ಸವಿರುಚಿ: ಬಾಕಾಹು ಜಗ್ಗೂರ್
ಪಾಕ: ಲತಾ ನರೂರ್
ನೆನೆಯುತ್ತಾರೆ ಲತಾ ನರೂರ್ "ನಾಲ್ಕು ದಶಕದ ಹಿಂದೆ ನಮ್ಮ ಅಜ್ಜಿ ಅಮ್ಮ ಎಲ್ಲರೂ ಮಗೆಕಾಯಿ, ಸವತೆಕಾಯಿ ಮತ್ತು ಬಾಳೆಕಾಯಿಯ ಜೊತೆ ಅಕ್ಕಿ ಬಳಸಿ ಮಾಡುತ್ತಿದ್ದರು. ದೀಪಾವಳಿಯ ಹಬ್ಬದ ದಿನದಂತೂ ಇದು ಇದ್ದೇ ಇರುತ್ತಿತ್ತು. ಈಗ ಬಾಕಾಹು ಪ್ರಯೋಗ."
ಬೇಕಾಗುವ ಸಾಮಗ್ರಿಗಳು: ಬಾಕಾಹು (ಬಾಳೆಕಾಯಿ ಹುಡಿ / ಹಿಟ್ಟು) ಎರಡು ಲೋಟ, ಅಕ್ಕಿ ಒಂದು ಲೋಟ (ಅಥವಾ ಅಕ್ಕಿ ಹಿಟ್ಟು), ಹಸಿಮೆಣಸು ಎರಡು, ಚಿಟಿಕೆ ಇಂಗು, ಒಂದು ಚಮಚ ಜೀರಿಗೆ, ಕರಿಬೇವು ಎಸಳು 5, ಹಸಿ ಶುಂಠಿ ಚೂರು ಎರಡು ಇಂಚು ಮತ್ತು ಹೆಚ್ಚಿದ ಸವತೆಕಾಯಿ ಹೋಳು (ಅಥವಾ ಮಗೆಕಾಯಿ) ಒಂದು ಲೋಟ, ಎರಡು ಲೋಟ ನೀರು.
ಮಾಡುವ ವಿಧಾನ: ಒಂದು ತಾಸು ನೆನೆಸಿದ ಅಕ್ಕಿಯ ನೀರು ಬಸಿದು ಮಿಕ್ಸಿಗೆ ಹಾಕಿ ಅದಕ್ಕೆ ಹಸಿಮೆಣಸು, ಇಂಗು, ಸವತೆ ಹೋಳು, ಕರಿಬೇವು, ಶುಂಠಿ, ಜೀರಿಗೆ, ರುಚಿಗೆ ತಕ್ಕಷ್ಟು ಉಪ್ಪು, ಎರಡು ಲೋಟ ನೀರಲ್ಲಿ ಸ್ವಲ್ಪ ನೀರು ಎಲ್ಲ ಹಾಕಿ ನುಣ್ಣಗೆ ರುಬ್ಬಿಕೊಳ್ಳಬೇಕು. ರುಬ್ಬಿದ ಮಿಶ್ರಣಕ್ಕೆ ಮಿಕ್ಕ ನೀರು ಸೇರಿಸಿ ಕುದಿಸಬೇಕು. ಸೌಟು ಆಡಿಸುತ್ತ ಇರಿ. ಕುದಿ ಬಂದ ಮೇಲೆ ಬಾಕಾಹು ಸೇರಿಸಿ ಸರಿಯಾಗಿ ಮಿಶ್ರಣ ಮಾಡಬೇಕು. ಅದು ಗಟ್ಟಿಯಾಗಿ ರೊಟ್ಟಿ ಹಿಟ್ಟಿನ ಹದಕ್ಕೆ ಬಂದಾಗ ಇಳಿಸಿ. ತಣಿದ ಮೇಲೆ ಉಂಡೆ ಕಟ್ಟಿ, ಬಾಳೆ ಎಲೆಯ ಮೇಲೆ ಎಣ್ಣೆ ಹಚ್ಚಿ ಲಟ್ಟಿಸಿ ಕಾವಲಿ ಮೇಲೆ ಹಾಕಿ ಎರಡೂ ಕಡೆ ಸ್ವಲ್ಪ ಎಣ್ಣೆ ಹಾಕಿ ಚೆನ್ನಾಗಿ ಬೇಯಿಸಿದರೆ ಜಗ್ಗೂರ್ ರೆಡಿ.’
ಖಾರ ಜಾಸ್ತಿ ಹಾಕಿ ಹಿಟ್ಟು ರುಬ್ಬಿದರೆ ಚಟ್ನಿಯ ಅವಶ್ಯ ಇರುವುದಿಲ್ಲ. ತುಪ್ಪ ಅಥವಾ ಬೆಣ್ಣೆಯ ಜೊತೆಗೆ ಸವಿಯಿರಿ.
-ಶ್ರೀಪಡ್ರೆ, ಅಡಿಕೆ ಪತ್ರಿಕೆ ಸಂಪಾದಕರು
Key words: Banana Flour, Banana Powder, Bakahu, ಬಾಕಾಹು, ಬಾಳೆಕಾಯಿ ಹುಡಿ, ಬಾಕಾಹು ಆಂದೋಲನ, ಬಾಕಾಹು ರೊಟ್ಟಿ