ಬಾಕಾಹು ಜಿಲೇಬಿ
ಪಾಕ: ವಿಜಯಾ ಆರ್. ಭಟ್, ತಾರಗೋಡು
ಶಿರಸಿಯ ಬಾಕಾಹು ಪಾಕಸ್ಪರ್ಧೆಯ ಸಿಹಿತಿಂಡಿ ವಿಭಾಗದಲ್ಲಿ ದ್ವಿತೀಯ ಬಹುಮಾನ ಗೆದ್ದ ತಿಂಡಿಯಿದು.
ಸಾಮಗ್ರಿಗಳು: ಬಾಳೆಕಾಯಿ ಹುಡಿ (ಬಾಕಾಹು)- 750 ಗ್ರಾಮ್, ಮೈದಾ ಹಿಟ್ಟು - 250 ಗ್ರಾಮ್, ಹುಳಿ ಮಜ್ಜಿಗೆ- 150 ಮಿ.ಲೀ., ಲಿಂಬೆ- ಅರ್ಧ, ಬಣ್ಣ- ಕಾಲು ಚಮಚೆ, ನೀರು
ವಿಧಾನ: ಒಂದು ಬಾಣಲೆಯಲ್ಲಿ ನೀರು, ಹುಳಿ ಮಜ್ಜಿಗೆ, ಲಿಂಬೆ- ಇವೆಲ್ಲವನ್ನೂ ಹಾಕಿ ಸರಿಯಾಗಿ ಮಿಶ್ರ ಮಾಡಿ. ನಂತರ ಮೈದಾ ಹಾಕಿ ಸರಿಯಾಗಿ ಕಲಸಿ ದೋಸೆ ಹಿಟ್ಟಿನ ಹದಕ್ಕೆ ತನ್ನಿ. ಹನ್ನೆರಡು ತಾಸು ನೆನೆಯಲು ಬಿಡಿ. ಹಿಟ್ಟು ಕಲಸಿದ ಬಾಣಲೆಯನ್ನು ಗಾಳಿ ಆಡದಂತೆ ಸರಿಯಾಗಿ ಮುಚ್ಚಿ ಇಡಿ. ಮರುದಿನ ಈ ಹಿಟ್ಟಿಗೆ ಬಾಳೆಕಾಯಿ ಹುಡಿ, ಬಣ್ಣ, ಬೇಕಾದರೆ ನೀರು ಸೇರಿಸಿ. ಈ ಹಿಟ್ಟನ್ನು ಜಿಲೇಬಿ ತಟ್ಟೆಯಲ್ಲಿ ಹಾಕಿ ಜಿಲೇಬಿಯ ಆಕಾರದಲ್ಲಿ ಕರಿಯಿರಿ.
ಪಾಕಕ್ಕೆ 2 ಕಿಲೋ ಸಕ್ಕರೆ, ಒಂದು ಲಿಂಬೆ ಹಣ್ಣು, ಕಾಲು ಸ್ಪೂನ್ ಬಣ್ಣ ಬೇಕು. ಒಂದು ಬಾಣಲೆಯಲ್ಲಿ ಸಕ್ಕರೆ ಹಾಕಿ ಅದು ಮುಳುಗುವಷ್ಟು ನೀರು ಹಾಕಿ ಲಿಂಬೆ ಹಾಕಿ ಕುದಿಸಿ. ಎರಡು ಎಳೆ ಪಾಕ ಬಂದ ಮೇಲೆ ಒಲೆಯಿಂದ ಬಾಣಲೆ ಕೆಳಗಿಳಿಸಿ ಬಣ್ಣ ಹಾಕಿ. ಕರಿದ ಜಿಲೇಬಿ ಅದ್ದಲು ಪಾಕ ತುಂಬಾ ಬಿಸಿ ಇರಬಾರದು. ಹದ ಬಿಸಿ ಸಾಕು.