ಪಿ. ಗೋಪಾಲಕೃಷ್ಣಯ್ಯ ಮತ್ತು ಪುಷ್ಪಾವತಿ ದಂಪತಿಗಳ ಪುತ್ರರಾದ 12.02.1972 ರಲ್ಲಿ ಜನಿಸಿದ ಜಗನ್ನಿವಾಸರು ಸಿವಿಲ್ ಇಂಜಿನಿಯರಿಂಗ್ ನಲ್ಲಿ ಡಿಪ್ಲೊಮಾ ಪಡೆದು ಸಿವಿಲ್ ಇಂಜಿನಿಯರ್ ಆಗಿ ವೃತ್ತಿ ಆರಿಸಿಕೊಂಡವರು. ಅಲ್ಲದೆ ಮಂಗಳೂರು ವಿಶ್ವವಿದ್ಯಾಲಯದಲ್ಲಿ ವೇದತಂತ್ರಾಗಮದ ಡಿಪ್ಲೊಮಾ ಮತ್ತು ಮೈಸೂರು ಮಹರಾಜ ಸಂಸ್ಕೃತ ಕಾಲೇಜಿನಲ್ಲಿ ವಾತುಲ ಆಗಮ ಪದವಿಯನ್ನು ಪಡೆದಿದ್ದಾರೆ.
ಯಕ್ಷಗಾನ ಪರಂಪರೆಯ ಮನೆತನ ಇವರದ್ದು. ಇದರಿಂದಾಗಿ ಚಂಡೆ ಮದ್ದಳೆ ವಾದನದಲ್ಲಿ ವಿಶೇಷ ಆಸಕ್ತಿ ಬೆಳೆತು ಕಲಿಯುವುದಕ್ಕೆ ಪ್ರೇರಣೆಯಾಯಿತು. ತಂದೆ ಮೂಲತಃ ಕೂಡ್ಲಿನವರು. ಯಕ್ಷಗಾನ ಹಿಮ್ಮೇಳ ವಾದನದ ಜೊತೆಗೆ ಅದನ್ನು ಸಿದ್ಧಪಡಿಸುವುದರಲ್ಲೂ ನಿಪುಣರಾಗಿದ್ದವರು. ಕುದ್ರೆಕೋಡ್ಲು ರಾಮ ಭಟ್ಟರು ಮತ್ತು ತಂದೆಯವರ ಪರಿಕಲ್ಪನೆಯಲ್ಲಿ ತೆಂಕುತಿಟ್ಟು ಚಂಡೆ ಪ್ರಥಮ ಬಾರಿಗೆ ಶ್ರುತಿ ಮಾಧ್ಯಮಕ್ಕೆ ಹೊಂದಿಕೆಯಾಯಿತು. ಅಣ್ಣಂದಿರಾದ ದಿ. ಟಿ.ಪಿ ಶ್ರೀಧರ ರಾವ್, ದಿ. ವಾಸುದೇವ ರಾವ್, ಪಿ. ವೆಂಕಟರಮಣ ಹಿಮ್ಮೇಳ ಕಲಾವಿದರಾಗಿದ್ದರು.
ಹಿಮ್ಮೇಳ ಗುರುಗಳಾದ ಶ್ರೀ ಕೆ ಮೋಹನ ಬೈಪಡಿತ್ತಾಯರಿಂದ ಹಿಮ್ಮೇಳ ವಾದನವನ್ನು ಅಭ್ಯಸಿಸಿದರು. ಆರಂಭದಲ್ಲಿ ಪುತ್ತೂರಿನ ಆಂಜನೇಯ ಯಕ್ಷಗಾನ ಕಲಾ ಸಂಘ,ಬೆಳ್ಳಾರೆ ಸೂರ್ಯನಾರಾಯಣ ಭಟ್ಟರ ವಾಣೀ ಗಣೇಶ ಕಲಾವೃಂದ, ಕೀರ್ತಿಶೇಷ ಪುತ್ತೂರು ಶೀನಪ್ಪ ಭಂಡಾರಿಗಳು ಮುಂತಾದವರು ಚೆಂಡೆ ಮದ್ಸಲೆ ನುಡಿಸುವ ಅವಕಾಶ ನೀಡಿ ಬೆಳೆಸಿದರು. ಪದ್ಯಾಣ ಗಣಪತಿ ಭಟ್, ಪದ್ಯಾಣ ಶಂಕರನಾರಾಯಣ ಭಟ್, ಲಕ್ಷ್ಮೀಶ ಅಮ್ಮಣ್ಣಾಯ, ಪದ್ಮನಾಭ ಉಪಾಧ್ಯಾಯ, ಕೇಶವ ಬೈಪಡಿತ್ತಾಯ, ಮುರಳೀಧರ ಬೈಪಡಿತ್ತಾಯ, ಪುತ್ತೂರು ವಾಸುದೇವ ರಾಯರು, ಕುಮಾರ ಸುಬ್ರಹ್ಮಣ್ಯ ಭಟ್, ಅಡೂರು ಗಣೇಶ ರಾವ್, ಪಿ.ಟಿ ಜಯರಾಮ ಭಟ್, ಪದ್ಯಾಣ ಕೇಶವ ಭಟ್, ದಂಬೆ ಈಶ್ವರ ಶಾಸ್ತ್ರಿ, ವೆಂಕಟೇಶ ಉಳ್ಳಿತ್ತಾಯ, ಗಂಗಾಧರ ಬೆಳ್ಳಾರೆ, ಕೃಷ್ಣ ನಾಯಕ್, ಅಡೂರು ಸುಂದರ ರಾವ್ ಹೀಗೆ ಹಲವು ಮಹನೀಯರು ಇವರನ್ನು ತಿದ್ದಿ ತೀಡಿ ಉತ್ತಮ ಕಲಾವಿದನಾಗಿ ಬೆಳೆಯುವಲ್ಲಿ ಪ್ರೋತ್ಸಾಹಿಸಿದವರು. 1991 ರಲ್ಲಿ ಹಿಮ್ಮೇಳ ವಾದಕರಾಗಿ ರಂಗವನ್ನೇರಿದ ಶ್ರೀಯುತರು ಮೂವತ್ತು ವರ್ಷಗಳ ಅನುಭವ ಹೊಂದಿದ್ದಾರೆ. ಖ್ಯಾತ ಹಿರಿಯ ಭಾಗವತರ ಹಾಡುಗಳಿಗೆ ಚಂಡೆ ಮದ್ದಳೆ ನುಡಿಸಿದ್ದಾರೆ.
ಬೇರೆ ಬೇರೆ ತಂಡಗಳಲ್ಲಿ ಸದಸ್ಯರಾಗಿ ಕರ್ನಾಟಕದ ಅನೇಕ ಕಡೆಗಳಲ್ಲಿ, ಕೇರಳ ರಾಜ್ಯದ ವಿವಿಧೆಡೆ, ಚೆನ್ನೈ, ದೆಹಲಿ, ಕೊಲ್ಕತ್ತ ಮುಂತಾದ ಕಡೆಗಳಲ್ಲಿ ಪ್ರದರ್ಶನದಲ್ಲಿ ಭಾಗವಹಿಸಿದ್ದು ಮಾತ್ರವಲ್ಲದೆ ಹಲವು ಮೇಳಗಳಲ್ಲಿ ಹಿಮ್ಮೇಳ ಕಲಾವಿದರ ರಜಾದಿನದಲ್ಲಿ ವಾದಕರಾಗಿ ಭಾಗವಹಿಸಿದ್ದಾರೆ. .ಆಸಕ್ತರಿಗೆ ಚಂಡೆ ಮದ್ದಳೆ ತರಬೇತಿಯನ್ನು ನೀಡಿದ್ದಾರೆ.
ಜಗನ್ನಿವಾಸರು ಕಲಾ ಪೋಷಕರು. ಕಲಾ ಪ್ರಪಂಚದಲ್ಲಿ ತಾನು ಬೆಳೆದು ಕಲೆಯನ್ನು ಬೆಳೆಸುವ ಮನವನ್ನು ಹೊಂದಿದವರು. ತಮ್ಮ ಮನೆಯಲ್ಲಿ ಪ್ರತಿ ವರ್ಷ ತಂದೆಯವರಾದ ಗೋಪಾಲಕೃಷ್ಣಯ್ಯ ನವರ ನೆನಪಿನಲ್ಲಿ ಅವರ ತಿಥಿಯ ದಿನ ಆತ್ಮೀಯ ಯಕ್ಷ ಮಿತ್ರರ ತಾಳಮದ್ದಳೆ ನಡೆಸುವುದಲ್ಲದೆ ಪ್ರತಿ ವರ್ಷ ಓರ್ವ ಹಿರಿಯ ಕಲಾವಿದರನ್ನು ಗೌರವಿಸುತ್ತಾರೆ. ಪುತ್ತೂರಿನಲ್ಲಿ ಹಲವು ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮಗಳನ್ನು ಸಂಯೋಜಿಸಿದ್ದಾರೆ. ಪ್ರಾಯೋಜಕರು, ಕಲಾವಿದರ ಸಹಕಾರದಿಂದ ಯಕ್ಷಗಾನ ತಾಳಮದ್ದಳೆ ಸಪ್ತಾಹ, ತಾಳಮದ್ದಳೆ ಸ್ಪರ್ಧೆ ಮುಂತಾದ ಕಾರ್ಯಕ್ರಮಗಳನ್ನು ನಡೆಸಲು ಸಹಕಾರಿಯಾಗಿದ್ದಾರೆ. ಒಡನಾಡಿಗಳಾದ ಪುತ್ತೂರು ರಮೇಶ್ ಭಟ್,ನಾ ಕಾರಂತ ಪೆರಾಜೆ,ರಮಾನಂದ ನೆಲ್ಲಿತ್ತಾಯರ ಜೊತೆಗೂಡಿ "ಯಕ್ಷಕೂಟ ಪುತ್ತೂರು" ರೂಪಿಸುವಲ್ಲಿ ಪ್ರಧಾನ ಪಾತ್ರ ವಹಿಸಿದ್ದಾರೆ.
ಯಕ್ಷಗಾನ ಕಾಲಕ್ಕೆ ತಕ್ಕಂತೆ ಬದಲಾಗಿದೆ. ಯಕ್ಷಗಾನೀಯತೆಯ ಸೊಗಡನ್ನು ಬಿಟ್ಟ ಹಿಮ್ಮೇಳ-ಮುಮ್ಮೇಳ ಯಕ್ಷಗಾನದ ಬೆಳವಣಿಗೆಗೆ ಮಾರಕ. ಪ್ರೇಕ್ಷಕರು ತಮ್ಮ ನೆಚ್ಚಿನ ಕಲಾವಿದನನ್ನು ಕುರುಡು ಅಭಿಮಾನದಿಂದ ಬೆಂಬಲಿಸದೆ, ಯಕ್ಷಗಾನೀಯವಾಗಿ ಉತ್ತಮವಾಗಿ ಪ್ರತಿಭೆಯನ್ನು ತೋರ್ಪಡಿಸುವ ಎಲ್ಲರನ್ನೂ ಪ್ರೋತ್ಸಾಹಿಸಿದರೆ ಕಲೆ ಶ್ರೀಮಂತವಾಗಬಹುದು ಎನ್ನುವುದು ಇವರ ಮನದಭಿಮತ.
ರಾಷ್ಟ್ರೀಯ ಸ್ವಯಂ ಸೇವಕ ಸಂಘದಲ್ಲಿ 40 ವರ್ಷಗಳಿಂದ ಸ್ವಯಂ ಸೇವಕ. ರಾಜಕೀಯ ಕ್ಷೇತ್ರದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ನಿಸ್ವಾರ್ಥದಿಂದ ಸಮಾಜ ಸೇವೆ ಮಾಡುವ ಉದ್ದೇಶ ಹೊಂದಿ ಭಾರತೀಯ ಜನತಾ ಪಕ್ಷದಲ್ಲಿ ಸಕ್ರಿಯವಾಗಿದ್ದಾರೆ. ರಾಜಕೀಯ ಕ್ಷೇತ್ರದಲ್ಲಿ ತಾಳ್ಮೆ, ಸಹನೆ, ಧೈರ್ಯ, ತ್ಯಾಗ ಮನೋಭಾವ ಅಗತ್ಯ ಎನ್ನುವ ಇವರು ಭಾಜಪಾ ಪಕ್ಷದ ಪುತ್ತೂರು ನಗರ ಮಂಡಲದ ಅಧ್ಯಕ್ಷರಾಗಿ, ಪುತ್ತೂರು ನಗರ ಸಭಾ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅಟಲ್ ಬಿಹಾರಿ ವಾಜಪೇಯಿ ಮತ್ತು ನರೇಂದ್ರ ಮೋದಿ ಆದರ್ಶ ವ್ಯಕ್ತಿಗಳು.
ತಬಲಾ- ಹಾರ್ಮೋನಿಯಂ ನುಡಿಸುವುದು, ಸಿಹಿ ತಿಂಡಿ ತಯಾರಿಸುವುದು, ಈಜು, ಹೂ ಹಾರ ರಚನೆ, ಡ್ರಾಯಿಂಗ್, ವಿಪತ್ತು ನಿರ್ವಹಣೆ ಇತ್ಯಾದಿ ಇವರ ಇತರ ಹವ್ಯಾಸಗಳು.
ಇವರ ಸೇವೆಯನ್ನು ಗುರುತಿಸಿ ದೇವಸ್ಥಾನಗಳ ಆಡಳಿತ ಮಂಡಳಿ, ರೋಟರಿ ಕ್ಲಬ್ ಮುಂತಾದ ಸಂಸ್ಥೆಗಳು, ಕಲಿತ ವಿದ್ಯಾ ಸಂಸ್ಥೆಗಳು, ಯಕ್ಷಗಾನ ಸಂಯೋಜಕರು ಸನ್ಮಾನಿಸಿ ಗೌರವಿಸಿದ್ದಾರೆ.
ತನ್ನ ವೃತ್ತಿ, ಕಲೆ, ಸೇವಾ ಚಟುವಟಿಕೆಗಳಿಗೆ ಸದಾ ಬೆಂಬಲ ನೀಡುವ ವೃತ್ತಿಯಲ್ಲಿ ಶಿಕ್ಷಕಿಯಾಗಿರುವ ಪತ್ನಿ ಶ್ರೀವಿದ್ಯಾ, ಮಗಳು ವೈಷ್ಣವಿ .ಜೆ ರಾವ್, ಮಗ ಶ್ರೀಕೃಷ್ಣ ಜೆ.ರಾವ್ ರೊಂದಿಗೆ ಅಗ್ರಹಾರ, ಬಪ್ಪಳಿಗೆ,ಪುತ್ತೂರಿನಲ್ಲಿ ವಾಸವಾಗಿದ್ದಾರೆ.
ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.
-ಶ್ರವಣ್ ಕಾರಂತ್ ಕೆ
ಸುಪ್ರಭಾತ
ಶಕ್ತಿನಗರ ಮಂಗಳೂರು.
+91 8971275651
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ