ಆ.22-ವಿಶ್ವ ಸಂಸ್ಕೃತ ದಿನ: ಜಗತ್ತಿಗೆ ವಿಜ್ಞಾನದ ದಿಶೆ ತೋರಿದ ಸಂಸ್ಕೃತ ಜ್ಞಾನಿಗಳು

Upayuktha
1

ಸಂಸ್ಕೃತ ಭಾಷೆಯು ತನ್ನದೇ ಆದ ಕೊಡುಗೆಗಳನ್ನು ಇಡೀ ವಿಶ್ವಕ್ಕೆ ನೀಡುತ್ತಾ ಬಂದಿದೆ. ಅನೇಕ ಸಂಸ್ಕೃತಜ್ಞರ ಸಾಧನೆಗಳು ಇಂದು ವಿಶ್ವ ಮಟ್ಟದಲ್ಲಿ ಸ್ಥಾನಗಳಿಸಿವೆ. ಸಾಹಿತ್ಯ, ತತ್ತ್ವಶಾಸ್ತ್ರ, ವಿಜ್ಞಾನ, ತಂತ್ರಜ್ಞಾನ ಇತ್ಯಾದಿಗಳಲ್ಲಿ ನಮ್ಮ ಸಂಸ್ಕೃತಜ್ಞರ ಕೊಡುಗೆ ಅಪಾರ. ಪ್ರಾಚೀನ ವಿಜ್ಞಾನ ಕೃತಿಗಳು ಆಧುನಿಕ ವಿಜ್ಞಾನಗಳಿಗೆ ಮೂಲ ಆಕಾರಗಳಾಗಿವೆ.


ಸಂಸ್ಕೃತ ಭಾಷೆ ಕೇವಲ ಹಿಂದೂ ಧರ್ಮದ ಧರ್ಮಗ್ರಂಥಗಳಿಗೆ ಸೀಮಿತವೆಂದು ಅನೇಕರು ತಿಳಿದಂತಿದೆ. ಆದರೆ ಅನೇಕ ಸಂಸ್ಕೃತ ಗ್ರಂಥಗಳು ಆಧುನಿಕ ವಿಜ್ಞಾನಕ್ಕೆ ಪ್ರೇರಕ ಹಾಗೂ ಪೋಷಕ.ಅಪಾರ ಶಬ್ದ ಸಂಪತ್ತು ಹೊಂದಿರುವ ಸಂಸ್ಕೃತ ಭಾಷೆಯು ಕಂಪ್ಯೂಟರ್ ಸಾಫ್ಟವೇರ್ ಗೆ ಸೂಕ್ತ ಎಂಬುದಾಗಿ ಅಮೇರಿಕದ ಖ್ಯಾತ ಪತ್ರಿಕೆ ಫೋರ್ಬ್ಸ್ 1978 ರಲ್ಲಿಯೇ ಹೇಳಿತ್ತು. ಇದಕ್ಕೆ ಪುಷ್ಟಿಕೊಡುವಂತೆ ಈಗ ಸಂಸ್ಕೃತವು ಕಂಪ್ಯೂಟರ್ ಗೆ ಸೂಕ್ತ ಭಾಷೆ ಎಂಬುದಾಗಿ ಸಾಬೀತಾಗುತ್ತಿದೆ. ಇದಕ್ಕೆ ಈಗ ಅನೇಕ ವಿಜ್ಞಾನಿಗಳು ಕಾರ್ಯಗತರಾಗಿದ್ದಾರೆ. ಬಾಹ್ಯಾಕಾಶ ಸಂಸ್ಥೆ ನಾಸಾವು ಸಹ ಸಂಸ್ಕೃತಾಧ್ಯಯನ ಮಾಡಲು ಒಂದು ವಿಭಾಗವನ್ನೇ ಆರಂಭಿಸಿದೆಯಂತೆ. ವಿಶ್ವದ ಬಹುತೇಕ ಚಿಂತಕರು, ವಿಜ್ಞಾನಿಗಳು ಸಂಸ್ಕೃತ ಭಾಷೆಯ ಪ್ರಭಾವಕ್ಕೆ ಒಳಪಟ್ಟಿದ್ದಾರೆ. ಆಲ್ಬರ್ಟ್ ಐನ್ಸ್ಟೈನ್ ಅವರು ಸಂಸ್ಕ್ರತ ಭಾಷೆಯನ್ನು ಹೆಚ್ಚಾಗಿ ಮೆಚ್ಚಿರುವರು. ಖ್ಯಾತ ವಿಜ್ಞಾನಿ ಒಪ್ಪನ್ ಹೀರ್ ಭಗವದ್ಗೀತೆಯ ದೊಡ್ಡ ಅಭಿಮಾನಿಯಾಗಿದ್ದಾರಂತೆ.  


ಪ್ರಾಚೀನ ಸಂಸ್ಕೃತಜ್ಞರು ಇಂದಿನ ಅನೇಕ ವಿಜ್ಞಾನ ಹೇಳುವ ವಿಷಯಗಳನ್ನು ಯಾವುದೇ ಕೃತಕ ಉಪಕರಣಗಳನ್ನು ಉಪಯೋಗಿಸದೆ ಇಲ್ಲಿನ ಹಾಗೂ ಬೇರೆ ಗ್ರಹಗಳ ಬಗ್ಗೆ ಅಧ್ಯಯನ ಮಾಡಿದ್ದಾರೆಂದರೆ ಆ ಕಾಲದ ಸಂಸ್ಕೃತಜ್ಞರ ಜ್ಞಾನ ಎಂತದ್ದೆಂದು ಊಹಿಸಬಹುದು. ಇಂದು ಆಧುನಿಕ ವಿಜ್ಞಾನಿಗಳು ಹೇಳುತ್ತಿರುವ ಚಂದ್ರನಲ್ಲಿ ನೀರಿದೆ ಎಂಬ ವಿಚಾರವು ಋಗ್ವೇದದಲ್ಲಿಯೇ ಉಲ್ಲೇಖಿಸಲಾಗಿದೆ. ಹಾಗೆಯೇ ವೇದಗಳಲ್ಲಿ ಬೆಳಕಿನ ವೇಗ, ಸೂರ್ಯನ ಬೆಳಕು ಏಳು ಬಣ್ಣಗಳಿಂದ ಕೂಡಿದೆ ಎಂಬ ವಿಚಾರ, ಪ್ರನಾಳ ಶಿಶು, ಸೂರ್ಯನ ಸುತ್ತ ಗ್ರಹಗಳು ಸುತ್ತುತ್ತವೆ, ಪರಮಾಣುವಿನ ಗಾತ್ರದ ವಿಚಾರ, ಕೃತಕ ಮಳೆ ಹೀಗೆ ಅನೇಕ ವಿಜ್ಞಾನ ವಿಷಯಗಳನ್ನು ನೋಡಬಹುದು.  

 

ಆರ್ಯಭಟನ ಆರ್ಯಭಟಿಯಮ್ ಗ್ರಂಥದಲ್ಲಿ ಗ್ರಹಣ ವಿಚಾರ, ಭೂಮಿ ಕದಂಬ ಹೂವಿನಂತೆ ದುಂಡಗಿದೆ ಎಂಬ ವಿಚಾರ, ಭೂಮಿಯ ಪರಿಭ್ರಮಣೆ, ಶ್ರೇಢಿ ಹಾಗೂ ಶ್ರೇಣಿಗಳು, ತ್ರಿಕೋಣದ ಕ್ಷೇತ್ರಫಲ ಇತ್ಯಾದಿ ವಿಚಾರಗಳನ್ನು ಹೇಳಲಾಗಿದೆ. ರಸಾರ್ಣವ ಪಾಟಲ ಗ್ರಂಥದಲ್ಲಿ ಅಯಸ್ಕಾಂತ ವಿಚಾರ ಹಾಗೂ ಬೆಳಕಿನ ಜ್ವಾಲೆಯ ಬಣ್ಣಗಳ ವಿಷಯ ಚರ್ಚಿಸಲಾಗಿದೆ.


ಅಗಸ್ತ್ಯ ಸಂಹಿತೆಯಲ್ಲಿ ವಿದ್ಯುತ್ ಬಗ್ಗೆ, ವಿದ್ಯುತ್ ಕೋಶದ ಬಗ್ಗೆ ವಿವರಿಸಲಾಗಿದೆ. ನ್ಯಾಯದರ್ಶನದಲ್ಲಿ ಪರಮಾಣು ಹಾಗೂ ಮಸೂರದ ಬಗ್ಗೆ ತಿಳಿಸಲಾಗಿದೆ. ವೈಮಾನಿಕ ಶಾಸ್ತ್ರಮ್ ಗ್ರಂಥದಲ್ಲಿ ವಿಮಾನಗಳ ರಚನಾ ವಿಷಯ ವಿವರಿಸಲಾಗಿದೆ, ಕ್ರಿಯಾಸಾರ ತಂತ್ರಮ್ ಗ್ರಂಥದಲ್ಲಿ ಧೂಮಕೇತು ವಿಚಾರವಿದೆ. ವೈಶೇಷಿಕ ದರ್ಶನಂ ನಲ್ಲಿ ಚಲನೆಯ ನಿಯಮಗಳು, ಯುಕ್ತಿಕಲ್ಪತರು ಗ್ರಂಥದಲ್ಲಿ ಹಡಗುಗಳ ರಚನಾ ವಿಧಾನ, ರಸರತ್ನ ಸಮುಚ್ಛಯದಲ್ಲಿ ಲೋಹಶಾಸ್ತ್ರದ ಬಗ್ಗೆ ವಿವರಣೆ ಸಿಗುತ್ತವೆ.  


ಆಚಾರ್ಯ ಭೌಧಾಯನನು ಪೈ ಬೆಲೆ ಹಾಗೂ ತ್ರಿಕೋಣದ ಬಗ್ಗೆ ನಿಖರವಾಗಿ ಹೇಳಿದ್ದಾನೆ. ದ್ವಿತೀಯ ಭಾಸ್ಕರಾಚಾರ್ಯನು ಭಾವನಾ ತತ್ತ್ವ, ಸೂರ್ಯನ ಪರಿಭ್ರಮಣೆ, ಗುರುತ್ವಾಕರ್ಷಣ ಸಿದ್ಧಾಂತಗಳನ್ನು ಹೇಳಿದ್ದಾನೆ. ಬ್ರಹ್ಮಗುಪ್ತನು ಬ್ರಹ್ಮಸ್ಪುಟ ಸಿದ್ಧಾಂತ ಗ್ರಂಥದಲ್ಲಿ ಕರ್ಣ ಪ್ರಮೇಯ, ಚಕ್ರೀಯ ಚತುರ್ಭುಜ ಸಿದ್ಧಾಂತ ಮಂಡಿಸಲಾಗಿದೆ. ಮಹಾವೀರಾಚಾರ್ಯನು ಆಯಾಟದ ರಚನೆ, ಸಮದ್ವಿಭುಜ ತ್ರಿಭುಜ ಯುಗ್ಮಗಳ ಬಗ್ಗೆ , ಚಲಕಲನಗಳ ಬಗ್ಗೆ ನಿಖರವಾಗಿ ಹೇಳಿದ್ದಾನೆ. 


ಆಯುರ್ವೇದದಲ್ಲಿ ಸಂಸ್ಕೃತಜ್ಞರು ವಿಶೇಷವಾಗಿ ಸಾಧನೆ ಮಾಡಿ ವೈದ್ಯಕೀಯ ಇತಿಹಾಸದಲ್ಲಿಯೇ ಭಾಷ್ಯ ಬರೆದಿದ್ದಾರೆ. ಇವರಲ್ಲಿ ಮುಖ್ಯವಾಗಿ ಚರಕ, ಸುಶ್ರುತ ಹಾಗೂ ವಾಗ್ಭಟರು ಪ್ರಸಿದ್ಧರಾದವರು. ಚರಕನು ತನ್ನ ಚರಕ ಸಂಹಿತೆಯಲ್ಲಿ ಭ್ರೂಣಶಾಸ್ತ್ರ, ಸಸ್ಯಗಳು ಬೆಳಕಿಗೆ ಪ್ರತಿಕ್ರಿಯಿಸುತ್ತವೆ ಎಂಬ ವಿಚಾರ, ಪ್ರಸೂತಿ ವಿಜ್ಞಾನ ಇತ್ಯಾದಿಗಳ ಬಗ CG್ಗೆ ನಿಖರವಾಗಿ ಹೇಳಿದ್ದಾನೆ. ಸುಶ್ರುತನು ತನ್ನ ಸುಶ್ರುತ ಸಂಹಿತೆಯಲ್ಲಿ ಶಸ್ತ್ರಚಿಕಿತ್ಸೆ, ಶಸ್ತ್ರಚಿಕಿತ್ಸೆಯ ಉಪಕರಣಗಳು, ಶವಚ್ಛೇದನ, ಹೃದ್ರೋಗ ಚಿಕಿತ್ಸೆ, ಮಾನವ ಶರೀರ ಶಾಸ್ತ್ರದ ವಿವರಣೆಯನ್ನು ಮಾಡಿ ಇಡೀ ವೈದ್ಯ ಲೋಕಕ್ಕೆ ದೊಡ್ಡ ಕಾಣಿಕೆ ನೀಡಿದ್ದಾನೆ.


ಮಹಾಭಾರತದಲ್ಲಿ ಸಸ್ಯಗಳು ಬೇರುಗಳಿಂದ ನೀರು ಹೀರುತ್ತವೆ ಎನ್ನುವ ಅಂಶ, ದ್ಯುತಿ ಸಂಶ್ಲೇಷಣೆ, ಸುಗಂಧ ದ್ರವ್ಯ ತಯಾರಿಕೆ ಇತ್ಯಾದಿ ವಿಚಾರಗಳನ್ನು ಹೇಳಲಾಗಿದೆ. ಇನ್ನು ಕೌಟಿಲ್ಯನ ಅರ್ಥಶಾಸ್ತ್ರ, ಶುಲ್ಬಸೂತ್ರ, ವೃಕ್ಷಾಯುರ್ವೇದ, ಕಿರಣಾವಲಿ, ಕ್ರಿಯಾಸಾರತಂತ ಮುಂತಾದ ಅನೇಕ ಗ್ರಂಥಗಳು ಪ್ರಾಚೀನ ವಿಜ್ಞಾನ ವಿಭಾಗದ ಗಣಿಗಳು. 

ಒಟ್ಟಾರೆ ಎಲ್ಲ ವಿಜ್ಞಾನ ಶಾಖೆಗಳಿಗೆ ಮೂಲವಾಗಿ ಈಗಿನ ವಿಜ್ಞಾನ ಲೋಕಕ್ಕೆ ಅಪಾರ ಕೊಡುಗೆ ನೀಡಿದ ಸಂಸ್ಕೃತಜ್ಞರ ಕೊಡುಗೆ ಅಮೋಘವೇ ಸರಿ.


-ಡಾ. ಪ್ರಸನ್ನಕುಮಾರ್ ಐತಾಳ್

ಸಂಸ್ಕೃತ ಪ್ರಾಧ್ಯಾಪಕ

ಎಸ್.ಡಿ.ಎಮ್ ಕಾಲೇಜು

ಉಜಿರೆ.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ



Post a Comment

1 Comments
  1. ಮಾಹಿತಿಪೂರ್ಣವಾದ ಲೇಖನ. 🙏🙏

    ReplyDelete
Post a Comment
Maruti Suzuki Festival of Colours
Maruti Suzuki Festival of Colours
To Top