|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಶೈಕ್ಷಣಿಕ ಸಂಸ್ಥೆಯ ಬೆಳವಣಿಗೆಯಲ್ಲಿ ವೃತ್ತಿಪರತೆ, ತಂಡಸ್ಫೂರ್ತಿ ಅಗತ್ಯ: ಡಾ. ಡಿ. ವೀರೇಂದ್ರ ಹೆಗ್ಗಡೆ

ಶೈಕ್ಷಣಿಕ ಸಂಸ್ಥೆಯ ಬೆಳವಣಿಗೆಯಲ್ಲಿ ವೃತ್ತಿಪರತೆ, ತಂಡಸ್ಫೂರ್ತಿ ಅಗತ್ಯ: ಡಾ. ಡಿ. ವೀರೇಂದ್ರ ಹೆಗ್ಗಡೆ

 



ಉಜಿರೆ: ಬೋಧಕರು ಮತ್ತು ಬೋಧಕೇತರ ಸಿಬ್ಬಂದಿಗಳ ವ್ಯಕ್ತಿಗತ ವೃತ್ತಿಪರ ಬದ್ಧತೆಯು ಶೈಕ್ಷಣಿಕ ಸಂಸ್ಥೆ ವ್ಯಾಪಕ ಮನ್ನಣೆ ಗಳಿಸುವುದಕ್ಕೆ ಸಹಾಯಕವಾಗುತ್ತದೆ ಎಂದು ಎಸ್.ಡಿ.ಎಂ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು, ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಅವರು ಅಭಿಪ್ರಾಯಪಟ್ಟರು.


ಉಜಿರೆಯ ಎಸ್.ಡಿ.ಎಂ ಕಾಲೇಜಿನಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಾಪಕರನ್ನು ಉದ್ದೇಶಿಸಿ ಅವರು ಮಾತನಾಡಿದರು.


ವೃತ್ತಿಪರ ಬದ್ಧತೆಯೊಂದಿಗೆ ಕಾರ್ಯನಿರ್ವಹಿಸಿದಾಗ ಮನ್ನಣೆ ತಾನಾಗಿಯೇ ಲಭಿಸುತ್ತದೆ. ಶಿಕ್ಷಣ ಸಂಸ್ಥೆಗಳೊಂದಿಗೆ ತೊಡಗಿಸಿಕೊಂಡ ಬೋಧಕರು ಮತ್ತು ಬೋಧಕೇತರ ಸಿಬ್ಬಂದಿಗಳ ಬದ್ಧತೆ, ನಿರಂತರ ಪರಿಶ್ರಮವು ವ್ಯಕ್ತಿಗತ ಬೆಳವಣಿಗೆಯೊಂದಿಗೆ ಸಂಸ್ಥೆಯ ಸರ್ವತೋಮುಖ ಅಭಿವೃದ್ಧಿಗೂ ದಾರಿ ಮಾಡಿಕೊಡುತ್ತವೆ. ಎಸ್.ಡಿ.ಎಂ ಶಿಕ್ಷಣ ಸಂಸ್ಥೆ ಈ ನಿಟ್ಟಿನಲ್ಲಿ ಉಳಿದೆಲ್ಲ ಸಂಸ್ಥೆಗಳಿಗೆ ಮಾದರಿಯಾಗಿದೆ ಎಂದು ಹೇಳಿದರು.


ಎಸ್.ಡಿ.ಎಂ ಕಾಲೇಜಿನ ಆರಂಭಿಕ ದಿನಗಳು ಅತ್ಯಂತ ಸವಾಲಿನದ್ದಾಗಿದ್ದವು. ಗುಣಮಟ್ಟದ ಶಿಕ್ಷಣ ಮತ್ತು ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಯ ಆಲೋಚನಾಕ್ರಮಗಳನ್ನು ದೃಷ್ಟಿಯಲ್ಲಿರಿಸಿಕೊಂಡು ಈ ಕಾಲೇಜು ಸ್ಥಾಪಿತವಾಯಿತು. ಪಟ್ಟಾಭಿಷೇಕದ ನಂತರ ಲಭಿಸಿದ ಕಾಲೇಜು ಸ್ಥಾಪನೆ ಮತ್ತು ಕಟ್ಟಡ ನಿರ್ಮಾಣದ ಹೊಣೆಗಾರಿಕೆಯ ಅವಕಾಶ ಆಡಳಿತಾತ್ಮಕ ಸವಾಲುಗಳನ್ನು ಸಮರ್ಥವಾಗಿ ಎದುರಿಸುವ ಸಾಮಥ್ರ್ಯವನ್ನು ಒದಗಿಸಿಕೊಟ್ಟಿತು ಎಂದು ತಿಳಿಸಿದರು.


ರ್ಯಾಂಕಿಂಗ್ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆಯುವ ಉದ್ದೇಶದ ಕಡೆಗಷ್ಟೇ ಆದ್ಯತೆ ನೀಡಿದರೆ ನಿರ್ವಹಿಸುವ ಕಾರ್ಯ ಯಾಂತ್ರಿಕವಾಗುತ್ತದೆ. ನಿರ್ದಿಷ್ಟ ಕಾರ್ಯ ನಿರ್ವಹಿಸುವಾಗ ಮನ್ನಣೆ ಪಡೆಯುವ ಆಕಾಂಕ್ಷೆ ಇರಬಾರದು. ಬದ್ಧತೆಯ ಆಧಾರದಲ್ಲಿ ಕಾರ್ಯನಿರ್ವಹಿಸುವ ಶ್ರದ್ಧೆ ಮತ್ತು ಅದಕ್ಕನುಗುಣವಾದ ತೊಡಗಿಸಿಕೊಳ್ಳುವಿಕೆಯ ಕಡೆಗೇ ಹೆಚ್ಚಿನ ಆದ್ಯತೆ ನೀಡಬೇಕು. ಆ ಮೂಲಕ ತಾನಾಗಿಯೇ ಮನ್ನಣೆ ಲಭಿಸುತ್ತದೆ. ಅಂಥ ಮನ್ನಣೆಯು ಮಹತ್ವಪೂರ್ಣವೆನ್ನಿಸುತ್ತದೆ ಎಂದು ನುಡಿದರು.


ಒಂದು ಕಾಲದಿಂದ ಮತ್ತೊಂದು ಕಾಲಕ್ಕೆ ದಾಟಿಕೊಳ್ಳುವಾಗ ಹಲವು ಬದಲಾವಣೆಗಳಾಗುತ್ತವೆ. ಆ ಪಲ್ಲಟಗಳಿಗೆ ಅನುಗುಣವಾಗಿಯೇ ಶಿಕ್ಷಣ ವ್ಯವಸ್ಥೆಯನ್ನು ಪುನರ್‍ರೂಪಿಸಬೇಕಾಗುತ್ತದೆ. ವಿದ್ಯಾರ್ಥಿಗಳ ವ್ಯಕ್ತಿತ್ವವನ್ನು ಮತ್ತಷ್ಟು ಸತ್ವಯುತಗೊಳಿಸುವ ರೀತಿಯಲ್ಲಿ ಶೈಕ್ಷಣಿಕ ಕಲಿಕೆಯ ಪ್ರಕ್ರಿಯೆ ಏರ್ಪಡಬೇಕು. ಎಸ್.ಡಿ.ಎಂ ಶಿಕ್ಷಣ ಸಂಸ್ಥೆ ಮೊದಲಿನಿಂದಲೂ ಈ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಗಳನ್ನಿರಿಸಿದೆ. ಕಾಲೇಜಿನ ಬೆಳವಣಿಗೆಯಲ್ಲಿ ಪ್ರೊ.ಎಸ್.ಪ್ರಭಾಕರ್ ಅವರ ಪಾತ್ರ ಗುರುತರವಾದದ್ದು ಎಂದು ಶ್ಲಾಘಿಸಿದರು.


ಸಾರ್ವಜನಿಕರಿಂದಲೂ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಯಿಂದ ಹೆಚ್ಚಿನ ನಿರೀಕ್ಷೆಗಳಿವೆ. ಈ ನಿರೀಕ್ಷೆ ಹುಸಿಯಾಗದ ಹಾಗೆ ತಂಡಸ್ಥೂರ್ತಿಯೊಂದಿಗೆ ಕಾರ್ಯನಿರ್ವಹಿಸಬೇಕು. ಉಳಿದ ಶೈಕ್ಷಣಿಕ ಸಂಸ್ಥೆಗಳ ಮೌಲ್ಯಮಾಪನ ಮಾಡುವ ಉನ್ನತ ಹಂತವನ್ನು ಎಸ್.ಡಿ.ಎಂ ಶಿಕ್ಷಣ ಸಂಸ್ಥೆ ಈಗಾಗಲೇ ತಲುಪಿದೆ. ಈ ಬಗೆಯ ಉನ್ನತ ಶೈಕ್ಷಣಿಕ ಪರಂಪರೆಯನ್ನು ಮುಂದುವರೆಸುವ ರೀತಿಯಲ್ಲಿ ಹೊಸ ಪೀಳಿಗೆಯ ಅಧ್ಯಾಪಕರು ಕಾರ್ಯೋನ್ಮುಖವಾಗಬೇಕು ಎಂದು ಸಲಹೆ ನೀಡಿದರು.


ಸ್ವಾಗತಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಸತೀಶ್ಚಂದ ಎಸ್ ಅವರು ಕೊರೋನಾ ಇತಿಮಿತಿಯ ನಡುವೆಯೂ ಕಾಲೇಜಿನ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳು ಆಬಾಧಿತವಾಗಿ ಹಾಗೂ ಯಶಸ್ವಿಯಾಗಿ ನಡೆದಿವೆ ಎಂದು ವಿವರಿಸಿದರು. ಕಳೆದ ಎರಡು ವರ್ಷಗಳ ಅವಧಿಯಲ್ಲಿ ಕಾಲೇಜಿಗೆ ಸಂದ ಮನ್ನಣೆ ಹಾಗೂ ಪುರಸ್ಕಾರಗಳ ಮಾಹಿತಿಯನ್ನು ನೀಡಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯದರ್ಶಿ ಡಾ.ಬಿ.ಯಶೋವರ್ಮ ಅವರು ಉಪಸ್ಥಿತರಿದ್ದರು.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 تعليقات

إرسال تعليق

Post a Comment (0)

أحدث أقدم