ಗೇರು ಕೃಷಿ: ಕೂಲಿ ಖರ್ಚು ತಗ್ಗಿಸಲು ಬಂದಿದೆ ಹೊಸ ತಳಿ- ನೇತ್ರಾ ಜಂಬೋ -1

Upayuktha
0

“ಗೇರು ಕೃಷಿಯಲ್ಲಿ ಒಟ್ಟು ಖರ್ಚಿನ  ಸುಮಾರು ನಲವತ್ತು ಶೇಕಡಾ ಬಿದ್ದ ಹಣ್ಣು/ಬೀಜ ಹೆಕ್ಕಲು ಬೇಕು. ಆರರಿಂದ ಎಂಟು ಗ್ರಾಂ ತೂಕದ ಬೀಜಗಳು ಗೇರಿನಲ್ಲಿ ಸಾಮಾನ್ಯ. ಆದರೆ ಬೀಜದ ಗಾತ್ರ ಹೆಚ್ಚಿಸಿದರೆ ಮೂರು ರೀತಿಯ ಲಾಭ. ಒಂದು- ಕಡಿಮೆ ಬೀಜ ಹೆಕ್ಕಿ ಜಾಸ್ತಿ ತೂಕ ಗಳಿಸಬಹುದು. ಎರಡು- ಮಾರುಕಟ್ಟೆಯಲ್ಲಿ ದೊಡ್ಡ ಬೀಜಗಳಿಗೆ ಹೆಚ್ಚಿನ ದರ. ಮೂರು- ಸಂಸ್ಕರಣೆಯೂ ಸುಲಭ. ಇದನ್ನರಿತು ದೊಡ್ಡ ಬೀಜ ಬಿಡುವ ನೇತ್ರಾ ಜಂಬೋ-1 ತಳಿಯನ್ನು ನಮ್ಮ ತಂಡ ಬಿಡುಗಡೆ ಮಾಡಿದೆ” ಎನ್ನುತ್ತಾರೆ ಪುತ್ತೂರಿನ ರಾಷ್ಟ್ರೀಯ ಗೇರು ಸಂಶೋಧನಾ ಕೇಂದ್ರದ ತೋಟಗಾರಿಕಾ ವಿಭಾಗದ ಪ್ರಧಾನ ವಿಜ್ಞಾನಿ ಡಾ. ದಿನಕರ ಅಡಿಗ.  


ಈ ತಳಿಯಲ್ಲಿ 12 ಗ್ರಾಂ ತೂಕದ ಬೀಜಗಳಿರುತ್ತವೆ. ಶೇಕಡಾ 90ಕ್ಕೂ ಹೆಚ್ಚಿನ ಬೀಜಗಳದ್ದು ಒಂದೇ ಗಾತ್ರ. ನೂರು ಕೆಜಿ ಬೀಜ ಸಂಸ್ಕರಣೆಯಿಂದ ಸುಮಾರು 29 ರಿಂದ 30 ಕೆಜಿ ತಿರುಳು ಸಿಗುತ್ತದೆ. ಈಗಿರುವ ರಫ್ತು ಗುಣಮಟ್ಟದ ಗ್ರೇಡ್ ಡಬ್ಲ್ಯೂ 180ಕ್ಕಿಂತ ಜಾಸ್ತಿ ಗ್ರೇಡ್ (ಡಬ್ಲ್ಯೂ 130) ಈ ತಳಿಯ ತಿರುಳಿನದ್ದು. ಸಾಮಾನ್ಯವಾಗಿ ದೊಡ್ಡ ಬೀಜ ಬಿಡುವ ತಳಿಗಳ ಇಳುವರಿ ಕಡಿಮೆ. ಆದರೆ ಈ ತಳಿಯ ಇಳುವರಿ ಹೆಕ್ಟೇರಿಗೆ ಎರಡು ಟನ್. ಹಣ್ಣಿನ ತೂಕ 100 ಗ್ರಾಂ ಕ್ಕಿಂತ ಜಾಸ್ತಿ ಹಾಗೂ ಕೆಂಪು ಬಣ್ಣ. ಗಿಡಗಳನ್ನು ನೆಡಬೇಕಾದ ಅಂತರ 23 ಅಡಿ. 


“ಸರಾಸರಿ ಈ ತಳಿ ಒಂದು ಟನ್ ಇಳುವರಿಗೆ ಬೀಜ ಹೆಕ್ಕುವಾಗ 16000 ಕೂಲಿ ಖರ್ಚನ್ನು ಉಳಿಸುತ್ತದೆ. ಜೊತೆಗೆ ಈಗಿನ ಮಾರುಕಟ್ಟೆ ದರದಲ್ಲಿ ದೊಡ್ಡ ಗಾತ್ರದ ಬೀಜಕ್ಕೆ ಒಂದು ಟನ್ನಿಗೆ ಸುಮಾರು 10000 ರೂ ಜಾಸ್ತಿ ಸಿಗುತ್ತದೆ. ಒಟ್ಟು 26000 ರೂಗಳಷ್ಟು ಲಾಭ ಒಂದು ಟನ್ನಿಗೆ ಸಿಗುತ್ತದೆ. ಇದರ ತಿರುಳಿನ ಸಿಪ್ಪೆ ಸುಲಭದಲ್ಲಿ ಬಿಡಿಸಬಹುದು. ಹಾಗಾಗಿ ಕಾರ್ಖಾನೆಯಲ್ಲೂ ಕೂಲಿ ಖರ್ಚು ಉಳಿಸುತ್ತದೆ. ಜೊತೆಗೆ ತಿರುಳು ತುಂಬಾ ರುಚಿಕರ” ಅವರ ಮಾಹಿತಿ.  


“ಗೇರಿನಲ್ಲಿ ಸದ್ಯ ಕೃಷಿ ಮಾಡುತ್ತಿರುವ ತಳಿಗಳು (ಭಾಸ್ಕರ, ವಿಆರ್ ಐ-3, ಉಳ್ಳಾಲ -3 ಇತ್ಯಾದಿ) ಬಹುತೇಕ ಸಣ್ಣ ಹಾಗೂ ಮಧ್ಯಮ ಗಾತ್ರದವು. ಹಾಗಾಗಿ ಈ ದೊಡ್ಡ ಗಾತ್ರದ ಬೀಜದ ತಳಿ ಒಣಭೂಮಿ ಕೃಷಿಯಲ್ಲಿ ಹೊಸ ಭರವಸೆ ಹುಟ್ಟಿಸಬಲ್ಲುದು. ಪ್ರಸ್ತುತ ಇದಕ್ಕೆ ತಳಿ ಹಕ್ಕಿನ ರಕ್ಷಣೆಯನ್ನು ಪಡೆಯುವ ಹಂತದಲ್ಲಿದ್ದೇವೆ. ಅದಾದ ನಂತರ ಆಸಕ್ತರಿಗೆ ವಿತರಿಸುತ್ತೇವೆ” ಎನ್ನುತ್ತಾರೆ ಡಾ ಅಡಿಗ.  


ಹೆಚ್ಚಿನ ಮಾಹಿತಿಗೆ:

-ಡಾ. ಜೆ. ದಿನಕರ ಅಡಿಗ, 

ಪ್ರಧಾನ ವಿಜ್ಞಾನಿ (ತೋಟಗಾರಿಕೆ), 

ರಾಷ್ಟ್ರೀಯ ಗೇರು ಸಂಶೋಧನಾ ಕೇಂದ್ರ, ಪುತ್ತೂರು. 

Mobile: 99020 72036  

Email: dinakara.adiga@gmail.com


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top