|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಶಾರದಾ ಆಶ್ರಯ- ಆಶ್ರಮಕ್ಕೆ ಬೇಕು ಉದಾರ ದಾನಿಗಳ ಸಹಾಯ ಹಸ್ತ

ಶಾರದಾ ಆಶ್ರಯ- ಆಶ್ರಮಕ್ಕೆ ಬೇಕು ಉದಾರ ದಾನಿಗಳ ಸಹಾಯ ಹಸ್ತ

 'ಆಶ್ರಯ'ದಾತರಾಗಿ, ನೊಂದ ಜೀವಗಳಿಗೆ ನೆರವಾಗಿ




ಮಂಗಳೂರು: ಬದುಕಿನಲ್ಲಿ ತೀವ್ರ ಸಂಕಷ್ಟಗಳು, ತಮ್ಮವರೆನ್ನುವ ಯಾರೂ ಇಲ್ಲದ ಅಥವಾ ಇದ್ದರೂ ನೋಡಿಕೊಳ್ಳದ  ಸಂತ್ರಸ್ತ ಜೀವಗಳಿಗೆ ಒಂದಿಷ್ಟು ನೆಮ್ಮದಿಯ ಬದುಕನ್ನು ನೀಡಲು ಸದ್ದಿಲ್ಲದೆ ಶ್ರಮಿಸುತ್ತಿದೆ ಕಾಸರಗೋಡು  ಜಿಲ್ಲೆಯ ಬದಿಯಡ್ಕ ಸಮೀಪದ ಕನ್ಯಪ್ಪಾಡಿ ಎಂಬಲ್ಲಿ ನೆಲೆಗೊಂಡಿರುವ ಈ ಆಶ್ರಯತಾಣ- ಅದುವೇ ಶಾರದಾ ಆಶ್ರಯ ಮತ್ತು ಶಾರದಾ ಶಿಶುಮಂದಿರ.


ಕಳೆದ 28 ವರ್ಷಗಳಿಂದ ಜನಸೇವೆಯಲ್ಲಿ ನಿರತವಾಗಿರುವ ಈ ಆಶ್ರಯ ಕೇಂದ್ರದಲ್ಲಿ ಪ್ರಸ್ತುತ 10 ಮಂದಿ ಹಿರಿಯರು ನೆಲೆಸಿದ್ದಾರೆ. ಕೆಲವು ವರ್ಷಗಳ ಹಿಂದೆ ಗರಿಷ್ಠ 28 ಮಂದಿಗೆ 'ಶಾರದಾ ಆಶ್ರಯ' ನೆಮ್ಮದಿಯ ನೆಲೆಯನ್ನು ಒದಗಿಸಿತ್ತು.


ಹಿನ್ನೆಲೆ:

ವೃತ್ತಿಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ, ಮಾತೃ ಹೃದಯದ ದಿ. ಬಿ. ವೈ ಶಾರದಾ ಅವರು 1993ರಲ್ಲಿ ಈ ಆಶ್ರಯ ತಾಣವನ್ನು ಸ್ಥಾಪಿಸಿ ತಮ್ಮ ಭವಿಷ್ಯನಿಧಿ ಮತ್ತು ಪಿಂಚಣಿ ಹಣವನ್ನು ಸಹ ವಿನಿಯೋಗಿಸಿ 2017ರ ವರೆಗೂ ಮುನ್ನಡೆಸಿದರು. ಆ ಹೊತ್ತಿಗಾಗಲೇ ವಯೋಸಹಜ ಅನಾರೋಗ್ಯ, ಆಶಕ್ತತೆಯಿಂದಾಗಿ ಅವರು ಈ ಆಶ್ರಯ ತಾಣದ ನಿರ್ವಹಣೆಯ ಹೊಣೆಯನ್ನು ಹಿಂದೂ ಸೇವಾ ಪ್ರತಿಷ್ಠಾನಕ್ಕೆ ಬಿಟ್ಟುಕೊಟ್ಟರು.


ಪ್ರಸ್ತುತ ಬೆಂಗಳೂರಿನ ಹಿಂದೂ ಸೇವಾ ಪ್ರತಿಷ್ಠಾನದ ನೇತೃತ್ವದಲ್ಲಿ ಈ ವೃದ್ಧಾಶ್ರಮವು ಕಾರ್ಯನಿರ್ವಹಿಸುತ್ತದೆ. ಸ್ಥಳೀಯವಾಗಿ ಇದರ ನಿರ್ವಹಣೆಗಾಗಿ ಸ್ಥಾಪಿಸಲಾದ ಜನಸೇವಾ ವಿಶ್ವಸ್ಥ ನಿಧಿ ಎಂಬ ಟ್ರಸ್ಟ್‌ ಇದರ ಎಲ್ಲ ಹೊಣೆಗಳನ್ನು ನಿಭಾಯಿಸುತ್ತಿದೆ.


ಆದರೆ ಈಗ ಕಳೆದ ಎರಡು ವರ್ಷಗಳಿಂದ ಇಡೀ ದೇಶವನ್ನೇ ಬಾಧಿಸಿರುವ ಕೊರೊನಾ ಸಾಂಕ್ರಾಮಿಕ ತಂದೊಡ್ಡಿದ ಸಂಕಷ್ಟಗಳಿಂದಾಗಿ ಈ ಆಶ್ರಮದ ನಿರ್ವಹಣೆಗೆ ಅಗತ್ಯವಿರುವ ಸಂಪನ್ಮೂಲ ಕ್ರೋಢೀಕರಣವೇ ಬಹುದೊಡ್ಡ ಸವಾಲಾಗಿದೆ. ಸರಕಾರದ ನೆರವಿಲ್ಲದೆ, ಕೇವಲ ಉದಾರ ದಾನಿಗಳ ಸಹಾಯದಿಂದಲೇ ನಡೆಯುತ್ತಿರುವ ಈ ಆಶ್ರಯತಾಣಕ್ಕೆ ಈಗ ಸಂಪನ್ಮೂಲದ ಕೊರೆತ ತೀವ್ರವಾಗಿ ಬಾಧಿಸುತ್ತಿದೆ.


ಆಶ್ರಮ ವಾಸಿಗಳಿಗೆ ಪ್ರತಿದಿನವೂ ಅಗತ್ಯದ ಆಹಾರ, ವೈದ್ಯಕೀಯ ನೆರವು, ಉಪಚಾರಗಳ ಒದಗಣೆಗಾಗಿ ಸಂಪನ್ಮೂಲದ ಅಗತ್ಯ ತೀವ್ರವಾಗಿದೆ. ದೇಶ-ವಿದೇಶಗಳ ಉದಾರ ದಾನಿಗಳು ತಮ್ಮಿಂದ ಸಾಧ್ಯವಿರುವ ಆರ್ಥಿಕ ನೆರವು ನೀಡಿ, ಆಶ್ರಯತಾಣದ ಸಮಾಜ ಸೇವೆಗಳಲ್ಲಿ ಭಾಗಿಯಾಗಬೇಕೆಂದು ವಿಶ್ವಸ್ಥ ಮಂಡಳಿ ಕೋರಿದೆ.


ಸಂಸ್ಥಾಪಕರ ಬಗ್ಗೆ:

ಮೂಲತಃ ಕಲ್ಲಡ್ಕ ಸಮೀಪ ಎಲ್ತಿಮಾರು ಶ್ರೀಮತಿ ಗಿರಿಜಾ ಶೆಣೈ ಮತ್ತು ಶ್ರೀ ಗಣಪತಿ ಶಾನುಭೋಗ ಅವರ ಸುಪುತ್ರಿಯಾಗಿ 1932ರಲ್ಲಿ ಬಿ.ವೈ ಶಾರದಾ ಅವರು ಜನಿಸಿದರು. ತಮ್ಮ ಪ್ರಾಥಮಿಕ ಹಾಗೂ ಹೈಸ್ಕೂಲು ಶಿಕ್ಷಣವನ್ನು ಬಂಟ್ವಾಳದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಪ್ರೌಢಶಾಲೆಯಲ್ಲಿ ಪೂರೈಸಿದರು. ನಂತರ ಮಂಗಳೂರಿನ ಸರಕಾರ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯದಲ್ಲಿ ಶಿಕ್ಷಕರ ತರಬೇತಿ ಪಡೆದರು. ಅನಂತರ ಬ್ಯಾಂಕ್ ಉದ್ಯೋಗಿ ಶ್ರೀ ಮಂಜುನಾಥ್ ಅವರನ್ನು ಮದುವೆಯಾಗಿ ಕಾಸರಗೋಡಿಗೆ ಬಂದು ನೆಲೆಸಿದರು. ಅಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿ ಉದ್ಯೋಗಕ್ಕೆ ಸೇರಿಕೊಂಡರು. ಆ ಬಳಿಕ ತಾಳಿಪಡ್ಪು, ಮೊಗ್ರಾಲ್ ಪುತ್ತೂರು ಶಾಲೆಗಳಲ್ಲಿ  ಸೇವೆ ಸಲ್ಲಿಸಿ ಶಿಕ್ಷಕ ವೃತ್ತಿಯಿಂದ ನಿವೃತ್ತರಾದರು.


ನಿವೃತ್ತಿಯ ನಂತರ , ಆಶ್ರಯ ಹೀನರಾದ ಸಮಾಜದ ಹಿರಿಯ ನಾಗರಿಕರಿಗೆ ಆಶ್ರಯ ಒದಗಿಸಬೇಕೆಂಬ ಉದಾತ್ತ ಆಶಯದೊಂದಿಗೆ ಈ ಸಂಸ್ಥೆಯನ್ನು ಸ್ಥಾಪಿಸಿದರು.   1990ರಲ್ಲಿ ಕಾಸರಗೋಡಿನ ಬೀರಂತಬೈಲಿನ ಬಾಡಿಗೆ ಕಟ್ಟಡದಲ್ಲಿ ಈ ಆಶ್ರಯ ತಾಣ ಜನ್ಮ ತಳೆಯಿತು. ಮೂರು ವರ್ಷಗಳ ನಂತರ ಶ್ರೀಮತಿ ಶಾರದಾ ಅವರು ತಮ್ಮ ಎಲ್ಲ ಸಂಪತ್ತನ್ನೂ ವ್ಯಯಿಸಿ ಬದಿಯಡ್ಕ ಸಮೀಪದ ಕನ್ಯಪ್ಪಾಡಿಯಲ್ಲಿ 4 ಎಕರೆ ಜಾಗವನ್ನು ಖರೀದಿಸಿ ಅಗತ್ಯ ಕಟ್ಟಡಗಳನ್ನು ನಿರ್ಮಿಸಿ ಈ ಆಶ್ರಯ ತಾಣವನ್ನು ಅಲ್ಲಿಗೆ ಸ್ಥಳಾಂತರಿಸಿದರು. ಅಷ್ಟು ಹೊತ್ತಿಗಾಗಲೇ ಅವರ ಕೈ ಖಾಲಿಯಾಗಿತ್ತು. ಆದರೆ ಧೃತಿಗೆಡದೆ ಸಾರ್ವಜನಿಕ ದಾನಿಗಳ ನೆರವು ಪಡೆದು ಆಶ್ರಯ ತಾಣವನ್ನು ಆದಷ್ಟೂ ಮಟ್ಟಿಗೆ ಸ್ವಾವಲಂಬಿಯಾಗಿಸುವ ನಿಟ್ಟಿನಲ್ಲಿ ಸಣ್ನದೊಂದು ತೆಂಗಿನ ತೋಟ, ತರಕಾರಿ ಮತ್ತು ಹೂವಿನ ಗಿಡಗಳನ್ನು ಬೆಳೆಸಿದರು. ಜತೆಗೆ ಒಂದು ಗೋಶಾಲೆಯನ್ನೂ ನಿರ್ಮಿಸಿ ದೈನಂದಿನ ಅಗತ್ಯಕ್ಕೆ ಬೇಕಾಗುವ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಆಶ್ರಮದಲ್ಲೇ ಉತ್ಪಾದಿಸಿಕೊಳ್ಳುವ ಪ್ರಯತ್ನ ಮಾಡಿದರು.


ಆದರೆ ಇಷ್ಟು ಹೊತ್ತಿಗೆ ಅವರ ದೇಹದ ಶಕ್ತಿ ಕ್ಷೀಣಿಸಿ ಅನಾರೋಗ್ಯ ಕಾಡತೊಡಗಿತು. ಇನ್ನು ತಮ್ಮಿಂದ ಈ ಸಂಸ್ಥೆಯನ್ನು ನಡೆಸಲಾಗದು ಎಂಬ ಆತಂಕ ಕಾಡತೊಡಗಿದಾಗ ಬೆಂಗಳೂರಿನ ಹಿಂದೂ ಸೇವಾ ಪ್ರತಿಷ್ಠಾನವನ್ನು ಸಂಪರ್ಕಿಸಿ ಇದರ ಹೊಣೆ ವಹಿಸಿಕೊಳ್ಳುವಂತೆ ಕೋರಿದರು. 2017ರ ಅಕ್ಟೋಬರ್ 1 ರಂದು ಶಾರದಾ ಟೀಚರ್‌ ಇಹಲೋಕ ತ್ಯಜಿಸಿದರು.


ವೃದ್ಧಾಶ್ರಮದ ಜತೆಗೆ 3ರಿಂದ 5 ವರ್ಷದ ಪುಟ್ಟ ಮಕ್ಕಳಿಗೆ ಸಂಸ್ಕಾರಯುತ ಭಾರತೀಯ ಶಿಕ್ಷಣ ನೀಡಲು ಶಾರದಾ ಶಿಶು ಮಂದಿರವನ್ನೂ ಇಲ್ಲಿ ನಡೆಸಲಾಗುತ್ತಿದೆ. ಕೊರೊನಾ ಸಂಕಟ ಆರಂಭಕ್ಕೆ ಮೊದಲು 25 ಮಕ್ಕಳು ಇಲ್ಲಿ ಶಿಕ್ಷಣ ಪಡೆಯುತ್ತಿದ್ದರು.


ಹಿಂದೂ ಹಬ್ಬಗಳು, ಸ್ವಾತಂತ್ರ್ಯೋತ್ಸವ ಮುಂತಾದ ರಾಷ್ಟ್ರೀಯ  ಆಚರಣೆಗಳನ್ನು ಇಲ್ಲಿ ಶ್ರದ್ಧೆಯಿಂದ ನೆರವೇರಿಸಲಾಗುತ್ತಿದೆ.


ಮುಂದಿನ ಯೋಜನೆಗಳು:

ಈ ಆಶ್ರಯ ತಾಣವನ್ನು ಇನ್ನಷ್ಟು  ಅಭಿವೃದ್ಧಿಪಡಿಸಲು ಜನಸೇವಾ ವಿಶ್ವಸ್ಥ ನಿಧಿ ಹಲವಾರು ಯೋಜನೆಗಳನ್ನು ಹಾಕಿಕೊಂಡಿದೆ.


1. ಒಂದು ಸಭಾಂಗಣದ ನಿರ್ಮಾಣ, 2. ಸಮಾಜದಲ್ಲಿ ಅನಾಥವಾಗಿರುವ ಇನ್ನಷ್ಟು ಮಂದಿಗೆ ಉತ್ತಮ ಗುಣಮಟ್ಟದ ಆಶ್ರಯ ಒದಗಿಸುವುದು (ಮಕ್ಕಳು ಮತ್ತು ಹಿರಿಯರು)

3. ಬೇಸಿಗೆ ಶಿಬಿರಗಳು, ವಿದ್ಯಾರ್ಥಿಗಳಿಗಾಗಿ ಕೋಚಿಂಗ್‌ ಶಿಬಿರಗಳ ಆಯೋಜನೆ

4. ಯೋಗ ತರಗತಿಗಳು

5. ಆಶ್ರಮದ ಭೂಮಿಯಲ್ಲಿ ಕೃಷಿ ಅಭಿವೃದ್ಧಿ

6. ಮಹಿಳೆಯರಿಗಾಗಿ ಟೈಲರಿಂಗ್‌ ಕ್ಲಾಸ್‌ಗಳು.


ಈ ಯೋಜನೆಗಳಿಗೆ ನೀವು ಈ ರೀತಿಯಲ್ಲಿ ನೆರವಾಗಬಹುದು:

1. ಆಶ್ರಮದಿಂದ ನೀಡಲಾಗುವ ನಿಧಿ ಬಿಂದಿಗೆ (ಹುಂಡಿ) ಗಳಿಗೆ ನಿಮ್ಮ ಕೈಲಾದ ಕಾಣಿಕೆಗಳನ್ನು ಹಾಕಬಹುದು.

2. ನಿಮ್ಮ ಕುಟುಂಬದ ಸದಸ್ಯರ ಜನ್ಮದಿನವನ್ನು ನಮ್ಮ ಆಶ್ರಮದಲ್ಲಿ ಆಚರಿಸಿಕೊಳ್ಳಬಹುದು.

3. ದಿನಸಿ ಸಾಮಾನುಗಳು ಮತ್ತು ತರಕಾರಿಗಳನ್ನು ಪ್ರಾಯೋಜಿಸಬಹುದು.

4. ವಿಶ್ವಸ್ಥ ನಿಧಿಯ ಬ್ಯಾಂಕ್‌ ಖಾತೆಗೆ ನಿಮ್ಮ ದೇಣಿಗೆಯನ್ನು ಸಲ್ಲಿಸಬಹುದು.


ಪರಸ್ಪರರ ಸಂಕಷ್ಟದಲ್ಲಿ ನೆರವಾಗುವ ಉದಾತ್ತ ಪರಂಪರೆಯನ್ನು ಮುಂದುವರಿಸೋಣ. ಮುಂದಿನ ಪೀಳಿಗೆಗೆ ಆದರ್ಶದ ಹಾದಿಯನ್ನು ತೋರೋಣ.


ನೆರವು ನೀಡಬಯಸುವ ಉದಾರ ದಾನಿಗಳಿಗಾಗಿ ಬ್ಯಾಂಕ್ ವಿವರ:


Karnataka Bank Neerchal Branch

Janaseva Vishwastha Nidhi

SB Ac/No. 5322500100552501

IFSC Code: KARB: 0000532


*****


Canara Bank Badiadka Branch

Janaseva Vishwastha Nidhi

SB Ac/No. 072610109457

IFSC Code: CNRB 0004489


ನೀವು ನೀಡುವ ಎಲ್ಲ ದೇಣಿಗೆಗಳಿಗೆ 80G ಅಡಿಯಲ್ಲಿ ಆದಾಯ ತೆರಿಗೆ ವಿನಾಯಿತಿ ಇರುತ್ತದೆ.

ಸಂಪರ್ಕ ಸಂಖ್ಯೆಗಳು:

9447653359

6238087537

70252 44218

94006 85034



(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ



0 Comments

Post a Comment

Post a Comment (0)

Previous Post Next Post