ಈ ಪ್ರಶ್ನೆ ಪ್ರತಿ ವರ್ಷ ಒಮ್ಮೆ ಎದ್ದು ಬರುವುದನ್ನು ನಾವೆಲ್ಲರೂ ಕಾಣುತ್ತೇವೆ. ನ್ಯಾಯಾಲಯದಲ್ಲಿ, ಸರಕಾರಿ ಮಟ್ಟದಲ್ಲಿ ಇದು ಸುದ್ದಿಯಾದಾಗ ನಾವೆಲ್ಲಾ ಅಡಿಕೆ ಬೆಳೆಗಾರರು ಒಮ್ಮೆ ಗಡಿಬಿಡಿಸಿ ಎದ್ದು ನಿಲ್ಲುತ್ತೇವೆ. ಸರಕಾರವನ್ನು, ನ್ಯಾಯಾಲಯವನ್ನು, ಕ್ಯಾಂಪ್ಕೋ ಸಂಸ್ಥೆಯನ್ನು, ಅಲ್ಲ ಸಿಗರೇಟು ಲಾಬಿಯನ್ನು ನಾಲ್ಕಾರು ದಿನ ನಮ್ಮ ನಮ್ಮ ವಿವೇಚನಾ ಸಾಮರ್ಥ್ಯದಲ್ಲಿ ಬೈದು ಸುಮ್ಮನಾಗಿ ಬಿಡುತ್ತೇವೆ. ಶತಶತಮಾನಗಳಿಂದ ನಮ್ಮ ಸಂಸ್ಕೃತಿಯಲ್ಲಿ ಹಾಸು ಹೊಕ್ಕಾಗಿರುವ ಅಡಿಕೆ, ನಿದ್ದೆಯ ಹೊತ್ತನ್ನು ಬಿಟ್ಟು ಬಾಕಿ ಎಲ್ಲಾ ಸಮಯದಲ್ಲಿ ಜಗಿದು ಉಗುಳುತ್ತಿದ್ದ ಅಡಿಕೆ, ಕ್ಯಾನ್ಸರ್ ಕಾರಕ ವಾಗಿದ್ದರೆ ನಮ್ಮ ಮನೆ ಮನೆಯಲ್ಲಿಯೂ ಕ್ಯಾನ್ಸರ್ ಇರಬೇಕಾಗಿತ್ತು. ಇದೊಂದೇ ಸಾಕ್ಷಿ ಸಾಕು ಅಡಿಕೆ ಕ್ಯಾನ್ಸರ್‌ಕಾರಕ ಅಲ್ಲ ಎಂದೆನಲು.
ಈಗಿತ್ತಿಲಾಗಿನ ಕೃಷಿ ಬೆಳವಣಿಗೆಗಳು ಮತ್ತು ಅನೇಕ ಅಡಿಕೆ ಕೃಷಿಕರ ಮನೆಗಳಲ್ಲಿ ಕ್ಯಾನ್ಸರ್ ಮತ್ತು ಇತರ ಕೆಟ್ಟ ಕಾಯಿಲೆಗಳ ಸಮಸ್ಯೆ ಹಬ್ಬುವುದನ್ನು ಕಾಣುವಾಗ ಅಡಿಕೆ ಕೃಷಿಯಲ್ಲಿ ಏನೋ ದೋಷವಿದೆಯೆಂದು ಗೋಚರಿಸುತ್ತದೆ.
ಅಡಿಕೆ ಗಿಡವನ್ನು ಬೆಳೆಸುವ ಹಂತದಲ್ಲಿ ನಾವು ಬಳಸುವ ರಾಸಾಯನಿಕ ಗೊಬ್ಬರಗಳು ಒಂದೆಡೆಯಾದರೆ, ಮಣ್ಣಿನ ಫಲವತ್ತತೆಯನ್ನು ಏರಿಸುವ ಮತ್ತು ಮಣ್ಣು ಕರಗಿ ಹೋಗದಂತೆ ತಡೆಯುವ ಹುಲ್ಲನ್ನು ಕೊಲ್ಲುವುದಕ್ಕೋಸ್ಕರ ಬಳಸುವ ಸಸ್ಯನಾಶಕ ಅಪಾಯಕಾರಿಯಾಗದೇ? ಮೊನ್ಸೆಂಟೋ ಕಂಪನಿಯ ಸಸ್ಯನಾಶಕ ದ ಮೇಲೆ ಈಗಾಗಲೇ ಅಮೆರಿಕದಲ್ಲಿ 4000 ಕೇಸು ಇದೆಯಂತೆ.
ಬೆಳೆಯುವ ಹಂತದಲ್ಲಿ ಹೀಗಾದರೆ ಬೆಳೆಯ ಹಂತದಲ್ಲಿ ರೋಗರ್ ಕರಾಟೆಗಳ ಭರಾಟೆ ವಿಜೃಂಭಿಸುತ್ತದೆ. ಎಲ್ಲಾ ಕೀಟಗಳು ರೋಗಾಣುಗಳು ನಿಯಂತ್ರಿಸಲು ಹೊರಟಸ್ಟೂ ಪ್ರತಿರೋಧವನ್ನು ಒಡ್ಡಿ ತಮ್ಮ ಸಂತಾನವನ್ನು ಮತ್ತಷ್ಟು ವೃದ್ಧಿ ಮಾಡಿಕೊಳ್ಳುವುದನ್ನು ಕಾಣುತ್ತೇವೆ. ಹೀಗೆ ಬಳಸುತ್ತಾ ಹೋದರೆ ಮುಂದೆ ಕೀಟನಾಶಕಗಳು ಇಲ್ಲದೆ ಅಡಿಕೆ ಬೆಳೆಯಲು ಸಾಧ್ಯವೇ ಇಲ್ಲ ಎಂಬ ಸ್ಥಿತಿ ಬಾರದೇ?
ಹಣ್ಣಾಗಿ ಬಂದ ಅಡಿಕೆಯನ್ನು ಎರಡು ತಿಂಗಳು ಒಣಗಿಸಿ ಗೋದಾಮುಗಳಲ್ಲಿ ಕಾಪಿಟ್ಟರೆ ಒಂದು ವರ್ಷದವರೆಗೆ ಯಾವುದೇ ಸಮಸ್ಯೆ ಇಲ್ಲದೆ ಇಡಲು ಸಾಧ್ಯ. ಇದು ಅಡಿಕೆಗೆ ಇರುವ ವಿಶೇಷ ರಕ್ಷಣೆ. ಆದರೆ ನಾವು ಉಳಿತಾಯದ ದೃಷ್ಟಿಯಿಂದಲೂ ಸುಲಭದ ದೃಷ್ಟಿಯಿಂದಲೂ ಈ ವಿಶೇಷ ರಕ್ಷಣಾ ಕವಚವನ್ನು ತೆಗೆದು ಕ್ಯಾನ್ಸರ್ ಕಾರಕವೆಂದು ಜನಜನಿತವಾದ ಅಲ್ಯೂಮಿನಿಯಂ ಫಾಸ್ಪಯಿಡ್ ಗುಳಿಗೆಗಳನ್ನಿಟ್ಟು ಕಾಪಿಡುವುದು ನಮಗೆ ನಾವೇ ಮನೆಗೆ ಮಾರಿಯನ್ನು ಎಳಕೊಂಡಂತೆ.
ಸೂಕ್ಷ್ಮವಾಗಿ ಗಮನಿಸಿದರೆ ಅಡಿಕೆಯ ಎಲೆಯಲ್ಲಿ ಇರಬಹುದು ಮಿಡಿಯಲ್ಲಿ ಇರಬಹುದು ಮೈಟುಗಳು, ಕೀಟಗಳು ಇರುವುದು ಸರ್ವೇಸಾಮಾನ್ಯ. ಇವನ್ನೆಲ್ಲಾ ನಿಭಾಯಿಸುವ ಎಲ್ಲಾ ಸಾಮರ್ಥ್ಯ ಪ್ರಕೃತಿಗೆ ಇದೆ. ಪ್ರತಿಯೊಂದಕ್ಕೂ ನಿಯಂತ್ರಣಕ್ಕೆ ಹೊರಟರೆ ನಮ್ಮನ್ನೂ ನಿಯಂತ್ರಿಸುವ ಸಾಮರ್ಥ್ಯ ಪ್ರಕೃತಿಗೆ ಇದೆ ಎಂದು ಅರಿತುಕೊಳ್ಳಬೇಕು.
ಗೇರುಬೀಜದ ನುಸಿ ರೋಗವನ್ನು ನಿಯಂತ್ರಿಸಲು ಹೊರಟು ಆದ ಪರಿಣಾಮಗಳು ನಮ್ಮ ಕಣ್ಣು ಮುಂದಿರಲಿ. ಹುಟ್ಟಿದ ವಿಕಲಾಂಗ ಮಕ್ಕಳ ಚಿತ್ರಣ ನಮ್ಮ ಮನೆಯಲ್ಲಿ ಇದ್ದರೆ ಹೇಗೆ ಎಂದು ಕಣ್ಣು ತೆರೆಯಲಿ.
ಬದುಕಬೇಕು ಎಲ್ಲವನ್ನೂ ನಾಶಮಾಡಿ ಅಲ್ಲ. ಬದುಕಬೇಕು ಅನ್ಯರಿಗೆ ಅಡಿಕೆಯ ಮೂಲಕ ವಿಷವುಣಿಸಿ ಅಲ್ಲ. "ನಮ್ಮ ಅಗತ್ಯತೆಯನ್ನು ಪೂರೈಸುವ ಎಲ್ಲಾ ಸಾಮರ್ಥ್ಯ ಪ್ರಕೃತಿಗೆ ಇದೆ ಆದರೆ ನಮ್ಮ ದುರಾಸೆಯನ್ನಲ್ಲ" ಎಂಬ ಮಾತು ನೆನಪಿನಲ್ಲಿ ಇಟ್ಟುಕೊಳ್ಳೋಣ.
ಬೇಕು ಬೇಕದು ಬೇಕು ಬೇಕಿದೆ ಎನಗೆ ಇನ್ನೊಂದು '
ಬೇಕೆನುತ ಬೊಬ್ಬಿಡುತಲಿಹ ಘಟವನಿದನು'
ಏಕೆಂದು ರಚಿಸಿದನೋ ಬೊಮ್ಮನೀ ಬೇಕು ಜಪ'
ಸಾಕೆನಿಪುದು ಎಂದಿಗೆಲೋ ಮಂಕುತಿಮ್ಮ'
-ಎ.ಪಿ. ಸದಾಶಿವ . ಮರಿಕೆ.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ