|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಸಣ್ಣ ಕಥೆ: ಅನುಮಾನ

ಸಣ್ಣ ಕಥೆ: ಅನುಮಾನ



ಇನ್ನೇನು ಹಬ್ಬಗಳು ಸಾಲು ಸಾಲಾಗಿ ಬರುತ್ತವೆ. "ಇವತ್ತಾದರೂ ನಾವು ಮನೆಯೆಲ್ಲ ಕ್ಲೀನ್ ಮಾಡುವ". ಸೊಸೆ ಪ್ರಿಯಾಳಲ್ಲಿ ಅತ್ತೆ ಶ್ಯಾಮಲಾ ಹೇಳಿದಾಗ "ಸರಿ ಅತ್ತೆ. ಈಗಲೇ ಶುರುಮಾಡುವ. ನನ್ನ ಅಡಿಗೆ ಕೆಲಸ ಮುಗಿಯಿತು."


ಒಂದೊಂದೇ ರೂಮ್ ಸ್ವಚ್ಚಗೊಳಿಸಿಕೊಂಡು ಬರುತ್ತಿದ್ದ ಪ್ರಿಯಾಳಿಗೆ ಒಂದು ರೂಮಿನಲ್ಲಿ ಗೋಡೆಕವಾಟೊಂದರಲ್ಲಿ ಜೋಡಿಸಿಟ್ಟ ಪುಸ್ತಕಗಳು ಕಣ್ಸೆಳೆಯಿತು‌. "ನಾನು ಇದುವರೆಗೆ ಗಮನಿಸಿಯೇ ಇಲ್ಲವಲ್ಲ. ಎಷ್ಟು ಪುಸ್ತಕಗಳು" ಪುಸ್ತಕ ಪ್ರಿಯಳಾದ ಪ್ರಿಯಾ ಒಂದೊಂದೇ ಪುಸ್ತಕ ತೆಗೆದು ನೋಡಲಾರಂಭಿಸಿದಳು. ಕಾದಂಬರಿಯೊಂದನ್ನು ತೆಗೆದಾಗ ಪುಸ್ತಕ ಕೈಜಾರಿ ಕೆಳಕ್ಕೆ ಬಿತ್ತು. ಬಗ್ಗಿ ಹೆಕ್ಕಿದಾಗ ಅದರೊಳಗಿಂದ ಒಂದು ಪತ್ರ ಕೆಳಗೆ ಬಿತ್ತು. ಹೆಕ್ಕಿ ಓದಿದವಳಿಗೆ ಆಘಾತ. ನಿಂತ ನೆಲವೇ ಬಿರುಕು ಬಿಟ್ಟಂತಾಯಿತು.


ಪ್ರಿಯಾ ಮತ್ತು ಪ್ರಶಾಂತ್ ಎಂಟು ವರ್ಷಗಳಿಂದ ಒಬ್ಬರೊನ್ನೊಬ್ಬರು ಪ್ರೀತಿಸುತ್ತಿದ್ದರು. ಪಿಯುಸಿಯಲ್ಲಿ ಕಲಿಯುತ್ತಿದ್ದಾಗ ಅವಳು ಹೋಗುತ್ತಿದ್ದ ಬಸ್ಸಿನಲ್ಲಿ ಪ್ರಶಾಂತ್ ಪರಿಚಯವಾಗಿತ್ತು. ಡಿಗ್ರಿ ಮಾಡುತ್ತಿದ್ದ ಪ್ರಶಾಂತ್ ದಿನಾ ಇದೇ ಬಸ್ಸಿನಲ್ಲಿ ಕಾಲೇಜಿಗೆ ಹೋಗುತ್ತಿದ್ದ. ಮುಗುಳುನಗೆಯಿಂದ‌ ಆರಂಭವಾದ ಪ್ರೀತಿ ಮುಂದುವರಿದು ಒಬ್ಬರನ್ನೊಬ್ಬರು ಬಿಟ್ಟಿರಲಾರದ ಹಂತಕ್ಕೆ ಬಂದು ತಲುಪಿತ್ತು.


ಒಂದೇ ಜಾತಿಯಾದರೂ ತಮ್ಮಷ್ಟು ಸಿರಿವಂತರಲ್ಲವೆಂಬ ಕಾರಣಕ್ಕೆ ಪ್ರಿಯಾ ಮನೆಯವರಿಂದ ಮದುವೆಗೆ ಅಡ್ದಿಯಾಯಿತಾದರೂ ಮಗಳ ಹಠದ ಮುಂದೆ‌ ಹಿರಿಯರು ಸೋಲಲೇ‌ ಬೇಕಾಯಿತು. ಕೆಲವರ ಅಸಮಧಾನದ ನಡುವೆಯೂ ಮದುವೆ ನಡೆದುಹೋಯಿತು.


ಮಧ್ಯಮ ವರ್ಗದವರಾದ ಪ್ರಶಾಂತ್ ಮನೆಯವರು ಶ್ರೀಮಂತರಲ್ಲದಿದ್ದರೂ ಅವರಲ್ಲಿ

ಗುಣಕ್ಕೇನು ಕೊರತೆಯಿರಲಿಲ್ಲ. ಇವಳನ್ನು ಮಗಳಿಗಿಂತ ಹೆಚ್ಚಾಗಿ ನೋಡಿಕೊಳ್ಳುವ ಅತ್ತೆ ಮಾವಂದಿರು ಅವಳ ಪಾಲಿಗೆ ಅಪ್ಪ ಅಮ್ಮ‌ ಎನಿಸಿದ್ದರು. ಪ್ರಶಾಂತ್ ಅಂತೂ ಅವಳ ಮೇಲೆ ಪ್ರೀತಿಯ ಮಳೆಯನ್ನೇ ಸುರಿಸುತ್ತಿದ್ದ. ಎಂ.ಎಸ್.ಸಿ. ಮುಗಿಸಿ ಕಾಲೇಜೊಂದರಲ್ಲಿ ಉಪನ್ಯಾಸಕನಾಗಿದ್ದ ಪ್ರಶಾಂತ್ ಮತ್ತು ಪ್ರಿಯಾರ ಮದುವೆಯಾಗಿ ಒಂದು ವರ್ಷವಾಗುತ್ತಾ ಬಂತು. ಇನ್ನೊಂದು ವಾರಕ್ಕೆ ಮದುವೆ ವಾರ್ಷಿಕೋತ್ಸವ.


ಅಂದು ರಾತ್ರಿ ಪ್ರಶಾಂತ್ ನಮ್ಮ ಮದುವೆಯ ವಾರ್ಷಿಕೋತ್ಸವ ಹೇಗೆಲ್ಲಾ ಆಚರಿಸೋಣ ಎಂದು ಮಾತಾಡುತ್ತಿದ್ದಂತೆ ಪ್ರಿಯಾ ಉತ್ಸಾಹವೇ ಇಲ್ಲದೆ "ನಂಗೆ ತುಂಬಾ ತಲೆನೋವು" ಎಂದು ಊಟವೂ ಮಾಡದೆ ಮಲಗಿಕೊಂಡಾಗ ಪ್ರಶಾಂತನಿಗೆ ಆತಂಕವಾಯಿತು. ಬೇಗನೆ ಮಲಗಿದರೂ ನಿದ್ರೆ ಪ್ರಿಯಾಳಿಂದ ಬಲು ದೂರ. ಮನಸ್ಸಿನ ತುಂಬಾ ಆಗ ಓದಿದ ಪತ್ರದ ಸಾಲುಗಳು.


"ಪ್ರಿಯ ಪ್ರಶೂ ನೀನಿರದೆ ನಾನು ಹೇಗಿರಲಿ. ನಿನ್ನ ಜೊತೆಗೆ ಕಳೆದ ಒಂದೊಂದು ಕ್ಷಣಗಳೂ ನನ್ನ ನೆನಪಿನಲ್ಲಿ ಅಚ್ಚಾಗಿದೆ. ನಾವಿಬ್ಬರೂ ಒಂದಾದ ಏಕಾಂತದ ಸವಿನೆನಪು ನಾನೆಂದೂ ಮರೆಯಲಾರೆ. ನೀನೆಂದೂ ನನ್ನ ಕೈ ಬಿಡಲಾರೆಯಲ್ಲ."

-ನಿನ್ನ ಪ್ರೇಮಾ.


ಒಂದೊಂದು ಪದಗಳೂ ಅವಳೆದೆಗೆ ಈಟಿಯಂತೆ ಇರಿಯುತ್ತಿತ್ತು. ಪ್ರಶಾಂತ್ ಇನ್ನೊಬ್ಬ ಹುಡುಗಿಯನ್ನು ಪ್ರೀತಿಸುತ್ತಿದ್ದನೇ "ನನಗೆ ಗೊತ್ತೇ ಆಗದಂತೆ ಅವಳ ಜೊತೆ‌ ಕಾಲ ಕಳೆದಿದ್ದನು ಎಂಬುದನ್ನು ಅವಳಿಗೆ ನಂಬಲು ಅಸಾಧ್ಯವಾಗಿತ್ತು.


ಪ್ರಿಯಾ -ಪ್ರಶಾಂತರ ಪ್ರೀತಿಯ ಭದ್ರ‌ ಬುನಾದಿ ಬಿರುಕು ಬಿಟ್ಟಿತ್ತು. ದಿನದಿಂದ ದಿನಕ್ಕೆ ಮಂಕಾಗುತ್ತಿದ್ದ ಪ್ರಿಯಾಳನ್ನು ಕಂಡಾಗ ಪ್ರಶಾಂತನಿಗೆ 'ಏನಾಗಿದೆ ಇವಳಿಗೆ. ಇವಳ ಮನದಲ್ಲಿ ಏನಿದೆ' ಎಂಬುದನ್ನು ತಿಳಿಯಲೇಬೇಕು ಎಂದುಕೊಂಡ.


ಬಟ್ಟೆ ಬದಲಿಸಬೇಕೆಂದು ಕವಾಟಿನ ಬಾಗಿಲು ತೆಗೆದವನಿಗೆ ಆಕಸ್ಮಿಕವಾಗಿ ಅಲ್ಲಿದ್ದ ಕಾದಂಬರಿ ಕಣ್ಣಿಗೆ ಬಿತ್ತು. ಅದನ್ನು ಕಂಡಾಗ ಅವನಿಗೆ ಹಳೆಯ ಕಥೆ ನೆನಪಾಯಿತು. ಪ್ರಿಯಾಳ ಮುನಿಸಿಗೆ ಕಾರಣವೂ ಗೊತ್ತಾಯಿತು.


ಪ್ರಸಾದ್ ಮತ್ತು ಪ್ರಶಾಂತ್ ಆತ್ಮೀಯ ಗೆಳೆಯರು. ಕಾಲೇಜಿನಲ್ಲಿ ಕಲಿಯುತ್ತಿದ್ದ ಸಂದರ್ಭದಲ್ಲಿ ಪ್ರಸಾದ್ ತನಗಿಂತ ಎರಡು ವರ್ಷ ಜೂನಿಯರ್ ಆಗಿದ್ದ ಪ್ರೇಮಾಳನ್ನು ಪ್ರೀತಿಸುತ್ತಿದ್ದ. ಇಬ್ಬರೂ ಸುತ್ತದ ಜಾಗಗಳಿಲ್ಲ. ಕಾಲೇಜಿನಲ್ಲಿಯೂ ಜೊತೆಯಾಗಿಯೇ ಓಡಾಡುತ್ತಿದ್ದರು. ಕಾಲೇಜು ಬಿಟ್ಟು ಉದ್ಯೋಗ‌ಕ್ಕೆ ಸೇರಿದ ನಂತರವೂ ಅವರ ಪ್ರೀತಿ ಮುಂದುವರಿದಿತ್ತು. ಆದರೆ ಈ ವಿಷಯ ಪ್ರೇಮಾ ಮನೆಯವರಿಗೆ ಗೊತ್ತಾದಾಗ ಅವರು ಪ್ರಸಾದ ಬೇರೆ ಜಾತಿಯವನೆಂಬ ಕಾರಣಕ್ಕೆ ಬಲವಂತವಾಗಿ ಬೇರೆ ಮದುವೆ ಮಾಡಲು ಹೊರಟರು.


ಈ ಸಂದರ್ಭದಲ್ಲಿ ಪ್ರಶಾಂತ್ ಅವರಿಬ್ಬರ ಪ್ರೇಮಕ್ಕೆ ಸೇತುವೆಯಾಗಿದ್ದ. ಅವಳು ಪ್ರಸಾದ್ ನಿಗೆ ಕೊಟ್ಟ ಪತ್ರವೊಂದು ಈ ಪುಸ್ತಕದೆಡೆಯಲ್ಲಿ ಹಾಗೇ ಉಳಿದಿತ್ತು. ಪತ್ರ ಅವನಿಗೆ ತಲುಪಿಸುವ ಮೊದಲೇ ಅವರಿಬ್ಬರೂ ಜೊತೆಯಾಗಿ ರಿಜಿಸ್ಟರ್ ಮದುವೆಯಾಗಿ ಸಂಸಾರ ಶುರುಮಾಡಿಯಾಗಿತ್ತು. ಪುಸ್ತಕದ ನಡುವೆ ಇದ್ದ ಪತ್ರ ಅಲ್ಲಿಯೇ ಉಳಿದಿತ್ತು. ಅದು ಇಂದು ಪ್ರಶಾಂತನ ಸಂಸಾರದ ಬಿರುಕಿಗೆ ಕಾರಣವಾಗಿತ್ತು. ಇದನ್ನು ಮುಚ್ಚಲೇ ಬೇಕೆಂದು ನಿರ್ಧಾರ ಮಾಡಿದವನೇ ಪ್ರಸಾದ ಮತ್ತು ಪ್ರೇಮಾರನ್ನು ಕೂಡಲೇ ತನ್ನ ಮನೆಗೆ‌ ಬರುವಂತೆ ಫೋನ್ ಮಾಡಿದನು.


ಪ್ರಶಾಂತ್ ನ ಫೋನ್ ಕರೆಗೆ ಧಾವಿಸಿ ಬಂದ ಇಬ್ಬರೂ "ಯಾಕಪ್ಪ ಇಷ್ಟು ಅರ್ಜೆಂಟಾಗಿ ಬರಹೇಳಿದ್ದು" ಎಂದಾಗ ಅವರನ್ನು ಒಳಕರೆದು ಪ್ರಿಯಾಳಿಗೆ ಪರಿಚಯ ಮಾಡಿಸಿದನು. ಒಳಗೆ ಹೋದವನೇ ಆ ಪತ್ರವನ್ನು ತಂದು ಪ್ರಸಾದ್ ಕೈಯಲ್ಲಿಟ್ಟನು. ಪತ್ರವನ್ನು ನೋಡಿದೊಡನೆ ಪ್ರೇಮಾ ಮುಖದಲ್ಲಿ ನಾಚಿಕೆ. "ಅಯ್ಯೋ ಇದು ನಿಮ್ಮಲ್ಲಿಯೇ ಉಳಿದಿತ್ತಾ" ಎಂದಾಗ ಪ್ರಿಯಾಳಿಗೆ ಅಚ್ಚರಿ.


ನಡೆದಿದ್ದ ಕಥೆಯನ್ನೆಲ್ಲಾ ಹೇಳಿದಾಗ ಕವಿದಿದ್ದ ಅನುಮಾನದ ಹೊಗೆ ತಿಳಿಯಾಯಿತು. "ಪ್ರತ್ಯಕ್ಷ ಕಂಡರೂ ಪ್ರಾಮಾಣಿಸಿ ನೋಡಬೇಕೆಂಬ" ಮಾತು ನಿಜವೆನಿಸಿತು. ಪ್ರಿಯಾ ಖುಷಿಯಾಗಿ ಪ್ರಸಾದ್ ಪ್ರೇಮಾರಲ್ಲಿ "ನೀವಿವತ್ತು ಊಟ ಮಾಡಿಯೇ ಹೋಗಬೇಕು. ನಾನಿವತ್ತು ಸ್ಪೆಷಲ್ ಅಡಿಗೆ ಮಾಡ್ತೇನೆ" ಎಂದು ನಗುನಗುತ್ತಾ ಅಡಿಗೆ ಮನೆಯ ಕಡೆಗೆ ನಡೆದಾಗ ಪ್ರಶಾಂತ್ ಮನದಲ್ಲಿ ಯುದ್ದ ಗೆದ್ದ ಭಾವ.


-ಗಾಯತ್ರಿ ಪಳ್ಳತ್ತಡ್ಕ



(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 تعليقات

إرسال تعليق

Post a Comment (0)

أحدث أقدم