|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಶಿಕ್ಷಣ ಚಿಂತನ: ಅಂಕಗಳಿಕೆಯ ಅಂಕೆಮೀರಿದ ಸತ್ತ್ವ

ಶಿಕ್ಷಣ ಚಿಂತನ: ಅಂಕಗಳಿಕೆಯ ಅಂಕೆಮೀರಿದ ಸತ್ತ್ವ

 


 

ಪಠ್ಯಕ್ರಮ-ಕಲಿಕೆ-ಮೌಲ್ಯಮಾಪನ ಇವು ಶಿಕ್ಷಣ ವರ್ತುಲದ ಅವಿಭಾಜ್ಯ ಅಂಗಗಳು. ಇವು ಬೋಧಕ ಕೇಂದ್ರಿತ ಮತ್ತು ವಿದ್ಯಾರ್ಥಿ ಕೇಂದ್ರಿತ ಮಾದರಿಗಳೆರಡರಲ್ಲೂ ಹಾಸುಹೊಕ್ಕಾಗಿವೆ. ಅದರಲ್ಲೂ, ನಮ್ಮ ಶಿಕ್ಷಣ ವ್ಯವಸ್ಥೆಯನ್ನು ವಾಸ್ತವದಲ್ಲಿ ಬಂಧಿಸಿರುವುದು ಪರೀಕ್ಷೆಗಳು ಹಾಗೂ ಅಂಕಗಳೇ. ಹೀಗಿರುವಾಗ, ಮೌಲ್ಯಮಾಪನದ ಪ್ರಾರೂಪಗಳೇ ವಿದ್ಯಾರ್ಥಿಯ ಸಾಮರ್ಥ್ಯವನ್ನು ಒರೆಗೆ ಹಚ್ಚಬಹುದಾದ ಮಾನಕಗಳು. ಪ್ರಾಥಮಿಕ ಹಂತದ ಶಿಕ್ಷಣದಲ್ಲಿ ‘ಎಂದರೆ ಏನು?’ ಎಂಬ ಪ್ರಶ್ನೆಗಳೇ ಮುಖ್ಯವಾದರೆ, ಉನ್ನತ ಶಿಕ್ಷಣದ ಹಂತದಲ್ಲಿ ‘ರಚನೆ-ಪ್ರಾಯೋಗಿಕ ತಿಳುವಳಿಕೆ’ ಅತೀ ಅವಶ್ಯ. ಈಗಂತೂ, ದೇಶಕಾಲಗಳ ಅನಿವಾರ್ಯತೆಯ ಆನ್-ಲೈನ್ ಶಿಕ್ಷಣದಲ್ಲಿ ಈ ಎಲ್ಲಾ ವಿಚಾರಗಳನ್ನು ಗಣನೆಗೆ ತೆಗೆದುಕೊಂಡು ಮೌಲ್ಯಮಾಪನ ಸಾಧ್ಯವೇ? ಅದರಲ್ಲೂ, ವೃತ್ತಿಪರ ಪದವೀ ಕೋರ್ಸುಗಳಲ್ಲಿ ಆನ್-ಲೈನ್ ನಲ್ಲಿ ಬೋಧಿಸಲ್ಪಟ್ಟ ಪ್ರಾಯೋಗಿಕ ಕಲಿಕೆಯ ಮೌಲ್ಯಮಾಪನ ತುಸು ಕ್ಲಿಷ್ಟವೇ ಅನಿಸುವುದು; ಅಸಾಧ್ಯವಲ್ಲ!


ಸದ್ಯದ ಬಹುತೇಕ ವೃತ್ತಿಪರ ಪದವಿಗಳು Outcome Based Education (ಒಬಿಇ)ನ ಧ್ಯೇಯೋದ್ಧೇಶಗಳ ಆಧಾರದಲ್ಲಿ ನಡೆಯುತ್ತಿವೆ. ಒಬಿಇ ಯನ್ನು ಫಲಿತಾಂಶಾಧಾರಿತ ಶಿಕ್ಷಣ ವ್ಯವಸ್ಥೆಯೆಂದು ಕರೆದಿದ್ದರೂ, ಪರಿಣಾಮಾಧಾರಿತ ಶಿಕ್ಷಣ ವ್ಯವಸ್ಥೆಯೆಂದರೆ ತಪ್ಪಾಗಲಾರದು. ಇಲ್ಲಿ ಫಲಿತಾಂಶವೆಂದರೆ ಕೇವಲ ಅಂಕಗಳಲ್ಲ, ಅಂಕಗಳ ಹೊರತಾಗಿ ಪದವೀಧರನೊಬ್ಬ ಹೊಂದಬೇಕಾದ ಕೌಶಲಗಳು ಹಾಗೂ ದೃಷ್ಟಿಕೋನಗಳು. ಈ ಒಬಿಇ ಮಾದರಿಯು ಸಂಪೂರ್ಣವಾಗಿ ವಿದ್ಯಾರ್ಥಿ ಕೇಂದ್ರಿತವಾದುದು. ಚುಟುಕಾಗಿ, ಪಠ್ಯಕ್ರಮದಿಂದ ಮುಂದೆ ಆಗಬೇಕಾದ ಪರಿಣಾಮಗಳೇ ಒಬಿಇಯ ಧ್ಯೇಯ. ಇಲ್ಲಿ, ಪರಿಣಾಮಗಳು-ಬುದ್ಧಿಮತೆ, ಕೌಶಲ, ಧೋರಣೆ ಹಾಗೂ ದೃಷ್ಟಿಕೋನಗಳೂ ಸಹ. ಇದರಂತೆ, ಒಬ್ಬ ಪದವೀಧರನು, ಪಠ್ಯಕ್ರಮದ ಅಂತ್ಯದಲ್ಲಿ, ಮೊದಲೇ ನಿಗದಿಪಡಿಸಿದ ಗುರಿಯನ್ನು ಮುಟ್ಟಿರಬೇಕಾಗುತ್ತದೆ. ಒಬಿಇ ನಿಂತಿರುವುದೇ ಕೌಶಲ್ಯಗಳನ್ನು ಮೈಗೂಡಿಸಿಕೊಳ್ಳುವುದರಲ್ಲಿ.


ವೃತ್ತಿಪರ ಶಿಕ್ಷಣದ ಮೌಲ್ಯಮಾಪನ ವಿಚಾರಕ್ಕೆ ಬಂದಾಗ ಕಲಿಕಾ ಮಾದರಿಯ ಪ್ರಗತಿಯನ್ನು ರಚನಾತ್ಮಕವಾಗಿ, ಸಂಕಲಿತ ರೂಪದಲ್ಲೂ ನಿರಂತರವಾಗಿ ಅವಲೋಕಿಸಬಹುದು. ಇವೆಲ್ಲದರ ಮಧ್ಯೆ, ಪಠ್ಯಕ್ರಮದ ವಿಷಯವನ್ನು ಅರಿವಿನ ಯಾವ ಹಂತದಲ್ಲಿ ಅಳೆಯಲಾಗಿದೆ ಎನ್ನುವುದೂ ಬಹುಮುಖ್ಯ. ಉದಾಹರಣೆಗೆ-ನೀರಿನ ಶುದ್ಧೀಕರಣದ ವಿಷಯದಲ್ಲಿ ವಿದ್ಯಾರ್ಥಿಯ ಮೌಲ್ಯಮಾಪನವನ್ನು ಶುದ್ಧೀಕರಣ ಎಂದರೆ ಏನು? ಬಗೆಗಳಾವುವು? ಎಂಬೆಲ್ಲಾ ಪ್ರಶ್ನೆಗಳಿಂದ ಮಾಡಬಹುದು. ಕಂಠಸ್ಥರೂಪಿಯಾದ ಉತ್ತರವನ್ನು ಲಗುಬಗೆಯಿಂದ ವಿದ್ಯಾರ್ಥಿಯು ಕೊಡಲು ಎಂದಿಗೂ ಶಕ್ತ.


ಇನ್ನೊಂದು ರೀತಿಯ ಪ್ರಶ್ನೆಯಾಗಿ- ’ಉಜಿರೆಯಲ್ಲಿ ನಿರ್ಮಿಸಬೇಕಾದ ಶುದ್ಧೀಕರಣ ಘಟಕದ ವಿನ್ಯಾಸ ರಚಿಸಿ’ ಕೇಳಬಹುದು. ಈ ಪ್ರಶ್ನೆಯ ಸಮಾಧಾನಕ್ಕೆ ವಿದ್ಯಾರ್ಥಿಯು ಒಂದು ಹಂತದ ಮೇಲಿನ ತಾರ್ಕಿಕ ಕಲಿಕೆಯನ್ನು ಮಾಡಿರಬೇಕಾಗುತ್ತದೆ. ಈ ಉದಾಹರಣೆಗಳ ಸಹಾಯದಿಂದ ಹೇಳಬೇಕಾಗಿರುವುದಿಷ್ಟೇ: ಮನನ-ಕಲಿಕೆ-ಗ್ರಹಿಕೆ-ರಚನೆ ಇವೇ ಮೊದಲಾದ ವಿವಿಧ ಹಂತಗಳು ಮೌಲ್ಯಮಾಪನಕ್ಕೆ ಬೇಕಾದ ಅರಿವಿನ ಮಟ್ಟಗಳು. ಈ ಅರಿವಿನ ಹಂತಗಳನ್ನು ಪರಿಚಯಿಸಿದ್ದು ಬೆಂಜಮಿನ್ ಸ್ಯಾಮುಯೆಲ್ ಬ್ಲೂಮ್. ಬ್ಲೂಮ್ ಟಾಕ್ಸೋನೆಮಿ, ಸುಧಾರಿತ ಬ್ಲೂಮ್ ಟಾಕ್ಸೋನೆಮಿ ಇವೇ ಮೊದಲಾದ ಹೆಸರುಗಳು ಶಿಕ್ಷಣ ವ್ಯವಸ್ಥೆಯಲ್ಲಿ ಮಟ್ಟದ ಸಹಾಯದಿಂದ ಮಾಪಿಸಲು ಪ್ರಚಲಿತದಲ್ಲಿವೆ.


ಹಾಗಾಗಿ, ಉತ್ತರದ ಗುಣಮಟ್ಟ ಹೆಚ್ಚಾಗಬೇಕಾದರೆ, ಆ ಪ್ರಶ್ನೆಯ ವ್ಯಾಖ್ಯೆಯಲ್ಲೇ ಹುಡುಕಾಟ ಆರಂಭಿಸಬೇಕು. ಹೀಗೆ, ಫಲಿತಾಂಶಾಧಾರಿತ ಶಿಕ್ಷಣ ಪದ್ಧತಿಯಲ್ಲಿ ಒಬ್ಬ ಪದವೀಧರ ತನ್ನ ಕಲಿಕೆಯಲ್ಲಿ ಸ್ಪಷ್ಟತೆಯನ್ನು ಹೊಂದಿ, ಜಾಗತಿಕಮಟ್ಟದಲ್ಲಿ ಸ್ವಾವಲಂಬಿಯಾಗುತ್ತಾನೆ. ಹೀಗೆ ತಾರ್ಕಿಕ-ರಚನಾ-ಕೌಶಲಗಳ ಬಹು-ಆಯಾಮಗಳನ್ನು ಆನ್-ಲೈನ್ ಪರೀಕ್ಷೆಗಳ ಮುಖೇನ ನಿರ್ಧರಿಸಲು ಸಾಧ್ಯವಿದೆಯೇ? ಸಾಧ್ಯವಿದೆ.


 

ಆನ್-ಲೈನ್ ಶಿಕ್ಷಣಕ್ಕೆ ಬೇಕಾದ ಸಾಮಗ್ರಿಗಳು ಸಾಗರದಷ್ಟು ದಂಡಿಯಾಗಿ ಸಿಗುತ್ತಲಿವೆ. ಕ್ವಿಜ಼್, ಪೋಲ್ ಅಥವಾ ಸಮೀಕ್ಷೆ, ಚಟುವಟಿಕೆಗಳು, ಇನ್ನೂ ಹತ್ತಾರು ಅವತಾರಗಳಲ್ಲಿವೆ.  ಕಲಿಕೆಯನ್ನು ಈ ಮೊದಲೇ ಹೇಳಿದಂತೆ, ‘ಎಂದರೆ ಏನು?’ ಎಂಬ ಪ್ರಶ್ನೆಗಳ ನೆರವಿನಿಂದ ವಿವೇಚಿಸಬಹುದು. ಮಕ್ಕಿ ಕಾ ಮಕ್ಕಿ ಭಟ್ಟಿ ಇಳಿಸಲು ಸುಲಭವೇ.  ಅಂಕಗಳನ್ನೂ ಸುಲಭವಾಗಿ ಗಳಿಸಬಹುದಲ್ಲವೇ? ಆದರೆ, ವೃತ್ತಿಪರ ಪದವಿಯ ಹಂತದಲ್ಲಿ ಅತೀ ಅವಶ್ಯ ಹಾಗೂ ಮೂಲಭೂತವಾದ ತಾರ್ಕಿಕತೆಯನ್ನು ಪ್ರಶ್ನಿಸುವುದೆಂತು?


ರಚನಾತ್ಮಕ ವಿನ್ಯಾಸಾದಿಗಳನ್ನು ಹೊಂದಿರುವ ಪ್ರಶ್ನೆಯನ್ನು ಒಂದೊಮ್ಮೆ ಕೇಳಿದರೆ, ಎಲ್ಲವನ್ನೂ ಒಳಗೊಂಡ ವಿದ್ಯಾರ್ಥಿ ಕೇಂದ್ರಿತ  ಮಾದರಿಯ ಧ್ಯೇಯ ಸಾಕಾರವಾಗುವುದು. ಆದರೆ, ಈ ವಿಧದ ಪ್ರಶ್ನೆಗಳು ಈ ಹಿಂದೆ ಹೇಳಿದ ಪ್ರಶ್ನೆಗಳಂತೆ ಬರಿಯ ಕಂಠಸ್ಥದ ವ್ಯಾಖ್ಯೆಗಳಾಗದೇ, ಏಕತಾನತೆಯನ್ನು ಭೇದಿಸಿ ಚರ್ಚೆಯ ರೂಪದ ವಿಶ್ಲೇಷಣೆಗೂ ದಾರಿಮಾಡಿಕೊಡುತ್ತವೆ. ಮಹತ್ವವಿದ್ದರೂ ಮನ್ನಣೆಯ ಅಂಕಗಳ ಆಟದಲ್ಲಿ ಈ ಪ್ರಶ್ನೆಗಳೆಲ್ಲಾ ಸ್ವಾಭಾವಿಕವಾಗಿಯೇ ಹಿಂದೆ ಸರಿಯುತ್ತವೆ. ಇದಕ್ಕಾಗಿಯೇ ಪ್ರಮಾಣಿತ ಶಿಕ್ಷಣ ಸಂಸ್ಥೆಗಳಲ್ಲಿ ಚಾಲ್ತಿಯಲ್ಲಿರುವ ಪ್ರವೃತ್ತಿ-ತೆರೆದ ಪುಸ್ತಕ ಪರೀಕ್ಷೆ.


ಒಂದು ವಾಸ್ತವಿಕ ಸಂಗತಿಯ ಆಧಾರಿತ ಸಮಸ್ಯೆಯನ್ನು ಪ್ರಶ್ನೆಯಾಗಿಸಿ, ದತ್ತಗಳ ಮುಖೇನ, ವಿಶ್ಲೇಷಿಸಿ ನಿರ್ಣಯವನ್ನು ತೆಗೆದುಕೊಂಡು , ಸಮಸ್ಯೆಗೆ ತಾರ್ಕಿಕ ಪರಿಹಾರವನ್ನು ತೆರೆದ ಪುಸ್ತಕ ಪರೀಕ್ಷೆಗಳು ನೀಡುತ್ತವೆ. ಈ ಉತ್ತರವು ವಾಸ್ತವಕ್ಕೆ ಸಮೀಪದಲ್ಲಿರುವುದರಿಂದ ಸರಿ-ತಪ್ಪುಗಳ ನಿರ್ಣಯವನ್ನು ವಿದ್ಯಾರ್ಥಿಯೇ ಮಾಡಿ ಸ್ವಾನುಭೂತಿಯನ್ನು ಪಡೆಯಬಹುದು. ಇಲ್ಲಿ, ಅಂಕಗಳನ್ನು ಹೆಚ್ಚು ಕೊಡುವ ಮೌಲ್ಯಮಾಪನಕ್ಕಿಂತ, ತಾರ್ಕಿಕ ಹೆಚ್ಚುಗಾರಿಕೆಗೆ ಮೌಲ್ಯವನ್ನು ನೀಡಿ ಸ್ವಾಧ್ಯಾಯಕ್ಕೆ ಒತ್ತುಕೊಡುವ ಆಯ್ಕೆಯಿರುತ್ತದೆ. ಅದೇ ಬೇಕಾದುದಲ್ಲವೇ ಜೀವನದುದ್ದಕ್ಕೂ?


ಕೇವಲ ಸ್ಮರಣಶಕ್ತಿಯನ್ನು ಓರೆಗೆ ಹಚ್ಚುವ ಪರೀಕ್ಷೆಗಳು ವೃತ್ತಿಪರ ಶಿಕ್ಷಣದಲ್ಲಿ ಬೇಕಾಗಿದೆಯೇ ಎನ್ನುವುದು ಬಹುತೇಕ ಎಲ್ಲಾ ಪ್ರಮಾಣಿತ ಸಂಸ್ಥೆ-ಶಿಕ್ಷಣ ಒಕ್ಕೂಟಗಳ ಕೇಳ್ವೆ. ಹೊಸಕಲ್ಪನೆಯ ಇನ್ನೋವೇಶನ್, ಡೇಟಾ ಸೈನ್ಸ್, ಡಿಸೈನ್ ಥಿಂಕಿಂಗ್ ಗಳ ಯುಗದಲ್ಲಿ ಬೇಕಾದುದು ಬುದ್ಧಿಮತೆಯ ಪ್ರಮಾಣವೇ ಹೊರತು ಬಾಯಿಪಾಠದ ಮಗ್ಗಿಯಲ್ಲ. ಈ ಎಲ್ಲಾ ಅಂಶಗಳನ್ನು ಉದ್ದೀಪನಗೊಳಿಸಲು ನೂತನ ಶಿಕ್ಷಣ ನೀತಿಯೂ ತುದಿಗಾಲಲ್ಲಿ ನಿಂತಿದೆ. ಬೋಧನಾಕ್ರಮ, ಕಲಿಕಾ ವಾತಾವರಣ, ಔದ್ಯೋಗಿಕ ಶಿಕ್ಷಣದಲ್ಲಿ ಆಮೂಲಾಗ್ರ ಬದಲಾವಣೆಯನ್ನು ನೂತನ ಶಿಕ್ಷಣ ನೀತಿಯು ಸೂಚಿಸಿದೆ. ಇದರೊಂದಿಗೆ ಮೌಲ್ಯಮಾಪನದಲ್ಲೂ ಪರಿವರ್ತನೆಯ ಶಕೆ ಆರಂಭವಾಗಬೇಕಾಗಿದೆ. ವೃತ್ತಿಪರ ಶಿಕ್ಷಣದ ಅಂಕಗಳ ಅಂಕೆಯು ದಶಮಾನದ ಪಡಿಯಚ್ಚಾಗದೇ, ಬುದ್ಧಿಮತೆಯ ಸ್ಥರದ ಮಾನಕವಾಗಬೇಕು. ಎಷ್ಟಾದರೂ ಭವಿಷ್ಯಕ್ಕೆ ಶಿಕ್ಷಣ ಸಂಸ್ಥೆಗಳು ಉತ್ತಮ ಮಾನವಸಂಪನ್ಮೂಲವನ್ನು ರೂಪಿಸಬೇಕಾಗಿದೆ, ಅಂಕಗಳಿಸುವ ಯಂತ್ರಗಳನ್ನಲ್ಲವಲ್ಲ?

-ವಿಶ್ವನಾಥ ಭಟ್, ಉಜಿರೆ



(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ



0 تعليقات

إرسال تعليق

Post a Comment (0)

أحدث أقدم