|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಪರಿಚಯ: ಕೌಟುಂಬಿಕ ಕಥಾನಕಗಳ ಕಥಾಕರ್ತ ಅಲ್ತಾರು ನಂದೀಶ್ ಶೆಟ್ಟಿ

ಪರಿಚಯ: ಕೌಟುಂಬಿಕ ಕಥಾನಕಗಳ ಕಥಾಕರ್ತ ಅಲ್ತಾರು ನಂದೀಶ್ ಶೆಟ್ಟಿ



ಯಕ್ಷಗಾನ ರಂಗದಲ್ಲಿ ಅನೇಕ ಯುವ ಕಥಾಕರ್ತರು ನಮಗೆ ಕಾಣಲು ಸಿಗುತ್ತಾರೆ. ಅಂತಹ ಯುವ ಕಥಾಕರ್ತರಲ್ಲಿ ಅಲ್ತಾರು ನಂದೀಶ್ ಶೆಟ್ಟಿ ಸದ್ಯ ಮಿಂಚುತ್ತಿರುವ ಯುವ ಕಥಾಕರ್ತ. ದಿನಾಂಕ ಫೆಬ್ರವರಿ 14 ಇವರ ಜನನ. ಬಿಲ್ಲಾಡಿ ನಾರಾಯಣ ಶೆಟ್ಟಿ ಹಾಗೂ ಸುಶೀಲ ಇವರ ಪ್ರೀತಿಯ ಮಗ. M.B.A in HR ಇವರ ವಿದ್ಯಾಭ್ಯಾಸ.


ಚಿಕ್ಕವನಿಂದಲೂ ಯಕ್ಷಗಾನದ ಬಗ್ಗೆ ಆಸಕ್ತಿ ಇತ್ತು, ಆದರೆ ಹುಟ್ಟಿ ಬೆಳೆದದ್ದು ಮಂಡ್ಯದಲ್ಲಿ. ಆದ್ದರಿಂದ ಯಕ್ಷಗಾನದ ವಾತಾವರಣ ಕಡಿಮೆ ಇತ್ತು, ಮುಂದೆ ಕಾಲೇಜಿಗೆ ಮಂದಾರ್ತಿ, ಮಂಗಳೂರಿಗೆ ಬಂದ ನಂತರ ಯಕ್ಷಗಾನದ ವಾತಾವರಣ ದೊರಕಿತು, ಅಲ್ಲಿಂದ ಹಲವಾರು ಪೌರಾಣಿಕ, ಸಾಮಾಜಿಕ ಪ್ರಸಂಗಗಳನ್ನು ನೋಡಿದರು. ಮತ್ತೆ ಉದ್ಯೋಗ ನಿಮಿತ್ತ ಬೆಂಗಳೂರಿಗೆ ಹೋದ ನಂತರ ಹಳೆಯ ಸ್ನೇಹಿತನಾದ ಪ್ರಸನ್ನ ಶೆಟ್ಟಿಗಾರ್ ರವರು ಯಕ್ಷಗಾನ ಪ್ರದರ್ಶನಕ್ಕಾಗಿ ಬೆಂಗಳೂರಿಗೆ ಬಂದ ನಂತರ, ತಾನು ಕಂಡ, ಕೇಳಿದ, ಅನುಭವಿಸಿದ ಕಲ್ಪನೆಗಳನ್ನು ಯಕ್ಷಗಾನ ಪ್ರಸಂಗ ರೂಪಕ್ಕೆ ತರಬೇಕೆಂಬ ಬಯಕೆ ಮೂಡಿತು. ಹೀಗೆ ಇವರಿಗೆ ಯಕ್ಷಗಾನದ ಪಯಣ ಹಾಗೂ ಕತೆ ಬರೆಯಲು ಪ್ರೇರಣೆ ಆಯಿತು.


ಯಕ್ಷಗಾನ ಕತೆ ಬರೆಯುವ ಜೊತೆಗೆ ಇವರು ಯಕ್ಷಗಾನ  ಹೆಜ್ಜೆಗಾರಿಕೆಯನ್ನು ಉಡುಪಿಯ ಯಕ್ಷಗಾನ ಕೇಂದ್ರದಲ್ಲಿ ಕಲಿತಿದ್ದಾರೆ ಹಾಗೂ ಬೆಂಗಳೂರಿನಲ್ಲಿ ಗುರುಗಳಾದ ಶಂಕರ ಬಾಳಕುದ್ರುರವರ ಮಾರ್ಗದರ್ಶನದಿಂದ ಧರ್ಮರಾಯ, ಕೈಟಭ, ದೇವಿ, ಮಾಲಿನಿ, ಈಶ್ವರ, ಧೂಮ್ರಾಕ್ಷ ಹೀಗೆ ಕೆಲವು ಪಾತ್ರಗಳನ್ನು ನಿರ್ವಹಿಸಿದ ಅನುಭವವಿದೆ.ಇದಲ್ಲದೆ ಯಕ್ಷಗಾನದ ಮತ್ತೊಂದು ಭಾಗವಾಗಿರುವ ತಾಳ ಮದ್ದಲೆಯಲ್ಲಿ ಚಿಕ್ಕ ಪುಟ್ಟ ಪಾತ್ರ ಮಾಡಿರುವ ಅನುಭವವಿದೆ. ಮುಂದೆಯೂ ವಾಚಿಕ ಪ್ರಧಾನವಾದ ಪಾತ್ರಗಳನ್ನು ಮಾಡುವ ಆಸಕ್ತಿಯಿದೆ.



ಸ್ವರ್ಣ ಆದಿತ್ಯ, ಪುಷ್ಪ ಚಂದನ, ಕಸ್ತೂರಿ ತಿಲಕ, ವಚನ ವಲ್ಲರಿ ಇವರು ಬರೆದಿರುವ ನಾಲ್ಕು ಯಕ್ಷಗಾನದ ಕತೆಗಳು. ಈ ನಾಲ್ಕು ಕತೆಗಳು ಸಾಲಿಗ್ರಾಮ ಮೇಳದಲ್ಲಿ ಪ್ರದರ್ಶನಗೊಂಡಿದೆ.ಕ್ರಿಕೆಟ್, ಕೃಷಿ, ಕರಕುಶಲ, ಪ್ರವಾಸ ಮಾಡುವುದು, ಲೇಖನಗಳನ್ನು ಬರೆಯುವುದು ಇವರ ಹವ್ಯಾಸಗಳು.


ಹೊಸ ಪ್ರಸಂಗಗಳ ಬಗ್ಗೆ ಆಕ್ಷೇಪಗಳಿವೆ, ಅದರ ಬಗ್ಗೆ ನಿಮ್ಮ ಅಭಿಪ್ರಾಯ:- 

ಯಕ್ಷಗಾನವನ್ನು ಉಳಿಸುವಲ್ಲಿ ಮತ್ತು ಬೆಳೆಸುವಲ್ಲಿ ಹೊಸ ಪ್ರಸಂಗಗಳ ಪಾತ್ರವೂ ಇದೆ. ಈಗಿನ ಟ್ರೆಂಡ್ ಗೆ ತಕ್ಕಂತೆ ತಾಂತ್ರಿಕತೆಯನ್ನು ಬಳಸಿಕೊಂಡು ಹೊಸತನ ಬರಲಿ ಆದರೆ ನಮ್ಮ ಮೂಲ ಯಕ್ಷಗಾನದ ಸಂಪ್ರದಾಯಕ್ಕೆ ದಕ್ಕೆ ಉಂಟು ಮಾಡದೆ ಇರಲಿ.


ಪದ್ಯ ಬರೆಯುವ ಬಗ್ಗೆ ನಿಮ್ಮ ನಿಲುವು ಏನು:- 

ಸಂಪೂರ್ಣ ಆಂಗ್ಲ ಮಾದ್ಯಮದಲ್ಲಿ ಓದಿದ ನನಗೆ ಕನ್ನಡ ಭಾಷೆಯ ವ್ಯಾಕರಣದ  ಬಗ್ಗೆ ಅರಿವು ಕಡಿಮೆ, ಇನ್ನು ಯಕ್ಷಗಾನದ ಪದ್ಯವನ್ನು ರಚಿಸುವುದು ಸುಲಭದ ಮಾತಲ್ಲ, ಯಕ್ಷಗಾನದ ರಾಗ ತಾಳ, ಛಂದಸ್ಸಿನ ಸಂಪೂರ್ಣ ಮಾಹಿತಿ ಬೇಕು, ಗುರಿ ಇದೆ ನೋಡೋಣ, ಗುರುಗಳ ಮಾರ್ಗದರ್ಶನ ಪಡೆಯುತ್ತೆನೆ.


ಕಿರು ಕಥೆ-ಕವನ, ಸಾಮಾಜಿಕ ಜಾಲತಾಣಗಳಲ್ಲಿ ಬದುಕಿನ ಕುರಿತು ಬರಹ, ಪ್ರಸಕ್ತ ವಿಚಾರಗಳ ಬಗ್ಗೆ,  ವ್ಯಕ್ತಿ ವಿಕಸನ ಬಗ್ಗೆ, ಲಘು ಬರಹವನ್ನು ಬರೆಯುತ್ತೇನೆ. ನನ್ನ ಕೆಲವಷ್ಟು ಬರಹಗಳು ಪತ್ರಿಕೆಯಲ್ಲಿಯೂ ಪ್ರಕಟವಾಗಿವೆ ಹೀಗೆ ಯಕ್ಷಗಾನ ಪ್ರಸಂಗ ಬಿಟ್ಟು ಬೇರೆ ರೀತಿಯ ಬರವಣಿಗೆಯನ್ನು ಇವರು ಅಳವಡಿಸಿಕೊಂಡಿದ್ದಾರೆ.


ತಾಳಮದ್ದಳೆ ಕ್ಷೇತ್ರದಲ್ಲಿ ಚಿಕ್ಕ ಪುಟ್ಟ ಪಾತ್ರಗಳನ್ನು ನಿರ್ವಹಿಸಿದ ಅನುಭವವೂ ಇದೆ. ಅರ್ಥಗಾರಿಕೆಗೆ ಬೆಟ್ಟದಷ್ಟು ತಯಾರಿಯ ಅಗತ್ಯವಿದೆ, ಪ್ರಯತ್ನ ಮುಂದುವರೆಸುವೆ.


ಸಾಲಿಗ್ರಾಮ ಮೇಳಕ್ಕೆ ಪ್ರಸಂಗ ಕೊಡುವಲ್ಲಿ ಮುಖ್ಯವಾಗಿ ಮಾರ್ಗದರ್ಶನವನ್ನು ನೀಡಿದ್ದು ಮೇಳದ ಹಿರಿಯ ಕಲಾವಿದರಾದ ರಾಘವೇಂದ್ರ ಮಯ್ಯ, ಶಶಿಕಾಂತ್ ಶೆಟ್ಟಿ ಮತ್ತು ಇನ್ನಿತರರು. ಹೆಜ್ಜೆ ಕಲಿಸುವಲ್ಲಿ ಮತ್ತು ವೇಷಗಾರಿಕೆಯಲ್ಲಿ ಉಡುಪಿ ಯಕ್ಷಗಾನ ಕೇಂದ್ರದ ಸಂಜೀವ ಸುವರ್ಣ, ಕೃಷ್ಣ ಮೂರ್ತಿ ಭಟ್, ಶೈಲೇಶ್ ನಾಯಕ್ ಮತ್ತು ಬೆಂಗಳೂರಿನಲ್ಲಿ ಶಂಕರ ಬಾಳಕುದ್ರು, ಮನೋಜ್  ಭಟ್, ಶಿಥಿಲ್ ಕುಮಾರ್ ಶೆಟ್ಟಿ ಹೀಗೆ ಹಲವಾರು ಹಿರಿಯರು-ಕಿರಿಯರು ಮಾರ್ಗದರ್ಶನವನ್ನು ನೀಡಿದ್ದಾರೆ. ಇವರೆಲ್ಲರಿಗೂ ನಾನು ಸದಾ  ಆಭಾರಿಯಾಗಿರುತ್ತೇನೆ.


ಯಕ್ಷಗಾನದ ಇಂದಿನ ಸ್ಥಿತಿ ಗತಿ:- 

ಯಕ್ಷಗಾನ ಹಿಂದೆ ಇತ್ತು,ಈಗ ಇದೆ. ಮುಂದೆಯೂ  ಇರುತ್ತದೆ.


ಇವತ್ತಿನ ಯಕ್ಷಗಾನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ:- 

ಪ್ರೇಕ್ಷಕರ ಬಗ್ಗೆ ಹೇಳುವಷ್ಟು ಅರ್ಹತೆ ನನಗಿಲ್ಲ. ಎಲ್ಲ ಕ್ಷೇತ್ರದಲ್ಲಿ ಇರುವಂತೆ ಯಕ್ಷಗಾನದಲ್ಲೂ ಎಲ್ಲಾ ರೀತಿಯ ಪ್ರೇಕ್ಷಕರಿದ್ದಾರೆ.


ಯಕ್ಷರಂಗದಲ್ಲಿ ನಿಮ್ಮ ಮುಂದಿನ ಯೋಜನೆಗಳು:-

ಯಕ್ಷಗಾನದಲ್ಲಿ ಪದ್ಯ ಸಹಿತ ಸಂಪೂರ್ಣ ಪ್ರಸಂಗ ರಚಿಸುವ ಹಂಬಲವಿದೆ. ತಾಳಮದ್ದಲೆ ಕ್ಷೇತ್ರದಲ್ಲಿ ಬೆಳೆಯಬೇಕೆಂಬ ಬಯಕೆ ಇದೆ, ಜೊತೆಗೆ ಯಕ್ಷಗಾನ ಕ್ಷೇತ್ರಕ್ಕೆ ನನ್ನಿಂದಾದ ಕೊಡುಗೆಗಳನ್ನು ಕೊಡಬೇಕೆಂಬ ಕನಸು ಯಾವಾಗಲು ಇದೆ. 


ಇವರಿಗೆ ಇವರು ನಂಬಿರುವ ಕಲಾಮಾತೆ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು‌ ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ.


- ಶ್ರವಣ್ ಕಾರಂತ್ ಕೆ

ಸುಪ್ರಭಾತ

ಶಕ್ತಿನಗರ ಮಂಗಳೂರು.



0 تعليقات

إرسال تعليق

Post a Comment (0)

أحدث أقدم