ಉತ್ತಮ ಜೀವನ ಶೈಲಿಗಾಗಿ ಯೋಗ

Upayuktha
0


ಇತ್ತೀಚಿನ ದಿನಗಳಲ್ಲಿ ಯೋಗ ವಿದ್ಯೆಯನ್ನು ಅಭ್ಯಾಸ ಮಾಡುವವರ ಸಂಖ್ಯೆ ಹೆಚ್ಚುತ್ತಿದೆ. ಹೊಸತಾಗಿ ಯೋಗ ಕಲಿಯುವರ ಸಂಖ್ಯೆಯು ಹೆಚ್ಚಾಗುತ್ತಿದೆ. ಇದು ತುಂಬಾ ಹರ್ಷದಾಯಕವಾದ ವಿಷಯವಾಗಿದೆ. ಈಗಾಗಲೇ ನಮಗೆಲ್ಲಾ ತಿಳಿದಂತೆ ಯೋಗದಿಂದ ದೈಹಿಕ, ಮಾನಸಿಕ, ಸಾಮಾಜಿಕ ಹಾಗೂ ಆಧ್ಯಾತ್ಮಿಕವಾಗಿ ವಿಕಸನಗೊಳ್ಳಲು  ಸಹಕಾರಿಯಾಗುತ್ತದೆ ಮತ್ತು ಮನಸ್ಸಿಗೆ ಮುದ, ನೆಮ್ಮದಿ, ಶಾಂತಿ ದೊರಕುತ್ತದೆ. 

ಆದರೆ  ಇಲ್ಲಿ ಯಾವುದೇ ವಿದ್ಯೆಯನ್ನು ಕಲಿಯಬೇಕಾದರೆ ಆ ವಿದ್ಯೆಯ ಬಗ್ಗೆ ಸಮರ್ಪಕವಾದ ಅರಿವು, ಮಾಹಿತಿ ತಿಳಿದಿರಬೇಕು ಹಾಗೂ ಗುರು ಮುಖೇನ ಕಲಿತು ತಿಳಿದು ಅಭ್ಯಾಸ ಬೇಕು.


ಯೋಗ ವಿದ್ಯೆಯನ್ನು ಅಧಿಕೃತವಾಗಿ, ವೈಜ್ಞಾನಿಕವಾಗಿ ನಮಗೆ ದೊರಕಿರುವ  ದಾಖಲೆಗಳ ಪ್ರಕಾರ ಮಹಾಮುನಿ ಪತಂಜಲಿಯವರ ಯೋಗ ಶಾಸ್ತ್ರವೇ ಅತ್ಯಂತ ಶ್ರೇಷ್ಠವಾಗಿದೆ. ಪತಂಜಲಿ ಋಷಿಯವರು ತಮ್ಮ ಯೋಗ ಶಾಸ್ತ್ರದಲ್ಲಿ ಅಷ್ಟಾಂಗ ಯೋಗದ (ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣಾ ಧ್ಯಾನ ಮತ್ತು ಸಮಾಧಿ) ತಿಳಿಸಿರುತ್ತಾರೆ. ಇಲ್ಲಿ ಯೋಗದ ಪ್ರಥಮ ಮೆಟ್ಟಿಲು, ದ್ವಿತೀಯ ಮೆಟ್ಟಿಲುಗಳಾದ ಯಮ, ನಿಯಮದ ಬಗ್ಗೆ ಅರಿತು, ತಿಳಿದು ವ್ಯಕ್ತಿ ತನ್ನ ಜೀವನದಲ್ಲಿ ಅಳವಡಿಸಿಕೊಂಡರೆ ಮಾತ್ರ ಆಸನ ಕಲಿಯಲು ಸುಲಭವಾಗುತ್ತದೆ. ಯಮ, ನಿಯಮವನ್ನು ಪಾಲಿಸಿಯೇ ಯೋಗಾಸನಗಳನ್ನು ಕಲಿಯಬೇಕು. ಮತ್ತು ಯೋಗದ ಬಗೆಗಿನ ಮುಖ್ಯ ವ್ಯಾಖ್ಯಾನ ಮಾಹಿತಿಗಳನ್ನು ತಿಳಿದುಕೊಳ್ಳಬೇಕು. ಯೋಗ ಅಭ್ಯಾಸ ಮಾಡುವ ಮುಂಚೆ ಯೋಗದ ನಿಯಮ, ಸೂಚನೆಗಳನ್ನು ಕಲಿತು ಪ್ರಾರಂಭಿಸಬೇಕು.


ಇಂದು ಪ್ರಪಂಚದ ಎಲ್ಲಾ ಜನಾಂಗದವರನ್ನು ಯೋಗಾಸನವು ಬಲವಾಗಿ ಆಕರ್ಷಿಸುತ್ತಾ ಇದೆ. ಆಸನ ಎಂದರೆ ದೇಹದ ನಿಲುಮೆ ಆಗಿದೆ. ಇದು ಸುಖಕರವಾದ, ಸ್ಥಿರವಾದ ಶರೀರದ ವಿವಿಧ ಸ್ಥಿತಿಗಳು ಯಾ ಭಂಗಿಗಳು ಆಗಿದೆ. ಇದು ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕವಾಗಿ ಒಬ್ಬ ವ್ಯಕ್ತಿಯ ಮೇಲೆ ಪರಿಣಾಮ ಬೀರುತ್ತದೆ. ಯೋಗಾಸನದಿಂದ ಉತ್ತಮವಾದ ಆರೋಗ್ಯವನ್ನೂ ಮನಸ್ಸಿಗೆ ಶಾಂತಿ ಮತ್ತು ಆನಂದವನ್ನೂ ಪೂರ್ಣವಾಗಿ ಪಡೆಯಬಹುದು.


ಯೋಗವು ದೇಹದೊಳಗೆ ಸರಿಯಾದ ಸಮನ್ವಯ ಮತ್ತು ಸೂಕ್ಷ್ಮಬಲದ ಹಿಡಿತದಲ್ಲಿ ಸಹಾಯ ಮಡುತ್ತದೆ. ಇದು ಪರಿಪೂರ್ಣತೆ, ಶಾಂತಿ ಮತ್ತು ಎಂದೂ ಕುಂದದ ಸಂತೋಷವನ್ನು ತರುತ್ತದೆ. ಯೋಗಾಭ್ಯಾಸವು ಎಲ್ಲ ಸಮಯದಲ್ಲೂ ಒಟ್ಟಾರೆ ಸಮಾಧಾನವನ್ನು ತರುತ್ತದೆ. ಇದು ವಿಶ್ರಾಂತವಾದ ಮತ್ತು ಶಾಂತಿಯುಕ್ತ ನಿದ್ರೆಯನ್ನು ತರುವುದಲ್ಲದೆ, ಬಲ, ಚೈತನ್ಯ, ಲವಲವಿಕೆ, ದೀರ್ಘಾಯುಸ್ಸನ್ನು ಹಾಗೂ ಜನರಲ್ಲಿ ಆರೋಗ್ಯಮಟ್ಟವನ್ನೂ ಹೆಚ್ಚಿಸುತ್ತದೆ.


ಯೋಗಾಸನ ಕಲಿಯುವವರು ಕೆಲವು ಸರಳ ಸೂಚನೆಗಳನ್ನು ಪಾಲಿಸಬೇಕು.

1. ಯೋಗವನ್ನು ಆದಷ್ಟು ಖಾಲಿ ಹೊಟ್ಟೆಯಲ್ಲಿಯೇ ಮಾಡಬೇಕು.

2. ಯೋಗ್ಯ ಗುರುವಿನ ಮಾರ್ಗದರ್ಶನದಲ್ಲಿ ಯೋಗಾಸನ ಕಲಿಯಬೇಕು.

3. ಆಸನ ಮಾಡಬಯಸುವವರಲ್ಲಿ ಶಿಸ್ತು, ದೃಢನಂಬಿಕೆ ಮತ್ತು ಸತತ ಪ್ರಯತ್ನ ಇರಬೇಕು.

4. ಆಯಾಸ ಮಾಡಿಕೊಂಡು ಮಾಡಬಾರದು.

5. ಆಸನಗಳನ್ನು ಪ್ರಾಯ, ಲಿಂಗ, ಜಾತಿ, ಮತ, ಭೇದವಿಲ್ಲದೆ ಎಲ್ಲರೂ ಮಾಡಬಹುದು.

6. ಆಸನಾಭ್ಯಾಸದ ಕೊನೆಗೆ ಸ್ವಲ್ಪ ಹೊತ್ತು ಶವಾಸನದಲ್ಲಿ ಮಲಗಬೇಕು.


-‘ಯೋಗರತ್ನ’ ಶ್ರೀ ಗೋಪಾಲಕೃಷ್ಣ ದೇಲಂಪಾಡಿ

ಅಂತರರಾಷ್ಟ್ರೀಯ ಯೋಗ ತೀರ್ಪುಗಾರರು

“ಪಾರಿಜಾತ”, ಮನೆ ಸಂಖ್ಯೆ 2-72:5

ಬಿಷಪ್ ಕಂಪೌಂಡು, ಯೆಯ್ಯಾಡಿ ಪದವು

ಕೊಂಚಾಡಿ ಪೋಸ್ಟ್, ಮಂಗಳೂರು -575 008

ಫೋನ್ ನಂ.: 9448394987


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ





Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top