗಳನ್ನು ಎಲ್ಲಕ್ಕಿಂತ ಮಿಗಿಲಾಗಿ ಉತ್ತಮ ಮಾನವರನ್ನು ಸೃಷ್ಟಿಸುವ ಮೂಲಕ ಪರೋಕ್ಷವಾಗಿ ಉತ್ಪಾದಕ ಕ್ಷೇತ್ರವೆಂದು ಕರೆಸಿಕೊಳ್ಳಬೇಕು.


ವರುಷದಲ್ಲಿ ಎಷ್ಟೇ ಹಿರಿಯರಾದರೂ ಮಕ್ಕಳೊಂದಿಗೆ ಬೆರೆಯುವ ಮೂಲಕ ಸದಾ ಮಕ್ಕಳಾಗಿರುವ ಭಾಗ್ಯ ದೊರೆತ ಶಿಕ್ಷಕರು ನಿಜಕ್ಕೂ ಭಾಗ್ಯವಂತರು. ಸದಾ ಅಧ್ಯಯನಶೀಲರಾಗಿ ಮಕ್ಕಳಲ್ಲಿಯೂ ಅದನ್ನು ಬೆಳೆಸಿ ಯಶಸ್ಸಿನ ಕಡೆಗೆ ಮುನ್ನುಗ್ಗುವಂತೆ ಮಾಡುವ ಕಾಯಕದಲ್ಲಿ ತೊಡಗಿ ತಾವು ಬಯಸಿ ಬಂದ ಶಿಕ್ಷಕ‌ ವೃತ್ತಿಯಲ್ಲಿ ಸಾರ್ಥಕತೆಯನ್ನು ಕಾಣುವಂತಾಗಲಿ.

-ಸವಿತಾ ಪಿ ಪಟ್ಟೆ



(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 تعليقات

إرسال تعليق

Post a Comment (0)

أحدث أقدم