ಕವನ: ಸ್ಮಾರಕಗಳು

Upayuktha
0


ಹಿಂದಿದ್ದವು ಎಲ್ಲೋ ಒಂದೊಂದು ಸ್ಮಾರಕಗಳು.

ಅಪರೂಪಕ್ಕೊಂದೊಂದು ಗೋಚರಿಸುವಂತೆಯೇ.

ಯಾರದೋ ಮನೆತನವು ಬದುಕಿದ್ದುಬಾಳಿದ್ದು

ಕಾರಣಾಂತರದಿಂದ ನಶಿಸಿ ಹೋದಂತೆಯೇ.


ಕಾಲ ಮುಂದೋಡುತ್ತ ಹೊಸತನವು ಬಂದಂತೆ 

ಇಂಥ ಸ್ಮಾರಕಗಳೋ ಸಾಮಾನ್ಯವೆಂಬಂತೆ

ಹಳ್ಳಿ ಹಳ್ಳಿಗಳಲ್ಲಿ ನಿತ್ಯ ಪ್ರತಿನಿತ್ಯವೂ 

ಆಗತೊಡಗಿದವು ಹಲವು ಸಾವಿರವೆಂಬಂತೆ 


ತಲೆಮಾರಿಂದ ಬಂದಂಥ ಹಿರಿಯ ಮನೆತನವೊ 

ಕಾಯ ಕಸು ಉಂಡಂಥ ಕೃಷಿ ಯೋಗ್ಯ ಭೂಮಿಯೋ 

ಯಾವುದೂ ಉಳಿಯದೇ ಅತಿ ಶೀಘ್ರದಲ್ಲಿಂದು

ಆಗುತಿವೆ ಎಲ್ಲವೂ ಶಾಶ್ವತದ ಸ್ಮಾರಕಗಳು. 


ಏಕ ಶಿಶು ಸಂಸಾರ ಸುಖವ ತರುವುದು ಎಂಬ

ಭ್ರಮೆಯಲ್ಲಿ ಬದುಕನ್ನು ಕಟ್ಟಿಕೊಂಡಿಹೆವು ನಾವು 

ಒಂದು ಹಂತದ ಮೇಲೆ ಅರಿವಾಗುವುದು ನಮಗೆ

ಏಕ ಶಿಶು ಸಂಸಾರ ಸ್ಮಾರಕಕ್ಕಾಧಾರ. 


ಹಿಂದಿನಿಂದಲು ನಮ್ಮ ಹಿರಿಯರೆಲ್ಲರು ಕೂಡ 

ಮಕ್ಕಳ ಕಾಲಕ್ಕು ಮರಿಮಕ್ಕಳ ಕಾಲಕ್ಕು 

ಬದುಕು ಇರಬೇಕೆಂದು ಬದುಕನ್ನು ಕೂಡಿಟ್ಟು 

ನೆಮ್ಮದಿಯ ಬದುಕನ್ನು ಬದುಕಿ ಬಾಳಿದರಿಲ್ಲಿ. 


ಹಳ್ಳಿಗಳ ಚಿತ್ರಣವು ಏನಾಗುತಿದೆ ಇಂದು 

ಧನವ ಗಳಿಸುವುದೊಂದೆ ಬಾಳಿನ ಗುರಿ ಎಂದು 

ಸಂತೃಪ್ತ ಸಮೃಧ್ಧ ಕೃಷಿಯ ಕಾಯಕ ಬಿಟ್ಟು 

ನಗರ ಸೇರಿದ ಜನಕೆ ನೆಮ್ಮದಿಯು ಏಲ್ಲಿಹುದು. 


ಹಿರಿಯ ಜೀವಕೆ ಇಲ್ಲಿ ಆಧಾರವೇ ಇಲ್ಲ 

ಕೃಷಿಯ ಕಾಯಕ ಬಿಟ್ಟು ಇನ್ನೇನು ತಿಳಿದಿಲ್ಲ 

ಸುಖ ಕೊಡುವ ಮಕ್ಕಳೂ ದೂರವಾದರೆ ಎಲ್ಲ 

ಸ್ಮಾರಕಗಳಾಗದೇ ನಮ್ಮ ಮನೆ ಮಠಗಳೆಲ್ಲ?


ಎಲ್ಲವೂ ಮುಗಿದಾಗ ಭೂಮಿ ಬರಡಾದಾಗ 

ಬರಬಹದು ಮಕ್ಕಳೂ ಕ್ಯಾಮೆರಾ ಹಿಡಕೊಂಡು 

ಇಲ್ಲಿತ್ತು ನಮ್ಮ ಮನೆ, ಇಲ್ಲಿ ದನ ಕರು ನಾಯಿ

ಇಲ್ಲಿ ನಮ್ಮಾಟವದು, ಇಲ್ಲಿ ಓದುವ ಕೊಠಡಿ 


ಇಲ್ಲಿ ತಂದೆಯ ಜಾಗ, ಇದುವೆ ಅಮ್ಮನ ಮಂಚ

ಎಲ್ಲವೂ ನೆನಪುಗಳು ಎಲ್ಲವೂ ಕನಸುಗಳು 

ಬಂದ ಗಳಿಗೆಯ ಒಳಗೆ ಎಲ್ಲವನು ಸೆರೆ ಹಿಡಿದು 

ನಗರಕ್ಕೆ ಹೊರಟಾಗ ಒಂಟಿ ಇದು ಸ್ಮಾರಕವು. 


ಪ್ರತಿಯೊಂದು ಸ್ಮಾರಕಕೆ ಹೊಸಹೊಸತು ಕಥೆ ಇದೆ 

ಪ್ರತಿಯೊಂದು ಕಥೆಗಳಿಗು ಹೊಸಹೊಸತು ವ್ಯಥೆ ಇದೆ

ಪ್ರತಿಯೊಂದು ವ್ಯಥೆಗಳಿಗು ಕಂಬನಿಯು ಉದುರುತಿದೆ 

ಪ್ರತಿಯೊಂದು ಕಂಬನಿಗು ಸ್ಮಾರಕವು ಕಾಣುತಿದೆ. 


-ಸಹಸ್ರಬುಧ್ಯೆ ಮುಂಡಾಜೆ


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ



Tags

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top