|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಯುವಜನತೆಯ ಭವಿಷ್ಯಕ್ಕೆ ಮಾರಕವಾಗಿರುವ ಕ್ರೂರಿ ಕೊರೋನಾ

ಯುವಜನತೆಯ ಭವಿಷ್ಯಕ್ಕೆ ಮಾರಕವಾಗಿರುವ ಕ್ರೂರಿ ಕೊರೋನಾ


ಪ್ರಾತಿನಿಧಿಕ ಚಿತ್ರ


ಯುವಜನತೆಯ ಕನಸುಗಳನ್ನು ನುಚ್ಚುನೂರು ಮಾಡುತ್ತಿದೆ ಈ ಮಹಾಮಾರಿ ಕೊರೋನಾ. ವಿದ್ಯಾಭ್ಯಾಸದ ನಂತರ ಹಳ್ಳಿಗಳಿಂದ, ಇತರೆ ಜಿಲ್ಲೆಗಳಿಂದ ತಾವು ಬೆಂಗಳೂರು, ಮೈಸೂರು ಮುಂತಾದ ಮಹಾನಗರಗಳಿಗೆ ಉದ್ಯೋಗವನ್ನರಸಿ ಬರುವ ಯುವಪೀಳಿಗೆಗೆ ಬ್ರೇಕ್ ಹಾಕಿದೆ ಕೊರೋನಾ. ಲಾಕ್ಡೌನ್, ಸೀಲ್ಡೌನ್, ಕ್ವಾರಂಟೈನ್‌ಗಳಿಂದಾಗಿ ಯುವಪೀಳಿಗೆಯ ಭವಿಷ್ಯ ಹಾಳಾಗುತ್ತಿದೆ. ವಿದ್ಯಾಭ್ಯಾಸ ಮುಗಿದೊಡನೆ ಉದ್ಯೋಗ ಗಿಟ್ಟಿಸಿಕೊಂಡು ತಮ್ಮ ಭವಿಷ್ಯವನ್ನು ಭದ್ರಪಡಿಸಿಕೊಳ್ಳಬೇಕು ಎಂದುಕೊಂಡಿದ್ದ ಯುವಜನತೆಯ ಆಸೆಗೆ ಕೊರೋನಾ ಮಹಾಮಾರಿ ತಣ್ಣೀರೆರೆಚಿದೆ. ಈ ಸಮಸ್ಯೆಯನ್ನು ಹೆಚ್ಚು ಕಡಿಮೆ ಮುಂಬರುವ ನಾಲ್ಕೈದು ವರ್ಷಗಳವರೆಗೆ ಸಹಿಸಿಕೊಳ್ಳಲೇಬೇಕಾದ ಅನಿವಾರ್ಯತೆ ಯುವಜನತೆಗೆ ಎದುರಾಗಿದೆ.


ಈಗಾಗಲೇ ಉದ್ಯೋಗದಲ್ಲಿ ಇರುವ ಮಂದಿಗೆ 'ವರ್ಕ್ ಫ್ರಂ ಹೋಮ್' ದೊರೆಯುತ್ತದೆ. ಆದರೆ ಈಗತಾನೇ ವಿದ್ಯಾಭ್ಯಾಸ ಮುಗಿಸಿ ಉದ್ಯೋಗಕ್ಕೆ ಪ್ರಯತ್ನಿಸುತ್ತಿದ್ದವರಿಗೆ ಇನ್ನೇನು ತಮ್ಮಿಷ್ಟದ ಉದ್ಯೋಗ ದೊರೆಯುವುದು ಎಂದುಕೊಳ್ಳುವಷ್ಟರಲ್ಲಿ ಈ ಕ್ರೂರಿ ಕೊರೋನಾ ವಕ್ಕರಿಸಿ ಅವರೆಲ್ಲರ ಕನಸುಗಳಿಗೆ ಕೊಳ್ಳಿಯಿಡುತ್ತಿದೆ. ಕೊರೋನಾದ ಎರಡು, ಮೂರು ಅಲೆಗಳಿಂದಾಗಿ ರಾಜ್ಯಗಳಲ್ಲಿ ಪದೇ ಪದೇ ಲಾಕ್ಡೌನ್, ಸೀಲ್ಡೌನ್ ಸನ್ನಿವೇಶಗಳು ನಿರ್ಮಾಣವಾಗುತ್ತಿದೆ. ಹೀಗಾಗಿ ಉದ್ಯೋಗವನ್ನರಸಿ ಯುವಜನತೆ ಮಹಾನಗರಗಳಿಗೆ ಹೋಗಲು ಸಾಧ್ಯವಾಗುತ್ತಿಲ್ಲ. ಸಂದರ್ಶನಗಳು ನಡೆಯುತ್ತಿಲ್ಲ, 'ವರ್ಕ್ ಫ್ರಂ ಹೋಮ್' ಅವಕಾಶಗಳೂ ಹೆಚ್ಚಾಗಿ ದೊರೆಯುತ್ತಿಲ್ಲ.


ಇನ್ನೇನು ಕೊರೋನಾ ಕಡಿಮೆಯಾಯಿತು ಮತ್ತೊಮ್ಮೆ ಉದ್ಯೋಗಕ್ಕೆ ಪ್ರಯತ್ನಿಸೋಣವೆಂದು ಅಂದುಕೊಳ್ಳುವ ಹೊತ್ತಿಗೆ ಕೊರೋನಾದ ಮತ್ತೊಂದು ಅಲೆ ಅಪ್ಪಳಿಸಿಬಿಡುತ್ತಿದೆ. ಯುವಜನತೆಯ ಪರಿಸ್ಥಿತಿ ನಿಜಕ್ಕೂ ಶೋಚನೀಯ. ಇಂಥ ಸಮಯದಲ್ಲಿ ಯುವಜನತೆ ತಮ್ಮ ಆತ್ಮಸ್ಥೈರ್ಯವನ್ನು ಕಳೆದುಕೊಳ್ಳಬಾರದು. ತಮ್ಮಿಂದ ಉದ್ಯೋಗ ಪಡೆದುಕೊಳ್ಳಲು ಸಾಧ್ಯವಾಗುವುದೇ ಇಲ್ಲ ಎಂದು ಮನಸ್ಸನ್ನು ದುರ್ಬಲ ಮಾಡಿಕೊಳ್ಳಬಾರದು. ಕಷ್ಟಪಡದೇ ಇದ್ದರೆ ಯಾವುದೂ ಸುಲಭವಾಗಿ ದೊರೆಯುವುದಿಲ್ಲ. ಈ ಕಠಿಣ ಪರಿಸ್ಥಿತಿಯನ್ನು ಎದುರಿಸಲೇಬೇಕು. ಮನೋಬಲದಿಂದ, ತಾಳ್ಮೆಯಿಂದ ವರ್ತಿಸಬೇಕು. ಯುವಜನತೆಯ ಪಾಲಿಗೆ ಈ ಕಠಿಣ ಪರಿಸ್ಥಿತಿ ನಿಜಕ್ಕೂ ಒಂದು ಅಗ್ನಿಪರೀಕ್ಷೆಯೇ.


ಕಾಲ ನಿಂತ ನೀರಲ್ಲ, ಕತ್ತಲು ಸರಿದು ಬೆಳಕು ಮೂಡಲೇಬೇಕು. ಮಾನವನ ಶಕ್ತಿ ಅಗಾಧವಾದುದು. ಯಾವ ವೈರಸ್ಸು ಅವನೆದುರು ಬಹುಕಾಲ ಕಾಡಲು ಸಾಧ್ಯವಿಲ್ಲ. ವ್ಯಾಕ್ಸಿನ್ ಅಥವಾ ಮತ್ಯಾವುದೋ ಚಿಕಿತ್ಸಾ ಪದ್ಧತಿಯ ರಾಮಬಾಣದಿಂದ ಅದು ನಶಿಸಲೇಬೇಕು. ಈ ಪರಿಸ್ಥಿತಿಯನ್ನು ಯುವಜನತೆ ಹೆದರದೇ ಧೈರ್ಯದಿಂದ ಎದುರಿಸಬೇಕು. ಅದರ ಹೊರತಾಗಿ ಕೆಟ್ಟ ನಿರ್ಧಾರವನ್ನು ತೆಗೆದುಕೊಂಡು ಅವರನ್ನೇ ನೆಚ್ಚಿಕೊಂಡಿರುವ ಅವರ ಕುಟುಂಬಕ್ಕೆ, ಸಮಾಜಕ್ಕೆ ಸಂಕಷ್ಟವನ್ನೊಡ್ಡಿ ಅವರನ್ನು ಅಪಾಯಕ್ಕೊಡ್ಡಬಾರದು. ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದೇ ಈಗ ನಮಗೆ ಎಲ್ಲದಕ್ಕಿಂತ ಮಿಗಿಲಾದುದು. ಹೀಗಾಗಿ ಸಧ್ಯದ ಪರಿಸ್ಥಿತಿಯಲ್ಲಿ ಮನೆಯಲ್ಲಿಯೇ ಇದ್ದು ಕೊರೋನಾದಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳಲೇಬೇಕು.'ಕಾಲಾಯ ತಸ್ಮೈ ನಮಃ', ಎಲ್ಲದಕ್ಕೂ ಕಾಲವೇ ಉತ್ತರಿಸಲಿದೆ. ಈ ಕಷ್ಟದ ಕಾಲ ಕಳೆದು ಒಳ್ಳೆಯ ದಿನಗಳು ಬರುವವರೆಗೂ ಕೊರೋನಾ ವಿರುದ್ಧ ನಾವು ಹೋರಾಡುತ್ತಿರಬೇಕು.

ತಾಳಿದವನು ಬಾಳಿಯಾನು...

-ವಾಸವಿ ಸಾಗರ


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 تعليقات

إرسال تعليق

Post a Comment (0)

أحدث أقدم