|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ನವರಾತ್ರಿ ವಿಶೇಷ: ಸರಸ್ವತಿಯ ಸ್ವಾರಸ್ಯ ದರ್ಶನ

ನವರಾತ್ರಿ ವಿಶೇಷ: ಸರಸ್ವತಿಯ ಸ್ವಾರಸ್ಯ ದರ್ಶನ


ನವರಾತ್ರಿಯ ನಾಡಹಬ್ಬದಂದು ನವದುರ್ಗೆಯರ ಆರಾಧನೆಯ ಸಂದರ್ಭದ ಏಳನೆಯ ದಿವಸ ದೇವಿಯನ್ನು ಸರಸ್ವತಿ ಅಥವಾ ಶಾರದ ದೇವಿಯ ರೂಪದಲ್ಲಿ ಪೂಜಿಸುವುದುಂಟು. ಅಂತಹ ಶಾರದದೇವಿಯ ತತ್ತ್ವ ಹಾಗೂ ವಿದ್ಯಾಧಿ ದೇವತೆಯ ಮಹತ್ವವನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.


ಸರಸ್ವತಿಯ ಸ್ವಾರಸ್ಯ ದರ್ಶನ:

ಸೃಷ್ಠಿಕರ್ತನಾದ ಚತುರ್ಮುಖ ಮಡದಿಯಾದ ಸರಸ್ವತಿ ವಿದ್ಯೆಗೆ ಆದಿದೇವತೆಯಾದವಳು. ಸರಸ್ವತಿ ಎಂದರೆ ಪ್ರವಹಿಸುವವಳು, ಹರಿಯುವವಳು.  ಮೊದಲಾದ ಅರ್ಥಗಳಿವೆ. ಋಗ್ವೇದದಲ್ಲಿ ಆಕೆ ಹರಿಯುವ ನದಿಯ ಪ್ರತೀಕ, ಸ್ವಚ್ಛತೆಗೆ ಹೆಸರಾದವಳು. ಆಕೆಯ ಕೆಲವು ಹೆಸರುಗಳು ಶಾರದಾ (ಪರಿಶುದ್ಧವಾದ ಸಾರವನ್ನು ಕೊಡುವವಳು) ವಾಗೀಶ್ವರೀ (ವಾಕ್ ಅಥವಾ ಮಾತಿನ ಅಧಿದೇವತೆ) ಬ್ರಾಹ್ಮೀ (ಶುದ್ಧತೆ ಉಳ್ಳವಳು) ವಿದ್ಯಾ (ಪರಮೋಚ್ಚ ಜ್ಞಾನವಂತೆ) ಇದನ್ನೇ ಹೇಳುತ್ತದೆ. 


ಋಗ್ವೇದದ ಕಾಲದಿಂದಲೂ ಸರಸ್ವತಿಯ ಕಲ್ಪನೆಯಲ್ಲಿ ಈ ‘ಪ್ರವಹಿಸುವ ರೂಪಕವಿದೆ. ಹೀಗೆ ಪ್ರವಹಿಸಲು ಬಲ ಮತ್ತು ಬುದ್ಧಿವಂತಿಕೆ ಅವಶ್ಯಕ ಮಾತ್ರವಲ್ಲ ವ್ಯವಸ್ಥಿತ ಪ್ರಯತ್ನವೂ ಅಗತ್ಯ. ಹೀಗಾಗಿ ಎಲ್ಲಾ ಜ್ಞಾನಗಳ, ಕಲೆಗಳ, ವಿಜ್ಞಾನದ ಸಾಕಾರ ರೂಪವಾದವಳೇ ಸರಸ್ವತಿ ಎಂದು ಗ್ರಹಿಸಬಹುದು. ಜ್ಞಾನದ ಸಾಕಾರವಾದ ಸರಸ್ವತಿಯನ್ನು ಬಿಳಿ ಬಣ್ಣದಲ್ಲಿ ಚಿತ್ರಿಸುತ್ತಾರೆ. ಸರ್ವಶುಕ್ಲೆ, ಸಕಲಧವಳೆ, ಸದಾ ಶುಭ್ರೆ ಎಂದೆಲ್ಲ ಶಾಸ್ತ್ರಗಳು ಸರಸ್ವತಿಯನ್ನು ಕೊಂಡಾಡಿವೆ. ಬಿಳಿಯ ಬಣ್ಣಕ್ಕೆ ಶುದ್ಧಿ, ಪಾವಿತ್ರ್ಯ, ಪುಣ್ಯ, ಮಂಗಳ ಮೊದಲಾದ ಅರ್ಥಗಳಿವೆ. ವಿಜ್ಞಾನದ ವಿವೇಕದಂತೆಯೂ ‘ಏಳು ಬಣ್ಣ ಸೇರಿ ಬಿಳಿಯ ಬಣ್ಣವಾಗುತ್ತದೆ’. ಇಲ್ಲೊಂದು ಸ್ವಾರಸ್ಯವಿದೆ. ಈ ಎಲ್ಲಾ ಬಣ್ಣಗಳ ಪಾರದರ್ಶಕ ಗುಣ ಸೇರಿದರೆ ಮಾತ್ರ ಬಿಳಿಯ ಬಣ್ಣವಾಗುತ್ತದೆ. ಇಲ್ಲದಿದ್ದರೆ ಕಪ್ಪು ಬಣ್ಣವೇ ಸಿಕ್ಕಬಹುದು. ಇದರ ತಾತ್ಪರ್ಯ ಇಷ್ಟೇ. ವರ್ಣಗಳು ಎಂದರೆ ಸ್ವಭಾವಗಳು ಪಾರದರ್ಶಕವಾಗಿದ್ದಾಗ ಮಾತ್ರ ಜ್ಞಾನವು ಸಿದ್ಧಿಸುತ್ತದೆ. ಅಪಾರದರ್ಶಕವಾದಾಗ ಅವಿದ್ಯೆಯನ್ನು ಪ್ರತಿನಿಧಿಸುವ ಕಪ್ಪು ಬಣ್ಣವೇ ಸಿಕ್ಕಬಹುದು. ಜ್ಞಾನದ ಆಯ್ಕೆಯಲ್ಲಿ ನಮಗೆ ಸ್ವಾತಂತ್ರ್ಯವಿದ್ದರೂ ಅದನ್ನು ದೇಹ-ಮನಸ್ಸುಗಳು ಮಲಿನವಾಗದಂತೆ, ಸಮುದಾಯಕ್ಕೆ ಹಾನಿಯಾಗದಂತೆ ಪಾರದರ್ಶಕವಾಗಿ ಸಾಧಿಸಬೇಕೆನ್ನುವ ತತ್ವವನ್ನು ಸರಸ್ವತಿಯ ಶ್ವೇತವರ್ಣವು ತಿಳಿಸಿಕೊಡುತ್ತದೆ.


ಸರಸ್ವತಿಯ ರೂಪದರ್ಶನ 

ವಿದ್ಯಾಧಿದೇವತೆಯಾದ ಸರಸ್ವತಿಯು ತನ್ನ ಎಡಗೈಯಲ್ಲಿ ಪುಸ್ತಕವನ್ನು ಹಿಡಿದಿದ್ದಾಳೆ. ಈ ಪುಸ್ತಕವು ಎಲ್ಲಾ ವಿಧವಾದ ಭೌತಿಕ ಮತ್ತು ಲೌಕಿಕ ವಿದ್ಯೆಗಳನ್ನು ಪ್ರತಿನಿಧಿಸುತ್ತದೆ. ಬಲಗೈಯಲ್ಲಿ ಸರಸ್ವತಿ ಜಪಮಾಲೆಯನ್ನು ಹಿಡಿದಿದ್ದಾಳೆ. ಇದು ಏಕಾಗ್ರತೆಯ ಸಂಕೇತ. ಏಕಾಗ್ರತೆ ಇಲ್ಲದೆ ವಿದ್ಯೆಯು ಒಲಿಯಲಾರದು. ಅಷ್ಟೇ ಅಲ್ಲ, ಕೇವಲ ಬುದ್ಧಿಯ ಕಸರತ್ತು ಮಾಡಿ ಕಲಿತ ವಿದ್ಯೆ, ಉನ್ನತ ಮಟ್ಟದ ಯೋಚನೆಗಳಿಲ್ಲದೆ, ಭಾವನಾ ಶೂನ್ಯತೆಯಿಂದ ಕಲಿತ ವಿದ್ಯೆ ಎಲ್ಲವೂ ಶುಷ್ಕ ಎಂಬುದನ್ನು ಈ ಸಂಕೇತವೂ ತೋರಿಸಿಕೊಡುತ್ತದೆ. ಸರಸ್ವತಿಯ ಇನ್ನೆರಡು ಕೈಗಳು ವೀಣೆಯನ್ನು ನುಡಿಸುತ್ತಿರುತ್ತವೆ. ಈ ವೀಣೆಯು ಆಮೆಯ ಚಿಪ್ಪಿನಿಂದ ಮಾಡಲ್ಪಟ್ಟಿದೆ (ಕಚ್ಛಪೀವಲ್ಲಕಿ). ಆಮೆಯು ಆಧಾರಕ್ಕೆ ಸಂಕೇತವಾದಂತೆ, ಸಂಕೋಚಕ್ಕೆ ಕೂಡ ಸಂಕೇತವಾಗಿದೆ. ಜ್ಷಾನವು ಆಮೆಯ ಸ್ವರೂಪದಲ್ಲಿದ್ದಾಗ ಚಿಪ್ಪಿನಲ್ಲಿ ಮುದುರಿಕೊಂಡಿರುತ್ತದೆ. ವೀಣಾ ಸ್ವರೂಪದಲ್ಲಿ ವಿಕಾಸ ಹೊಂದುತ್ತದೆ. ಹಾಗೇ ಆಮೆಯು ಸಮುದ್ರಮಥನಕ್ಕೆ ಆಧಾರವಾದ ಕೂರ್ಮಾವತಾರದ ಸಂಕೇತವೂ ಹೌದು, ಆಧಾರ ಶಕ್ತಿಯನ್ನೇ ವೀಣೆಯಾಗಿಸಿಕೊಂಡಿರುವ ಸರಸ್ವತಿ, ಜಗತ್ತಿನಲ್ಲಿ ವಿವೇಕವನ್ನು ತುಂಬುವ ಸಂಕಲ್ಪ ಹೊಂದಿದ್ದಾಳೆ. ಈ ವೀಣೆಯಾದರೂ ಸಾಕ್ಷಾತ್ ಮಾನವ ಸ್ವರೂಪವೇ ಆಗಿದೆ. ಅದರ ಬುರುಡೆ ಮಾನವನ ತಲೆ ಬುರುಡೆಯೇ, ಅದು ಪ್ರಜ್ಞಾವಂತಿಕೆಯ ಸಂಕೇತವಾದ ಶಿರಸ್ಸು, ಅದರ ತಂತಿಗಳೇ ಮಾನವನ ಬೆನ್ನುಲುಬುಗಳು. ಅದು ಸ್ಥೈರ್ಯ-ಸ್ಪೂರ್ತಿಗಳ ಸಂಕೇತ. ಅವಳು ನುಡಿಸುತ್ತಿರುವುದಾದರೂ ಸಮಸ್ತ ಜ್ಞಾನದ ಮೂಲ ಸೂತ್ರಗಳನ್ನು, ಹೀಗೆ ಸರಸ್ವತಿಯ ಸ್ವರೂಪದಲ್ಲಿ ಸಮಸ್ತ ಜ್ಞಾನದ ಆಶಯವೇ ಅಡಗಿರುವುದನ್ನು ನಾವು ಗಮನಿಸಬಹುದು. ಇದು ಸರಸ್ವತಿಯ ಸಾಮಾನ್ಯ ರೂಪವಾದರೂ, ಇದರಲ್ಲೂ ಅನೇಕ ಪ್ರಭೇದಗಳಿಬೆ. ಪಾಶ, ಅಂಕುಶ, ಪದ್ಮ, ತ್ರಿಶೂಲ, ಶಂಖಗಳನ್ನು ಧರಿಸಿರುವಂತೆಯೂ, ಐದು ಮುಖಗಳನ್ನು ಎಂಟು ಕೈಗಳನ್ನು ಹೊಂದಿರುವಂತೆಯೂ ಸರಸ್ವತಿಯ ರೂಪವರ್ಣನೆ ಕೆಲವೆಡೆ ಇದೆ. ಇವುಗಳೆಲ್ಲ ಸರಸ್ವತಿಯ ಪರಿಕಲ್ಪನೆಯಲ್ಲಿರುವ ವ್ಯಾಪಕತೆಯನ್ನು ತಿಳಿಸುವ ಪ್ರಯತ್ನಗಳು, ಕೇವಲ ಜ್ಞಾನಕ್ಕೆ ಮಾತ್ರ ಸೀಮಿತವಾಗದೆ ರಣತೇಜೋಮೂರ್ತಿಗಳಾಗಿ ಶಸ್ತ್ರಗಳನ್ನು ಧರಿಸಿರುವ ಸರಸ್ವತಿ, ಶಕ್ತಿಯ ಸ್ವರೂಪಳೂ ಹೌದು. ಕೃಷಿ ಸ್ವರೂಪವನ್ನೂ ಧರಿಸಿರುವ ಸರಸ್ವತಿ. ಧನವಿಲ್ಲದೆ ಧಾನ್ಯವೆಲ್ಲಿದೆ? ಧಾನ್ಯವಿಲ್ಲದೆ ಧನವೆಲ್ಲಿದೆ ಎಂದು ಹೇಳುವ ಅವಿಚ್ಛಿನ್ನ ಮೂರ್ತಿ. ಈ ಸಂಕೇತಗಳ ನೆಲೆಯ ಬಗ್ಗೆ ಇನ್ನಷ್ಟು ಚರ್ಚಿಸುವುದಾದರೆ ಬ್ರಹ್ಮದೇವನ ಶಕ್ತಿ ಮತ್ತು ಸಾಮಥ್ರ್ಯಗಳ ದ್ಯೋತಕ ಸರಸ್ವತಿ. ಇವೆರಡೂ ಇಲ್ಲದ ಜ್ಞಾನ ನಿರರ್ಥಕಾರಿಯಾಗುತ್ತದೆ. ಹೀಗಾಗಿಯೇ ಜ್ಞಾನದ ಸರ್ವ ವ್ಯಾಪಕತೆ ತೋರಿಸಲು ಈ ಅಂಶಗಳು ಬಳಕೆಯಾಗಿರಬಹುದು.




ಸರಸ್ವತಿಯ ವಾಹನ ಯಾವುದು? 

ಸರಸ್ವತಿಯ ವಾಹನದ ವಿಚಾರದಲ್ಲಿ ಅಭಿಪ್ರಾಯ ಭೇದಗಳಿವೆ. ಬಹಳಷ್ಟು ಕಡೆ ನವಿಲನ್ನು ಅವಳ ವಾಹನವಾಗಿ ಹೇಳಿದ್ದರೂ, ಹಂಸವಾಹನೆಯಾಗಿ ಅವಳನ್ನು ಕರೆಯುವ ಕ್ರಮವೂ ಇದೆ. ಇವೆರಡೂ ಅರ್ಥಪೂರ್ಣವಾಗಿ ಸರಸ್ವತಿಯ ಪರಿಕಲ್ಪನೆಗೆ ಹೊಂದಿಕೊಳ್ಳುತ್ತದೆ ಎಂಬುದಿಲ್ಲಿ ಗಮನಾರ್ಹ, ನವಿಲು ತನ್ನ ಸಹಜ ಸುಂದರವಾದ ಗರಿಗಳಿಂದ, ಈ ಆಕರ್ಷಕ ಜಗತ್ತಿನ ದ್ಯೋತಕವಾಗಿದೆ. ಜಗತ್ತಿನ ಆಕರ್ಷಣೆಗಳು, ಜ್ಞಾನಾಕಾಂಕ್ಷಿಗಳನ್ನು ಸದಾ ವಿಮುಖಗೊಳಿಸಿ ದಾರಿ ತಪ್ಪಿಸುವುದರಿಂದ ನವಿಲನ್ನು ಅವಿದ್ಯಾರೂಪ ಎಂದು ಹೇಳಬಹುದು. ಈ ಆಕರ್ಷಣೆಗಳನ್ನು ಗೆಲ್ಲದೆ ಎಂದಿಗೂ ಜ್ಞಾನವು ಲಭಿಸಲಾರದು. ಈ ಅಂಶವನ್ನೇ ಸರಸ್ವತಿಯ ನವಿಲಿನ ವಾಹನವು ತಿಳಿಸುತ್ತದೆ. ಹಾಗೇ ಇನ್ನೊಂದು ವಾಹನದ ಹಂಸ, ಸರಸ್ವತಿಯ ಶುಭ್ರ ವರ್ಣಕ್ಕೆ ಹೊಂದುವಂತಹದು, ಹಂಸಕ್ಕೆ ಹಾಲಿನಿಂದ ನೀರನ್ನು ಬೇರ್ಪಡಿಸುವ ವಿಶೇಷ ಶಕ್ತಿ ಇದೆ. ಇದು ವಿವೇಚನೆ ಅಥವಾ ವಿವೇಕದ ಪ್ರತೀಕ. ಹೀಗೆ ಎರಡೂ ವಾಹನಗಳಿರುವ ಅಂತರಾರ್ಥವನ್ನು ಹೀಗೆ ವಿಶ್ಲೇಷಿಸಬಹುದು. ಹಂಸವು ಮೋಕ್ಷ ಅಥವಾ ಪರವಿದ್ಯೆಯನ್ನು ಸಂಕೇತಿಸುತ್ತದೆ. ನವಿಲು ಆಕರ್ಷಣೆಗಳನ್ನು ದಾಟಿ ಗಳಿಸುವ ಲೌಕಿಕ ವಿದ್ಯೆಯನ್ನು ಸಂಕೇತಿಸುತ್ತದೆ. ಈಶಾವಾಸ್ಯೋಪನಿಷತ್ತಿನ ವಾಕ್ಯದಂತೆ ನಮ್ಮ ಹಸಿವು ಬಾಯಾರಿಕೆಗಳನ್ನು ಲೌಕಿಕ ವಿದ್ಯೆ ನೀಗಿಸಿದ ನಂತರವೇ ಆಧ್ಯಾತ್ಮಿಕ ವಿದ್ಯೆಗಳಿಂದ ಮೋಕ್ಷವನ್ನು ಪಡಯಬಹುದು. ಈ ಪಾಠವನ್ನು ನಮಗೆ ಮನದಟ್ಟು ಮಾಡಿಕೊಡಲೆಂದೇ ಸರಸ್ವತಿ ಮಾತೆಯು ಹಂಸ ಮತ್ತು ನವಿಲು ಹೀಗೆ ಎರಡು ವಾಹನಗಳನ್ನು ಹೊಂದಿದ್ದಾಳೆ.


ಶಾಸನಗಳಲ್ಲಿ ಶಾರದದೇವಿ ವಿದ್ಯಾದಿದೇವತೆಯ ಮಹತ್ವ 

ಸರಸ್ವತಿ ನಮಸ್ತುಭ್ಯಂ ವರದೇ ಕಾಮರೂಪಿಣಿ, ವಿದ್ಯಾರಂಭ ಕರಿಷ್ಯಾಮಿ ಸಿದ್ದಿರ್ಭವತು ಮೇ ಸದಾಃ|| 

ಎನ್ನುವಂತೆ ಅಂದರೆ, ಸರಸ್ವತಿ ದೇವಿಯೆ, ವರವನ್ನು ದಯ ಪಾಲಿಸುವವಳೆ, ಪ್ರಿಯವಾದ ರೂಪವುಳ್ಳವಳೆ, ವಿದ್ಯೆಯನ್ನು ಕಲಿಯಲು ಆರಂಭಿಸುತ್ತಿದ್ದೇನೆ. ನಿರಂತರವಾಗಿ ನನಗೆ ಸಿದ್ಧಿಯುಂಟಾಗಲಿ ಎಂಬುದಾಗಿ ಸ್ಮರಿಸುತ್ತಾ.

ಭಾಷೆಯಿಲ್ಲದ ದೇಶವಿಲ್ಲ, ದೇಶವಿಲ್ಲದ ಭಾಷೆಯಿಲ್ಲ. ಭಾಷೆ ಹಾಗೂ ಬಏರೆ ಇವರೆಡು ನಾಣ್ಯದ ಎರಡು ಮುಖಗಳಿದ್ದಂತೆ ಅಂತಹ ಭಾಷೆ ನಮಗೆ ಲಭ್ಯವಾಗಿರುವುದು ಒಂದು ವರವು. ಭಾಷೆಯ ಜಾತಿ ಮತ, ಪಂಥ-ಪಂಗಡ, ಮೇಲು-ಕೀಳು, ಬಡವ-ಬಲ್ಲಿದ, ಕುಲ-ಗೋತ್ರಗಳೆಂಬ ಬೇಧ-ಭಾವಗಳ ಸಂಕೋಲೆಗಳನ್ನು ಮೀರಿ, ಈ ನೆಲದಲ್ಲಿ ಬದುಕುವವರೆಲ್ಲರಿಗೂ ಸರಿಸಮಾನವಾದ ಆಸ್ತಿಯಾಗಿ ಉಳಿದಿದೆ.


ಮಾನವ ಜೀವನವನ್ನು ಬೆಳಗಿಸುವ ಬಹುಮುಖ್ಯ ತತ್ವಗಳಲ್ಲಿ ಭಾಷೆಯು ಒಂದು, ಅಂತಹ ಭಾಷೆಯನ್ನು ಬೆಳೆಸುವ ಸಂಬಂಧದಿಂದ ಸಾಮಾಜಿಕ ಜೀವನ ರೂಪುಗೊಳ್ಳುತ್ತದೆ. ಭಾಷೆಯಿಂದ ಭಾವ ಪರಿಷ್ಕರವಾಘುತ್ತದೆ. ಭಾಷೆಯ ಅರಿವು ಆಳವಾಗುತ್ತದೆ ಹಾಗೂ ಭಾಷೆ ವಿಸ್ತಾರವಾಗುತ್ತದೆ. ಆದುದರಿಂದಲೇ ಇರಬೇಕು. ‘ಭಾಷೆ ವಿಶ್ವದ ಪರಮಾಶ್ಚರ್ಯಗಳಲ್ಲಿ ಒಂದು’ ಎನ್ನುವುದು. ಭಾಷೆ ಬಡವ-ಬಲ್ಲಿದರೆಂಬ ಬೇಧ-ಭಾವಗಳಿಲ್ಲದೆ ಸರ್ವರ ಮನೋರಥವನ್ನು ಈಡೇರಿಸುವ ಕಾಮಧೇನು, ನಮ್ಮ ಸಂಸ್ಕೃತಿ ವಿಕಾಸವಾದಂತೆಲ್ಲಾ ಭಾಷೆ ಬೆಳೆಯುತ್ತದೆ, ಭಾಷೆ ಬೆಳೆದಂತೆಲ್ಲಾ ಸಂಸ್ಕೃತಿ ಬೆಳೆಯುತ್ತದೆ. ಭಾಷೆ ಮತ್ತು ಸಂಸ್ಕೃತಿ ಇವೆರಡು ಪರಸ್ಪರಾವಂಬಿಗಳಾಗುವುದರ ಮೂಲಕ ಸಮಾಜದ ಸರ್ವತೋಮುಖ ಪ್ರಗತಿ ಸಾಧ್ಯವಾಗುತ್ತದೆ.


ಶಾಸನವೆಂಬ ಶಬ್ಧವು ಸಂಸ್ಕøತದ ‘ಶಾಸ್’ ಎಂಬ ಧಾತುವುನಿಂದ ಬಂದಿದುದಾಗಿದೆ. ‘ಶಾಸ್’ ಎಂದರೆ ಅಪ್ಪಣೆ ಮಾಡು, ಘೋಷಣೆ ಹೊರಡಿಸು ಎಂಬಿತ್ಯಾದಿ ಅರ್ಥಗಳಿವೆ. ಅಂದರೆ ‘ಶಾಸನ’ವೆಂಬ ನಾಮಪದಕ್ಕೆ ಅಪ್ಪಣೆ, ಆಜ್ಞೆ, ಆದೇಶ ಎಂಬಿತ್ಯಾದಿ ಪರ್ಯಾಯಾರ್ಥಗಳಿವೆ. ಶಾಸನ ಎಂದರೆ ತಾಮ್ರದ ತಗಡು ಅಥವಾ ಕಲ್ಲಿನ ಮೇಲೆ ದಾನ-ದತ್ತಿ ಮುಂತಾದವುಗಳ ಬಗೆಗೆ ಕೊರದಿಟ್ಟ ಬರಹ ಎಂದರ್ಥ. ಇಂತಹ ಶಾಸನಗಳಲ್ಲಿ ರಾಜ-ಮಹಾರಾಜರ ಅಪ್ಪಣೆಯಂತೆ ಆತನು ಕೊಟ್ಟಂತಹ ದಾನ-ಧರ್ಮಗಳನ್ನು ಪೋಷಿಸುವುದಕ್ಕೆ ಮಾಧ್ಯಮ ರೂಪವಾಗಿ ಶಾಸನಗಳು ರಚಿತವಾದವು.


ಶಾಸನಗಳನ್ನು ರಚಿಸುವುದರಿಂದ ಶಾಸನಗಳು ಶಿಲೆಗಳಲ್ಲಿ ಕೊರೆಯಲ್ಪಡುವವರೆಗೆ ಮಾನವನ ಕೈಗಳು ಹಸ್ತಾಂತರಗೊಳ್ಳುತ್ತಿರುತ್ತದೆ. ಕವಿ, ವಿದ್ವಾಂಸ, ಪಂಡಿತ, ವ್ಯವಹಾರ ಜ್ಞಾನವಿರುವವರು ಶಾಸನದ ವಾಕ್ಯಗಳನ್ನು ರಚಿಸುತ್ತಾರೆ. ನಂತರ ಲಿಪಿಗಾರನು ಶಿಲೆಯ ಮೇಲೆ ಮಸಿಯಿಂದಲೋ ಅಥವಾ ಸುಣ್ಣದಿಂದಲೋ ಬರೆದು ಕೊಳ್ಳುತ್ತಾನೆ. ಬಳಿಕ ರುವಾರಿ ಉಳಿ ಅಥವಾ ಚಾಣಗಳನ್ನಿಡಿದು ಆಯಾಯ ಅಕ್ಷರಗಳನ್ನು ಕಲ್ಲಿನಲ್ಲಿ ಕಂಡರಿಸುತ್ತಾನೆ. ಕೆಲವು ಶಾಸನಗಳಲ್ಲಿ ಶಾಸನದ ಲೇಖಕರ, ಲಿಪಿಕಾರರ, ರೂವಾರಿಗಳ ಹೆಸರುಗಳು ಕಂಡು ಬರುತ್ತವೆ. ಶಾಸನದ ಭಾಷೆಗಳ್ಲಿ ಕಾಲಾನುಕಾಲಕ್ಕೆ ಬದಲಾವಣೆಯಾಗುತ್ತಾ ಬಂದಿರುವುದನ್ನು ಕಾಣಬಹುದು. 

‘ಬದಲಾವಣೆ ನಿಸರ್ಗದ ನಿಯಮ’ವಲ್ಲವೆ: ಹಲ್ಮಿಡಿ ಶಾಸನ ಕ್ರಿ.ಶ. 450ನೆ ಇಸವಿಗೆ ಸೇರಿದುದಾದರೆ, ಬಾದಾಮಿಯ ಕಪ್ಪೆ ಅರೆಭಟ್ಟನ ಶಾಸನ ಕ್ರಿ.ಶ. 200ನೇ ಇಸವಿಗೆ ಸೇರಿದುದಾಗಿರುತ್ತದೆ. ಅಂದರೆ ಇವೆರಡು ಶಾಸನಗಳನ್ನು ಬಳಸಿರುವ ಭಾಷೆಗಳಲ್ಲಿ ಬದಲಾವಣೆಗಳನ್ನು ಕಾಣಬಹುದು.


ಕಾವ್ಯಗಳಲ್ಲಿ ಕಂಡು ಬರುವಂತೆ ಶಾಸನಗಳ ಆರಂಭದಲ್ಲಿ ಮಂಗಳಕರ ಆಶೀರ್ವಾದಗಳಿರುತ್ತವೆ. ಸ್ವಸ್ತಿ, ಸ್ವಸ್ತಿಶ್ರೀ, ಶ್ರೀ ಎಂಬಿತ್ಯಾದಿ ಶಬ್ದಗಳು ಪ್ರಸ್ತಾಪವಾಗಿರುವ ಹತ್ತಾರು ಶಾಸನಗಳಿವೆ. ಅನೇಕ ಶಾಸನಗಳ ಪ್ರಾರಂಭದಲ್ಲಿ ಪ್ರಾರ್ಥನಾ ಶ್ಲೋಕಗಳು ಕಂಡು ಬರುವುದುಂಟು.


ಅಂತಹ ಪ್ರಾರ್ಥನಾ ಶ್ಲೋಕಗಳನ್ನೊಳಗೊಂಡ ಶಾಸನಗಳಲ್ಲಿ ನಮ್ಮ ಭಾರತೀಯ ಸಂಸ್ಕøತಿ ವರ್ಣನೆಯ ಗುಣಗಳನ್ನು ಕಾಣಬಹುವುದಾದರೆ, ಕರ್ನಾಟಕದ ಶಾಸನಗಳಲ್ಲಿ ‘ಸರಸ್ವತಿ ಸ್ವರೂಪದ ಜೊತೆಗೆ ಆಕೆಯ ಕಾವ್ಯವೈಖರಿಯನ್ನು ಭವ್ಯ ಪರಂಪರೆ ವರ್ಣನೆಯನ್ನು ಕನ್ನಡ ಸಾಹಿತ್ಯ ಸಾಗರದ ಬೇರೆಲ್ಲೆಡೆಯಲ್ಲಿಯೂ ಕಂಡು ಬರುವುದಿಲ್ಲ ಎಂಬುದಾಗಿ ‘ಸಾಹಿತಿ ಡಾ. ರಂ. ಶ್ರೀ. ಮುಗಳಿ’ಯವರು ಮೆಚ್ಚಿ, ವ್ಯಾಖ್ಯಾನವೊಂದನ್ನು ನೀಡಿದ್ದಾರೆ.


‘ಶಬ್ಧಮಣಿ ದರ್ಪಣ’ ಕೃತಿಯ ಕರ್ತೃ ಕೇಶಿರಾಜನು ಸರಸ್ವತಿ 

ವೈಭವವನ್ನು ವಿಭಿನ್ನ ರೀತಿಯಲ್ಲಿ ವರ್ಣಿಸುತ್ತಾರೆ. 

ಶ್ರೀ ವಾಗ್ದೇವಿಗೆ ಶಬ್ಧದಿ 

ನಾವಾವಿಂದ್ರಿಯದ ವಿಷಯಮಂ ಶ್ರೋತ್ರದೊಳು 

ದ್ಭಾವಿಪ ನಿರ್ಮಳ ಮೂರ್ತಿಗೆ 

ಳಾವಂದ್ಯೆಗೆ ಶಾಸ್ತ್ರ ಮುಖದೊಳವನ ತನಪ್ಪೆಂ || 


ಎಂದಿದ್ದಾರೆ. ಅಂದರೆ, ಶುದ್ಧವಾದ ವ್ಯಾಕರಣ ಪ್ರಯೋಗವು ಸರಸ್ವತಿಯಷ್ಟೇ ಪವಿತ್ರವಾದುದು. ಪಂಚೇಂದ್ರಿಯಗಳಿಗೆ ವಿಷಯರೂಪಗಳಾಗಿರುವ ಶಬ್ದ, ಸ್ವರ್ಶ, ರೂಪ, ರಸ ಹಾಗೂ ಗಂಧಗಳನ್ನು ಕಿವಿಯೊಂದರಲ್ಲಿಯೇ ಶಬ್ಧದ ಮುಖಾಂತರ ಅಭಿವ್ಯಕ್ತಗೊಳಿಸುವ, ನಿರ್ಮಲ ಸ್ವರೂಪವಾಗಿರುವ, ಭುವನಸ್ತುತೆಯಾಗಿರುವ, ಕಾಂತಿಯುಕ್ತಳಾಗಿರುವ, ಶ್ರೀ ವಾಗ್ದೇವಿಗೆ ವ್ಯಾಕರಣ ಶಾಸ್ತ್ರದ ಪ್ರಾರಂಭದಲ್ಲಿಯೇ ನಮಸ್ಕರಿಸುತ್ತೇನೆ ಎನ್ನುವುದರ ಮೂಲಕ ಸರಸ್ವತಿಯನ್ನು ಗೌರವಿಸಿದ್ದಾನೆ.


ಮನುಕುಲದ ಮಹಿಳೆ ಮತ್ತು ಮಹನೀಯರು ಮೈಮೇಲೆ ಧರಿಸಿಕೊಳ್ಳುವ ಆಭರಣ ಹಾಗೂ ಹಾರಗಳನ್ನು ಎಷ್ಟು ಧರಿಸಿದರು ಅವುಗಳನ್ನು ಧರಿಸಿದಾಗ ಮಾತ್ರ ಅಲಂಕಾರ ಪ್ರಾಯವಾಗಿಯೂ ಹಾಗೂ ಸೌಂದರ್ಯಾಭಿವೃದ್ಧಿಯಾಗಿ ಕಾಣುತ್ತಾರೆ. ಆದರೆ ದೇಣೀಕೆಯಾಗಿರುವ ವಾಣಿ (ವಿದ್ಯೆ) ಮಾತ್ರ ಸರ್ವಕಾಲ, ಸರ್ವಸ್ಥಿತಿಯಲ್ಲಿಯೂ ಮನುಕುಲಕ್ಕೆ ಚಿರಶೋಭೆಯನ್ನು ನೀಡುತ್ತಿದ್ದಾರೆ. ಸರಸ್ವತಿ ಮಂದಿರಗಳಿರುವುದಿಲ್ಲವೆನ್ನುವ ಮಾತೊಂದಿಗೆ, ಅಹುದು. ಏಕೆಂದರೆ ಪ್ರತಿಯೊಂದೂರಿನ, ಪ್ರತಿಯೊಂದು ಶಾಲೆಯೂ ಶಾರದ ದೇವಿಯ ಅಥವಾ ಸರಸ್ವತಿಯ ಮಂದಿರವೆ ಆಗಿರುವುದರಿಂದ ಪ್ರತಿಯೊಬ್ಬ ವಿದ್ಯಾಕಾಂಕ್ಷಿಯು ಹಾಗೂ ಪ್ರತಿಯೊಬ್ಬ ವಿದ್ಯಾರ್ಥಿಯು ಶಾರದದೇವಿಯ ಪೂಜಾರಿಯೆ ಆಗಿರುತ್ತಾನೆ. ಆದುದರಿಂದಲೇ ‘ಶಾರದ ದೇವಿಗೆ ಪ್ರತ್ಯೇಕವಾದ ಮಂದಿರ’ಗಳಿರುವುದಿಲ್ಲ. ಸರಸ್ವತಿ ದೇವಿಗೆ ಶರದೃತುವೆಂದರೆ ಪ್ರೀತಿ ಆದುದರಿಂದಲೇ ಸಾಹಿತ್ಯ ಹಾಗೂ ಸಂಗೀತ ಇವೆರಡನ್ನೂ ಅಧಿಸ್ಥಾನ ದೇವತೆಯಾಗಿರುತ್ತಾರೆ. ಆದ್ದರಿಂದ ಸರಸ್ವತಿಯನ್ನು ‘ಶಾರದೆ’ ಎಂಬುದಾಗಿಯೂ ಕರೆಯುತ್ತಾರೆ.


ಇಂತಹ ಶಾರದದೇವಿಯನ್ನು ಕುರಿತು ಶ್ಲೋಕವೊಂದರಲ್ಲಿ ಈ ರೀತಿಯಾಗಿ ವರ್ಣಿಸಲಾಗಿದೆ. 

ಯಾ ಕುಂದೇಂದು ತುಷಾರಹಾರಧವಲಾ ಯಾ ಶುಭ್ರ ವಸ್ತ್ರಾನ್ವಿತಾ 

ಯಾ ವೀಣಾ ವರದಂಡ ಮಂಡಿತ ಕರಾ ಯಾ ಶ್ವೇತ ಪದ್ಮಾಸನಾ|

ಯಾ ಬ್ರಹ್ಮಾಚ್ಯುತ ಶಂಕರ ಪ್ರಭುತಿಭಿದೇವೈಃ ಸದಾ ಪೂಜಿತಾ 

ಸಾಮಾಂಪಾತು ಸರಸ್ವತಿ ಭಗವತಿ ನಿಶ್ಚೇಷ ಜಾಡ್ಯಾಪಹಾಃ||


ಅಂದರೆ, ಬ್ರಹ್ಮನ ಸತಿಯಾದ ಸರಸ್ವತಿ ದೇವಿಗೆ ಬಿಳಿಯ ಬಣ್ಣವೆಂದರೆ ಪ್ರೀತಿ. ಅದಕ್ಕೆ ಆಕೆಯು ಬಿಳಿ ಬಣ್ಣದ ವಸ್ತ್ರವನ್ನೇ ಧರಿಸಿರುತ್ತಾಳೆ. ಬಿಳಿ ಬಣ್ಣದ ಪದ್ಮಾಸನದಲ್ಲಿಯೇ ಕುಳಿತಿರುತ್ತಾಳೆ. ಬಿಳಿ ಬಣ್ಣದ ಮುತ್ತಿನ ಹಾರವನ್ನೇ ಧರಿಸಿರುತ್ತಾಳೆ. ಪ್ರಾಣಿಗಳ ಶಬ್ಧಗಳಿಗೆ ಸರಸ್ವತಿ ಪ್ರಧಾನ ದೇವತೆ. ತ್ರಿಮೂತ್ರಿಗಳಾದ ಬ್ರಹ್ಮ, ವಿಷ್ಣು, ಮಹೇಶ್ವರಾದಿ ದೇವತೆಗಳೆಲ್ಲರೂ ಇವಳಿಗೆ ಕೈ ಮುಗಿಯುತ್ತಾರೆ. ಸರ್ವವಿದ್ಯಾದಿ  ದೇವತೆಯಾದ ಶಾರದೆಯು ಸಮಸ್ತ ಸಮಾಜದಲ್ಲಿರುವ ಜಡತ್ವವನ್ನು ಸಂಪೂರ್ಣವಾಗಿ ಹೋಗಲಾಡಿಸುವ ಶ್ರೀವಾಣಿ ನಮ್ಮೆಲ್ಲರನ್ನು ಕಾಪಾಡಲಿ ಎಂದಿದೆ.


ದಕ್ಷಿಣ ಭಾರತೀಯ ಚಿತ್ರಕಲೆಗೆ ‘ರಾಜರವಿವರ್ಮನು’ ಜೀವ ತುಂಬಿರುವುದರ ಜೊತೆಗೆ ಪುರಾಣ ಹಾಗೂ ದೈವ ಚಿತ್ರಗಳಿಗೂ ಒಂದು ರೂಪವನ್ನು ನೀಡಿದ್ದಾನೆ. ಪ್ರತಿಯೊಂದು ತೈಲ ವರ್ಣ ಚಿತ್ರವು ಅರ್ಥಗರ್ಭೀತವಾಗಿರುವಂತೆ ಚಿತ್ರಿಸಿರುವ ರವಿವರ್ಮನಿಗ ನಾವೆಲ್ಲರೂ ಚಿರಋಣಿ. ಇಂತಹ ರವಿವರ್ಮನು ತನ್ನ ತೈಲಚಿತ್ರಗಳಲ್ಲಿ ಸರಸ್ವತಿಯನ್ನು ಬಂಡೆಯ ಮೇಲೆ ಕುಳಿತಿರುವ ಹಾಗೆ ತನ್ನ ಚಿತ್ರಿಸಿರುವುದರ ಹಿನ್ನೆಲೆಯೊಂದನ್ನು ಅಥೈಸುವುದಾದರೆ, ‘ವಿದ್ಯೆ ಎಂಬುದು ಕಲ್ಲಿನಹಾಗೆ ಕರಗುವುದಿಲ್ಲ, ಕದಲುವುದೂ ಇಲ್ಲ, ಸ್ಥಿರÀವಾಗಿ, ನಿಶ್ಚಲವಾಗಿ ಸಾವಿರಾರು ವರ್ಷಗಳ ಕಾಲ ಜೀವಂತವಾಗಿರುತ್ತದೆ’ ಎನ್ನುವ ಕಲ್ಪನೆ ಕಾಲಾತೀತವಾದುದು.

ಇನ್ನು ಸರಸ್ವತಿ ದೇವಿಯನ್ನು ಶ್ವೇತಪದ್ಮದಲ್ಲಿ ಕುಳ್ಳಿರಿಸಿರಲು ಕಾರಣದ ಹಿನ್ನೆಲೆಯಲ್ಲಿ ವಿವೇಚಿಸುವುದಾದರೆ, ಪದ್ಮಗಳು ಹರಿಯುವ ನೀರಿನಲ್ಲಿ ಹುಟ್ಟುವುದಿಲ್ಲ. ನಿಂತ ನೀರಿನಲ್ಲಿಯೇ ಹುಟ್ಟುವುದು ಪದ್ಮಗಳು ಕೆಸರಿರುವ ನೀರಿನಲ್ಲಿ ಹುಟ್ಟಿದರೂ ನೀರಿಗೆ ಅಂಟಿಕೊಂಡಿರುವುದಿಲ್ಲ.


ಕೆಸರು ಅಜ್ಞಾನದ ಸಂಕೇತವಾದರೆ, ನೀರು ಜೀವನದ ಸಂಕೇತ. ಬಿಳಿ ಬಣ್ಣವುಳ್ಳ ಪದ್ಮ (ತಾವರೆ) ಜ್ಞಾನದ ಸಂಕೇತವಾದರೆ, ಕೆಂಪು ಮಿಶ್ರಿತ ಬಣ್ಣವು ವಿಜಯದ ಸಂಕೇತವಾಗಿರುತ್ತದೆ. 

ಆದುದರಿಂದಲೇ ದೇವಿ-ದೇವೆತೆಯರು ಪದ್ಮಾಸನಗಳಲ್ಲಿ ಕುಳಿತಿರುತ್ತಾರೆ. ಪದ್ಮಹಸ್ತಗಳನ್ನು ಹೊಂದಿರುತ್ತಾರೆ. ಅಂದರೆ ಹಸ್ತಗಳಲ್ಲಿ ಕೆಂಪು ಮಿಶ್ರಿತ ಬಣ್ಣಗಳನ್ನೇ ಲೇಪಿಸಿರುತ್ತಾರೆ.

 

ಶಾರದೇವಿ ಪಕ್ಕದಲ್ಲಿ ಗಂಡು ನವಿಲು ಇರುತ್ತದೆ. ನವಿಗಳಿಗೆ ಎಲ್ಲಾ ಪ್ರಾಣಿಗಳಲ್ಲಿರುವಂತೆ ಗಂಡು ಹೆಣ್ಣುಗಳ ಸಂಭೋಗವಿರುವುದಿಲ್ಲ. ಗಂಡು ನವಿಲಿನ ಕಣ್ಣಿನಲ್ಲಿ ಬರುವ ಕಣ್ಣಿರನ್ನು ಹೆಣ್ಣು ನವಿಲು ಸೇವಿಸಿದ ನಂತರವೇ ಮೊಟ್ಟೆಯನ್ನಿಡುತ್ತದೆ. ಜಗತ್‍ಸೃಷ್ಟಿಯ ವಿಚಿತ್ರವಿದು. ವಿದ್ಯೆ ಹಾಗೂ ವಿಜ್ಞಾನಗಳನ್ನು ತಿಳಿಸುವುದಕ್ಕೆ ಸರಸ್ವತಿಯ ಸನಿಹದಲ್ಲಿ ನವಿಲು ಪಕ್ಷಿಯಿರುವಂತೆ ಚಿತ್ರಿಸಿರುತ್ತಾರೆ.


ಶಾರದದೇವಿ ಹಂಸ ಪಕ್ಷಿಯನ್ನೇ ವಾಹನವನ್ನಾಗಿ ಬಳಸಿರುವುದರ ಹಿಂದಿನ ರೋಚಕ ಕಥೆಯೊಂದನ್ನು ಅರಿಯುವುದಾದರೆ. ಪಕ್ಷಿ ಜಾತಿಯಲ್ಲಿ ಹಂಸಕ್ಕಿರುವ ವಿವೇಕವು ಮತ್ತೊಂದು ಪ್ರಾಣಿಗಳಿರುವುದಿಲ್ಲ. ಅಂತಹ ವಿವೇಕವೇನೆಂದರೆ, ಹಾಲು ಹಾಗೂ ನೀರು ಇವೆರಡನ್ನು ಮಿಶ್ರ ಮಾಡಿ ಒಂದೇ ಪಾತ್ರೆಯಲ್ಲಾಕಿ ಹಂಸದ ಮುಂದಿಟ್ಟರೆ ಹಾಲನ್ನು ಮಾತ್ರ ಕುಡಿದು ನೀರನ್ನು ಮಾತ್ರ ಬಿಟ್ಟಿರುತ್ತದೆ. 


ಇಂತಹ ಜ್ಞಾನ ಹಂಸ ಪಕ್ಷಿಎ ಮಾತ್ರವಿರುತ್ತದೆ. ಆದುದರಿಂದಲೇ ಸರಸ್ವತಿ ವಾಹನವನ್ನಾಗಿ ಹಂಸಪಕ್ಷಿಯನ್ನೇ ಆಯ್ಕೆ ಮಾಡಿರುವುದು. ಅಂದರೆ ವಿದ್ಯೆಯಿಂದ ವಿವೇಕಶಕ್ತಿ ಲಭ್ಯವಾಗುತ್ತದೆ ಎಂಬ ಸಾರ್ವಕಾಲೀಕ ಸಂದೇಶವನ್ನು ಸಾರುತ್ತದೆ. ಶಾರದ ದೇವಿಯ ಶಕ್ತಿ ಅನಂತವಾದುದು. ಅಂತಹ ಅನಂತ ಶಕ್ತಿಯಲ್ಲಡಗಿರುವ ವಿದ್ಯೆಯ ಶಕ್ತಿಯನ್ನು ‘ಶತಕತ್ರಯ’ದ ಕರ್ತೃ ‘ಭತ್ರ್ಯಹರಿ’ಯ ನೀತಿಶತಕದ ‘ವಿದ್ವತ್ಪದ್ದತಿ’ಯ ಶ್ಲೋಕವೊಂದರ ಮೂಲಕ ವಿದ್ಯಾಯಾಧಿದೇವತೆಯಾದ ಶಾರದೆಯನ್ನು ಕುರಿತು, ನೀತಿಯೊಂದನ್ನು ಈ ರೀತಿ ವಿವರಿಸಿದ್ದಾರೆ.  

ವಿದ್ಯಾನಾಮ ನರಸ್ಯ ರೂಪ ಮಧಿಕಂ ಪ್ರಚ್ಛನ್ನ ಗುಪ್ತಧನಂ, 

ವಿದ್ಯಾಭೋಗ ಕರೀಯಶಃಸುಖಕರೀ ವಿದ್ಯಾಗುಣಾಂ ಗುರುಃ ||

ವಿದ್ಯಾಬಂಧು ಜನೋ ವಿದೇಶಗಮನೆ ವಿದ್ಯಾ ಪರದೇವತಾ, 

ವಿದ್ಯಾ ರಾಜ ಸುಪೂಜ್ಯತೆ ನಹಿಧನಂ ವಿದ್ಯಾದಿ ಹೀನಪಶುಃ ||


ಅಂದರೆ, ವಿದ್ಯೆಯಿಂದ ಸೌಂದರ್ಯಾಭಿವೃದ್ಧಿಯಾಗುತ್ತದೆ. ವಿದ್ಯೆಯು ಯಾರು ಕದ್ದೊಯ್ಯಲಾರದ ಗುಪ್ತಧನವಾಗಿರುತ್ತದೆ. ಭೂಲೋಕದಲ್ಲಿ ಭೋಗ ಜೀವನವನ್ನು, ಯಶಸ್ಸನ್ನು, ಸುಖ-ಸಂತಸಗಳನ್ನು ಪಡೆಯುವಂತಾಗುತ್ತದೆ. ವಿದ್ಯೆಯು ಗುರುಗಳಿಗೂ ಗುರುವಾಗಿರುತ್ತದೆ. ವಿದೇಶಗಳಲ್ಲಿಯೂ ಬಂಧು ಬಾಂಧವರಂತೆ ಬಲದ ಸಹಾಯವಿರುತ್ತದೆ. ವರದೇವತೆಯಂತೆ ವಿದ್ಯೆಯಿಂದ ಲೌಕಿಕದಲ್ಲಿ ಹಾಗೂ ಅಲೌಕಿದಲ್ಲಿಯೂ ಪದವಿಗಳು ಪ್ರಾಪ್ತವಾಗುತ್ತದೆ.


ಲೇಖನ: ಡಾ. ಗುರುರಾಜ ಪೋಶೆಟ್ಟಿಹಳ್ಳಿ (ಪ್ರಣವ)

ಸಂಸ್ಕೃತಿ ಚಿಂತಕರು

ಮೊಬೈಲ್‌: 9739369621

ಇ-ಮೇಲ್ : padmapranava@yahoo.com


0 Comments

Post a Comment

Post a Comment (0)

Previous Post Next Post