ಯಕ್ಷಗಾನ ವಿಶ್ವಗಾನ- ಉಗಮದಿಂದ ಇಂದಿನ ವರೆಗೆ

Upayuktha
0


 

ಮನರಂಜನೆಯ ಮೂಲಕ ಮನೋವಿಕಾಸಕ್ಕೆ ಕಾರಣವಾಗುವ ಒಂದು ಸಂಪೂರ್ಣ ಕಲೆ ಯಕ್ಷಗಾನ. ತುಳುನಾಡು ಎಂದಾಗ ಎಲ್ಲರ ಮನಸಿಗೆ ತಟ್ಟನೆ ಹೊಳೆಯುವ ವಿಚಾರಗಳಲ್ಲಿ ಯಕ್ಷಗಾನವೂ ಒಂದು.


ಯಕ್ಷಗಾನ ಉಗಮ:-

ಯಕ್ಷಗಾನದ ಮೊದಲ ಉಲ್ಲೇಖ ಶಾರ್ಣದೇವನ "ಸ೦ಗೀತ ರತ್ನಾಕರ"ದಲ್ಲಿ (1200 ಕ್ರಿಶ) "ಜಕ್ಕ" ಎಂದು ಆಗಿದ್ದು ಮುಂದೆ "ಯಕ್ಕಲಗಾನ" ಎಂದು ಕರೆಯಲ್ಪಟ್ಟಿತ್ತು ಎ೦ಬುದು ಒಂದು ಅಭಿಪ್ರಾಯ. ಕ್ರಿಶ 1500ರ ವೇಳೆಗೆ ವ್ಯವಸ್ತಿತವಾಗಿ ಯಕ್ಷಗಾನ ರೂಢಿಯಲ್ಲಿತ್ತು ಎ೦ಬುದು ಬಹಳ ವಿದ್ವಾ೦ಸರು ಒಪ್ಪುವ ವಿಚಾರ. ಜಾಗತಿಕ ರಂಗಭೂಮಿಯನ್ನು ಅವಲೋಕಿಸಿದರೆ ಇಷ್ಟು ಸುದೀರ್ಘ ಕಾಲದಲತ್ತಾ ಬಂದಿರುವ ಕಲೆಗಳಾದ ಕಥಕಳಿ, ಮೋಹನಿ ಅಷ್ಟಂ, ಸದೀರ್ ನೃತ್ಯ, ಷೇಕ್ಸ್ ಫಿಯರ್ ನಾಟಕಗಳಂತೆ ಯಕ್ಷಗಾನವೂ ಒಂದು. ಶುದ್ಧ ಕನ್ನಡದ ಉಳಿವಿಗೆ ಯಕ್ಷಗಾನದ ಕೊಡುಗೆ ಅಪಾರ. ಇದು ಸಮಾಜದಲ್ಲಿ

ಇದು ಸಮಾಜದಲ್ಲಿ‌ ಪೌರಾಣಿಕ ‌ಪ್ರಜ್ಙೆ ಮೂಡಿಸಿದ ಕಲೆ. ಯಕ್ಷಗಾನದ ಮೇಲೆ ದಾಸ ಪಂಥದ ಪ್ರಭಾವವೂ ಗಮನಾರ್ಹ. ಇದನ್ನು ಯಕ್ಷಗಾನದ ಪ್ರಸಂಗ ಸಾಹಿತ್ಯದಲ್ಲಿ ಕಾಣಬಹುದು.


ಯಕ್ಷಗಾನ- ನೃತ್ಯ, ಹಾಡುಗಾರಿಕೆ, ಮಾತುಗಾರಿಕೆ, ವೇಷ ಭೂಷಣಗಳನ್ನೊಳಗೊಂಡ ಒಂದು ಸ್ವತಂತ್ರವಾದ ಶಾಸ್ತ್ರೀಯ ಕಲೆ. ಯಕ್ಷಗಾನವು ಕರ್ನಾಟಕದ ಸಾಂಪ್ರದಾಯಿಕ ಕಲಾ ಪ್ರಕಾರಗಳಲ್ಲಿ ಅತ್ಯಂತ ಪ್ರಮುಖವಾದದ್ದು. ಕರ್ನಾಟಕದ ಕರಾವಳಿ ಜಿಲ್ಲೆಗಳು (ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ಉಡುಪಿ), ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಕೇರಳದ ಕಾಸರಗೋಡು ಜಿಲ್ಲೆಗಳಲ್ಲಿ ಯಕ್ಷಗಾನವು ಮನೆ ಮಾತಾಗಿದೆ.ಯಕ್ಷಗಾನ ದಲ್ಲಿರುವ ಗಾಯನ, ವಾದನ, ನರ್ತನ, ಸಂಭಾಷಣಾ, ವೇಷಭೂಷಣ ಎಂಬ ಪಂಚ ಅಂಗಗಳೂ‌‌‌ ವಿಭಿನ್ನ.


ಯಕ್ಷಗಾನದ ಪ್ರಮುಖ ಅಂಶಗಳು:-

ಯಕ್ಷಗಾನದಲ್ಲಿ ಈ ಕೆಳಗಿನ ಪ್ರಮುಖ ಅಂಶಗಳನ್ನು ಕಾಣಬಹುದು.

ರಂಗಸ್ಥಳ:-

ಇದು ಯಕ್ಷಗಾನದ‌ ವೇದಿಕೆ. ಚೌಕಿಯಲ್ಲಿ‌ ಸಿದ್ದವಾದ ವೇಷಗಳು ಪ್ರಸಂಗದ ಮೂಲಕ  ಯಕ್ಷ ಲೋಕವನ್ನು ಧರೆಗಿಳಿಸುವ ಪವಿತ್ರ ಸ್ಥಳ. ಹಿಮ್ಮೇಳ ಹಾಗೂ ಮುಮ್ಮೇಳದ ಕಲಾಭಿವ್ಯಕ್ತಿಗೆ ಈ ಸ್ಥಳ ಆಶ್ರಯ ಭೂಮಿಯಾಗಿದೆ.


ಚೌಕಿ:-

ಇದು ಯಕ್ಷಗಾನದ ಬಣ್ಣದ ಮನೆ. ಚೌಕಿಯ ಮುಕ್ಕಾಲು ಭಾಗದ ಶಿರೋಭಾಗದಲ್ಲಿ ಗಣಪತಿ ಯನ್ನು ಇರಿಸುವ ಕ್ರಮ. ಗಣಪತಿ ಪೆಟ್ಟಿಗೆ ಯ ಹಿಂದೆ ಅಡ್ಡ ಚೌಕಿ ಇದೆ. ಇದು ಹಿಮ್ಮೇಳದವರ ಸ್ಥಳ. ಹಿಮ್ಮೇಳ ದವರು ಸಿದ್ದರಾಗುವುದು ಇಲ್ಲಿಯೇ‌. ಗಣಪತಿಯ ನೇರಕ್ಕೆ ಇಕ್ಕೆಲಗಳಲ್ಲಿ ವೇಷಧಾರಿಗಳು ಕುಳಿತುಕೊಳ್ಳುವರು. ಬಣ್ಣದವೇಷ, ಎರಡನೇ ವೇಷ, ಮುಖ್ಯ ಸ್ತ್ರೀ ‌ವೇಷ, ಪುರುಷ ವೇಷ.‌. ಹೀಗೆ ತಂತಮ್ಮ ವೇಷ ಸ್ಥಾನ ಕ್ಕನುಗುಣವಾಗಿ ಮುಖಾಮುಖಿಯಾಗಿ ಕುಳಿತು ವೇಷಧಾರಣೆ ಮಾಡುತ್ತಾರೆ. ಹಾಸ್ಯಗಾರರು ಗಣಪತಿಯ ನೇರಕ್ಕೆ ಅಡ್ಡ ಪಂಕ್ತಿಯಲ್ಲಿ ಕುಳಿತುಕೊಳ್ಳುವರು.


ಹಿಮ್ಮೇಳ:-

ಯಕ್ಷಗಾನದ ಭಾಗವತರು, ಮದ್ದಳೆ, ಚಂಡೆ ಗಾರರ‌ ವಿಭಾಗ. ಬಡಗಿನಲ್ಲಿ ಭಾಗವತರು ತಾಳ ಹಿಡಿದರೆ, ತೆಂಕಿನ ಭಾಗವತರು ಜಾಗಟೆ ಹಿಡಿಯುವರು‌. ಬಡಗಿನಲ್ಲಿ ಮದ್ದಳೆ ಗಾರರ ಪಕ್ಕದಲ್ಲಿ ‌ರಂಗ‌ನಿರ್ಗಮನದ ದಾರಿಯನ್ನು ಬಿಟ್ಟು ಚಂಡೆ ಗಾರರು ಕುಳಿತು ಚಂಡೆ ಬಾರಿಸುವರು. ತೆಂಕಿನಲ್ಲಿ ಭಾಗವತರ ಪಕ್ಕ‌ ರಂಗ ಆಗಮನ ದಾರಿಯನ್ನು‌ ಬಿಟ್ಟು ಚಂಡೆ ಗಾರರು‌ ನಿಂತು ಚಂಡೆ ಬಾರಿಸುತ್ತಾರೆ.


ಭಾಗವತಿಕೆ:-

ಯಕ್ಷಗಾನದ ಜೀವಾಳವೇ ಭಾಗವತಿಕೆ ಅಥವಾ ಹಾಡುಗಾರಿಕೆ. ಅವರು ಈ ರಂಗ ಪ್ರಕಾರದ ನಿರ್ದೇಶಕರಿದ್ದಂತೆ. ಇಲ್ಲಿ ಪಾತ್ರಧಾರಿಗಳು ಅಭಿನಯಿಸುವ ಕಥಾನಕವನ್ನು ಕಾವ್ಯ ರೂಪದಲ್ಲಿ ಹಾಡಲಾಗುತ್ತದೆ. ಹೀಗೆ ಹಾಡುವವರನ್ನು ಭಾಗವತರು ಎಂದು ಕರೆಯುತ್ತಾರೆ. ಭಾಗವತರು ಹಾಡುವ ಪದಗಳಿಗೆ ತಕ್ಕಂತೆ ಪಾತ್ರಧಾರಿಗಳು ನೃತ್ಯದ ಮೂಲಕ ಅಭಿನಯಿಸುತ್ತಾರೆ. ನೃತ್ಯದೊಂದಿಗೆ ಹಾಡಿನಲ್ಲಿ ಬರುವ ಕಥಾನಕದ ಸಂದರ್ಭಕ್ಕನುಗುಣವಾಗಿ ಭಾವಾಭಿನಯವೂ ಸಹ ಅತ್ಯಂತ ಅಗತ್ಯವಾದುದು.


ಪ್ರಸಂಗ:-

ಯಕ್ಷಗಾನದಲ್ಲಿ ಯಾವುದಾದರೊಂದು ಕಥೆಯನ್ನು ಆಯ್ದುಕೊಂಡು ಅದನ್ನು ಜನರಿಗೆ ಹಾಡು, ಅಭಿನಯ, ನೃತ್ಯಗಳೊಂದಿಗೆ ತೋರಿಸಲಾಗುತ್ತದೆ. ಹೀಗೆ ಆಯ್ದುಕೊಂಡ ಕಥಾನಕವನ್ನು ಪ್ರಸಂಗ ಎಂದು ಕರೆಯುತ್ತಾರೆ. ಉದಾಹರಣೆಗೆ ಮಹಾಭಾರತದಲ್ಲಿ ಭೀಮ ಮತ್ತು ದುರ್ಯೋಧನರ ನಡುವೆ ನಡೆಯುವ ಗದಾಯುದ್ಧದ ಕಥೆಯನ್ನು ಆಯ್ದುಕೊಂಡರೆ ಆಗ ಅದನ್ನು "ಗದಾಯುದ್ದ ಪ್ರಸಂಗ" ಎಂಬುದಾಗಿ ಕರೆಯುತ್ತಾರೆ. ಹೆಚ್ಚಾಗಿ ಪೌರಾಣಿಕ ಪ್ರಸಂಗಗಳನ್ನೇ ಆಯ್ದು ಕೊಳ್ಳುವುದು ಯಕ್ಷಗಾನದಲ್ಲಿ ವಾಡಿಕೆಯಾದರೂ ಪ್ರಸಂಗವು ಪೌರಾಣಿಕವೇ ಆಗಬೇಕು ಎಂಬ ನಿಯಮವೇನೂ ಇಲ್ಲ. ಇದು ಐತಿಹಾಸಿಕವೂ, ಸಾಮಾಜಿಕವೂ ಆಗಿರಬಹುದು.


ಪಾತ್ರಧಾರಿಗಳು:-

ಪ್ರಸಂಗದಲ್ಲಿ ಬರುವ ಕಥೆಯನ್ನು ಅಭಿನಯಿಸುವವರೇ ಪಾತ್ರಧಾರಿಗಳು. ಸ್ತ್ರೀ ಪಾತ್ರ, ಖಳ ನಟನ ಪಾತ್ರ, ಹಾಸ್ಯ ಕಲಾವಿದನ ಪಾತ್ರ, ನಾಯಕನ ಪಾತ್ರ- ಹೀಗೆ ಪ್ರಸಂಗಕ್ಕೆ ಅನುಗುಣವಾಗಿ ಪಾತ್ರಗಳನ್ನು ಆಯ್ಕೆ ಮಾಡಲಾಗುತ್ತದೆ. ನೃತ್ಯ, ಅಭಿನಯ ಹಾಗೂ ಮಾತುಗಾರಿಕೆಗಳೊಂದಿಗೆ ಕಥೆಯನ್ನು ಪ್ರೇಕ್ಷಕರಿಗೆ ತಲುಪಿಸುವ ಮಹತ್ತರ ಜವಾಬ್ದಾರಿ ಪಾತ್ರಧಾರಿಗಳ ಮೇಲಿರುತ್ತದೆ.


ವೇಷಭೂಷಣ:-

ಯಕ್ಷಗಾನದ ಪ್ರಮುಖ ಪ್ರಭೇದವಾದ ಬಯಲಾಟಗಳಲ್ಲಿ ವೇಷಭೂಷಣಗಳು ಪ್ರಮುಖವಾದದ್ದು. ಪಾತ್ರಗಳಿಗೆ ತಕ್ಕಂತೆ ವೇಷಭೂಷಣಗಳಿರುತ್ತವೆ. ಉದಾಹರಣೆಗೆ ಪ್ರಮುಖ ಖಳನಟ ಮತ್ತು ರಾಜ (ನಾಯಕ)ನ ಪಾತ್ರಕ್ಕೆ ಬಳಸುವ ಕಿರೀಟವು ಸಾಮಾನ್ಯ ಪಾತ್ರಧಾರಿಗೆ ಬಳಸುವ ಕಿರೀಟಗಳಿಗಿಂತ ವಿಭಿನ್ನ ವಿನ್ಯಾಸ ದ್ದಾಗಿರುತ್ತದೆ. ಹಾಗೆಯೇ ಸ್ತ್ರೀ ಪಾತ್ರಗಳಿಗೆ ಬಳಸುವ ಕಿರೀಟವು ತುಂಬಾ ಚಿಕ್ಕದಾಗಿರುತ್ತದೆ. ಅಲ್ಲದೇ ತೆಂಕತಿಟ್ಟು ಶೈಲಿಯ ಯಕ್ಷಗಾನದಲ್ಲಿ ಉಪಯೋಗಿಸುವ ವೇಷಭೂಷಣಗಳು ಬಡಗತಿಟ್ಟಿನಲ್ಲಿ ಉಪಯೋಗಿಸುವ ವೇಷ ಭೂಷಣಗಳಿಗಿಂತ ಭಿನ್ನವಾಗಿರುತ್ತವೆ.


ಮಾತುಗಾರಿಕೆ:-

ಹಾಡುವುದನ್ನು ಪೂರ್ಣಗೊಳಿಸಿದ ಕೂಡಲೇ ಆ ಹಾಡಿನ ಸಾರಾಂಶವನ್ನು ಪಾತ್ರಧಾರಿಗಳು ಚರ್ಚಿಸುತ್ತಾರೆ. ಹಾಡಿನಲ್ಲಿ ಕಥಾನಕದ ಯಾವ ಭಾಗವನ್ನು ಪ್ರಸ್ತುತ ಪಡಿಸಲಾಗುತ್ತದೋ ಅದೇ ಭಾಗದ ಅರ್ಥವನ್ನು ಜನ ಸಾಮಾನ್ಯರೆಲ್ಲರಿಗೂ ಸ್ಪಷ್ಟವಾಗುವಂತೆ ಆಡುಮಾತಿನಲ್ಲಿ ಪಾತ್ರಧಾರಿಗಳು ಸಂಭಾಷಿಸುತ್ತಾರೆ.


ಯಕ್ಷಗಾನದ ಪ್ರಭೇದಗಳು:-

ಯಕ್ಷಗಾನದಲ್ಲಿ ಅನೇಕ ರೀತಿಯ ಪ್ರಭೇದಗಳಿದ್ದು ಅವುಗಳಲ್ಲಿ ಯಕ್ಷಗಾನ ಬಯಲಾಟವು ಅತ್ಯಂತ ಜನಪ್ರಿಯವಾದುದು. ಬಯಲಾಟವೆಂದರೆ ವೇಷಭೂಷಣಗಳೊಂದಿಗೆ ರಂಗಭೂಮಿಯಲ್ಲಿ ಆಡುವ ಯಕ್ಷಗಾನ ಪ್ರಭೇದ. ಕುಣಿತ ಎಂಬ ಹೆಸರು ಇದಕ್ಕಿದೆ. ಮೊದ ಮೊದಲು ಹಬ್ಬ ಹರಿದಿನಗಳಂದು ಊರಿನ ಬಯಲಿನಲ್ಲಿ ರಾತ್ರಿಯಿಡೀ ಈ ಬಯಲಾಟ ಹೆಚ್ಚಾಗಿ ನಡೆಯುತ್ತಿದ್ದ ಕಾರಣ "ಬಯಲಾಟ" ಎಂಬ ಹೆಸರು ರೂಢಿಯಲ್ಲಿದೆ. ಜನರು ಇದನ್ನು ಸರಳವಾಗಿ "ಆಟ" ಎಂದೂ ಕರೆಯುತ್ತಾರೆ.


ಆದರೆ ಈಗೀಗ ರಾತ್ರಿಯಿಡೀ ನಡೆಯುವ ಬಯಲಾಟದೊಂದಿಗೆ ಎರಡು ಮೂರು ಘಂಟೆಗಳ ಕಾಲ ನಡೆಯುವ ಕಾಲಮಿತಿಯ ಯಕ್ಷಗಾನವೂ ಬಳಕೆಯಲ್ಲಿದೆ. ಬಯಲಾಟದಲ್ಲಿ ವೇಷಭೂಷಣ, ರಂಗಸ್ಥಳ, ಭಾಗವಂತಿಕೆ (ಹಾಡುಗಾರಿಕೆ), ಅಭಿನಯ, ಮಾತುಗಾರಿಕೆ, ನೃತ್ಯ- ಹೀಗೆ ಸಾಂಪ್ರದಾಯಿಕ ಯಕ್ಷಗಾನದ ಎಲ್ಲ ಮಜಲುಗಳನ್ನೂ ಕಾಣಬಹುದು. ಯಕ್ಷಗಾನದಲ್ಲಿ ಮೂಡಲಪಾಯ ಮತ್ತು ಪಡುವಲಪಾಯ ಎಂಬ ಎರಡು ಮ್ರಮುಖ ಪ್ರಭೇದಗಳಿವೆ. ಪಶ್ಚಿಮ ಘಟ್ಟದ ಪೂರ್ವಕ್ಕೆ ಪ್ರಚಲಿತವಿರುವದು ಮೂಡಲಪಾಯ.


ಪಡುವಲಪಾಯ:-

ಪಡುವಲಪಾಯದಲ್ಲಿ ತೆಂಕು, ಬಡಗು ಮತ್ತು ಬಡಾಬಡಗು ಎಂಬ ವಿಭಾಗಳಿವೆ. ಈ ಮೂರು ತಿಟ್ಟುಗಳಲ್ಲಿಯೂ ವಿವಿಧ ಶೈಲಿ, ಮಟ್ಟುಗಳಿವೆ. ಇದರಲ್ಲಿ ತಾಳಮದ್ದಳೆ, ಗೊಂಬೆಯಾಟ, ಹೂವಿನಕೋಲು, ಚಿಕ್ಕಮೇಳಗಳಂತಹ ಪ್ರಭೇದಗಳಿವೆ.


ಮೂಡಲಪಾಯ:-

ಮೂಡಲಪಾಯವು ಯಕ್ಷಗಾನದ ಇನ್ನೊಂದು ಮುಖವಾಗಿದೆ. ಇದು ಉತ್ತರ ಕರ್ನಾಟಕದ ಯಕ್ಷಗಾನ ಪ್ರಭೇದ. ಇಲ್ಲಿಯೂ‌ ಹಿಮ್ಮೇಳ- ಮುಮ್ಮೇಳ, ವೇಷಭೂಷಣ, ಪ್ರಸಂಗ ಎಲ್ಲವೂ ಇದೆ. ಆದರೆ ಅಲ್ಲಿನ ನಡೆಯೇ ಬೇರೆ. ಮೂಡಲಪಾಯದಲ್ಲಿ ಸಂಗ್ಯಾಬಾಳ್ಯ, ಕರಿಭಂಟನ ಕಾಳಗ, ದಕ್ಷಯಜ್ಞ- ಗಿರಿಜಾ ಕಲ್ಯಾಣದಂತಹ ಕೆಲವೇ ಕೆಲವು ಪ್ರಸಂಗಗಳನ್ನು ಮಾತ್ರ ಪ್ರದರ್ಶಿಸುತ್ತಾರೆ. ಅಲ್ಲಿನ ಯಕ್ಷಗಾನ ರಂಗಪದ್ದತಿಗೂ ಇಲ್ಲಿನ ಪದ್ದತಿಗೂ ಸಾಕಷ್ಟು ವ್ಯತ್ಯಾಸವಿದೆ. ದೊಡ್ಡಾಟ, ಸಣ್ಣಾಟ, ಪಾರಿಜಾತ, ದಾಸರಾಟ.. ಮೊದಲಾದ ರೂಪ ಗಳೂ ಪ್ರಾದೇಶಿಕವಾಗಿ ಬೇರೆ ಬೇರೆ ರಂಗಕ್ರಮಗಳಿಂದ ಕಾಣುತ್ತವೆ.

ಪಡುವಲಪಾಯ ಯಕ್ಷಗಾನ ರಂಗಭೂಮಿ ಸಮೃದ್ಧವಾಗಿ ಬೆಳೆದಷ್ಟು ಮೂಡಲಪಾಯ ರಂಗಭೂಮಿ ಬೆಳೆದಿಲ್ಲ.


ನಮ್ಮ ಬಯಲಾಟಗಳಿಗೆ ಸಂವಾದಿಯಾದ ಭಾಗವತಂ, ಚಿಂದು, ತೆರುಕೂತ್ತು, ಜಾತ್ರಾ, ಭಾಗವತ ಮೇಳಂ, ಛಾವು.. ಮೊದಲಾದ ರೂಪಗಳು ಭಾರತದ ವಿವಿಧ ಪ್ರದೇಶದಲ್ಲಿ ಪ್ರದರ್ಶನ ವಾಗುತ್ತವೆ. ಇವು ಒಂದೇ ಕಲೆಯ ಕವಲು ಅಂಗಗಳು. ವಿಶಿಷ್ಟ ರೂಪಾಂತರಗಳು. ಯಕ್ಷಗಾನದ ಸೋದರ ಶಾಖೆಗಳು.


ಬೆಳಕಿನ ಸೇವೆಯ ಮೂಲಕ‌ ಜನತೆಯ ಕಷ್ಟ-ಕಾರ್ಪಣ್ಯಗಳಿಗೆ ಸ್ಪಂದಿಸಿದ ಪುಣ್ಯ‌ಕಲೆ ಯಕ್ಷಗಾನ:

ಉತ್ತರ ಕರ್ನಾಟಕದಲ್ಲಿ ಬಹು ಜನಪ್ರಿಯವಾಗಿರುವ ಶ್ರೀಕೃಷ್ಣ ಪಾರಿಜಾತ ಮೂಡಲ ಪಾಯದಲ್ಲಿ ಗಮನಾರ್ಹ. ಮಲೆನಾಡು ಮತ್ತು ಕರಾವಳಿಯಲ್ಲಿ ಪ್ರಚಲಿತವಿರುವುದು ಪಡುವಲಪಾಯ. ಪಡುವಲಪಾಯದಲ್ಲಿ ಮೂರು ವಿಭಾಗಗಳಿವೆ. ಅವು ತೆಂಕುತಿಟ್ಟು, ಬಡಗುತಿಟ್ಟು ಮತ್ತು ಉತ್ತರದ ತಿಟ್ಟು (ಬಡಾಬಡಗು).


ಉತ್ತರ ಕನ್ನಡ, ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಉತ್ತರದ ತಿಟ್ಟು ಶೈಲಿಯ ಬಡಾಬಡಗು ಬಯಲಾಟಗಳು ಕಂಡು ಬಂದರೆ ಉಡುಪಿಯಲ್ಲಿ ಬಡಗುತಿಟ್ಟು ದಕ್ಷಿಣ ಕನ್ನಡ ಹಾಗೂ ಕಾಸರಗೋಡು ಜಿಲ್ಲೆಗಳಲ್ಲಿ ತೆಂಕುತಿಟ್ಟು ಶೈಲಿಯ ಯಕ್ಷಗಾನವನ್ನು ಕಾಣಬಹುದು. ವೇಷಭೂಷಣಗಳ ವಿನ್ಯಾಸ, ನೃತ್ಯದ ಶೈಲಿ, ಭಾಗವತಿಕೆ ಮತ್ತು ಹಿಮ್ಮೇಳಗಳಲ್ಲಿ ಕಂಡುಬರುವ ಕೆಲವು ವ್ಯತ್ಯಾಸಗಳ ಆಧಾರದ ಮೇಲೆ ಈ ವಿಂಗಡಣೆಯನ್ನು ಮಾಡಲಾಗಿದೆಯೇ ಹೊರತು ಯಕ್ಷಗಾನದ ಮೂಲ ತತ್ವ, ಆಶಯಗಳು ಮೂರು  ಶೈಲಿಗಳಲ್ಲಿಯೂ ಒಂದೇ ಆಗಿರುತ್ತದೆ.

Photo Click:- Manjunath Bairy


- ಶ್ರವಣ್ ಕಾರಂತ್ ಕೆ

ಸುಪ್ರಭಾತ

ಶಕ್ತಿನಗರ ಮಂಗಳೂರು.

+91 8971275651


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top