ಗೀತಾ ಪರಿವಾರವು ನಡೆಸುತ್ತಿರುವ ಭಗವದ್ಗೀತೆ ಕಲಿಕೆಯ ಉಚಿತ ಆನ್‌ಲೈನ್ ತರಗತಿಗಳಲ್ಲಿ ಈಗ ಹೆಚ್ಚುಹೆಚ್ಚು ಕನ್ನಡಿಗರೂ ಭಾಗವಹಿಸುತ್ತಿದ್ದಾರೆ. ವಯಸ್ಸು, ಲಿಂಗ, ಸಾಮಾಜಿಕ ಹಿನ್ನೆಲೆ ಮುಂತಾದ ಯಾವ ಭೇದವಿಲ್ಲದೆ ಎಲ್ಲರೂ ಅತ್ಯುತ್ಸಾಹದಿಂದ ಕಲಿಯುತ್ತಿದ್ದಾರೆ. "ಗೀತಾಗುಂಜನ್", "ಗೀತಾ ಜಿಜ್ಞಾಸು" ಮುಂತಾಗಿ ಪ್ರಮಾಣಪತ್ರಗಳನ್ನೂ ಪಡೆಯುತ್ತಿದ್ದಾರೆ. ಮಾತ್ರವಲ್ಲ, ಹಲವರು ತರಬೇತಿ ಪಡೆದು ಹೊಸ ಬ್ಯಾಚ್‌ಗಳ ಕನ್ನಡ ಮಾಧ್ಯಮ ತರಗತಿಗಳಲ್ಲಿ ಪ್ರಶಿಕ್ಷಕರಾಗಿ, ತಾಂತ್ರಿಕಸಹಾಯಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಗೀತೆಯ ಅಧ್ಯಾಯಗಳ ಶುದ್ಧ ಉಚ್ಚಾರದ ಕಲಿಕೆಯು ಮನಸ್ಸಿಗೆ, ದೇಹಕ್ಕೆ ಅದೆಷ್ಟು ಒಳ್ಳೆಯ ಪರಿಣಾಮ ತಂದುಕೊಟ್ಟಿದೆಯೆಂದು ಅನೇಕರು ತಮ್ಮ ಅನಿಸಿಕೆ ವ್ಯಕ್ತಪಡಿಸುತ್ತಿದ್ದಾರೆ. ಅದರಲ್ಲೂ ಕೋವಿಡ್‌ನಿಂದ ಕವಿದ ಅಂಧಕಾರದಲ್ಲಿ ಇದೊಂದು ಭರವಸೆಯ ಬೆಳಕೇ ಆಗಿದೆ ತುಂಬ ಜನರಿಗೆ.
ಗೀತಾಪರಿವಾರದಿಂದ ಗೀತೆ ಕಲಿಕೆಯ ಹೊಸ ಬ್ಯಾಚ್ ಅಕ್ಟೋಬರ್ 4ರಂದು ಆರಂಭವಾಗಲಿದೆ. ಇದರ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿಯವರು ಶುಭಾಶಂಸನೆ ಉಪನ್ಯಾಸ ಮಾಡಲಿದ್ದಾರೆ. ಪ್ರಕೃತ ಅಮೆರಿಕ ಪ್ರವಾಸದಲ್ಲಿರುವ ಶ್ರೀಗಳು ಝೂಮ್ ಮೂಲಕ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಭಗವದ್ಗೀತೆಯ ಬೋಧನೆ ಮತ್ತು ಪ್ರಚಾರಕ್ಕಾಗಿ ಉಡುಪಿಯಲ್ಲಿ ಗೀತಾಮಂದಿರದ ನಿರ್ಮಾಣ, ಗೀತಾ ಯಜ್ಞ, ಸಿಂಗಾಪುರದಲ್ಲಿ ಜಾಗತಿಕ ಗೀತಾ ಸಮ್ಮೇಳನ ಸೇರಿದಂತೆ ಹಲವಾರು ಯೋಜನೆಗಳ ಅಧ್ವರ್ಯುವಾಗಿರುವ ಪುತ್ತಿಗೆ ಶ್ರೀಗಳ ಆಶೀರ್ವಾದ ಗೀತಾ ಪರಿವಾರಕ್ಕೆ ಲಭಿಸುತ್ತಿರುವುದು ಅತ್ಯಂತ ಸಂತೋಷದ ಸಂಗತಿಯೆಂದು ಗೀತಾ ಪರಿವಾರದ ರಾಷ್ಟ್ರೀಯ ಉಪಾಧ್ಯಕ್ಷ ಡಾ. ಆಶು ಗೋಯಲ್ ತಿಳಿಸಿದ್ದಾರೆ. ಅಲ್ಲದೇ, ಕರ್ನಾಟಕದಿಂದ, ಅದರಲ್ಲೂ ಉಡುಪಿ ಪುಣ್ಯಕ್ಷೇತ್ರದಿಂದ, ಸ್ವಾಮೀಜಿಯೊಬ್ಬರು ಗೀತಾಪರಿವಾರದ ಸಮಾರಂಭದಲ್ಲಿ ಶುಭಾಶಂಸನೆ ಉಪನ್ಯಾಸಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸುತ್ತಿರುವುದು ಕನ್ನಡಿಗರಾದ ನಮಗೆಲ್ಲರಿಗೂ ಅಭಿಮಾನದ ಸಂಗತಿಯೇ.
ಸಂಗಮನೇರ್ ಮಹಾರಾಷ್ಟ್ರದ ಶ್ರೀ ಗೋವಿಂದದೇವ ಗಿರಿ ಜೀ ಮಹಾರಾಜ್ ಅವರು ಭಗವದ್ಗೀತೆಯ ಪ್ರಚಾರಕ್ಕೆಂದೇ 1986ರಲ್ಲಿ ಆರಂಭಿಸಿದ ‘ಗೀತಾ ಪರಿವಾರ’ ಅಭಿಯಾನವು ಆನ್‌ಲೈನ್‌ನಲ್ಲಿ ಉಚಿತವಾಗಿ ಭಗವದ್ಗೀತೆ ಕಲಿಕೆಯ ತರಗತಿಗಳನ್ನು ನಡೆಸುತ್ತಿದೆ. ಜೂನ್ 2020ರಿಂದ ಇದುವರೆಗೆ ಸುಮಾರು 2.5 ಲಕ್ಷಕ್ಕಿಂತಲೂ ಹೆಚ್ಚು ಗೀತಾಭಿಮಾನಿಗಳು ಗೀತೆಯ ಅಧ್ಯಾಯಗಳ ಶುದ್ಧ ಸಂಸ್ಕೃತ ಪಠಣದ ಶಿಕ್ಷಣ ಪಡೆದಿದ್ದಾರೆ. ಅಕ್ಟೋಬರ್ 2021ರ ಬ್ಯಾಚ್‌ನಲ್ಲೂ 50,000ಕ್ಕೂ ಹೆಚ್ಚು ಪ್ರಶಿಕ್ಷಾರ್ಥಿಗಳಿಗೆ ಪ್ರವೇಶ ಕೊಡುವ ವ್ಯವಸ್ಥೆ ಕಲ್ಪಿಸಲಾಗಿದೆ. ಕನ್ನಡ ಸೇರಿದಂತೆ ಹತ್ತು ವಿವಿಧ ಭಾಷೆಗಳಲ್ಲಿ, ದಿನದ ಹತ್ತು ಬೇರೆಬೇರೆ ಅವಧಿಗಳಲ್ಲಿ ಝೂಮ್ ಮೂಲಕ ಆನ್‌ಲೈನ್ ತರಗತಿಗಳು ನಡೆಯುತ್ತವೆ. ವಯಸ್ಸು, ಲಿಂಗ, ಪ್ರಾದೇಶಿಕತೆ, ಸಾಮಾಜಿಕ ಹಿನ್ನೆಲೆ ತಾರತಮ್ಯವಿಲ್ಲದೆ ಎಲ್ಲರಿಗೂ ಉಚಿತ ಪ್ರವೇಶವಿದೆ. ನೋಂದಣಿಗೆ ಕೊನೆಯ ದಿನ 30 ಸೆಪ್ಟೆಂಬರ್ 2021. ನೋಂದಣಿ ಮತ್ತು ಅಕ್ಟೋಬರ್ 4ರ ಆರಂಭೋತ್ಸವದ ವೀಕ್ಷಣೆಗೆ ವೆಬ್‌ಸೈಟ್ ವಿಳಾಸ: learngeeta.com