|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಜಗತ್ತಿನ ಮಹಾ ಮಾತೆಯರು (ಸಂಚಿಕೆ 1)

ಜಗತ್ತಿನ ಮಹಾ ಮಾತೆಯರು (ಸಂಚಿಕೆ 1)


ಪ್ರತೀ ಒಬ್ಬರ ಭಾವಕೋಶದಲ್ಲಿ ಕೊನೆಯ ತನಕವೂ ನಿಕ್ಷೇಪ ಆಗಿರುವುದು ತನ್ನ ತಾಯಿಯ ಮಧುರ ಸ್ಮರಣೆ  ಅನ್ನುವುದು ಅಮೃತ ವಾಕ್ಯ! 


ತಾಯಿಯು ಕೊಟ್ಟ  ಪ್ರಭಾವವನ್ನು ಮತ್ತು ನಿರಂತರ ಪ್ರೇರಣೆಯನ್ನು ಬೇರೆ ಯಾರೂ ಕೊಡಲು ಸಾಧ್ಯವೇ ಇಲ್ಲ. ಜಗತ್ತಿನ ಅಂತಹ ಮಹಾಮಾತೆಯರ ಕುರಿತಾಗಿ ಈ ಸಂಚಿಕೆ ಇಂದಿನಿಂದ ಆರಂಭ ಆಗ್ತಾ ಇದೆ. ಎರಡು ದಿನಕ್ಕೊಮ್ಮೆ ಈ ಸಂಚಿಕೆಯು ನನ್ನ fb ಮತ್ತು ಇತರ ಜಾಲತಾಣದಲ್ಲಿ ಪ್ರಸಾರ ಆಗುವುದು. ದಯವಿಟ್ಟು ಈ ಲೇಖನ ಓದಿ ಮತ್ತು ಅಭಿಪ್ರಾಯ ತಿಳಿಸಿ. 


1894ರ ಒಂದು ಮಾದಕವಾದ ಸಂಜೆ. ಲಂಡನ್ನಿನ ಒಂದು ದೊಡ್ಡ ನಾಟಕ ಮಂದಿರದಲ್ಲಿ ಜನರು ಕಿಕ್ಕಿರಿದು ತುಂಬಿದ್ದರು. ಅವರೆಲ್ಲರೂ ಒಬ್ಬ ಗಾಯಕಿಯ ಹಾಡನ್ನು ಕೇಳಲು ಟಿಕೆಟ್ ತೆಗೆದುಕೊಂಡು ಬಂದಿದ್ದರು. 


ಕಾರ್ಯಕ್ರಮ ಆರಂಭವಾಗಿ ಆಗಲೇ ಅರ್ಧ ಗಂಟೆ ಆಗಿತ್ತು. ಗಾಯಕಿ ಮೈಮರೆತು ಹಾಡುತ್ತಿದ್ದರು. ಸೇರಿದ ಜನರು ತನ್ಮಯರಾಗಿ ಆಕೆಯ ಹಾಡಿಗೆ ರಾಶಿ ರಾಶಿ ಚಪ್ಪಾಳೆಯನ್ನು  ಸುರಿಯುತ್ತಿದ್ದರು. ಆಗ ಒಂದು ಘಟನೆಯು ನಡೆದು ಹೋಯಿತು.  


ಇದಕ್ಕಿದ್ದಂತೆ ಗಾಯಕಿಯ ಕಂಠವು ಒಡೆದು ಹಾಡು ನಿಂತಿತು! ಟಿಕೆಟ್ ತೆಗೆದುಕೊಂಡು ಬಂದಿದ್ದ ಜನ ಭಾರೀ ರೊಚ್ಚಿಗೆದ್ದರು. ಕಲ್ಲುಗಳು, ಚಪ್ಪಲಿಗಳು ಸ್ಟೇಜ್ ಮೇಲೆ ತೂರಿಕೊಂಡು ಬಂದವು. ಥಿಯೇಟರ್ ಮೆನೇಜರ್ ಸ್ಟೇಜ್ ಮೇಲೆ ಬಂದು ವಿಧವಿಧವಾಗಿ ಬೇಡಿಕೊಂಡರೂ ಜನರ ಆಕ್ರೋಶ ಕಡಿಮೆ ಆಗಲಿಲ್ಲ. ಮೆನೇಜರಗೆ ಏನು ಮಾಡಬೇಕು ಎಂದು ತಿಳಿಯಲಿಲ್ಲ. 


ಆತ ಸುತ್ತ ನೋಡಿದಾಗ ಒಬ್ಬ ಐದು ವರ್ಷದ ಪುಟ್ಟ ಹುಡುಗನು ಪರದೆಯ ಹಿಂದೆ ನಿಂತು ದೊಡ್ಡ ಕಣ್ಣು ಮಾಡಿ ವೇದಿಕೆಯನ್ನು  ನೋಡುತ್ತಿದ್ದ. ಅವನ ಕಣ್ಣಲ್ಲಿ ಭಾರೀ ಹೊಳಪಿತ್ತು. ಅವನು ಅದೇ ಗಾಯಕಿಯ ಮಗ. ದಿನವೂ ಅಮ್ಮನ ಸೆರಗು ಹಿಡಿದು ನಾಟಕ ಮಂದಿರಕ್ಕೆ ಬರುತ್ತಿದ್ದ. ಅಮ್ಮನ ಹಾಡು, ನೃತ್ಯ ಮತ್ತು ಮಿಮಿಕ್ರಿ ಅವನಿಗೆ ತುಂಬಾ ಖುಷಿ ಕೊಡುತ್ತಿದ್ದವು. 


ಮೆನೇಜರಗೆ ಈಗ ಮುಖ ಉಳಿಸಬೇಕಾಗಿತ್ತು. ಅವನು ಹುಡುಗನ ರಟ್ಟೆ ಹಿಡಿದು ಸ್ಟೇಜಗೆ ದೂಡಿದ. ಏನಾದ್ರೂ ಮಾಡಿ ಮರ್ಯಾದೆ ಉಳಿಸು ಎಂದ. 


ಹುಡುಗನಿಗೆ ಏನು ಮಾಡಬೇಕು ಎಂದು ಗೊತ್ತಾಗಲಿಲ್ಲ. ಒಂದೆಡೆ ತುಂಬಾ ಪ್ರೀತಿ ಮಾಡುವ ಅಮ್ಮನಿಗೆ ಏನೋ ಆಗಿದೆ ಎಂಬ ಆತಂಕ ಮನದಲ್ಲಿ ಇತ್ತು. ಐದು ವರ್ಷದ ಅವನು ತನ್ನ ತಾಯಿಯನ್ನು ತುಂಬಾ ಪ್ರೀತಿ ಮಾಡ್ತಾ ಇದ್ದ. ಅವನಿಗೆ ಬೇರೆ ಯಾರೂ ಇರಲಿಲ್ಲ.


ಅವನು ಅಂತಹ ಆತಂಕದ ಸಂದರ್ಭದಲ್ಲಿ  ಕೂಡ ತನ್ನ ಮಂಡೆಯನ್ನು ಓಡಿಸಿದ. ವೇದಿಕೆಯ ಮೇಲೆ ಓರೆ ಓರೆಯಾಗಿ ನಡೆದಾಡಿದ! ಪಲ್ಟಿ ಹೊಡೆದ! ಮಿಮಿಕ್ರಿ ಮಾಡಿದ! ತನ್ನ ದೇಹವನ್ನು ಬಾಗಿಸಿ ಅಡ್ಡಾ ದಿಡ್ಡಿ ನಡೆದ. ಜೋರು ಸದ್ದು ಮಾಡುತ್ತ ನೆಗಾಡಿದ! ಮೈಕ್ ಹಿಡಿದು ಏನೇನೋ ಚಿತ್ರ ವಿಚಿತ್ರ ಡೈಲಾಗ್ ಹೊಡೆದ! 


ಸಭೆ ಒಮ್ಮೆಗೆ ಸ್ತಬ್ಧವಾಯಿತು. ಜನರು ಈ ಹುಡುಗನ ಹೊಸ ಅವತಾರ ನೋಡಿ ಸಿಟ್ಟು ಮರೆತರು. ಕಲ್ಲನ್ನು ಕೆಳಗೆ ಹಾಕಿ 15 ನಿಮಿಷಗಳ ಕಾಲ ಅವನ ಕಾಮಿಡಿ  ಅಭಿನಯವನ್ನು ಚಪ್ಪಾಳೆ ಹೊಡೆದು ಖುಷಿ ಪಟ್ಟರು. ನಕ್ಕು ನಕ್ಕು ಹಗುರಾದರು! 


ಆ ದಿನವೇ ಆ ಸ್ಟೇಜ್ ಮೇಲೆ ಜಗತ್ತಿನ ಮಹಾ ಕಾಮಿಕ್ ಸ್ಟಾರ್ ಹುಟ್ಟಿದ್ದ! ಅವನಿಗೆ ತನ್ನ ಸಾಮರ್ಥ್ಯ ಏನೆಂದು ಆಗಲೇ ಗೊತ್ತಾಗಿ ಹೋಗಿತ್ತು. ಅವನು ಇಡೀ ಜಗತ್ತನ್ನು ನಗಿಸಲು ಹೊರಟಿದ್ದ. ಅವನೇ ಚಾರ್ಲಿ ಚಾಪ್ಲಿನ್! 


ಇನ್ನು ಆ ಮಹಾತಾಯಿಯ ಬಗ್ಗೆ ನಾನು ಹೇಳಬೇಕು. ಆಕೆ ಹನ್ನಾ ಹಾಲ್ ಚಾಪ್ಲಿನ್. ಆಕೆ ನಟಿ, ಗಾಯಕಿ, ನೃತ್ಯ ಪಟು, ಪಿಯಾನೋ ವಾದಕಿ ಮತ್ತು ಅದ್ಭುತ ಮಿಮಿಕ್ರಿ ಕಲಾವಿದೆ. ಮಹಾ ಪ್ರತಿಭಾವಂತೆ. ಆದರೆ ಆಕೆಯ ಗಂಡ (ಅಂದರೆ ಚಾರ್ಲಿಯ ತಂದೆ) ವಿಪರೀತ ಕುಡಿತದ ಚಟದಿಂದಾಗಿ ಆರ್ಥಿಕವಾಗಿ ಸೋತಿದ್ದ ಮತ್ತು ಆಕೆಗೆ ವಿಚ್ಛೇದನ ಕೊಟ್ಟು ಹೋಗಿದ್ದ.  


ಆ ಮಹಾತಾಯಿಯು ಚಾಪ್ಲಿನ್ ಮತ್ತು ತನ್ನ ಪಾಲಿಗೆ ಬಂದಿದ್ದ ಇನ್ನೊಬ್ಬ ಮಲಮಗನನ್ನು ಸಾಕಲು ತುಂಬಾ  ಪಾಡು ಪಟ್ಟಳು. ಎಲ್ಲಾ ಉದ್ಯೋಗವನ್ನು ಮಾಡಿದರೂ ಯಾವುದು ಕೂಡ ಕೈ ಹಿಡಿಯಲಿಲ್ಲ. ಕೊನೆಗೆ ನೃತ್ಯ ಮತ್ತು ಮ್ಯೂಸಿಕ್ ಮಾತ್ರ ಆಸರೆ ಕೊಟ್ಟವು.


ಆದರೆ ಜೀವನದ ಸತತ ಸೋಲುಗಳು ಆಕೆಯ ಧೈರ್ಯವನ್ನು ಖಾಲಿ ಮಾಡಿದ್ದವು. ಆಕೆ ಸಣ್ಣ ಪ್ರಾಯದಲ್ಲಿ ಮಾನಸಿಕ ರೋಗಿ ಆದಳು. ಚಾರ್ಲಿ ಮತ್ತು ಅವನ ಮಲ ಸಹೋದರ ಆಗಿದ್ದ ಸಿಡ್ನಿ ಶಾಲೆಯನ್ನು ಮರೆತು ಅನಾಥಾಶ್ರಮವನ್ನು ಸೇರಿದರು. ಊಟ, ತಿಂಡಿಗೆ ಮತ್ತು ಅಮ್ಮನ ಔಷಧಿಗೆ ಹಣ ಹೊಂದಿಸಲು ಅವರಿಬ್ಬರೂ ಪಟ್ಟ ಕಷ್ಟವನ್ನು ಮರೆಯಲು ಸಾಧ್ಯವೇ ಇಲ್ಲ. 


ಚಾಪ್ಲಿನ್ ತನ್ನ ತಾಯಿ ಹನ್ನಾ ಬಗ್ಗೆ ತನ್ನ ಆತ್ಮಚರಿತ್ರೆಯ ಪುಸ್ತಕದಲ್ಲಿ ಬರೆದಿರುವ ಕೆಲವು ವಾಕ್ಯಗಳು ತುಂಬಾ ಭಾವುಕ ಆಗಿವೆ. ಅವುಗಳನ್ನು ಓದುತ್ತಾ ಹೋಗೋಣ. 


"ನಾನು ಜೀವನದಲ್ಲಿ ಕಲಿತ್ತದ್ದು ಎಲ್ಲವೂ ಅಮ್ಮನಿಂದ ಮಾತ್ರ. ಅವಳ ಮಿಮಿಕ್ರಿ ಸಾಮರ್ಥ್ಯ ಅದ್ಭುತ ಆಗಿತ್ತು. ಅವಳು ಕಿಟಿಕಿ ಪಕ್ಕದಲ್ಲಿ ನಿಂತು ರಸ್ತೆಯಲ್ಲಿ ಹೋಗುತ್ತಿದ್ದ ಪ್ರತೀ ಒಬ್ಬರ ಹಾವ ಭಾವಗಳನ್ನು ತುಂಬಾ ಸುಂದರವಾಗಿ ಅನುಕರಣೆ ಮಾಡುತ್ತಿದ್ದಳು. ನಾನು ಮುಂದೆ ಮಹಾನಟ ಆಗಬೇಕು ಎಂದು ಅವಳ ಕನಸಾಗಿತ್ತು"


"ಆಕೆ ತನ್ನ ಸಂಗೀತ ಮತ್ತು ನೃತ್ಯ ಪ್ರತಿಭೆಗಳಿಂದ ತನ್ನ ಹದಿನಾರನೇ ವರ್ಷಕ್ಕೆ ಸೂಪರ್ ಸ್ಟಾರ್ ಆದವಳು. ಆದರೆ ಜೀವನವಿಡೀ ಆಕೆ ಪಟ್ಟ ಕಷ್ಟ, ನೋವುಗಳು ಮತ್ತು ಅಪಮಾನಗಳು ಕೊನೆಯ ದಿನಗಳಲ್ಲಿ ಆಕೆಯನ್ನು ಮಾರಕ ಆದ ಡೀಮೆಂಶಿಯಾ (ಮರೆವು) ಕಾಯಿಲೆಗೆ ದೂಡಿದವು. ನನ್ನ ಒಂದು ಸಿನೆಮಾ ಕೂಡ ಆಕೆ ನೋಡಲೇ ಇಲ್ಲ. ಈ ಕೊರತೆ ನನಗೆ ಜೀವನ ಪೂರ್ತಿಯಾಗಿ ಕಾಡುತ್ತಿದೆ. ಆ ಶೂನ್ಯವನ್ನು ಬೇರೆ ಯಾರು ಕೂಡ ತುಂಬಿ ಕೊಡಲು ಸಾಧ್ಯವಿಲ್ಲ" ಎಂದು ಬರೆದು ಚಾರ್ಲಿ ಚಾಪ್ಲಿನ್ ಗದ್ಗದಿತ ಆಗುತ್ತಾರೆ.


ಅಂತಹ ಮಹಾ ನಟನನ್ನು ನಿರ್ಮಾಣ ಮಾಡಿದ ಆ ಮಹಾತಾಯಿಗೆ ನನ್ನ ನಮನ.

-ರಾಜೇಂದ್ರ ಭಟ್ ಕೆ.

ಜೇಸಿಐ ರಾಷ್ಟ್ರಮಟ್ಟದ ತರಬೇತುದಾರರು.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post