|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಏಕದಂತ ಗಣಪತಿಯ ದಂತದ ಹಿಂದಿನ ರಹಸ್ಯ

ಏಕದಂತ ಗಣಪತಿಯ ದಂತದ ಹಿಂದಿನ ರಹಸ್ಯ



ವಕ್ರತುಂಡ ಮಹಾಕಾಯ ಸೂರ್ಯಕೋಟಿ ಸಮಪ್ರಭ|

ನಿರ್ವಿಘ್ನಂ ಕುರುಮೇದೇವ ಸರ್ವಕಾಯೇಶು ಸರ್ವದ||


ಜಗತ್ತಿನೆಲ್ಲೆಡೆ ಅತ್ಯಂತ ಭಯಭಕ್ತಿ ಮತ್ತು ಶ್ರದ್ಧೆಯಿಂದ ಪೂಜಿಸಲ್ಪಡುವ ದೇವನೊಬ್ಬನೆಂದರೆ ಅದು ‘ಗಣೇಶ’ ಎಂದರೆ ತಪ್ಪಾಗಲಾರದು. ಅತ್ಯಂತ ವರ್ಣಮಯ ವ್ಯಕ್ತಿತ್ವದ ದೇವರಾದ ಗಣಪತಿಯನ್ನು ಜನರು ವಿನಾಯಕ, ವಿಘ್ನರಾಜ, ಗಣಾಧಿಪ, ಏಕದಂತ, ಹೇರಂಭ, ಲಂಬೋದರ, ಗಜಾನನ, ಸುಮುಖ ಹೀಗೆ ಹತ್ತಾರು ಹೆಸರುಗಳಿಂದ ಪೂಜಿಸುತ್ತಾರೆ. ಹಲವು ಹೆಸರುಗಳಿಂದ ಪ್ರಸಿದ್ಧಿಯಾದ ಗಣೇಶನಿಗೆ ನೂರಾರು ರೂಪಗಳು ಇದೆ. ಡೊಳ್ಳು ಹೊಟ್ಟೆ, ಆನೆ ಮುಖ, ಸಣ್ಣಕಣ್ಣು, ಮೊರದಗಲ ಕಿವಿ, ಹೀಗೆ ಗಣೇಶನ ಪ್ರತಿಯೊಂದು ರೂಪವು ಮತ್ತು ಪ್ರತಿಯೊಂದು ಅಂಗವು ಜನಮಾನಸಕ್ಕೆ ಒಂದು ಸಂದೇಶವನ್ನು ಸಾರುತ್ತವೆ.


ಸ್ವಾತಂತ್ರ್ಯ ಪೂರ್ವದಲ್ಲಿ ಜನರನ್ನು ಒಟ್ಟುಗೂಡಿಸಿ, ಭಾರತೀಯ, ಸಹಬಾಳ್ವೆ ಮತ್ತು ಸಹೋದರತ್ವವನ್ನು ಸಾರಲು ಬಾಲಗಂಗಾಧರ ತಿಲಕರಿಂದ ಆರಂಭಗೊಂಡ ಗಣೇಶೋತ್ಸವ, ಈಗ ಪ್ರತೀ ವರ್ಷ ಒಂದು ಹಬ್ಬದಂತೆ ಮತ್ತು ಸಾರ್ವಜನಿಕ ಉತ್ಸವದಂತೆ ಮಾರ್ಪಾಡಾಗಿರುವುದು ಸಂತಸದ ವಿಚಾರ. ಜಾತಿ, ಮತ, ಧರ್ಮ, ಪಂಥ, ಪ್ರಾಂತ, ದೇಶ, ಮೈಬಣ್ಣಗಳ ಬೇಧವಿಲ್ಲದೆ, ಎಲ್ಲರನ್ನು ಏಕಕಾಲಕ್ಕೆ ಖುಷಿಗೊಳಿಸುವಂತೆ ಏಕಛತ್ರದ ಅಡಿಯಲ್ಲಿ ಸೇರಿಸುವ ಸಾಮರ್ಥ್ಯ  ಇದ್ದರೆ ಅದು ಗಣೇಶ ಹಬ್ಬಕ್ಕೆ ಮಾತ್ರ ಎಂಬುದು ಬಲ್ಲವರ ಮನದಾಳದ ಮಾತು.


ಗಣಪತಿಯ ಸಣ್ಣದಾದ ಕಣ್ಣುಗಳು ಪ್ರತಿಯೊಂದು ವಿಚಾರವನ್ನು ಸೂಕ್ಷ್ಮ ದೃಷ್ಟಿಯಿಂದ ನೋಡಬೇಕೆನ್ನುತ್ತವೆ. ದೃಷ್ಟಿ ಚಿಕ್ಕದಾದರೂ ವಿಶಾಲ ದೃಷ್ಟಿಕೋನ ಇರಬೇಕು ಎಂಬ ಸಂದೇಶ ಸಾರುತ್ತದೆ.  ಚಿಕ್ಕ ಬಾಯಿ, ಕಡಿಮೆ ಮಾತನಾಡಬೇೀಕು ಮತ್ತು ಅವಶ್ಯಕತೆ ಇರುವಷ್ಟೇ ಮಾತನಾಡಬೇಕು ಎಂಬ ಸಂದೇಶ ಇರುತ್ತದೆ. ಮೊರದಗಲದ ಕಿವಿಗಳು ಮಾತು ಕಡಿಮೆ ಮಾಡಿ ಹೆಚ್ಚು ಆಲಿಸಬೇಕು. ಕೆಟ್ಟದ್ದನ್ನು ಕೇಳದೆ, ಒಳ್ಳೆಯದನ್ನು ಆರಿಸಿಕೊಳ್ಳಬೇಕು ಎಂಬ ಸಂದೇಶ ನೀಡುತ್ತದೆ. ಗಣಪತಿಯ ಕೈಯಲ್ಲಿರುವ  ಪಾಶ ಧರ್ಮದ ಸಂಕೇತ, ಮುರಿದ ದಂತ  ಅನರ್ಥದ ಸಂಕೇತ, ಅಂಕುಶ ಕಾಮದ ಸಂಕೇತವಾಗಿದ್ದು, ಮನುಷೈನ ಆಸೆಗೆ ಮಿತಿ ಇರಬೇಕು ಎಂಬ ಸಂದೇಶ ಸಾರುತ್ತದೆ.


ಗಣೇಶ ಎಲ್ಲಾ ವೈದ್ಯರುಗಳ ಅತ್ಯಂತ ಅಪ್ಯಾಯಮಾನವಾದ ದೇವರು ಎಂದರೂ ತಪ್ಪಾಗಲಿಕ್ಕಿಲ್ಲ. ಪ್ರತಿಯೊಬ್ಬ ದಂತ ವೈದ್ಯರು ತಮ್ಮ ಕ್ಲಿನಿಕ್‍ನಲ್ಲಿ ಒಂದು ಗಣೇಶನ ಮೂರ್ತಿ ಇಟ್ಟುಕೊಂಡಿರುತ್ತಾರೆ.


ಗಣೇಶನ ಮುರಿದ ದಂತದ ಹಿಂದೆ ಒಂದು ಸ್ವಾರಸ್ಯಕರವಾದ ಕಥೆಯೂ ಇದೆ. ಮಹಾಭಾರತದ ಯುದ್ಧ ಮುಗಿದ ಬಳಿಕ ಮಹರ್ಷಿ ವೇದವ್ಯಾಸರು ಹಿಮಾಲಯದ ತಪ್ಪಲಿನಲ್ಲಿ ವಾಸಿಸುತ್ತಿದ್ದರು. ಆ ಸಮಯದಲ್ಲಿ ಸೃಷ್ಟಿಕರ್ತ ಬ್ರಹ್ಮದೇವ, ಮಹಾಭಾರತ ಯುದ್ಧದ ಕುರಿತು ಕೃತಿ ರಚಿಸಲು ಬಯಸಿ ವೇದವ್ಯಾಸರಿಗೆ ಈ ಕುರಿತಾಗಿ ಸೂಚನೆ  ನೀಡಿದರು, ವೇದವ್ಯಾಸರು ಬ್ರಹ್ಮದೇವ ತನಗೊಬ್ಬ ಸೂಕ್ತ ಸಹಾಯಕ ಲಿಪಿಕಾರನ ಅಗತ್ಯವಿದೆ ಎಂದು ಬ್ರಹ್ಮದೇವನಲ್ಲಿ ಅರುಹಿದಾಗ, ಬ್ರಹ್ಮ ದೇವರು ಈ ಕೆಲಸಕ್ಕೆ ಪ್ರಥಮ ಪೂಜಿತ ಗಣಪತಿಯೇ ಸೂಕ್ತ ಎಂದು ಸಲಹೆ ನೀಡಿದರು.


ತಕ್ಷಣ ವ್ಯಾಸ ಮಹರ್ಷಿಗಳು ತಮ್ಮ ಕೃತಿ ರಚನೆಗೆ ನೆರವಾಗಲು ಗಣೇಶನನ್ನು ಕೋರಿ ತಪಸ್ಸಿಗೆ ಕೂತರು. ಅವರ ತಪಸ್ಸಿಗೆ ಒಲಿದ ವ್ಯಾಸರೆದುರು ಪ್ರತ್ಯಕ್ಷರಾದರು. ವ್ಯಾಸರು ಬ್ರಹ್ಮದೇವರು ತಮಗೆ ನೀಡಿದ ಆದೇಶವನ್ನು ತಿಳಿಸಿ ತಮಗೆ ಲಿಪಿಕಾರನಾಗಿ ಸಹಾಯ ಮಾಡುವಂತೆ ಗಣಪತಿಗೆ ಪ್ರಾರ್ಥಿಸಿದರು. ಅದಕ್ಕೊಪ್ಪಿದ ಗಣಪತಿ ವ್ಯಾಸರಿಗೆ ಒಂದು ಶರತ್ತು ವಿಧಿಸಿ ವ್ಯಾಸರು ಯಾವುದೇ ಕಾರಣಕ್ಕೂ ಕಥೆ ಹೇಳುವುದನ್ನು ನಿಲ್ಲಿಸಬಾರದು. ಹಾಗೇನಾದರೂ ನಿಲ್ಲಿಸಿದಲ್ಲಿ ತಾನು ಬರೆಯುವುದನ್ನು ನಿಲ್ಲಿಸಿ ಮರಳುತ್ತೇನೆ ಎಂದು ತಿಳಿದಾಗ ವ್ಯಾಸರು ಅದಕ್ಕೊಪ್ಪಿಕೊಂಡರು.


ಅತ್ಯಂತ ಮೇಧಾವಿಯಾದ ವ್ಯಾಸರು ತಮಗೆ ತೊಂದರೆಯಾಗಬಾರದೆಂದು ಒಂದು ಉಪಾಯ ಮಾಡಿ ತಾವು ಹೇಳುವ ಕಥೆಯನ್ನು ಅರ್ಥಮಾಡಿಕೊಳ್ಳದೆ ಬರೆಯುವಂತಿಲ್ಲ ಎಂದು ಗಣಪತಿಯಲ್ಲಿ ಭಿನ್ನವಿಸಿಕೊಂಡರು. ಅದರಂತೆ ಮಹಾಭಾರತ ಕಥೆ ಬರೆಯಲು ವ್ಯಾಸರು ಮತ್ತು ಗಣಪತಿ ಒಂದು ಶುಭ  ಮುಹೂರ್ತದಲ್ಲಿ ಆರಂಭಿಸಿದರು. ಎಲ್ಲವೂ ಸುಗಮವಾಗಿ ಸಾಗುತ್ತಿತ್ತು. ವ್ಯಾಸರು ತಮಗೆ ವಿಶ್ರಾಂತಿ ಬೇಕೆನಿಸಿದಾಗ ಅತ್ಯಂತ ಕ್ಲಿಷ್ಟಕರವಾದ ವiತ್ತು ಯೋಚನೆಗೆ ಒರೆ ಹಚ್ಚುವಂತಹ ವಾಕ್ಯಗಳನ್ನು ಹೇಳಿ ಅದನ್ನು ಗಣಪತಿ ಅರ್ಥೈಸಿಕೊಳ್ಳಲು ತೆಗೆದುಕೊಳ್ಳುವ ಸಮಯದಲ್ಲಿ ವಿಶ್ರಾಂತಿ ಪಡೆದು ಮತ್ತೆ ಕಥೆ ಹೇಳುವುದನ್ನು ಮುಂದುವರಿಸುತ್ತಿದ್ದರು.


ಹೀಗೆ ಕೃತಿ ಬರೆಯುವ ಸಂದರ್ಭದಲ್ಲಿ ಗಣಪತಿಯ ಲೇಖನಿ ತುಂಡಾಗುತ್ತದೆ. ಮಾತಿಗೆ ತಪ್ಪದ ಗಣಪತಿ ತನ್ನ ದಂತವನ್ನೇ ಮುರಿದು ಕೃತಿ ರಚಿಸುವುದನ್ನು ಮುಂದುವರಿಸುತ್ತಾನೆ ಹೀಗೆ ವರ್ಷಾನುಗಟ್ಟಲೆ ಕಥೆ ಹೇಳುತ್ತಾ ಮತ್ತು ಕಥೆ ಬರೆಯುವುದು ಮುಂದುವರಿದು ಶ್ರೇಷ್ಠ ಕಥೆಯೊಂದು ರಚನೆಯಾಗುತ್ತದೆ ಎಂದು ಪುರಾಣಗಳ ಉಲ್ಲೇಖವಾಗಿದೆ. ಮುರಿದ ದಂತದ ಕಾರಣದಿಂದಾಗಿ ಗಣಪತಿಗೆ ಏಕದಂತ ಎಂದು ಅನ್ವರ್ಥನಾಮ ಬಂದಿರುವುದಂತೂ ನಿಜ.


ಒಟ್ಟಿನಲ್ಲಿ ವಿಘ್ನವಿನಾಶಕ ಗಣೇಶ ಎಲ್ಲರಿಗೂ ಎಲ್ಲವನ್ನೂ ಕೊಡುತ್ತಾ ತನ್ನ ಭಕ್ತರನ್ನು ಮೆಚ್ಚಿಸುವ ಕೆಲಸ ಮಾಡುತ್ತಲೇ ಇದ್ದಾನೆ ಎಂದರೂ ತಪ್ಪಾಗಲಾರದು. ಹೀಗೆ ಜಾತಿ ಮತ, ಬೇಧಗಳಿಲ್ಲದೆ, ಏಕತೆಯಲ್ಲಿ ಅನೇಕತೆಯನ್ನು ಸಾರುವ ದೇವನೊಬ್ಬನಿದ್ದರೆ ಅವನೇ ನಮ್ಮ ಗಣಪತಿ.



-ಡಾ|| ಮುರಲೀ ಮೋಹನ್ ಚೂಂತಾರು


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 تعليقات

إرسال تعليق

Post a Comment (0)

أحدث أقدم