|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಸಂಪಾದಕೀಯ: ಗಡಿ ನಿರ್ಬಂಧಗಳು ಸಾಕು, ಕೋವಿಡ್‌ ನಿರ್ವಹಣೆಗೆ ವಿಪತ್ತು ನಿರ್ವಹಣಾ ಕಾಯ್ದೆಯ ಬಳಕೆ ಈಗಲೂ ಅಗತ್ಯವಿದೆಯೇ?

ಸಂಪಾದಕೀಯ: ಗಡಿ ನಿರ್ಬಂಧಗಳು ಸಾಕು, ಕೋವಿಡ್‌ ನಿರ್ವಹಣೆಗೆ ವಿಪತ್ತು ನಿರ್ವಹಣಾ ಕಾಯ್ದೆಯ ಬಳಕೆ ಈಗಲೂ ಅಗತ್ಯವಿದೆಯೇ?


ದಕ್ಷಿಣ ಕನ್ನಡ ಜಿಲ್ಲೆಯ ಮಾನ್ಯ ಡೀಸಿ ಸಾಹೇಬರೇ, ಇನ್ನು ನಿಮ್ಮ ಗಡಿ ನಿರ್ಬಂಧಗಳು ಸಾಕೋ ಸಾಕು. ದಕ್ಷಿಣ ಕನ್ನಡ ಮತ್ತು ಕಾಸರಗೋಡು ಜಿಲ್ಲೆಯ ಜನತೆ ಆಡಳಿತಾತ್ಮಕವಾಗಿ ಎರಡು ಬೇರೆ ಬೇರೆ ರಾಜ್ಯಗಳಲ್ಲಿದ್ದರೂ ದೈನಂದಿನ ಜೀವನ, ವ್ಯವಹಾರ ಎಲ್ಲದಕ್ಕೂ ಪರಸ್ಪರ ಅವಲಂಬಿತರು ಮತ್ತು ಬಾಂಧವ್ಯ ಹೊಂದಿರುವವರು.


ನೀವು ಡೀಸಿ ಸಾಹೇಬರಾಗಿ ಇಂದು ಬಂದಿದ್ದೀರಿ, ಎರಡೋ ಮೂರೋ ವರ್ಷ ಅಧಿಕಾರ ಚಲಾಯಿಸುತ್ತೀರಿ, ಸರಕಾರ ಎತ್ತಂಗಡಿ ಮಾಡಿದಾಗ ಮರುಮಾತಾಡದೆ ಎದ್ದು ಹೋಗುತ್ತೀರಿ. ಆದರೆ ಈ ಎರಡೂ ಜಿಲ್ಲೆಗಳಲ್ಲಿ ವಾಸಿಸುವ ಜನರು ಮಾತ್ರ ಇಲ್ಲೇ ಇರುತ್ತಾರೆ. ಎಲ್ಲೂ ಹೋಗುವುದಿಲ್ಲ. ನೀವು ವರ್ಗಾವಣೆಯಾಗಿ ಹೋದರೂ ನಿಮ್ಮನ್ನು ನೆನಪಿನಲ್ಲಿ ಇಟ್ಟುಕೊಳ್ಳುವಂತೆ ಒಳ್ಳೆಯ ಕಾರ್ಯ ಮಾಡಿ. ಈಗ ನೀವು ಅನುಸರಿಸುತ್ತಿರುವ ಕಾರ್ಯವಿಧಾನದಂತೆ ಅಲ್ಲ.


ಸರಕಾರದ ಆದೇಶ ಒಂದು ಇಡೀ ರಾಜ್ಯಕ್ಕೆ ಅನ್ವಯವಾಗುತ್ತದೆ ನಿಜ. ಆದರೆ ಸ್ಥಳೀಯ ಪರಿಸ್ಥಿತಿಗನುಗುಣವಾಗಿ, ಜನತೆಗೆ ಹಾನಿಯಾಗದಂತೆ ನಿಯಮಗಳನ್ನು ಜಾರಿಗೊಳಿಸುವ, ಜನರ ಹಿತ ಕಾಪಾಡುವ ರೀತಿಯಲ್ಲಿ ಸರಕಾರದ ಪ್ರತಿನಿಧಿಯಾಗಿ ಆಡಳಿತ ನಡೆಸುವ ಹೊಣೆ ನಿಮ್ಮದೇ ಹೊರತು, ನಿಮ್ಮ ಮೂಗಿನ ನೇರಕ್ಕೆ ತೀರ್ಮಾನಗಳನ್ನು ಕೈಗೊಳ್ಳುವುದಾಗಲಿ, ನಿಯಮಗಳನ್ನು ಜನರ ಮೇಲೆ ಹೇರುವುದಾಗಲಿ ನಿಮ್ಮ ಕರ್ತವ್ಯವಲ್ಲ.


ಸರಕಾರಗಳು ಒಡೆದು ಆಳುವ ನೀತಿಯನ್ನೇ (ಅಂದು ಬ್ರಿಟಿಷರು ಮಾಡಿದ್ದರು) ಇಂದಿಗೂ ಮಾಡುತ್ತಿವೆ. ಅದರಲ್ಲೂ ಮುಖ್ಯವಾಗಿ, ಒಂದಾಗಿದ್ದ ದ.ಕವನ್ನು ಒಡೆದು (ಜನರು ಕೇಳಿರದಿದ್ದರೂ) ಉಡುಪಿಯನ್ನು ಬೇರೆ ಜಿಲ್ಲೆ ಮಾಡಿದರು.


ಭಾವನಾತ್ಮಕವಾಗಿಯೂ, ವ್ಯಾವಹಾರಿಕಯೂ ಒಂದಾಗಿರುವ ದ. ಕ., ಕಾಸರಗೋಡುಗಳನ್ನು ಗಡಿ ಬಂದ್, ಕೋರೋನ ನಿಯಂತ್ರಣ ಹೆಸರಲ್ಲಿ ಒಡೆದು, ದಕ ದಲ್ಲಿ ಕೋರೋನ ಕಂಟ್ರೋಲ್ ಮಾಡಿದ್ದೇವೆ ಎಂದು ಬೀಗುತ್ತಿರುವುದು, ಅಂಕಿ-ಅಂಶಗಳ ಆಟದಲ್ಲೇ ಆಡಳಿತ ನಡೆಸುವುದು ವಾಸ್ತವಕ್ಕೆ ದೂರದ ಮಾತೇ ಸರಿ. ಒಟ್ಟಿನಲ್ಲಿ ಇಂಗ್ಲೀಷರು ಅನುಸರಿಸಿದ ಶಿಕ್ಷಣ, ಆಡಳಿತ ತಂತ್ರಗಳು, ಎಲ್ಲವನ್ನೂ ನಾವು ಇಂದಿಗೂ ಅನುಸರಿಸುತ್ತಿದ್ದೇವೆ, ಆದರೂ ನಮಗೆ ಸ್ವಾತಂತ್ರ್ಯ ಬಂದಿದೆ, ಎಂತಹ ವಿಚಿತ್ರ ಅಲ್ಲವೇ?


ದಿನ ನಿತ್ಯ ಸಾವಿರಾರು ಮಂದಿ ಕಾಸರಗೋಡಿನ ವಿದ್ಯಾರ್ಥಿಗಳು, ಉದ್ಯೋಗಿಗಳು, ಕೃಷಿಕರು, ವ್ಯಾಪಾರಿಗಳು, ಮಂಗಳೂರು, ಪುತ್ತೂರು ಸೇರಿದಂತೆ ದಕ್ಷಿಣ ಕನ್ನಡದ ಊರುಗಳಿಗೆ ಬಂದು ಹೋಗಬೇಕಾಗುತ್ತದೆ. ಕಾಸರಗೋಡಿನ ಮಂದಿ ದ.ಕ ಪ್ರವೇಶಿಸಬೇಕಾದರೆ ವೀಸಾ, ಪಾಸ್‌ಪೋರ್ಟ್ ಇದ್ದರೂ ಸಾಲದು ಎನ್ನುವಂತಹ ಅಧಿಕಾರದ ಅಮಲಿನ ಧೋರಣೆಯನ್ನು ಎರಡೂ ಜಿಲ್ಲೆಗಳ ಜನರು ಹೆಚ್ಚು ಕಾಲ ಸಹಿಸಿಕೊಳ್ಳಲು ಸಾಧ್ಯವಿಲ್ಲ. 


ರಾಜಕೀಯದವರು ತಮ್ಮ ಹಿತಕ್ಕೆ ಅನುಕೂಲವಾಗಿದ್ದರೆ ನಿಮ್ಮನ್ನು ಇಲ್ಲೇ ಉಳಿಸಿಕೊಳ್ಳಲೂ ಬಹುದು, ವಿರುದ್ಧವಾಗಿದ್ದರೆ ಬೇಕೆನಿಸಿದಾಗ ಎತ್ತಂಗಡಿ ಮಾಡಲೂಬಹುದು. ಏನೇ ಆದರೂ ಸ್ಥಳೀಯ ಜನತೆಯ ಮನಸ್ಸಿನಲ್ಲಿ ಶಾಶ್ವತವಾಗ ನೆಲೆ ನಿಲ್ಲುವಂತ ರೀತಿಯಲ್ಲಿ ಜನಹಿತಕ್ಕೆ ಪೂರಕವಾದ ತೀರ್ಮಾನಗಳನ್ನು ತೆಗೆದುಕೊಳ್ಳಿ. ಜನರ ಹಿತವೇ ಪರಮೋಚ್ಚ ಎಂಬಂತೆ ಈ ಜಿಲ್ಲೆಯಲ್ಲಿ ನಿಮಗಿರುವ ಅಲ್ಪಕಾಲದ ಆಡಳಿತದ ಅವಧಿಯನ್ನು ಚೆನ್ನಾಗಿ ನಿರ್ವಹಿಸಿ.


ಕಾಸರಗೋಡಿನ ಜನತೆ ಈಗಾಗಲೇ ನಿಯೋಗಗಳಲ್ಲಿ ಬಂದು ಗಡಿ ನಿರ್ಬಂಧಗಳನ್ನು ಸಡಿಲಿಸಿ ಇಲ್ಲವೇ, ತೆರವುಗೊಳಿಸಿ ಎಂದು ಪ್ರಜಾಸತ್ತಾತ್ಮಕ ರೀತಿಯಲ್ಲಿ, ಗೌರವಯುತವಾಗಿಯೇ ಮನವಿಗಳನ್ನು ಸಲ್ಲಿಸಿದ್ದಾರೆ. ಈ ಮನವಿಗಳಿಗೆ ತ್ವರಿತವಾಗಿ ಸ್ಪಂದಿಸುವುದು ನಿಮ್ಮ ಹೊಣೆ.


ಕಾಸರಗೋಡು ಕೇರಳದಲ್ಲಿದ್ದರೂ ಅಲ್ಲಿನ ಜಿಲ್ಲಾಧಿಕಾರಿಗಳ ಜತೆ ಸಮನ್ವಯ ಮಾಡಿಕೊಂಡು ಕಾಸರಗೋಡಿನ ಜನರು ದಕ ಪ್ರವೇಶಿಸುವುದಕ್ಕಿರುವ ನಿರ್ಬಂಧಗಳನ್ನು ಶೀಘ್ರವೆ ತೆರವುಗೊಳಿಸಬೇಕು ಎಂಬುದು ಜನತೆಯ ಪರವಾಗಿ ನಮ್ಮ ಹಕ್ಕೊತ್ತಾಯವಾಗಿದೆ.


ನಾಡಿದ್ದು ರಾಷ್ಟ್ರಪತಿಗಳು ದಕ್ಷಿಣ ಕನ್ನಡ ಜಿಲ್ಲೆಗೆ ಭೇಟಿ ನೀಡುವವರಿದ್ದಾರೆ. ಅವರ ವಾಸ್ತವ್ಯಕ್ಕೆ, ಅವರ ಸ್ವಾಗತಕ್ಕೆ ಶಿಷ್ಟಾಚಾರದಂತೆ ಸಕಲ ಕ್ರಮಗಳನ್ನೂ ಲೋಪರಹಿತವಾಗಿ ಕೈಗೊಳ್ಳುವುದು ಜಿಲ್ಲಾಡಳಿತದ ಕರ್ತವ್ಯ. ಅದನ್ನು ನೀವು ನಿಭಾಯಿಸುತ್ತಲೂ ಇದ್ದೀರಿ. ಆದರೆ ಅದೇ ತೆರನಾದ ಆದ್ಯತೆ ಮತ್ತು ಬದ್ಧತೆ ಜನಸಾಮಾನ್ಯರ ಬಗೆಗೂ ಇರಬೇಕು.


ಕೋವಿಡ್ ನಿರ್ವಹಣೆಗೆ ಇನ್ನು ವಿಪತ್ತು ನಿರ್ವಹಣಾ ಕಾಯ್ದೆಯ ಅಧಿನಿಯಮಗಳ ಬಳಕೆ ಅಗತ್ಯವಿಲ್ಲ. ಸಾಮಾನ್ಯ ಆಡಳಿತದ ನಿಯಮಗಳೇ ಸಾಕು. ಇದನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸರಕಾರವೂ ಗಮನಿಸಬೇಕು. ನಮ್ಮ ರಾಜ್ಯದಲ್ಲಿ ಇನ್ನು ವಿಪತ್ತು ನಿರ್ವಹಣಾ ಕಾಯ್ದೆಯ ಅಧಿನಿಯಮಗಳು ಕೋವಿಡ್ ನಿರ್ವಹಣೆಗೆ ಅಗತ್ಯವಿಲ್ಲ ಎಂದು ಎಲ್ಲರಿಗಿಂತ ಮೊದಲು ತೀರ್ಮಾನ ಕೈಗೊಂಡು ನೀವೇ ಮಾದರಿಯಾಗಿ.


-ಉಪಯುಕ್ತ ನ್ಯೂಸ್ 


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ



0 Comments

Post a Comment

Post a Comment (0)

Previous Post Next Post