||ಜಾಹೀರಾತು|| ಬೆಂಗಳೂರಿನ ಪ್ರಣವ ಮೀಡಿಯಾ ಹೌಸ್ ಪ್ರಕಾಶನದ ಹೆಮ್ಮೆಯ ಪ್ರಕಟಣೆ | ಡಾ ಗುರುರಾಜ ಪೋಶೆಟ್ಟಿಹಳ್ಳಿ ರವರ 'ಸತ್ಸಂಗ ಸಂಪದ' ಪ್ರೇರಣಾದಾಯಿ ಅಂಕಣಗಳ ಸಂಕಲನ ಖರೀದಿಸಲು ಇಚ್ಚಿಸುವವರು ಸಂಪರ್ಕಿಸಿ: 739369621 (ಪುಟಗಳು- 248, ಬೆಲೆ: ಎರಡು ನೂರು ರೂಪಾಯಿಗಳು) | ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 'ನೇಪಥ್ಯ'ಕ್ಕೆ ಸರಿದ ಗುಡಿಹಳ್ಳಿ ನಾಗರಾಜ್: "ಅಂಕದ ಪರದೆ ಜಾರಿದ ಮೇಲೆ"

'ನೇಪಥ್ಯ'ಕ್ಕೆ ಸರಿದ ಗುಡಿಹಳ್ಳಿ ನಾಗರಾಜ್: "ಅಂಕದ ಪರದೆ ಜಾರಿದ ಮೇಲೆ"
ಗುಡಿಹಳ್ಳಿ ನಾಗರಾಜ್ ‌ಸರಿಯಾಗಿ 42 ವರ್ಷಗಳ ಪರಿಚಯ. ಸಜ್ಜನ ಸಾಹಿತಿ, ಪತ್ರಕರ್ತ. ನಮ್ಮ ಸಾಹಿತಿಗಳ ಕಲಾವಿದರ ಬಳಗ ಪ್ರಕಟಿಸಿದ್ದ ಡಾ. ಎಂ. ಚಿದಾನಂದಮೂರ್ತಿ ಅವರ 'ಕನ್ನಡ ಸಂಸ್ಕೃತಿ ನಮ್ಮ ಹೆಮ್ಮೆ' ಎಂಬ 29 ಪುಟಗಳ ಪುಸ್ತಕವನ್ನು 1989ರಲ್ಲಿ ಬೆಂಗಳೂರು ಆಕಾಶವಾಣಿ ಕೇಂದ್ರದಲ್ಲಿ 14 ನಿಮಿಷಗಳ ಕಾಲ ಪರಿಚಯಿಸಿದ್ದರು.  ನಮ್ಮ ಬಳಗದ ಎಲ್ಲ ಚಟುವಟಿಕೆಗಳೂ ಮೂರು ರೂ. ಮುಖಬೆಲೆಯ ಆ ಕೃತಿಯ ಮಾರಾಟದಿಂದ ಬರುವ ಲಾಭದಲ್ಲಿ ನಡೆಯಬೇಕಾಗಿತ್ತು. ಹಾಗಾಗಿ ಬಳಗದ ಸಂಚಾಲಕನಾಗಿದ್ದ ನನಗೆ ಆ ಕೃತಿಯ ಬಗೆಗೆ ಯಾರಾದರೂ ಪ್ರೇರಣಾರೂಪದ ಬರೆಹ ದಾಖಲಿಸಿದರೆ ಅವರ ಕುರಿತು ಆದರದ ಭಾವ ಮೂಡುತ್ತಿತ್ತು.


ಗುಡಿಹಳ್ಳಿ ನನ್ನ ಎದೆಗೂಡಿನಲ್ಲಿ ಗುಡಿಕಟ್ಟಿಕೊಂಡು 1989ರಿಂದ ನೆಲೆನಿಂತಿದ್ದು ಹಾಗೆ. ಪ್ರಜಾವಾಣಿ ಎಂಬ ಅಧಿಕ ಪ್ರಸಾರದ ಪತ್ರಿಕೆಯ ವರದಿಗಾರನಾದರೂ ಎಂದೂ ಅಧಿಕಪ್ರಸಂಗಿಯಾಗಿರಲಿಲ್ಲ. ಅವರಲ್ಲಿ ಬಿಂಕ, ಬಿಗುಮಾನ, ಧಾರ್ಷ್ಟ್ಯ ಮನೆಮಾಡಿರಲಿಲ್ಲ. ನಮ್ರತೆಯ ಪ್ರತಿರೂಪ ಈ ನಾಗರಾಜ.  ಬಂಡಾಯ ಸಾಹಿತ್ಯ ಸಂಘಟನೆಯೊಂದಿಗೆ ನಿಕಟ ನಂಟಿತ್ತು. ರಂಗಭೂಮಿಯ ಬಗೆಗೆ ಇಷ್ಕ್ ಇತ್ತು. ರಂಗಭೂಮಿಗಾಗಿ ಜೀವತೇದ ಕಲಾವಿದರ ಪರವಾಗಿ ನಿಲ್ಲುತ್ತಿದ್ದರು. ಅವರಿಗಾಗಿ ಮಿಡಿಯುತ್ತಿದ್ದರು.

 

ರಂಗವೈಭವ ಹಾಗೂ ವೈಫಲ್ಯಗಳನ್ನು ಕಟ್ಟಿಕೊಡಲು ರಂಗನೇಪಥ್ಯ ಎಂಬ ಮಾಸಿಕವನ್ನು ಪ್ರಕಟಿಸುತ್ತಿದ್ದ ಗೆಲುವರಿಯದ ಸಾಹಸಿ. ಮೆರೆದದ್ದನ್ನು ಕಂಡಿಲ್ಲ; ಮಣಿವ, ಮಿಡಿವ ಸ್ವಭಾವ. ಕಲಾಕ್ಷೇತ್ರವೆಂದರೆ ಮನೆ-ಮಂದಿರಕ್ಕಿಂತ ಆರಾಧನಾ ಭಾವ. ಗುಡಿಹಳ್ಳಿ ಕರ್ನಾಟಕ ನಾಟಕ ಅಕಾಡೆಮಿಯ ಅಧ್ಯಕ್ಷರಾಗಬೇಕಾಗಿತ್ತು. ಹಲವು ಪ್ರಶಸ್ತಿಗಳನ್ನು ಬಾಚಿಕೊಳ್ಳಬೇಕಿತ್ತು‌ ಅವಕ್ಕಾಗಿ ಹಂಬಲಿಸಿದವರೂ ಅಲ್ಲ, ಹಲುಬಿದವರೂ ಅಲ್ಲ. ಕೈಚಾಚಿದವರಂತೂ ಅಲ್ಲವೇ ಅಲ್ಲ. ಆದರೆ ರಾಜ್ಯೋತ್ಸವ ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿಗಳಿಗೆ ಭಾಜನರಾಗಿದ್ದರು.


ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ, ಪ್ರೆಸ್ ಕ್ಲಬ್‌ನ ಉಪಾಧ್ಯಕ್ಷರಾಗಿ ಅವುಗಳನ್ನು ಕ್ರಿಯಾಶೀಲಗೊಳಿಸಿದ ಕೀರ್ತಿ ಅವರದು. ಹದಿನೈದಕ್ಕೂ ಹೆಚ್ಚು ಸ್ವತಂತ್ರ ಕೃತಿಗಳ ರಚನೆ. ಹತ್ತಕ್ಕೂ ಹೆಚ್ಚು ಸಂಪಾದಿತ ಕೃತಿಗಳು. ಅವೆಲ್ಲವೂ ನಾಟಕ ರಂಗಕ್ಕೆ ಮೀಸಲು. ರಂಗಭೂಮಿಯ ಹೊರತಾಗಿ ಬೇರೇನಿಲ್ಲ ಸುಳ್ಳು ಎಂಬ ಅನಂತ ಭಾವ. ರಂಗಭೂಮಿ ಅವರ ನರನಾಡಿಗಳನ್ನು ಪರಿಪರಿ ಆವರಿಸಿತ್ತು. ಈ ರಂಗಕರ್ಮಿ ಅಜಾತಶತ್ರುವಾಗಿದ್ದರು. ಅವರ ಹಿಂದೆಯೂ ಜನರು ಒಳ್ಳೆಯ ಮಾತುಗಳನ್ನೇ ಆಡುತ್ತಿದ್ದರು. ಅವರು ಬಳ್ಳಾರಿ ಜಿಲ್ಲೆಯಿಂದ ಬೆಂಗಳೂರೆಂಬ ಕಲ್ಮಶನಗರಿಗೆ ಬಂದವರು.


ಪರಿಶುದ್ಧ ಅಂತಃಕರಣ‌ವಿದ್ದ ಸುಶಿಕ್ಷಿತ ಹಳ್ಳಿಮುಕ್ಕ ನಮ್ಮ ನಾಗರಾಜಣ್ಣ. ಅವರದು ನಿರಾಡಂಬರ ಶೈಲಿಯ ಬರೆಹ. ಬದುಕೂ ಅಂತೆಯೇ. ಅವರು ಸೂಕ್ಷ್ಮ ಹೃದಯಿ. ವೃತ್ತಿ ರಂಗಭೂಮಿಯ ಕಲಾವಿದರಿಗಾಗಿ ಮಿಡಿಯುತ್ತಿದ್ದ ಸಹೃದಯಿ. ಆದರೆ ಆರೋಗ್ಯ ಅತ್ತಿಂದಿತ್ತ, ಇತ್ತಿಂದತ್ತ ತೂಗುತ್ತಿತ್ತು. ಒಮ್ಮೊಮ್ಮೆ ರಾತ್ರಿ ಅವೇಳೆಯಲ್ಲಿ ಈ ಕುರಿತು ಸಲಹೆ ಕೇಳುತ್ತಿದ್ದರು. ಧ್ವನಿಯಲ್ಲಿ ಎಂದೂ ಆರ್ದ್ರಭಾವವೇ. ರಂಗಸಮಾಜಕ್ಕಾಗಿ ಮಿಡಿದ, ತುಡಿದ ಜೀವವೊಂದು 66 ವಸಂತಗಳನ್ನು ಕಳೆದು ಧರೆಗೊರಗಿದೆ. 'ನೇಪಥ್ಯಕ್ಕೆ' ಸರಿದಿದೆ. ಅಂಕದ ಪರದೆ ಜಾರಿದೆ. ನಾಟಕ ಮುಗಿದಿದೆ. ತನ್ನ ಆಪ್ತ ಆರಾಧಕನನ್ನು ಕಳೆದುಕೊಂಡು ಕನ್ನಡ ರಂಗಭೂಮಿ ತಬ್ಬಲಿಯಾಗಿದೆ; ಇನ್ನು ತನಗಾರು ಗತಿಯೆಂದು ದುಗುಡಗೊಂಡಿದೆ.  


ಒಮ್ಮೆ ಬೆಂಗಳೂರು ಆಕಾಶವಾಣಿಯಲ್ಲಿ ಪ್ರಸಾರವಾದ ನಾಟಕಗಳನ್ನು ರಾಷ್ಟ್ರೀಯ ಪ್ರಶಸ್ತಿಗೆ ಕಳುಹಿಸುವ ಸಲುವಾಗಿ ಆಯ್ಕೆಮಾಡಲು ರಚಿಸಿದ್ದ ಸಮಿತಿಯಲ್ಲಿ ಒಟ್ಟಿಗೆ ಕಾರ್ಯನಿರ್ವಹಿಸಿದ ನೆನಪಾಗುತ್ತಿದೆ. ಮನಸ್ಸು ಬಿಕ್ಕುತ್ತಿದೆ. ಕಣ್ಣ ಬಿಂದು ಜಾರುತ್ತಿದೆ.

-ಕೆ. ರಾಜಕುಮಾರ್


(ಉಪಯುಕ್ತ ನ್ಯೂಸ್)ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ0 Comments

Post a Comment

Post a Comment (0)

Previous Post Next Post